ಇತ್ತೀಚೆಗೆ ಮಂಡಿಸಲಾಗಿರುವ ರಾಜ್ಯದ ಮುಂಗಡ ಪತ್ರದಲ್ಲಿ, ‘ಬೇಡ್ತಿ ವರದಾ ನದಿ ಜೋಡಣೆ’ ಯೋಜನೆ ಪ್ರಸ್ತಾಪವಾಗಿದೆ. ಈಗ ಲಭ್ಯವಿರುವ ಮಾಹಿತಿಯಂತೆ, ಉತ್ತರ ಕನ್ನಡದ ಶಿರಸಿ ತಾಲ್ಲೂಕಿನ ಪಟ್ಟಣದ ಹೊಳೆ, ಶಾಲ್ಮಲಾ ನದಿ ಹಾಗೂ ಯಲ್ಲಾಪುರ ತಾಲ್ಲೂಕಿನ ಬೇಡ್ತಿ ಹೊಳೆ- ಈ ಮೂರು ಕಡೆ ಬೃಹತ್ ಜಲಾಶಯ ನಿರ್ಮಿಸಲಾಗುತ್ತದೆ. ಇಲ್ಲಿ ಒಡ್ಡುಗಳನ್ನು ಹಾಗೂ ಭಾರಿ ವ್ಯಾಸದ ಹಾಗೂ ಆಳದ ನೆಲದೊಳಗಿನ ದೊಡ್ಡ ಬಾವಿಗಳನ್ನೂ ನಿರ್ಮಿಸಲಾಗುತ್ತದೆ.
ಇದು ಮೂವತ್ತು ವರ್ಷಗಳ ಹಿಂದಿನ ಮಾತು. ಆಗ ಎಸ್. ಬಂಗಾರಪ್ಪ ರಾಜ್ಯದ ಮುಖ್ಯಮಂತ್ರಿ ಆಗಿದ್ದರು. ಬೇಡ್ತಿ ನದಿಗೆ ಅಡ್ಡಲಾಗಿ ಆಣೆಕಟ್ಟು ಕಟ್ಟಿ ವಿದ್ಯುತ್ ಯೋಜನೆ ಮಾಡುವ ಪ್ರಸ್ತಾಪ ಅಂದಿನ ಸರಕಾರ ಕೈಗೆತ್ತಿಕೊಂಡಿತ್ತು. ಆಗ, ಪಶ್ಚಿಮ ಘಟ್ಟ ಅಂದರೆ, ಶಿರಸಿ-ಸಿದ್ದಾಪುರ-ಯಲ್ಲಾಪುರ ತಾಲೂಕಿನ ಜನ ಸಿಡಿದೆದ್ದರು. ಬೃಹತ್ ಚಳುವಳಿ ನಡೆಯಿತು. ಕೊನೆಗೂ ಸರಕಾರ ಜನರ ಒತ್ತಾಯಕ್ಕೆ ಮಣಿದು ಆ ಪ್ರಸ್ತಾಪವನ್ನು ಕೈಬಿಟ್ಟಿತು. ಅಂದಿನ ವಿರೋಧ ಪಕ್ಷಗಳ ಸಾಲಿನಲ್ಲಿ ಕೂತಿದ್ದ ಸಣ್ಣ ಪಕ್ಷ-ಬಿಜೆಪಿ-ಈ ಚಳುವಳಿಗೆ ಬೆಂಬಲ ಕೊಟ್ಟಿತ್ತು. ಅಂದಿನ ಬಿಜೆಪಿಯ ನಿಲುವನ್ನು ಜನ ಹೊಗಳಿದ್ದರು.
ಮೂವತ್ತು ವರ್ಷದ ನಂತರ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ನಿಂದ ಹೋರಾಟದ ರಾಜಕೀಯಕ್ಕೆ ಬಂದು ಕೊನೆಗೆ ಬೇಡ್ತಿ ಚಳುವಳಿಯ ಮೂಲಕ ಮುನ್ನೆಲೆಗೆ ಬಂದ ವಿಶ್ವೇಶ್ವರ ಹೆಗಡೆ ಕಾಗೇರಿ ಈಗ ವಿಧಾನಸಭಾ ಆಧ್ಯಕ್ಷರಾಗಿದ್ದಾರೆ. 1994ರಿಂದ ಸತತವಾಗಿ ಆರಿಸಿ ಬರುತ್ತಿರುವ ಅವರನ್ನು ಯಾರೂ ಸೋಲಿಸಲಾಗಿಲ್ಲ. ಈಗ ಕಾಗೇರಿ ಅವರು ಸಭಾಧ್ಯಕ್ಷರ ಪೀಠದಲ್ಲಿ ಕುಳಿತು, ಯಾವ ಮುಂಗಡಪತ್ರದಲ್ಲಿ ಇಂಥದೊಂದು ನದಿ ಜೋಡಣೆ ಪ್ರಸ್ತಾವ ಇದೆಯೋ, ಅದಕ್ಕೆ ಅನುಮತಿ ಕೊಡಿಸಬೇಕಾಗುತ್ತದೆ. ಅದೇ ರೀತಿ, ಅನಂತ ಹೇಗಡೆ ಅಶೀಸರ ಅವರ ಸ್ಥಿತಿ ಕೂಡ. ಪರಿಸರ ಕ್ಷೇತ್ರಕ್ಕೆ ಪ್ರಾಮಾಣಿಕವಾಗಿ ತಮ್ಮನ್ನು ತೊಡಗಿಸಿಕೊಂಡ ಅಶೀಸರ ಅವರಿಗೆ ಈಗ ಧರ್ಮ ಸಂಕಟ. ಅವರೀಗ ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷರು, ಆದ್ದರಿಂದ ಅವರು ಸಹ ಈ ಸರಕಾರದ ಒಂದು ಭಾಗ. ಅವರಿರುವಾಗಲೇ ಈ ಸರಕಾರ ಇಂಥದೊಂದು ಪ್ರಸ್ತಾವವನ್ನು ತಂದಿರುವುದು ಅವರಿಗೂ ಸಹ ಒಂದು ಪರೀಕ್ಷೆ. ಅಂದು ಸಣ್ಣ ಪಕ್ಷವಾಗಿದ್ದ ಬಿಜೆಪಿ, ಈಗ ಆಡಳಿತ ಚುಕ್ಕಾಣಿ ಹಿಡಿದಿದೆ. ಯಾವ ಪಕ್ಷ ಪಶ್ಚಿಮ ಘಟ್ಟದ ಪರಿಸರ ಉಳಿಸಲು ಹೋರಾಟ ಮಾಡಿತ್ತೋ ಅದೇ ಪಕ್ಷ ಈಗ, ಪಶ್ಚಿಮ ಘಟ್ಟದ ಒಂದು ಭಾಗವಾದ ಶಿರಸಿ-ಯಲ್ಲಾಪುರದ ಸುತ್ತ, ಬೇಡ್ತಿ-ಶಾಲ್ಮಲಾ ನದಿ ಜೋಡಣೆ ಮಾಡಲು ಹೊರಟಿದೆ ಮತ್ತು ಪರಿಸರಕ್ಕೆ ಮಾರಕವಾಗುವ ಯೋಜನೆಯೊಂದಕ್ಕೆ ಕೈ ಹಾಕುತ್ತಿದೆ.
ಯಾವುದು ಇದು ಹೊಸ ಯೋಜನೆ?
ಇತ್ತೀಚೆಗೆ ಮಂಡಿಸಲಾಗಿರುವ ರಾಜ್ಯದ ಮುಂಗಡ ಪತ್ರದಲ್ಲಿ, ‘ಬೇಡ್ತಿ ವರದಾ ನದಿ ಜೋಡಣೆ’ ಪ್ರಸ್ತಾಪವಾಗಿದೆ. ಈಗ ಲಭ್ಯವಿರುವ ಮಾಹಿತಿಯಂತೆ, ಉತ್ತರ ಕನ್ನಡದ ಶಿರಸಿ ತಾಲ್ಲೂಕಿನ ಪಟ್ಟಣದ ಹೊಳೆ ಹಾಗೂ ಶಾಲ್ಮಲಾ ನದಿ ಹಾಗೂ ಯಲ್ಲಾಪುರ ತಾಲ್ಲೂಕಿನ ಬೇಡ್ತಿ ಹೊಳೆ- ಈ ಮೂರು ಕಡೆ ಬೃಹತ್ ಜಲಾಶಯ ನಿರ್ಮಿಸಲಾಗುತ್ತದೆ. ಇಲ್ಲಿ ಒಡ್ಡುಗಳನ್ನು ಹಾಗೂ ಭಾರಿ ವ್ಯಾಸದ ಹಾಗೂ ಆಳದ ನೆಲದೊಳಗಿನ ದೊಡ್ಡ ಬಾವಿಗಳನ್ನೂ ನಿರ್ಮಿಸಲಾಗುತ್ತದೆ. ಅಲ್ಲಿಂದ 22 ಟಿಎಂಸಿ ನೀರನ್ನು ಬೃಹತ್ ಪಂಪುಗಳ ಮೂಲಕ ಮೇಲೆತ್ತಿ, ಭೂತಾಕಾರದ ಪೈಪ್-ಲೈನ್ ಮೂಲಕ ಧರ್ಮಾನದಿ ಪಾತ್ರಕ್ಕೆ (ತುಂಗಭದ್ರಾ ನದಿಯ ಉಪನದಿಯಾದ ವರದಾ ನದಿಯ ಉಪನದಿ) ಕೊಂಡೊಯ್ಯುವ ಪ್ರಸ್ತಾಪವಿದೆ. ಬೇಸಿಗೆಯಲ್ಲಿ ನೀರು ಕಡಿಮೆ ಬಿದ್ದಾಗ, ಉತ್ತರ ಕನ್ನಡ ಜಿಲ್ಲೆಯ ಶಿರಸಿ—ಸಿದ್ದಾಪುರ ತಾಲ್ಲೂಕುಗಳಾ ಜೀವನಾಡಿಯಾದ ಅಘನಾಶಿನಿ ನದಿಯಿಂದ ನೀರನ್ನು ತರುವ ಪ್ರಸ್ತಾಪವು ಇದಾಗಿದೆ.
ಈ ಸಂಬಂಧ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಜಲಶಕ್ತಿ ಇಲಾಖೆಯ ಅಡಿಯಲ್ಲಿನ ‘National Water Development Agency’ (NWDA) ವಿಭಾಗಕ್ಕೆ ವಿವರವಾದ ಯೋಜನಾ ವರದಿ ತಯಾರಿಸಲು ಕೇಳಿದೆ.
ಇದರಿಂದ ತೊಂದರೆ ಏನು?
ಬಜೆಟ್ಟಿನಲ್ಲಿ ಪ್ರಸ್ತಾಪವಾಗಿರುವ ಬೇಡ್ತಿ-ವರದಾ ನದಿಜೋಡಣೆ ಯೋಜನೆ ತುಂಬಾ ಅಪಾಯಕಾರಿಯಾದದ್ದು. ಇದನ್ನು ಕುಡಿಯುವ ನೀರಿನ ಯೋಜನೆ ಎಂದು ಕರೆದಿದ್ದು ಯಾಕೆಂದರೆ, ಹೀಗೆ ಕರೆದರೆ, ಯಾವ ನ್ಯಾಯಾಲಯ ಅಥವಾ ರಾಷ್ಟ್ರೀಯ ಹಸಿರು ನ್ಯಾಯಪೀಠ ಇದಕ್ಕೆ ಕೊಕ್ಕೆ ಹಾಕಲಾರದು ಎಂಬ ಲೆಕ್ಕಾಚಾರ ಸರ್ಕಾರದ್ದು. ಇಲ್ಲಿಂದ 22 ಟಿಎಂಸಿಯಷ್ಟು ಬೃಹತ್ ಪ್ರಮಾಣದ ನೀರನ್ನು ಉತ್ತರ ಕರ್ನಾಟಕದ ಹಾವೇರಿ, ಗದಗ, ಕೊಪ್ಪಳ, ಸಿಂಧನೂರು, ರಾಯಚೂರು ಪ್ರದೇಶಗಳಿಗೆ ಕೊಂಡೊಯ್ಯುವ ಪ್ರಸ್ತಾಪವಿದೆ. ‘ಕುಡಿಯುವ ನೀರಿನ ಯೋಜನೆ’ ಎಂಬ ಹೆಸರಿನಲ್ಲಿ ಯೋಜನೆಯನ್ನು ಅನುಷ್ಠಾನಕ್ಕೆ ತರಲು ರಾಜ್ಯ ಸರ್ಕಾರ ಬೃಹತ್ ನೀರಾವರಿ ಇಲಾಖೆ ಮುಂದಾಗಿದೆ ಎನ್ನುವದು ಮಾತ್ರ ಸೋಜಿಗದ ವಿಷಯ!
ಈ ಯೋಜನೆಯ ಬಗ್ಗೆ ಶಿರಸಿಯ ಪರಿಸರ ತಜ್ಞ ಮತ್ತು ಸುಸ್ಥಿರ ಪರಿಸರ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಕೇಶವ ಕೊರ್ಸೆ ಹೀಗೆ ಹೇಳುತ್ತಾರೆ..
ಇದನ್ನೂ ಓದಿ: ಘಂಟೆ ಗಣಪತಿ, ಸಾತೊಡ್ಡಿ ಜಲಪಾತ.. ಯಲ್ಲಾಪುರದಲ್ಲಿ ನೋಡಲೇಬೇಕಾದ ಸ್ಥಳಗಳು ಏನೆಲ್ಲಾ ಇವೆ ಗೊತ್ತಾ?
ಇದನ್ನೂ ಓದಿ: ಕರ್ನಾಟಕ ಬಜೆಟ್ 2021; ಇಲ್ಲಿದೆ ಸಮಗ್ರ ಮಾಹಿತಿ
Published On - 9:22 pm, Thu, 18 March 21