ಸಚಿವ ಸತೀಶ್- ಬಿಜೆಪಿ ಶಾಸಕ ಅಭಯ್ ಪಾಟೀಲ್ ಕೋಲ್ಡ್ ವಾರ್ ಶುರು, ಪೊಲೀಸ್ ಕೇಸ್ ಕೂಡ ದಾಖಲು, ಇಬ್ಬರ ಫೈಟ್ ಮುಂದೆ ಯಾವ ಹಂತಕ್ಕೋ!?
Vaccine Depo Under Smart City: ಬೆಳಗಾವಿಯ ವ್ಯಾಕ್ಸಿನ್ ಡಿಪೋ ಪ್ರದೇಶದಲ್ಲಿ ಕಾಮಗಾರಿಗೆ 100 ಕೋಟಿ ವೆಚ್ಚ ಮಾಡಿದ್ದಾರೆ. ಆದ್ರೇ ಇದಕ್ಕೆ ಡಿಎಚ್ಒ ಅವರ ಅನುಮತಿಯನ್ನೇ ಪಡೆದಿಲ್ಲವಂತೆ. ವ್ಯಾಕ್ಸಿನ್ ಡಿಪೋ ಆರೋಗ್ಯ ಇಲಾಖೆಗೆ ಸೇರಿದ ಜಾಗ, ಆದರೆ ಅವರ ಅನುಮತಿಯನ್ನೇ ಪಡೆಯದೇ ಕಾಮಗಾರಿ ಮಾಡಿದ್ದಾರಂತೆ.
ಬೆಳಗಾವಿಯಲ್ಲಿ ಹಿರಿಯ ಶ್ರೇಣಿಯ ಅಧಿಕಾರಿಗಳ ನಡುವೆ ಕಾಮಗಾರಿ ಫೈಟ್ ಶುರುವಾಗಿದೆ. ಅದು ಯಾವ ಹಂತಕ್ಕೆ ಹೋಗಿದೆ ಅಂದ್ರೇ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಆಗುವ ಮಟ್ಟಕ್ಕೆ ಹೋಗಿದೆ! ಅಷ್ಟಕ್ಕೂ ಜಿಲ್ಲಾ ಡಿಎಚ್ಒ (Belagavi DHO) ಮತ್ತು ಸ್ಮಾರ್ಟ್ ಸಿಟಿ ಯೋಜನೆ (Belagavi Smart City) ಎಂಡಿ ನಡುವೆ ಶುರುವಾದ ಕಾಮಗಾರಿ ಫೈಟ್ ಅದು. ಅಧಿಕಾರಿಗಳ ತಿಕ್ಕಾಟದ ಹಿಂದೆ ರಾಜಕಾರಣಿಗಳ ತಂತ್ರಗಾರಿಕೆ ಎಂತಹದ್ದು ಅಂತೀರಾ ಈ ಸ್ಟೋರಿ ನೋಡಿ… ಬೆಳಗಾವಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಎಂಡಿ ಹಾಗೂ ಜಿಲ್ಲಾ ಡಿಎಚ್ಒ ನಡುವೆ ವಾರ್ ಶುರುವಾಗಿದೆ. ಈ ಫೈಟ್ ಗೆ ಇದೀಗ ಒಂದು ಕಡೆ ಸಚಿವರು ((Satish Jarkiholi) ) ಕೂಡ ಸಾಥ್ ನೀಡ್ತಿದ್ದು, ಪರೋಕ್ಷವಾಗಿ ಬಿಜೆಪಿ ಶಾಸಕರ (Abhay Patil) ವಿರುದ್ದ ಸಮರ ಸಾರಿದ್ದಾರೆ. ಹೌದು ಬೆಳಗಾವಿಯ ವ್ಯಾಕ್ಸಿನ್ ಡಿಪೋ ಪ್ರದೇಶದಲ್ಲಿ (Vaccine Depo Under Smart City) 2016ರಿಂದ ಈ ವರೆಗೆ ಬಯಲು ರಂಗಮಂದಿರ ಸೇರಿ ವಿವಿಧ ಅಭಿವೃದ್ದಿ ಕಾಮಗಾರಿಗಳನ್ನ ಸ್ಮಾರ್ಟ್ ಸಿಟಿಯಡಿ ಕೈಗೊಂಡಿದ್ದಾರೆ.
100 ಕೋಟಿಗೂ ಅಧಿಕ ಹಣವನ್ನ ಇಲ್ಲಿ ಕಾಮಗಾರಿಗೆ ವೆಚ್ಚ ಮಾಡಿದ್ದಾರೆ. ಆದ್ರೇ ಇದೀಗ ಇಲ್ಲಿ ಮಾಡಿರುವ ಕಾಮಗಾರಿಗೆ ಡಿಎಚ್ಒ ಅವರ ಅನುಮತಿಯನ್ನೇ ಪಡೆದಿಲ್ಲಾ ಅನ್ನೋದು ಬಹಿರಂಗವಾಗಿದೆ. ವ್ಯಾಕ್ಸಿನ್ ಡಿಪೋ ಡಿಎಚ್ಒ ಅವರಿಗೆ ಅಂದ್ರೇ ಆರೋಗ್ಯ ಇಲಾಖೆಗೆ ಸೇರಿದ ಜಾಗ ಇವರ ಅನುಮತಿಯನ್ನೇ ಪಡೆಯದೇ ಕಾಮಗಾರಿ ಮಾಡಿದ್ದಾರಂತೆ.
ಇನ್ನು ಕಾಮಗಾರಿ ನಡೆಯುವ ಸ್ಥಳಕ್ಕೆ ಡಿಎಚ್ಒ ಅವರಿಗೆ ಹೋಗಲು ಕೂಡ ಬಿಟ್ಟಿಲ್ಲವಂತೆ. ಇನ್ನು ಇಲ್ಲಿರುವ ಮರಗಿಡಗಳನ್ನ ಹಾಗೂ ಮಣ್ಣನ್ನ ಅಕ್ರಮವಾಗಿ ಸಾಗಾಟ ಮಾಡಿ ಮಾರಿಕೊಂಡಿದ್ದಾರಂತೆ. ಈ ಎಲ್ಲ ಬೆಳವಣಿಗೆ ಬಿಜೆಪಿ ಸರ್ಕಾರ ಇದ್ದಾಗ ನಡೆದಿದ್ದು, ಅಂದು ಒತ್ತಡದಿಂದಾಗಿ ಡಿಎಚ್ಒ ಅವರು ಯಾವುದೇ ಕ್ರಮ ತೆಗೆದುಕೊಳ್ಳಲು ಆಗಿರಲಿಲ್ಲವಂತೆ.
ಇದೀಗ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರ್ತಿದ್ದಂತೆ, ಜತೆಗೆ ಸತೀಶ್ ಜಾರಕಿಹೊಳಿ ಜಿಲ್ಲಾ ಉಸ್ತುವಾರಿ ಸಚಿವರು ಆಗ್ತಿದ್ದಂತೆ ಡಿಎಚ್ಒ ಅವರಿಗೆ ಸಪೋರ್ಟ್ ಸಿಕ್ಕಿದೆಯಂತೆ. ಈ ಹಿನ್ನೆಲೆ ಸದ್ಯ ಪೊಲೀಸ್ ಠಾಣೆಯಲ್ಲಿ ಸ್ಮಾರ್ಟ್ ಸಿಟಿ ಎಂಡಿ ವಿರುದ್ದ ಸೆಕ್ಷೆನ್ 420, 427, 447 ಐಪಿಸಿ ಅಡಿ ಪ್ರಕರಣ ದಾಖಲಿಸಿದ್ದಾರೆ. ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಮರಗಳನ್ನ ಕಡಿದಿರುವುದು ಮತ್ತು ಅಕ್ರಮವಾಗಿ ಮಣ್ಣು ಸಾಗಿಸಿದ್ದಾರೆ ಅಂತಾ ಕೇಸ್ ದಾಖಲಿಸಿ ಕ್ರಮ ಕೈಗೊಳ್ಳಿ ಅಂತಾ ಪೊಲೀಸರಿಗೆ ಡಿಎಚ್ಒ ಡಾ. ಮಹೇಶ್ ಕೋಣಿ ಮನವಿ ಮಾಡಿದ್ದಾರೆ.
ಇನ್ನು ಸ್ಮಾರ್ಟ್ ಸಿಟಿ ಎಂಡಿ ಅಂತಾ ಕೇಸ್ ನಲ್ಲಿ ಉಲ್ಲೇಖ ಮಾಡಿದ್ದು ಈ ಹಿಂದೆ ಇದ್ದವರು ಮತ್ತು ಈಗ ಇರುವ ಎಂಡಿ ಸೇರಿ ಒಟ್ಟು ಮೂರು ಜನರ ಎಂಡಿಗಳ ವಿರುದ್ದ ತನಿಖೆ ಮಾಡಲಾಗುತ್ತೆ. ವ್ಯಾಕ್ಸಿನ್ ಡಿಪೋ ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಬರುವುದರಿಂದ ಬಿಜೆಪಿ ಸರ್ಕಾರ ಇದ್ದಾಗ ಶಾಸಕ ಅಭಯ್ ಪಾಟೀಲ್ ಇಲ್ಲಿ ಯಾರ ಅನುಮತಿ ಪಡೆಯದೇ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಕೆಲಸ ಮಾಡಿಸಿದ್ದಾರೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ.
ಅಭಯ್ ಪಾಟೀಲ್ ಮತ್ತು ಸಚಿವ ಸತೀಶ್ ಜಾರಕಿಹೊಳಿ ರಾಜಕೀಯ ಬದ್ದ ವೈರಿಗಳಾಗಿದ್ದು ಅಭಯ್ ವಿರುದ್ದ ಸೇಡು ತೀರಿಸಿಕೊಳ್ಳಲು ಇದೀಗ ಅಧಿಕಾರಿಗಳ ಮೂಲಕ ಕೇಸ್ ದಾಖಲಿಸಿ ಕ್ರಮಕ್ಕೆ ಮುಂದಾಗಿದ್ದಾರೆ ಅಂತಾ ವಿಶ್ಲೇಷಣೆ ಕೂಡ ಮಾಡಲಾಗುತ್ತಿದೆ. ನಿನ್ನೆ ಮಂಗಳವಾರ ಸಚಿವರಾದ ಸತೀಶ್ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ಸ್ಥಳಕ್ಕೆ ಭೇಟಿ ನೀಡಿ ಯಾವ ರೀತಿ ಕಾಮಗಾರಿ ಮಾಡಿದ್ದಾರೆ, ಎಷ್ಟು ಹಣ ಖರ್ಚು ಮಾಡಿದ್ದಾರೆ ಅನ್ನೋದನ್ನ ಪರಿಶೀಲನೆ ನಡೆಸಿದರು. ಇದೇ ವೇಳೆ ಡಿಎಚ್ಒ ಹಾಗೂ ಸ್ಮಾರ್ಟ್ ಸಿಟಿ ಅಧಿಕಾರಿಗಳಿಂದ ಮಾಹಿತಿ ಕೂಡ ಪಡೆದುಕೊಂಡರು.
ಈ ಕುರಿತು ಪ್ರತಿಕ್ರಿಯೆ ನೀಡಿದ ಸತೀಶ್ ಜಾರಕಿಹೊಳಿ ಕಳೆದ ಎರಡ್ಮೂರು ವರ್ಷಗಳಿಂದ ಕೆಲಸ ನಡೆಯುತ್ತಿದೆ. ಒಬ್ಬರಲ್ಲಾ ಮೂರು ಎಂಡಿಗಳು ಜವಾಬ್ದಾರರು. ಪೊಲೀಸರು ಇದರ ಬಗ್ಗೆ ಕ್ರಮ ಕೈಗೊಳ್ಳುತ್ತಾರೆ. ಪಾರಂಪರಿಕ ಪಟ್ಟಿಯಲ್ಲಿರುವ ಕಟ್ಟಡಕ್ಕೆ ಹಾನಿ ಮಾಡಿದ್ದಾರೆ. ಗಿಡಗಳನ್ನ ಕಡಿದಿದ್ದಾರೆ, ಅನುಮತಿ ಇಲ್ಲದೇ ಗಿಡಗಳನ್ನ ಕಡಿದಿದ್ದಾರೆ. ಪೊಲೀಸರ ಗಮನಕ್ಕೆ ಬಂದಿದ್ರೂ ರಾಜಕೀಯ ಒತ್ತಡದಿಂದ ಈ ಹಿಂದೆ ಕ್ರಮ ಕೈಗೊಂಡಿಲ್ಲ. ಈಗ ವಾತಾವರಣ ಬದಲಾವಣೆ ಆಗಿದೆ, ದೂರು ಕೊಟ್ಟಿದ್ದೇವೆ, ಮುಕ್ತವಾಗಿ ತನಿಖೆ ಆಗಲಿದೆ ಅಂತಾ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಒಟ್ಟಾರೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಧಿಕಾರಿಗಳ ಮೇಲೆ ಒತ್ತಡ ಹೇರಿ ತಮಗೆ ಬೇಕಾದ ರೀತಿಯಲ್ಲಿ ಕೆಲಸ ಮಾಡಿಸಿಕೊಂಡಿರುವ ಶಾಸಕರಿಗೆ ಇದೀಗ ಸಚಿವರುಗಳು ಅದೇ ಅಧಿಕಾರಿಗಳನ್ನಿಟ್ಟುಕೊಂಡೇ ಶಾಕ್ ಕೊಡ್ತಿದ್ದಾರೆ. ಸ್ಮಾರ್ಟ್ ಸಿಟಿ ಕಾಮಗಾರಿ ವಿಚಾರದಲ್ಲಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಬಿಜೆಪಿ ಶಾಸಕ ಅಭಯ್ ಪಾಟೀಲ್ ನಡುವೆ ಕೋಲ್ಡ್ ವಾರ್ ಶುರುವಾಗಿದ್ದು ಪೊಲೀಸ್ ಠಾಣೆಯಲ್ಲಿ ಕೇಸ್ ಕೂಡ ಆಗಿದೆ. ಪ್ರಕರಣವನ್ನ ಯಾವ ರೀತಿ ತನಿಖೆ ಮಾಡಿ ಪೊಲೀಸರು ತಾರ್ಕಿಕ ಅಂತ್ಯ ಮಾಡ್ತಾರೆ, ಈ ಇಬ್ಬರು ಜನಪ್ರತಿನಿಧಿಗಳ ನಡುವಿನ ಫೈಟ್ ಮುಂದೆ ಯಾವ ಹಂತಕ್ಕೆ ಹೋಗಿ ತಲಪುತ್ತೆ ಎಂಬುದನ್ನ ಕಾದುನೋಡಬೇಕಿದೆ.
ಬೆಳಗಾವಿ ಜಿಲ್ಲಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:38 am, Wed, 21 June 23