ಬೆಳಗಾವಿ, ಡಿಸೆಂಬರ್ 12: ಬೆಳಗಾವಿ ಅಧಿವೇಶನದ ನಾಲ್ಕನೇ ದಿನವಾದ ಗುರುವಾರ ಕಲಾಪದಲ್ಲಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಮಂಗಳವಾರ ನಿಧನರಾದ ಮಾಜಿ ಸಿಎಂ ಎಸ್ಎಂ ಕೃಷ್ಣಗೆ ನುಡಿ ನಮನ ಸಲ್ಲಿಸಿದರು. ಇದೇ ವೇಳೆ ಅವರು ಜ್ಯೋತಿಷಿಯೊಬ್ಬರು ಅಂದು ಎಸ್ಎಂ ಕೃಷ್ಣ ಹಾಗೂ ತಮ್ಮ ಬಗ್ಗೆ ನುಡಿದಿದ್ದ ಭವಿಷ್ಯವಾಣಿಯನ್ನು ನೆನಪಿಸಿಕೊಂಡರು. ಇದು ಡಿಕೆ ಶಿವಕುಮಾರ್ ಹಾಗೂ ಪ್ರತಿಪಕ್ಷ ನಾಯಕ ಆರ್ ಅಶೋಕ್ ಮಧ್ಯೆ ಸ್ವಾರಸ್ಯಕರ ಚರ್ಚೆಗೆ ಕಾರಣವಾಯಿತು.
ಎಸ್ಎಂ ಕೃಷ್ಣ ಅವರು ರಾಜ್ಯಸಭೆ ಸದಸ್ಯರಾಗುವ ಬಗ್ಗೆ ಜ್ಯೋತಿಷಿ ಹೇಳಿದ್ದರು. ನನಗೂ ಅದೇ ಜ್ಯೋತಿಷಿ, ನೀನು ಇಷ್ಟು ವರ್ಷ ಶಾಸಕ ಆಗುತ್ತೀಯಾ, ಮಂತ್ರಿ ಆಗುತ್ತಿಯಾ, ನಿನಗೆ ಟಿಕೆಟ್ ಸಿಗಲ್ಲ ಎಂಬ ಭವಿಷ್ಯಗಳನ್ನು ನುಡಿದಿದ್ದರು. ಏನೇನು ಸ್ಥಾನ ಸಿಕ್ಕಿದೆ ಎಂದೂ ಹೇಳಿದ್ದರು ಎಂದು ಡಿಕೆ ಶಿವಕುಮಾರ್ ಹೇಳಿದರು.
ಮುಂದುವರಿದು, ಅಶೋಕ್ ಅವರೇ ಜ್ಯೋತಿಷಿ ಏನೇನು ಹೇಳಿದ್ದಾರೆ ಅಂತ ಇಲ್ಲಿ ಹೇಳಿದರೆ ನಿಮ್ಮ (ಬಿಜೆಪಿ) 25 ಶಾಸಕರು, ದಳದವರು ನಮ್ಮ ಕಡೆ ಬರಲಿದ್ದಾರೆ. ಹಾಗಾಗಿ ಅ ಬಗ್ಗೆ ಇಲ್ಲಿ ಚರ್ಚೆ ಬೇಡ, ಕೊಠಡಿಯಲ್ಲಿ ಮಾತನಾಡೋಣ ಎಂದರು. ಇದರಿಂದ, ಜ್ಯೋತಿಷಿ ಡಿಕೆ ಶಿವಕುಮಾರ್ಗೆ ಸಿಎಂ ಆಗುವ ಭವಿಷ್ಯ ನುಡಿದಿದ್ದರೇ ಎಂಬ ಅನುಮಾನ ವ್ಯಕ್ತವಾಗಿದೆ.
ಡಿಕೆ ಶಿವಕುಮಾರ್ ಮಾತಿಗೆ ಪ್ರತಿಕ್ರಿಯಿಸಿದ ಅಶೋಕ್, ನಿಮ್ಮ ಮಾತಿಗೆ ಸಹಮತ ಇದೆ. ಬಹುಶಃ ನೀವೇ ನಮ್ಮ ಕಡೆಗೆ ಬರಬಹುದು. ಆಗ ನಾವೆಲ್ಲಾ ನಿಮ್ಮ ಜೊತೆ ಬರುತ್ತೇವೆ ಎಂದು ಟಾಂಗ್ ಕೊಟ್ಟರು.
ಎಸ್ಎಂ ಕೃಷ್ಣ ಅವರ ನಿಧನ ನನಗೆ ದುಃಖ ತಂದಿಲ್ಲ, ಬದಲಿಗೆ ಸಂತೋಷ ತಂದಿದೆ. ಹುಟ್ಟಿದ ಮೇಲೆ ಒಬ್ಬ ಮನುಷ್ಯ ಸಾಯಲೇಬೇಕು. ಕೃಷ್ಣ ಅವರು 92 ವರ್ಷಗಳ ತುಂಬು ಜೀವನ ನಡೆಸಿದ್ದಾರೆ. ಕೊನೆಯ ನಾಲ್ಕು ತಿಂಗಳು ಮಾತ್ರ ಅನಾರೋಗ್ಯಕ್ಕೆ ತುತ್ತಾಗಿ ಇದ್ದರು. ನಮ್ಮದು ರಾಜಕೀಯ ನಂಟು, ವೈಯಕ್ತಿಕ ಸಂಬಂಧ. ಅವರ ಬದುಕು ಬಹಳ ಹತ್ತಿರದಿಂದ ನೋಡಿದ್ದೇನೆ ಎಂದು ಡಿಕೆ ಶಿವಕುಮಾರ್ ಹೇಳಿದರು.
ನಾನು ಕೃಷ್ಣ ಅವರಿಂದ ರಾಜಕೀಯ ಶುರು ಮಾಡಲಿಲ್ಲ. ನಾನು ಬಂಗಾರಪ್ಪ ಅವರಿಂದ ವಿದ್ಯಾರ್ಥಿ ರಾಜಕೀಯ ಆರಂಭ ಮಾಡಿದ್ದು. ಬಂಗಾರಪ್ಪ ಹೊಸ ಪಕ್ಷ ಕಟ್ಟಿದಾಗ ನಾನು ಕೃಷ್ಣ ಅವರ ಜೊತೆ ಹೋದೆ. ಆಗ ನಾನು ರಾಜಕೀಯದಲ್ಲಿದ್ದೆ, ಶಾಸಕ ಆಗಿದ್ದೆ. ನಮ್ಮಿಬ್ಬರದ್ದು ತಂದೆ ಮಗನ ಸಂಬಂಧ ತರಹ ಇತ್ತು. ಒಂದೆರಡು ಮೂರು ವಿಚಾರಗಳಲ್ಲಿ ನನಗೂ ಕೃಷ್ಣ ಅವರಿಗೂ ಭಿನ್ನಾಭಿಪ್ರಾಯ ಇತ್ತು, ಅದೇನು ಅಂತ ನಾನು ಇಲ್ಲಿ ಹೇಳುವುದಿಲ್ಲ. ಆದರ್ಶ ಇಲ್ಲದ ಬದುಕು ಬದುಕಲ್ಲ ಅಂತ ವಿವೇಕಾನಂದ ಹೇಳಿದ್ದಾರೆ. ಕೃಷ್ಣ ಅವರು ಆದರ್ಶದ ಬದುಕು ಬಿಟ್ಟು ಹೋಗಿದ್ದಾರೆ. ಅವರು 92 ವರ್ಷ ತುಂಬು ಜೀವನ ನಡೆಸಿದ್ದಾರೆ. ಅರ್ಥಪೂರ್ಣವಾದ ಸಂಪೂರ್ಣ ಬದುಕು ಅವರದ್ದು. ಈ ವಿಚಾರದಲ್ಲಿ ಸಂತಸವಿದೆ ಎಂದ ಅವರು ಹೇಳಿದ್ದಾರೆ.
ಇದನ್ನೂ ಓದಿ: ತಾವೊಬ್ಬ ಡಿಸಿಎಂ ಎನ್ನುವುದನ್ನೇ ಮರೆತು ಗುರುವಿನ ಋಣ ತೀರಿಸಿದ ಡಿಕೆ ಶಿವಕುಮಾರ್
ನಂತರ ಮಾತನಾಡಿದ ಅಶೋಕ್, ಎಸ್ಎಂ ಕೃಷ್ಣಗೆ ನಮನ ಸಲ್ಲಿಸಿದರು. ಅಂತ್ಯಸಂಸ್ಕಾರಕ್ಕೆ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿದ್ದಕ್ಕೆ ಡಿಕೆ ಶಿವಕುಮಾರ್ ಹಾಗೂ ಶಾಸಕ ಅಶ್ವತ್ಥನಾರಾಯಣಗೆ ಅಭಿನಂದನೆ ಸಲ್ಲಿಸಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ