ಬೆಳಗಾವಿಯಲ್ಲಿ 19 ವರ್ಷದ ಯುವತಿ ಅನುಮಾನಾಸ್ಪದ ಸಾವು: ಯುವತಿ ಮೈಮೇಲೆ ಸಿಗರೇಟ್‌ನಿಂದ ಸುಟ್ಟ ಗಾಯ ಪತ್ತೆ!
ಯುವತಿಯ ತಲೆಯ ಹಿಂಬದಿಯಲ್ಲಿ, ಮೈಮೇಲೆ ಸಿಗರೇಟ್‌ನಿಂದ ಸುಟ್ಟಿದ ಗಾಯದ ಗುರುತು ಪತ್ತೆಯಾಗಿವೆ. ಹೆಚ್ಚಿನ ಚಿಕಿತ್ಸೆಗೆ ಮಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಬೆಳಗ್ಗೆ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ತಬಸ್ಸುಮ್ ಸಾವನ್ನಪ್ಪಿದ್ದಾಳೆ.
ಬೆಳಗಾವಿ: 19 ವರ್ಷದ ಯುವತಿ (girl) ಅನುಮಾನಾಸ್ಪದ ಸಾವನ್ನಪ್ಪಿರುವಂತಹ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಜಿಲ್ಲೆಯ ಬೈಲಹೊಂಗಲ ಪಟ್ಟಣದ ನಿವಾಸಿ ತಬಸ್ಸುಮ್ ಸವದತ್ತಿ(19) ಮೃತ ಯುವತಿ. ಬೆಂಗಳೂರಿನಲ್ಲಿ ಕಾಲ್ ಸೆಂಟರ್‌ನಲ್ಲಿ ತಬಸ್ಸುಮ್ ಕೆಲಸ ಮಾಡುತ್ತಿದ್ದಳು. ನಿನ್ನೆ ಬೆಳಗಾವಿ ಜಿಲ್ಲಾಸ್ಪತ್ರೆಗೆ ಅಪರಿಚಿತ ಯುವಕ ದಾಖಲಿಸಿದ್ದ. ಈ ಬಗ್ಗೆ ದೂರು ನೀಡಿ ಎಂದಿದ್ದಕ್ಕೆ ಯುವತಿಯ ಮೊಬೈಲ್ನೊಂದಿಗೆ ಯುವಕ ಪರಾರಿಯಾಗಿದ್ದಾನೆ. ಪೋಷಕರು ಆಸ್ಪತ್ರೆಗೆ ಬಂದಾಗ ತಬಸ್ಸುಮ್ ನಿತ್ರಾಣ ಸ್ಥಿತಿಯಲ್ಲಿದ್ದಳು. ಯುವತಿಯ ತಲೆಯ ಹಿಂಬದಿಯಲ್ಲಿ, ಮೈಮೇಲೆ ಸಿಗರೇಟ್‌ನಿಂದ ಸುಟ್ಟಿದ ಗಾಯದ ಗುರುತು ಪತ್ತೆಯಾಗಿವೆ. ಹೆಚ್ಚಿನ ಚಿಕಿತ್ಸೆಗೆ ಮಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಬೆಳಗ್ಗೆ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ತಬಸ್ಸುಮ್ ಸಾವನ್ನಪ್ಪಿದ್ದಾಳೆ. ಮಗಳನ್ನು ಕೊಲೆ ಮಾಡಿದ್ದಾರೆಂದು ಮೃತ ತಬಸ್ಸುಮ್ ತಂದೆ ಇರ್ಷಾದ್ ಅಹ್ಮದ್ ಸವದತ್ತಿ ಆರೋಪಿಸಿದರು. ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.
ಮಗನ ಮುಂದೆಯೇ ಸಂಬಂಧಿಕರ ಮಾಂಸದಂಗಡಿಯಲ್ಲಿ ಸಾವು
ಹುಬ್ಬಳ್ಳಿ: ಮಾಂಸದಂಗಡಿಯಲ್ಲಿ ಅನುಮಾನಾಸ್ಪದವಾಗಿ ವ್ಯಕ್ತಿ ಸಾವನ್ನಪ್ಪಿರುವಂತಹ ಘಟನೆ ಹುಬ್ಬಳ್ಳಿಯ ಬಾಣತಿಕಟ್ಟೆಯ ಮೆಹಬೂಬ್ ನಗರದಲ್ಲಿ ನಡೆದಿದೆ. ಸವದತ್ತಿ ತಾಲ್ಲೂಕಿನ ಬೆಳವಾಡಿ ಗ್ರಾಮದ ಅಶ್ವಾಕ್ ಬೇಪಾರಿ ಮೃತ ವ್ಯಕ್ತಿ. ಕಳೆದ ರಾತ್ರಿ ಮನೆಯಲ್ಲಿ ಜಗಳ ಮಾಡಿಕೊಂಡು ಹುಬ್ಬಳ್ಳಿಯ ಸಂಬಂಧಿಕರ ಮನೆಗೆ ಅಷ್ಪಕ್ ಬೆಪಾರಿ ಬಂದಿದ್ದ. ತಂದೆಯನ್ನು ಕರೆದೊಯ್ಯಲು ಮಗ ಇಂದು ಸಂಬಂಧಿಕರ ಮನೆಗೆ ಬಂದಿದ್ದ. ಮಗನ ಮುಂದೆಯೇ ಸಂಬಂಧಿಕರ ಮಾಂಸದಂಗಡಿಯಲ್ಲಿ ಸಾವಾಗಿದೆ. ಹೊಟ್ಟೆಗೆ ಹಾಗೂ ಕುತ್ತಿಗೆಗೆ ಚಾಕು ಹಾಕಿಕೊಂಡು ವ್ಯಕ್ತಿ ಸಾವನ್ನಪಿದ್ದಾನೆ. ಸ್ವತಃ ಚಾಕು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮಗ ಹೇಳುತ್ತಿದ್ದಾನೆ. ಸದ್ಯ ಮೃತ ವ್ಯಕ್ತಿಯ ಮಗನನ್ನು ವಶಕ್ಕೆ ಹಳೆ ಹುಬ್ಬಳ್ಳಿ ಪೊಲೀಸರು ಪಡೆದಿದ್ದಾರೆ. ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.
ರಕ್ತಚಂದನ ಸಾಗಿಸುತ್ತಿದ್ದ ಐವರ ಗ್ಯಾಂಗ್ ಅರೆಸ್ಟ್: 1.5 ಟನ್ ರಕ್ತಚಂದನ ವಶಕ್ಕೆ
ಬೆಂಗಳೂರು: ತಮಿಳುನಾಡಿಗೆ ರಕ್ತಚಂದನ ದಿಮ್ಮಿಗಳನ್ನ ಸಾಗಿಸುತ್ತಿದ್ದ ಐವರು ಆರೋಪಿಗಳನ್ನು ಮಹಾಲಕ್ಷ್ಮಿ ಲೇಔಟ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಸಿದ್ಧರಾಜು, ಪ್ರಜ್ವಲ್, ಲೋಕೇಶ, ದೇವರಾಜ್, ಗೋವಿಂದ ಸ್ವಾಮಿ ಬಂಧಿತ ಆರೋಪಿಗಳು. ಬಂಧಿತರಿಂದ ಕೋಟ್ಯಾಂತರ ರೂಪಾಯಿ ಮೌಲ್ಯದ 1.5 ಟನ್ ರಕ್ತಚಂದನ ದಿಮ್ಮಿ ವಶಕ್ಕೆ ಪಡೆಯಲಾಗಿದೆ. ಪೊಲೀಸರ ಕಣ್ತಪ್ಪಿಸಲು ಬೊಲೇರೋ ವಾಹನದಲ್ಲಿ ರಕ್ತಚಂದನ ಮರದ ಮೇಲೆ ಟೊಮ್ಯಾಟೊ ಬಾಕ್ಸ್ ಹಾಕಿ ಸಾಗಾಟ ಮಾಡುತ್ತಿದ್ದರು. ಆರೋಪಿಗಳ ಪೈಕಿ ಗೋವಿಂದಸ್ವಾಮಿ ಮೇಲೆ ಆಂದ್ರ, ತಮಿಳುನಾಡು ಭಾಗದಲ್ಲಿ ಈ ಹಿಂದೆ ಪ್ರಕರಣ ದಾಖಲಾಗಿದ್ದವು.
ರಸ್ತೆ ಬದಿ ನಿಂತಿದ್ದ ಬೈಕ್ಗೆ ಕಾರು ಡಿಕ್ಕಿ: ಓರ್ವ ಸಾವು
ಚಿಕ್ಕಬಳ್ಳಾಪುರ: ರಸ್ತೆ ಬದಿ ನಿಂತಿದ್ದ ಬೈಕ್ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿ ಸಾವನ್ನಪ್ಪಿದ್ದು, ಮತ್ತೊರ್ವನ ಸ್ಥಿತಿ ಗಂಭೀರವಾಗಿರುವಂತಹ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಅಂದಾರ್ಲಹಳ್ಳಿ ಗೇಟ್ ಬಳಿ ನಡೆದಿದೆ. ಡಿಪಾಳ್ಯಾ ಮೂಲದ ನಿವಾಸಿ ಸುರೇಶ (29) ಮೃತ ವ್ಯಕ್ತಿ. ಚಿಂತಾಮಣಿ ಮೂಲದ ಮದನ್ ಸ್ಥಿತಿ ಗಂಭೀರವಾಗಿದೆ. ಇಬ್ಬರು ಯುವಕರು ಚಿಕ್ಕಬಳ್ಳಾಪುರದ ರಾಮು ಫರ್ನಿಚರ್ಸ್ ನಲ್ಲಿ ಕೆಲಸ ಮಾಡುತ್ತಿದ್ದರು. ಕಾರಿನಲ್ಲಿದ್ದ ಮೂವರು ಬಚಾವ್ ಆಗಿದ್ದಾರೆ. ಕಾರಿನಲ್ಲಿದ್ದವರನ್ನು ಸ್ಥಳಿಯರು ತರಾಟೆಗೆ ತೆಗೆದುಕೊಂಡರು.
ಸರ್ಕಾರಿ ಬಸ್ ಬ್ರೇಕ್ ಫೇಲ್: ಸರಣಿ ಅಪಘಾತ
ಕಾರವಾರ: ಎರಡು ಬಸ್, ಒಂದು ಕಾರು, ಒಂದು ಬೈಕ್ ನಡುವೆ ಸರಣಿ ಅಪಘಾತ ಸಂಭವಿಸಿರುವಂತಹ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಕೋರ್ಟ ರಸ್ತೆಯಲ್ಲಿ ನಡೆದಿದೆ. ಅದೃಷ್ಟವಶಾತ್ ಅಪಘಾತದಲ್ಲಿ ಪ್ರಯಾಣಿಕರು ಬಚಾವ್ ಆಗಿದ್ದಾರೆ. ಕುಮಟಾ ಭಾಗದ ಕಡೆಯಿಂದ ಹೊನ್ನಾವರ ಬಸ್ ನಿಲ್ದಾಣಕ್ಕೆ ತೆರಳುತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ನ ಬ್ರೇಕ್ ಫೇಲ್ ಆದ ಕಾರಣ ಅಪಘಾತ ನಡೆದಿದೆ. ಹೊನ್ನಾವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:52 pm, Thu, 13 October 22