ಉಕ್ಕಿ ಹರಿಯುತ್ತಿರುವ ಘಟಪ್ರಭಾ ನದಿಗೆ ಗುಂಡು ಹಾಕಿದ್ದ ‘ಗುಂಡ’ ಸೇತುವೆ ಮೇಲಿಂದ ಧುಮುಕಿದ!
ಬಹಳಷ್ಟು ಸಂದರ್ಭಗಳಲ್ಲಿ ‘ಗುಂಡನಂಥ’ ಅವಿವೇಕಗಳಿಗೆ ಜೊತೆಯಲ್ಲಿರುವ ಜನ ಕೆಣಕುತ್ತಾರೆ. ನೀರಾಗ ಎಗರಂಗದ್ದೀಯೇನಪ್ಪ? ನಿನ್ ಕೈಯಾಗ ಏನಾಗ್ತದ ಬಿಡು, ಸುಮ್ಮಾ ಧಿಮಾಕ್ ಮಾಡ್ತಿ......ಅಂತ ಅವನನ್ನು ಪ್ರಚೋದಿಸುತ್ತಾರೆ. ಕುಡಿತದ ಅಮಲಿನಲ್ಲಿರುವ ಗುಂಡನಂಥವರು ಅದನ್ನು ಸವಾಲಾಗಿ ಸ್ವೀಕರಿಸಿ ಹೀಗೆ ಅಪಾಯಕಾರಿ ಹುಚ್ಚಾಟಗಳಿಗೆ ಮುಂದಾಗುತ್ತಾರೆ.
ಬೆಳಗಾವಿ: ಗುಂಡಿನ ಮತ್ತೇ ಗಮ್ಮತ್ತು ಅಳತೆ ಮೀರಿದರೆ ಅಪತ್ತು ಕುಡುಕನಿಗೆ ಇರೋದು ನಿಯತ್ತು ಇದೇ ಬಾಟಲಿ ಮಾತು…….1973 ರಲ್ಲಿ ತೆರೆಕಂಡ ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ಎಡಕಲ್ಲು ಗುಡ್ಡದ ಮೇಲೆ’ ಚಿತ್ರದ ಹಾಡಿದು. ಆ ಜಮಾನ ಸೂಪರ್ ಹಿಟ್ ಮೂವೀ. ಅದರೆ ನಾವಿಲ್ಲಿ ಸಿನಿಮಾದ ಬಗ್ಗೆ ಮಾತಾಡುತ್ತಿಲ್ಲ ಮಾರಾಯ್ರೇ. ಮತ್ತೇರಿಸಿಕೊಂಡು ಉಕ್ಕಿ ಹರಿಯುತ್ತಿರುವ ನದಿಗೆ ಧುಮುಕಿರುವ ಈ ಉಂಡಾಡಿ ಗುಂಡನ ಬಗ್ಗೆ ಮಾತಾಡುತ್ತಿದ್ದೇವೆ. ಜಿಲ್ಲೆಯ ಗೋಕಾಕ್ ತಾಲೂಕಿನ ಕೊಣ್ಣೂರು ಗ್ರಾಮದಲ್ಲಿ ನಮ್ಮ ಪೆದ್ದಗುಂಡ ಸೇತುವೆ ಮೇಲೆ ನಿಂತ ಜನರ ಮುಂದೆ ಹೀರೋ ಅನಿಸಿಕೊಳ್ಳಲು ಸೇತುವೆ ಮೇಲಿಂದ ಕೆಳಗೆ ಹರಿಯುತ್ತಿರುವ ಘಟಪ್ರಭಾ ನದಿಗೆ ಧುಮುಕಿದ್ದಾನೆ. ನದಿ ಉಕ್ಕಿ ಹರಿಯುತ್ತಿರುವುದರಿಂದ ನದಿ ದಡಕ್ಕೂ ಯಾರೂ ಹೋಗಕೂಡದೆಂದು ಜಿಲ್ಲಾಡಳಿತ ಎಚ್ಚರಿಕೆ ಜಾರಿಮಾಡಿದ್ದರೂ ಗುಂಡ ನೀರಿಗೆ ಜಿಗಿದಿದ್ದಾನೆ ಮತ್ತು ಈಜಿ ದಡಕ್ಕೆ ಬಂದಿದ್ದಾನೆ. ಅವನು ಪರಿಣಿತ ಈಜುಗಾರ ಅನ್ನೋದು ಗೊತ್ತಾಗುತ್ತದೆ, ಆದರೆ ಉಕ್ಕಿ ಹರಿವ ನದಿ ನೀರಲ್ಲಿ ಹುಚ್ಚು ಸಾಹಸ ಯಾವ ಕಾರಣಕ್ಕೂ ಸಲ್ಲದು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಘಟಪ್ರಭಾ ನದಿಗೆ 60 ಸಾವಿರ ಕ್ಯೂಸೆಕ್ ನೀರು ಬಿಡುಗಡೆ; ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಡಂಗುರ ಹೊರಡಿಸಿದ ಅಧಿಕಾರಿಗಳು