ಹಾವೇರಿ, ಧಾರವಾಡ ಟಿಕೆಟ್ ವಂಚಿತ ಜಗದೀಶ್ ಶೆಟ್ಟರ್​ಗೆ ಮತ್ತೊಂದು ಆಫರ್ ನೀಡಿದ ಅಮಿತ್ ಶಾ!

| Updated By: ಗಣಪತಿ ಶರ್ಮ

Updated on: Mar 14, 2024 | 1:06 PM

ಹಾವೇರಿ ಮತ್ತು ಧಾರವಾಡ ಕ್ಷೇತ್ರದ ಟಿಕೆಟ್ ಸಿಗದೇ ಹತಾಶರಾಗಿರುವ ಮಾಜಿ ಸಿಎಂ ಜಗದೀಶ ಶೆಟ್ಟರ್ ಅವರನ್ನು ಸಮಾಧಾನಿಸಲು ಖುದ್ದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆಖಾಡಕ್ಕಿಳಿದಿದ್ದಾರೆ. ಶೆಟ್ಟರ್​​ಗೆ ದೂರವಾಣಿ ಕರೆ ಮಾಡಿರುವ ಅಮಿತ್ ಶಾ ಬೇರೊಂದು ಕ್ಷೇತ್ರದಿಂದ ಟಿಕೆಟ್ ಆಫರ್ ಮಾಡಿದ್ದಾರೆ. ಆ ಕ್ಷೇತ್ರ ಯಾವುದು? ಶೆಟ್ಟರ್ ಅದನ್ನು ಒಪ್ಪುತ್ತಾರಾ? ಕಾದು ನೋಡಬೇಕಿದೆ.

ಹಾವೇರಿ, ಧಾರವಾಡ ಟಿಕೆಟ್ ವಂಚಿತ ಜಗದೀಶ್ ಶೆಟ್ಟರ್​ಗೆ ಮತ್ತೊಂದು ಆಫರ್ ನೀಡಿದ ಅಮಿತ್ ಶಾ!
ಅಮಿತ್ ಶಾ & ಜಗದೀಶ್ ಶೆಟ್ಟರ್
Follow us on

ಬೆಳಗಾವಿ, ಮಾರ್ಚ್​ 14: ಹಾವೇರಿ ಮತ್ತು ಧಾರವಾಡ ಕ್ಷೇತ್ರಗಳಲ್ಲಿ ಬಿಜೆಪಿ (BJP) ಟಿಕೆಟ್ ದೊರೆಯದೆ ಅಸಮಾಧಾನಗೊಂಡಿರುವ ಮಾಜಿ ಸಿಎಂ ಜಗದೀಶ ಶೆಟ್ಟರ್ (Jagadish Shettar) ಅವರ ಮನವೊಲಿಕೆಗೆ ಖುದ್ದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅಖಾಡಕ್ಕೆ ಇಳಿದಿದ್ದಾರೆ. ಶೆಟ್ಟರ್​ಗೆ ದೂರವಾಣಿ ಕರೆ ಮಾಡಿ ಮಾತನಾಡಿರುವ ಅಮಿತ್ ಶಾ, ಬೆಳಗಾವಿಯಿಂದ ಸ್ಪರ್ಧೆ ಮಾಡುವಂತೆ ಸೂಚನೆ ನೀಡಿದ್ದಾರೆ. ಸದ್ಯ ಬಿಜೆಪಿ 20 ಮಂದಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಮುಂದಿನ ಹಂತದ ಅಭ್ಯರ್ಥಿ ಆಯ್ಕೆ ವೇಳೆ ಶೆಟ್ಟರ್​​​ರನ್ನು ಬೆಳಗಾವಿಯಿಂದ ಅಭ್ಯರ್ಥಿಯನ್ನಾಗಿ ಪರಿಗಣಿಸುವ ಸುಳಿವು ನೀಡಿದೆ.

ಅಮಿತ್ ಶಾ ಜೊತೆ ಮಾತನಾಡಿರುವ ಶೆಟ್ಟರ್ ಬೆಳಗಾವಿಯಿಂದ ಸ್ಪರ್ಧೆ ಮಾಡುವ ಬಗ್ಗೆ ಯೋಚಿಸಲು ಕಾಲಾವ ಕೇಳಿದ್ದಾರೆ. ಬೆಳಗಾವಿಯಿಂದ ಸ್ಪರ್ಧಿಸಿದರೆ ಸೋಲುವ ಬಗ್ಗೆ ಶೆಟ್ಟರ್​​ಗೆ ಭೀತಿ ಇದೆ ಎನ್ನಲಾಗಿದೆ. ಹೀಗಾಗಿ ಅವರು ಕಾಲಾವಕಾಶ ಕೇಳಿರುವ ಸಾಧ್ಯತೆ ಇದೆ. ಆದರೆ ಖುದ್ದು ಅಮಿತ್ ಶಾ ಸೂಚನೆ ನೀಡಿರುವುದರಿಂದ ಶೆಟ್ಟರ್ ಪರಿಸ್ಥಿತಿ ಅಡಕತ್ತರಿಯಲ್ಲಿ ಸಿಲುಕಿದಂತಾಗಿದೆ.

ಕಳೆದ ಬಾರಿಯ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಟಿಕೆಟ್ ಸಿಗದ ಕಾರಣ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರಿದ್ದ ಶೆಟ್ಟರ್, ಹುಬ್ಬಳ್ಳಿ ಧಾರವಾಡ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ನಂತರ ಅವರನ್ನು ವಿಧಾನ ಪರಿಷತ್ ಸದಸ್ಯನನ್ನಾಗಿ ಕಾಂಗ್ರೆಸ್ ಮಾಡಿತ್ತು. ಆದರೆ ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಮತ್ತೆ ಬಿಜೆಪಿ ಪರ ವಾಲಿದ್ದ ಶೆಟ್ಟರ್, ಲೋಕಸಭೆ ಟಿಕೆಟ್ ಆಕಾಂಕ್ಷಿಯೊಂದಿಗೆ ಘರ್ ವಾಪ್ಸಿ ಆಗಿದ್ದರು. ಮರಳಿ ಬಿಜೆಪಿ ಸೇರುವ ಸಂದರ್ಭ ಅವರು ಧಾರವಾಡ ಅಥವಾ ಹಾವೇರಿಯಿಂದ ಲೋಕಸಭೆ ಚುನಾವಣೆಗೆ ಟಿಕೆಟ್ ನೀಡಬೇಕೆಂದು ಬೇಡಿಕೆ ಇಟ್ಟಿದ್ದರು. ಆದರೆ, ಇದೀಗ ಆ ಎರಡು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಘೋಷಣೆಯಾಗಿದೆ. ಧಾರವಾಡದಿಂದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯನ್ನು ಕಣಕ್ಕಿಳಿಸಲಾಗಿದ್ದರೆ, ಹಾವೇರಿಯಿಂದ ಮಾಜಿ ಸಿಎಂ ಬಬಸವರಾಜ ಬೊಮ್ಮಾಯಿ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ. ಇದರಿಂದ ಶೆಟ್ಟರ್ ನಿರಾಸೆಗೊಂಡಿದ್ದಾರೆ.

ಇದನ್ನೂ ಓದಿ:​​ ಧಾರವಾಡವೂ ಇಲ್ಲ, ಹಾವೇರಿಗೂ‌ ಸಲ್ಲ: ಜಗದೀಶ್ ಶೆಟ್ಟರ್ ಮುಂದಿನ ನಡೆ ಏನು?

ಚಿತ್ರದುರ್ಗಕ್ಕೆ ಅಚ್ಚರಿಯ ಹೆಸರು

ಈ ಮಧ್ಯೆ ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೂ ಅಚ್ಚರಿಯ ಹೆಸರು ಮುನ್ನೆಲೆಗೆ ಬಂದಿದೆ. ಅಲ್ಲಿಂದ ಸ್ಪರ್ಧೆ ಮಾಡುವಂತೆ ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಬಳಿ ಬಿಎಸ್ ಯಡಿಯೂರಪ್ಪ ಮನವಿ ಮಾಡಿದ್ದಾರೆ. ಚಿತ್ರದುರ್ಗದಿಂದ ನೀವು ಸ್ಪರ್ಧೆ ಮಾಡಿ. ಮುಂದೆ ನಿಮಗೆ ಸಚಿವ ಅವಕಾಶವಿದೆ. ನಿನ್ನೆ ರಾತ್ರಿ ನಿಮ್ಮ ಹೆಸರನ್ನು ಹೈಕಮಾಂಡ್​ಗೆ ಕಳುಹಿಸಿ ಕೊಟ್ಟಿದ್ದೇವೆ ಎಂದು ಕಾರಜೋಳ ಬಳಿ ಯಡಿಯೂರಪ್ಪ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ