ಬೆಳಗಾವಿ ಪಾಲಿಕೆಯಲ್ಲಿ ಗಡಿ ಸಮರ; ‘ಕರ್ನಾಟಕ ಪರ ಗೊತ್ತುವಳಿ’ ಮಂಡನೆ ವೇಳೆ ಎಂಇಎಸ್ ಸದಸ್ಯರ ಕಿರಿಕ್!

ಬೆಳಗಾವಿ ಮಹಾನಗರ ಪಾಲಿಕೆ ಸಭೆಯಲ್ಲಿ "ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ" ಎಂಬ ಗೊತ್ತುವಳಿ ಸ್ವೀಕಾರದ ವಿಚಾರದಲ್ಲಿ ಎಂಇಎಸ್ ಮತ್ತು ಕನ್ನಡ ಸದಸ್ಯರ ನಡುವೆ ತೀವ್ರ ವಾಗ್ವಾದ ನಡೆಯಿತು. ಗಡಿ ವಿವಾದ ಸುಪ್ರೀಂ ಕೋರ್ಟ್‌ನಲ್ಲಿರುವುದರಿಂದ ಗೊತ್ತುವಳಿ ಮಂಡಿಸಲು ಸಾಧ್ಯವಿಲ್ಲ ಎಂಬ ಎಂಇಎಸ್ ವಾದಕ್ಕೆ ಕನ್ನಡ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಮೇಯರ್ ಸರ್ಕಾರದ ಅಭಿಪ್ರಾಯ ಪಡೆಯುವುದಾಗಿ ರೂಲಿಂಗ್ ನೀಡಿದರೂ, ಕರ್ನಾಟಕ ರಕ್ಷಣಾ ವೇದಿಕೆಯ ಪ್ರತಿಭಟನೆ ಸಭೆಗೆ ಮುತ್ತಿಗೆ ಯತ್ನದಿಂದಾಗಿ ಪರಿಸ್ಥಿತಿ ಉದ್ವಿಗ್ನಗೊಂಡಿತು.

ಬೆಳಗಾವಿ ಪಾಲಿಕೆಯಲ್ಲಿ ಗಡಿ ಸಮರ; ಕರ್ನಾಟಕ ಪರ ಗೊತ್ತುವಳಿ ಮಂಡನೆ ವೇಳೆ ಎಂಇಎಸ್ ಸದಸ್ಯರ ಕಿರಿಕ್!
ಬೆಳಗಾವಿ ಮಹಾನಗರ ಪಾಲಿಕೆ ಸಭೆ
Edited By:

Updated on: May 13, 2026 | 2:48 PM

ಬೆಳಗಾವಿ, ಮೇ.13: ಬೆಳಗಾವಿ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯು ಇಂದು (ಮೇ13) ಕನ್ನಡ ಮತ್ತು ಮರಾಠಿ ಸದಸ್ಯರ ನಡುವಿನ ತೀವ್ರ ವಾಗ್ವಾದಕ್ಕೆ ಸಾಕ್ಷಿಯಾಯಿತು. “ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ” ಎಂಬ ಗೊತ್ತುವಳಿಯನ್ನು ಸ್ವೀಕರಿಸುವ ವಿಚಾರದಲ್ಲಿ ಎಂಇಎಸ್ (MES) ಮತ್ತು ಕನ್ನಡ ಪರ ಸದಸ್ಯರ ನಡುವೆ ಭಾರಿ ಗದ್ದಲ ಏರ್ಪಟ್ಟಿತು. ಇದೀಗ ಇದು ಭಾರೀ ವಿವಾದಕ್ಕೆ ಕಾರಣವಾಗಿದೆ.

ಕನ್ನಡ ಪರ ಸದಸ್ಯ ರಮೇಶ್ ಸೊಂಟಕ್ಕಿ ಅವರು, “ಮಹಾಜನ್ ವರದಿ ಅಂತಿಮ. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ಗೊತ್ತುವಳಿಯನ್ನು ಪಾಲಿಕೆ ಅಧಿಕೃತವಾಗಿ ಸ್ವೀಕರಿಸಬೇಕು” ಎಂದು ವಿಷಯ ಮಂಡಿಸಿದರು. ಈ ವಿಷಯ ಪ್ರಸ್ತಾಪವಾಗುತ್ತಿದ್ದಂತೆ ಎಂಇಎಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ, “ಗಡಿ ವಿವಾದ ಸುಪ್ರೀಂ ಕೋರ್ಟ್‌ನಲ್ಲಿದೆ, ಹೀಗಿರುವಾಗ ಗೊತ್ತುವಳಿ ಮಂಡಿಸಲು ಸಾಧ್ಯವಿಲ್ಲ” ಎಂದು ಉದ್ಧಟತನ ತೋರಿದರು. ಇದು ಕನ್ನಡ ಸದಸ್ಯರ ಆಕ್ರೋಶಕ್ಕೆ ಕಾರಣವಾಯಿತು.

ಸಭೆಯಲ್ಲಿ ಹಾಜರಿದ್ದ ಕಾನೂನು ತಜ್ಞರು, ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಈಗಲೇ ಗೊತ್ತುವಳಿ ಸ್ವೀಕರಿಸಲು ಅವಕಾಶವಿಲ್ಲ ಎಂದರು. ಇದಕ್ಕೆ ತಿರುಗೇಟು ನೀಡಿದ ರಮೇಶ್ ಸೊಂಟಕ್ಕಿ, ಕರ್ನಾಟಕ ವಿಧಾನಸಭೆಯಲ್ಲೇ ಆರು ಬಾರಿ ಇಂತಹ ಗೊತ್ತುವಳಿ ಅಂಗೀಕಾರವಾಗಿದೆ ಎಂದು ನೆನಪಿಸಿದರು. ಗದ್ದಲ ತೀವ್ರಗೊಂಡ ಹಿನ್ನೆಲೆಯಲ್ಲಿ ಮಧ್ಯಪ್ರವೇಶಿಸಿದ ಮೇಯರ್ ಪ್ರೀತಿ ಕಾಮಕರ ಅವರು, “ವಿಷಯ ಸುಪ್ರೀಂ ಕೋರ್ಟ್‌ನಲ್ಲಿ ಇರುವುದರಿಂದ ಈ ಕುರಿತು ಸರ್ಕಾರದ ಅಭಿಪ್ರಾಯ ಪಡೆಯಲಾಗುವುದು” ಎಂದು ರೂಲಿಂಗ್ ನೀಡಿದರು.

ಇದನ್ನೂ ಓದಿ: ಕೊರಗಜ್ಜ ಸರ್ಕಲ್​​ ವಿವಾದ: ಯು.ಟಿ. ಖಾದರ್​​ಗೆ ಘೇರಾವ್​ ಹಾಕಿದ್ದವರ ವಿರುದ್ಧ FIR

ಇದೇ ವೇಳೆ, ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಶ್ರೀನಿವಾಸ ತಾಳೂರ್ಕರ್ ನೇತೃತ್ವದಲ್ಲಿ ಪಾಲಿಕೆಗೆ ಮುತ್ತಿಗೆ ಹಾಕಲು ಯತ್ನಿಸಿದರು. “ಬೆಳಗಾವಿ ಕರ್ನಾಟಕದ್ದು” ಎಂದು ಘೋಷಣೆ ಕೂಗುತ್ತಾ ಸಭೆಗೆ ನುಗ್ಗಲು ಪ್ರಯತ್ನಿಸಿದ ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದರು. ನಂತರ ಮೇಯರ್ ಮತ್ತು ಉಪಮೇಯರ್ ಸ್ಥಳಕ್ಕೆ ಬಂದು ಹೋರಾಟಗಾರರಿಂದ ಮನವಿ ಸ್ವೀಕರಿಸಿದರು. ಆಡಳಿತ ಪಕ್ಷದಲ್ಲಿರುವ ಬಿಜೆಪಿ ಮತ್ತು ವಿರೋಧ ಪಕ್ಷದಲ್ಲಿರುವ ಕಾಂಗ್ರೆಸ್ ಸದಸ್ಯರ ನಡುವೆ ಈ ವಿಚಾರದಲ್ಲಿ ಒಮ್ಮತವಿದ್ದರೂ, ಎಂಇಎಸ್ ಸದಸ್ಯರ ನಡೆಯಿಂದಾಗಿ ಪಾಲಿಕೆ ಸಭೆ ರಣರಂಗವಾಗಿ ಪರಿಣಮಿಸಿತು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us