ಕೃಷ್ಣಾ ನದಿಯ ಅಬ್ಬರಕ್ಕೆ 20 ಸಾವಿರ ಜನರ ಬದುಕು ಅತಂತ್ರ: 55 ಗ್ರಾಮಗಳಲ್ಲಿ ನೆರೆಯಿಂದ ಹಾನಿ

ಭೀಕರ ಪ್ರವಾಹ, ನೀರಿನಲ್ಲೇ ಬದುಕು, ನೂರಾರು ಮನೆಗಳು ಮುಳುಗಡೆ. ಬೋಟ್​ನಲ್ಲೇ ಓಡಾಡುವ ಪರಿಸ್ಥಿತಿ. ರಣಭೀಕರ ಪ್ರವಾಹದ ಹೊಡೆತಕ್ಕೆ ಉತ್ತರ ಕರ್ನಾಟಕ ಅಲ್ಲೋಲ ಕಲ್ಲೋಲವೇ ಆಗಿದೆ. ಕೃಷ್ಣಾ ನದಿಯ ರೌದ್ರಾವತಾರಕ್ಕೆ ಎಲ್ಲವೂ ಕೊಚ್ಚಿಕೊಂಡು ಹೋಗಿದೆ. ಹತ್ತಾರು ಗ್ರಾಮಗಳು ನಲುಗಿ ಹೋಗಿವೆ. ನದಿ ಪಾತ್ರದಲ್ಲಿನ ಜನರ ಬದುಕು ಇದೀಗ ಬೀದಿಗೆ ಬಂದಿದೆ.

ಕೃಷ್ಣಾ ನದಿಯ ಅಬ್ಬರಕ್ಕೆ 20 ಸಾವಿರ ಜನರ ಬದುಕು ಅತಂತ್ರ: 55 ಗ್ರಾಮಗಳಲ್ಲಿ ನೆರೆಯಿಂದ ಹಾನಿ
ಕೃಷ್ಣಾ ನದಿ ಪ್ರವಾಹ
Updated By: Ganapathi Sharma

Updated on: Aug 02, 2024 | 3:06 PM

ಬೆಳಗಾವಿ, ಆಗಸ್ಟ್ 2: ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಳೆಯಾರ್ಭಟದಿಂದಾಗಿ ಕೃಷ್ಣಾ ನದಿ ಕೆರಳಿದೆ. ಅಪಾಯಮಟ್ಟ ಮೀರಿ ಹರಿಯುತ್ತಿದೆ. ಇದರಿಂದ ಬೆಳಗಾವಿಯಲ್ಲಿ ಎಲ್ಲವೂ ಅಯೋಮಯವೇ ಆಗಿದೆ. ಸಪ್ತ ನದಿಗಳ ಆರ್ಭಟಕ್ಕೆ ಎಲ್ಲವೂ ಕೊಚ್ಚಿಕೊಂಡು ಹೋಗುತ್ತಿವೆ. ಬೆಳಗಾವಿಯ ಅರ್ಧಕ್ಕೆ ಅರ್ಧ ಭಾಗವೇ ಮುಳುಗಡೆಯಾಗಿದೆ. ಇದುವರೆಗೂ 20 ಸಾವಿರಕ್ಕೂ ಹೆಚ್ಚು ಜನರ ಬದುಕು ಬೀದಿಗೆ ಬಂದಿದೆ.

ಬೆಳಗಾವಿಯ ಪೇರಲ್​ ತೋಟ ಗ್ರಾಮದ ಸ್ಥಿತಿ ಚಿಂತಾಜನಕ

ಅಥಣಿ ತಾಲೂಕಿನ ಹತ್ತಾರು ಗ್ರಾಮಗಳು ಕೃಷ್ಣಾ ನದಿಯ ಅಬ್ಬರಕ್ಕೆ ನಲುಗಿವೆ. ಪೇರಲ್ ತೋಟದ ಜನರ ಪರಿಸ್ಥಿತಿ ಚಿಂತಾಜನಕವಾಗಿದೆ. ತೋಟದ ಮನೆಗಳಲ್ಲ ಪ್ರವಾಹದಿಂದ ಮುಳುಗಡೆಯಾಗಿವೆ.

ಲಕ್ಷ್ಮಣ್ ಸವದಿ ಗ್ರಾಮಕ್ಕೂ ನುಗ್ಗಿದ ಪ್ರವಾಹ

ಇದಿಷ್ಟೇ ಅಲ್ಲ ಮಾಜಿ ಡಿಸಿಎಂ, ಶಾಸಕ ಲಕ್ಷ್ಮಣ್ ಸವದಿ ಗ್ರಾಮಕ್ಕೂ ಪ್ರವಾಹ ನುಗ್ಗಿ ಅವಾಂತರವನ್ನೇ ತಂದಿಟ್ಟಿದೆ. ಅಥಣಿ ತಾಲೂಕಿನ ನಾಗನೂರು ಪಿಕೆ ಗ್ರಾಮ ಸಂಪೂರ್ಣ ಜಲಾವೃತವಾಗಿದೆ. ಇನ್ನು ಗ್ರಾಮಕ್ಕೆ ಸಂಪರ್ಕಿಸುವ ಸೇತುವೆ ಕೂಡ ಮುಳುಗಡೆಯಾಗಿದೆ. ನದಿ ಪಾತ್ರದಲ್ಲಿನ ಸಾವಿರಾರು ಎಕರೆ ಜಮೀನಿಗೆ ನೀರು ನುಗ್ಗಿ ಅವಾಂತರವಾಗಿದೆ.

ಪೇರಲ್ ತೋಟದಲ್ಲಿ 40 ಮನೆಗಳು, ದೇವಸ್ಥಾನ ಜಲಾವೃತ

ಪೇರಲ್ ತೋಟದ ಭೀಕರ ಪರಿಸ್ಥಿತಿ ಇದಿಷ್ಟೇ ಅಲ್ಲ, ಮನೆಯನ್ನ ಕಳೆದುಕೊಂಡು ಕೆಲವರು ಊರುಗಳನ್ನೇ ತೊರೆದಿದ್ದರೆ, ಮತ್ತೊಂದಿಷ್ಟು ಮಂದಿ ಬೋಟ್​ನಲ್ಲೇ ಓಡಾಡುತ್ತಿದ್ದಾರೆ. ಬರೋಬ್ಬರಿ 40 ಮನೆಗಳು ಸಂಪೂರ್ಣ ಮುಳುಗಡೆಯಾಗಿವೆ. ದೇವಸ್ಥಾನಗಳು ಜಲಾವೃತವಾಗಿದೆ. ನದಿ ನೀರು ನುಗ್ಗಿದ್ದರಿಂದ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.

ಚಿಕ್ಕಮಗಳೂರಿನಲ್ಲಿ ಗುಡ್ಡ ಕುಸಿತ

ಮಲೆನಾಡು ಭಾಗದಲ್ಲೂ ನಿರಂತರ ಮಳೆಯಿಂದಾಗಿ ಗುಡ್ಡ ಕುಸಿಯುತ್ತಿದೆ. ಎನ್​ಆರ್​ಪುರ ತಾಲೂಕಿನ ಚೆನ್ನಕಲ್ಲು ಗ್ರಾಮದಲ್ಲಿ ಭೂಕುಸಿತದಿಂದಾಗಿ ಅಪಾರ ಅಡಕೆ ಗಿಡಗಳು ನಾಶವಾಗಿದೆ. ಇನ್ನು ಮನೆಯ ಗೋಡೆ ಬಿರುಕು ಬಿಟ್ಟಿದ್ದು, ಕುಸಿಯೋ ಆತಂಕ ಎದುರಾಗಿದೆ.

ಬಾಗಲಕೋಟೆಯಲ್ಲಿ ಘಟಪ್ರಭಾ ನದಿಯ ಅಬ್ಬರಕ್ಕೆ ರೈತರ ಕಷ್ಟ ಪಟ್ಟು ಬೆಳೆದಿದ್ದ ಕಬ್ಬು, ಈರುಳ್ಳಿ ಕೊಚ್ಚಿಕೊಂಡು ಹೋಗಿದೆ. 8 ಎಕರೆಯಲ್ಲಿ ಬೆಳೆದಿದ್ದ ಈರುಳ್ಳಿ ಸಂಪೂರ್ಣ ನಾಶವಾಗಿದೆ. ಇನ್ನೊಂದು ತಿಂಗಳಲ್ಲಿ ಈರುಳಿ ಫಸಲಿಗೆ ಬರ್ಬೇಕಿತ್ತು. ಇದೀಗ ಅನ್ನದಾತ ಕಣ್ಣೀರು ಹಾಕುವಂತಾಗಿದೆ.

ಇದನ್ನೂ ಓದಿ: 200 ಕಿ.ಮೀ ಕ್ರಮಿಸಿ ಮಾಲೀಕನ ಮನೆ ಸೇರಿಸಿದ ಕಾಣೆಯಾಗಿದ್ದ ಶ್ವಾನ

ಒಟ್ಟಾರೆಯಾಗಿ ಮಹಾ ಮಳೆಯ ಹೊಡೆತಕ್ಕೆ ನಾನಾ ಅವಾಂತರಗಳೇ ಆಗಿವೆ. ಬೆಳಗಾವಿ ಭಾಗದಲ್ಲಿ ಪ್ರವಾಹದಿಂದ 20 ಸಾವಿರಕ್ಕೂ ಹೆಚ್ಚು ಜನರು ಬೀದಿಗೆ ಬಂದಿದ್ದಾರೆ. ಇನ್ನು ಕರಾವಳಿ, ಮಲೆನಾಡು ಭಾಗದಲ್ಲಿ ನಿರಂತರ ಗುಡ್ಡ ಕುಸಿಯುತ್ತಲೇ ಇದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ