ಬೆಳಗಾವಿ: ಆರು ತಿಂಗಳಲ್ಲಿ 29 ಬಾಣಂತಿಯರು, 322 ಶಿಶುಗಳ ಸಾವು!
ಬೆಳಗಾವಿಯಲ್ಲಿ ಆರು ತಿಂಗಳಲ್ಲಿ 29 ಬಾಣಂತಿಯರು ಮತ್ತು 322 ಶಿಶುಗಳು ಮೃತಪಟ್ಟಿರುವುದು ಆತಂಕಕಾರಿ ಸಂಗತಿಯಾಗಿದೆ. ಸೂಕ್ತ ಸಮಯಕ್ಕೆ ಚಿಕಿತ್ಸೆ ದೊರೆಯದಿರುವುದು, ರಕ್ತಸ್ರಾವ, ವೈದ್ಯರ ನಿರ್ಲಕ್ಷ್ಯ ಮುಂತಾದ ಕಾರಣಗಳಿಂದ ಬಾಣಂತಿಯರು ಸಾವನ್ನಪ್ಪಿದ್ದಾರೆ. ತೂಕ ಕಡಿಮೆ, ಅಪೌಷ್ಟಿಕತೆ, ನ್ಯುಮೋನಿಯಾ ಮುಂತಾದ ಕಾರಣಗಳಿಂದ ಶಿಶುಗಳು ಮೃತಪಟ್ಟಿವೆ ಎಂದು ವರದಿಯಾಗಿದೆ.

ಬೆಳಗಾವಿ, ಡಿಸೆಂಬರ್ 08: ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ (BIMS) ಐವರು ಬಾಣಂತಿಯರು ಮೃತಪಟ್ಟಿದ್ದು, ಕರ್ನಾಟಕದಲ್ಲಿ (Karnataka) ಸಂಚಲನ ಸೃಷ್ಟಿಸಿದೆ. ಇದರ ಬೆನ್ನಲ್ಲೇ ಬೆಳಗಾವಿಯ (Belagavi) ವಿವಿಧ ಆಸ್ಪತ್ರೆಗಳಲ್ಲಿ ಆರು ತಿಂಗಳಲ್ಲಿ 29 ಬಾಣಂತಿಯರು ಮತ್ತು 322 ಶಿಶುಗಳ ಮೃತಪಟ್ಟಿವೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಮಾಹಿತಿ ನೀಡಿದ್ದಾರೆ.
2024ರ ಏಪ್ರಿಲ್ನಿಂದ ಅಕ್ಟೋಬರ್ವರೆಗೆ ಜಿಲ್ಲೆಯಲ್ಲಿ 29 ಬಾಣಂತಿಯರ ಸಾವಾಗಿದೆ. ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೆ, ರಕ್ತಸ್ರಾವ, ವೈದ್ಯರ ನಿರ್ಲಕ್ಷ್ಯ ಸೇರಿದಂತೆ ಹಲವು ಕಾರಣದಿಂದ ಬಾಣಂತಿಯರು ಮೃತಪಟ್ಟಿದ್ದಾರೆ ಎಂದು ಪ್ರಭಾರಿ ಡಿಎಚ್ಒ ಶರಣಪ್ಪ ಗಡೆದ ಮಾಹಿತಿ ನೀಡಿದರು.
ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಆರು ತಿಂಗಳಲ್ಲಿ ಬರೋಬ್ಬರಿ 322 ಶಿಶುಗಳ ಸಾವಾಗಿದ್ದು, ಜಿಲ್ಲಾಸ್ಪತ್ರೆಯೊಂದರಲ್ಲೇ 172 ಶಿಶುಗಳು ಮೃತಪಟ್ಟಿವೆ. ಪ್ರತಿ ತಿಂಗಳು 45 ರಿಂದ 52 ಸರಾಸರಿಯಲ್ಲಿ ಶಿಶುಗಳು ಮರಣ ಹೊಂದಿವೆ. ತೂಕ ಕಡಿಮೆ, ಸರಿಯಾಗಿ ಬೆಳವಣಿಗೆ ಆಗದೆ, ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೆ, ನ್ಯುಮೋನಿಯಾ, ಉಸಿರುಗಟ್ಟುವಿಕೆ ಮತ್ತು ಅಪೌಷ್ಟಿಕತೆಯಿಂದ ಶಿಶುಗಳು ಮೃತಪಟ್ಟಿವೆ ಎಂದು ಬಿಮ್ಸ್ ಆಸ್ಪತ್ರೆ ಅಧೀಕ್ಷಕ ಡಾ.ವಿಠ್ಠಲ್ ಶಿಂಧೆ ಮತ್ತು ಡಿಎಚ್ಒ ಶರಣಪ್ಪ ಗಡೆದ ತಿಳಿಸಿದರು.
ಇದನ್ನೂ ಓದಿ: ಬಳ್ಳಾರಿ ಬಾಣಂತಿಯರ ಸರಣಿ ಸಾವು ಕೇಸ್: ಲೋಕಾಯುಕ್ತದಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲು
ಇತ್ತೀಚಿಗೆ ಬೆಳಗಾವಿ ಜಿಲ್ಲಾಸ್ಪತ್ರೆ ಔಷಧ ಉಗ್ರಾಣದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದರು. ಬೆಳಗಾವಿ ಲೋಕಾಯುಕ್ತ ಎಸ್ಪಿ ಹನುಮಂತರಾಯ ನೇತೃತ್ವದಲ್ಲಿ 8 ಅಧಿಕಾರಿಗಳಿಂದ ಉಗ್ರಾಣದಲ್ಲಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಪಿಬಿಪಿ ಸಂಸ್ಥೆ ಸರಬರಾಜು ಮಾಡಿರುವ ಐವಿ ಗ್ಲುಕೋಸ್ ಬಾಕ್ಸ್ಗಳು ಪತ್ತೆಯಾಗಿದ್ದವು.
ಬೆಳಗಾವಿ ಜಿಲ್ಲೆಯಾದ್ಯಂತ ಏಪ್ರಿಲ್ ತಿಂಗಳಲ್ಲೇ ಆರ್ಎಲ್ಎಸ್ ಐವಿ ಗ್ಲುಕೋಸ್ ಪೂರೈಕೆಯಾಗಿದ್ದು, ಎಲ್ಲೆಲ್ಲಿ ಪೂರೈಕೆಯಾಗಿದೆ ಎಂಬ ಬಗ್ಗೆ ಉಗ್ರಾಣ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಲಾಗಿತ್ತು. ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೂ ಪೂರೈಕೆ ಮಾಡಿರುವ ಬಗ್ಗೆ ಮಾಹಿತಿ ದೊರೆತಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:33 am, Sun, 8 December 24