ಬಳ್ಳಾರಿ ಬಾಣಂತಿಯರ ಸರಣಿ ಸಾವು ಕೇಸ್: ಲೋಕಾಯುಕ್ತದಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲು
ಬಳ್ಳಾರಿಯಲ್ಲಿ ಬಾಣಂತಿಯರ ಸಾವಿನ ಸರಣಿ ಪ್ರಕರಣ ಸಾಕಷ್ಟು ಸದ್ದು ಮಾಡುತ್ತಿದೆ. ಇದೇ ವಿಚಾರವಾಗಿ ನಿನ್ನೆ ಬಿಜೆಪಿ ನಾಯಕರ ನಿಯೋಗ ಲೋಕಾಯುಕ್ತಕ್ಕೆ ದೂರು ನೀಡಿದೆ. ಇದೀಗ ಲೋಕಾಯುಕ್ತರಿಂದ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಜೊತೆಗೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕೇಸ್ ದಾಖಲಿಸಲು ಸೂಚಿಸಲಾಗಿದೆ.
ಬೆಂಗಳೂರು, ಡಿಸೆಂಬರ್ 07: ಬಳ್ಳಾರಿಯಲ್ಲಿ (Bellary) ಬಾಣಂತಿಯರ ಸರಣಿ ಸಾವುಗಳು ಇಡೀ ಕರ್ನಾಟಕವನ್ನೇ ಶಾಕ್ ಆಗುವಂತೆ ಮಾಡಿದೆ. ಸರ್ಕಾರ ಕೂಡ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಇದು ಲೋಕಾಯುಕ್ತ ದಾಳಿಗೂ ಕಾರಣವಾಗಿದೆ. ಇದರ ಬೆನ್ನಲ್ಲೇ ಇದೀಗ ಲೋಕಾಯುಕ್ತದಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಾಗಿದೆ. ಆರು ಮಹಿಳೆಯರ ಸಾವಿನ ಬಗ್ಗೆ ತನಿಖೆಗೆ ಲೋಕಾಯುಕ್ತ ನ್ಯಾಯಮೂರ್ತಿ ನ್ಯಾ. ಬಿ.ಎಸ್ ಪಾಟೀಲ್ ಆದೇಶಿಸಿದ್ದಾರೆ.
ಇನ್ನು ಬಾಣಂತಿಯರ ಸಾವಿನ ಸಂಬಂಧ ಅಧಿಕಾರಿಗಳ ಮೇಲೆ ಪ್ರಕರಣ ದಾಖಲಿಸಲು ಕೂಡ ಆದೇಶಿಸಲಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ, ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಔಷಧ ನಿಯಂತ್ರಕರು ಹಾಗೂ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಯಮಿತ ವ್ಯವಸ್ಥಾಪಕ ನಿರ್ದೇಶಕರು, ಬಳ್ಳಾರಿ ಸರ್ಕಾರಿ ಆಸ್ಪತ್ರೆ ಹಿರಿಯ ಅಧಿಕಾರಿಗಳು, ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಆರೋಗ್ಯಾಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ.
ಇದನ್ನೂ ಓದಿ: ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವು: ಲೋಕಾಯುಕ್ತಕ್ಕೆ ಬಿಜೆಪಿ ದೂರು
ಇದೇ ವಿಚಾರವಾಗಿ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮತ್ತು ಶಾಸಕ ಸಿಕೆ ರಾಮಮೂರ್ತಿ ಮತ್ತು ಎಂಎಲ್ಸಿ ರವಿಕುಮಾರ್ ಒಳಗೊಂಡ ಬಿಜೆಪಿ ನಿಯೋಗ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ನಿನ್ನೆ ಭೇಟಿ ನೀಡಿ ಬಾಣಂತಿಯರ ಸಾವಿನ ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ದೂರು ನೀಡಿತ್ತು.
ಬಳ್ಳಾರಿ ಜಿಲ್ಲಾಸ್ಪತ್ರೆಗೆ ಲೋಕಾಯುಕ್ತ ಅಧಿಕಾರಿಗಳು ಸರ್ಚ್ ವಾರಂಟ್ ಪಡೆದು ದಾಳಿ ಮಾಡಿ ಪರಿಶೀಲನೆ ಮಾಡಿದ್ದಾರೆ. ಲೋಕಾಯುಕ್ತ ಎಸ್‌ಪಿ ಸಿದ್ದರಾಜು ನೇತೃತ್ವದಲ್ಲಿ ಮೂರು ಪ್ರತ್ಯೇಕ ತಂಡವಾಗಿ 25 ಅಧಿಕಾರಿಗಳು ಹೆರಿಗೆ ವಾರ್ಡ್, ಐಸಿಯು, ಔಷಧ ದಾಸ್ತಾನು ಹಾಗೂ ಬಿಮ್ಸ್ ಮತ್ತು ಜಿಲ್ಲಾಸ್ಪತ್ರೆ ಆವರಣದ ವೆರ್ ಹೌಸ್‌ನಲ್ಲಿ ಪರಿಶೀಲಿಸಿದ್ದಾರೆ. ಅದ್ರಲ್ಲೂ ಐವರು ಬಾಣಂತಿಯರ ಸಾವಿಗೆ ಕಾರಣವಾಗಿರುವ IV ಹಾಗೂ RL ಪ್ಲೂಯಿಡ್ ಔಷಧಿ ಬಂದ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ.
ಇದನ್ನೂ ಓದಿ: 5 ಬಾಣಂತಿಯರ ಸಾವು: ಬಿಮ್ಸ್ ಆಸ್ಪತ್ರೆ ಮೇಲೆ ಲೋಕಾಯುಕ್ತ ದಾಳಿ
ಇದೇ ವೇಳೆ ಜಿಲ್ಲಾಸ್ಪತ್ರೆಯ ಔಷಧ ಉಗ್ರಾಣದಲ್ಲಿ ಸೀಜ್ ಆಗಿರೋ 280, IV ಪ್ಲೂಯಿಡ್ RL ಬಾಟಲ್ ಪತ್ತೆ ಆಗಿವೆ. 280 ಪೈಕಿ 150 ಬಾಟಲ್ ರಿಯಾಕ್ಷನ್ ಆಗಿರೋ IV ಪ್ಲೂಯಿಡ್ RL ಬಾಟಲ್‌ಗಳೇ ಆಗಿವೆ. ಇವೆಲ್ಲವೂ ಪಶ್ಚಿಮ ಬಂಗಾ ಫಾರ್ಮಾಸ್ಯೂಟಿಕಲ್ ಕಂಪನಿಯಿಂದ ಸಪ್ಲೈಯಿಂದ ಆಗಿತ್ತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.