ಬೆಳಗಾವಿ, ಆಗಸ್ಟ್ 30: ಕಿತ್ತೂರು ಪಟ್ಟಣ ಪಂಚಾಯತಿ ಬಿಜೆಪಿ ಸದಸ್ಯ ನಾಗರಾಜ್ ಅಸುಂಡಿ ಅವರನ್ನು ಅಪಹರಣ ಮಾಡಲಾಗಿದ ಎಂಬ ಆರೋಪ ಕೇಳಿಬಂದಿದೆ. ಬೆಳಗಾವಿ ಜಿಲ್ಲೆಯ ಕಿತ್ತೂರು ಪಟ್ಟಣದಲ್ಲಿ ಚೌಕಿಮಠದ ಕ್ರಾಸ್ ಹತ್ತಿರ ಅಪರಿಚಿತರಿಂದ ಅಸುಂಡಿ ಕಿಡ್ನಾಪ್ ಮಾಡಲಾಗಿದೆ ಎಂದು ಅವರ ತಂದೆ ಬಸವರಾಜ್ ಕಿತ್ತೂರು ಠಾಣೆಗೆ ದೂರು ನೀಡಿದ್ದಾರೆ.
ದೂರು ದಾಖಲಾದ ಬೆನ್ನಲ್ಲೇ ಕಿತ್ತೂರು ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಮಾಹಿತಿ ಸಂಗ್ರಹಿಸಿದ್ದಾರೆ. ಸೆಪ್ಟರೆಂಬರ್ 3 ರಂದು ಕಿತ್ತೂರು ಪಟ್ಟಣ ಪಂಚಾಯತಿ ಚುನಾವಣೆ ಇದ್ದು, ಬಿಜೆಪಿ 9, ಕಾಂಗ್ರೆಸ್ ಹಾಗೂ ಪಕ್ಷೇತರ ಸೇರಿ 9 ಸದಸ್ಯರ ಸಂಖ್ಯಾಬಲ ಇದೆ. ಹೀಗಾಗಿ ಸಂಖ್ಯಾಬಲ ಹೆಚ್ಚಸಿಕೊಳ್ಳುವುದಕ್ಕಾಗಿ ಕಾಂಗ್ರೆಸ್ ಪಕ್ಷದವರೇ ಕಿಡ್ನಾಪ್ ಮಾಡಿದ್ದಾರೆ ಎಂದು ಬಿಜೆಪಿ ಆರೋಪ ಮಾಡಿದೆ.
ನಾಗರಾಜ್ ಅಸುಂಡಿ ಅಪಹರಿಸಿದ ಆರೋಪಪಿಗಳ ಪತ್ತೆಗೆ ಮೂರು ತಂಡಗಳ ರಚನೆ ಮಾಡಲಾಗಿದೆ ಎಂದು ಬೆಳಗಾವಿ ಎಸ್‌ಪಿ ಡಾ.ಭೀಮಾಶಂಕರ್ ಗುಳೇದ್ ಮಾಹಿತಿ ನೀಡಿದ್ದಾರೆ. ಕಾಂಗ್ರೆಸ್ ಪಕ್ಷದ ಮುಖಂಡರು ಕಿಡ್ನಾಪ್ ಮಾಡಿದ್ದಾರೆ ಎಂದು ಆರೋಪಿಸಿರುವ ಬಿಜೆಪಿ, ಇಂದು ಬೆಳಗ್ಗೆ 11ಗಂಟೆಗೆ ಎಸ್‌ಪಿ ಕಚೇರಿಗೆ ಮುತ್ತಿಗೆ ಹಾಕಲು ತೀರ್ಮಾನಿಸಿದೆ. ಕಿಡ್ನಾಪ್ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ, ನಾಗರಾಜ್ ಪತ್ತೆಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಎಸ್‌ಪಿ ಕಚೇರಿಗೆ ಮುತ್ತಿಗೆ ಹಾಕಲು ತೀರ್ಮಾನಿಸಿದ್ದೇವೆ ಎಂದು ಬಿಜೆಪಿ ನಾಯಕರು ತಿಳಿಸಿದ್ದಾರೆ.
ಇದನ್ನೂ ಓದಿ: ಚನ್ನಪಟ್ಟಣ ಉಪಚುನಾವಣೆ: ಬಿಜೆಪಿ, ಜೆಡಿಎಸ್ ಟಿಕೆಟ್ ಗೊಂದಲ, ಜೋಶಿ ನೇತೃತ್ವದ ಸಭೆಯಲ್ಲಿ ನಡೀತು ಮಹತ್ವದ ಚರ್ಚೆ
ನಾಗರಾಜ್ ಅಪಹರಣ ಸಂಬಂಧ ಕಿತ್ತೂರ ಶಾಸಕ ಬಾಬಾಸಾಹೇಬ್ ಪಾಟೀಲ್ ಆಪ್ತ ಅಶೋಕ ಮಾಳಗಿ, ಬಸವರಾಜ ಸಂಗೊಳ್ಳಿ, ಸುರೇಶ ಕುದರೇಮನಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ನಾಗರಾಜ್ ತಂದೆ ಗುರುವಾರ ತಡರಾತ್ರಿ ನೀಡಿದ ದೂರಿನ ಆಧಾರದಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ