ಬೆಳಗಾವಿ ಪಾಲಿಕೆ ಚುನಾವಣೆ: ಬಿಜೆಪಿ ಘಟಾನುಘಟಿ ನಾಯಕರಿಂದ ಪ್ರಚಾರ, ಸಿದ್ದರಾಮಯ್ಯ ಬಗ್ಗೆ ವ್ಯಂಗ್ಯ
ಬಹಿರಂಗ ಪ್ರಚಾರಕ್ಕೆ ಮಂಗಳವಾರ (ಆಗಸ್ಟ್ 31) ಕೊನೆಯ ದಿನವಾಗಿದ್ದು, ಅಭ್ಯರ್ಥಿಗಳು ಚುರುಕಿನ ಪ್ರಚಾರ ನಡೆಸಿದರು. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಹಲವು ಹಿರಿಯ ನಾಯಕರು ನಗರದಲ್ಲಿ ಸಂಚರಿಸಿ, ಮತಭಿಕ್ಷೆ ಕೇಳಿದರು.
ಬೆಳಗಾವಿ: ಬಿಜೆಪಿ ಮತ್ತು ಕಾಂಗ್ರೆಸ್ ಹುರಿಯಾಳುಗಳ ನಡುವೆ ಜಿದ್ದಾಜಿದ್ದಿ ಹೋರಾಟಕ್ಕೆ ಸಾಕ್ಷಿಯಾಗಿರುವ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಗೆ ಸೆ.3ರಂದು ಮತದಾನ ನಡೆಯಲಿದೆ. ಬಹಿರಂಗ ಪ್ರಚಾರಕ್ಕೆ ಮಂಗಳವಾರ (ಆಗಸ್ಟ್ 31) ಕೊನೆಯ ದಿನವಾಗಿದ್ದು, ಅಭ್ಯರ್ಥಿಗಳು ಚುರುಕಿನ ಪ್ರಚಾರ ನಡೆಸಿದರು. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಹಲವು ಹಿರಿಯ ನಾಯಕರು ನಗರದಲ್ಲಿ ಸಂಚರಿಸಿ, ಮತಭಿಕ್ಷೆ ಕೇಳಿದರು.
ಸಚಿವರಾದ ಉಮೇಶ್ ಕತ್ತಿ, ಭೈರತಿ ಬಸವರಾಜ್, ಶಾಸಕರಾದ ಅಭಯ್ ಪಾಟೀಲ್, ಅನಿಲ್ ಬೆನಕೆ, ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಪ್ರಚಾರ ಬಿಜೆಪಿ ಪರವಾಗಿ ಹಲವು ವಾರ್ಡ್ಗಳಲ್ಲಿ ಸಂಚರಿಸಿ ಮತ ಯಾಚಿಸಿದರು. ಮಹಿಳಾ ಅಭ್ಯರ್ಥಿಗಳು ಸ್ಪರ್ಧಿಸಿರುವ ಕ್ಷೇತ್ರಗಳಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಪ್ರಚಾರ ನಡೆಸಿದರು. ಕೊರೊನಾ ನಿರ್ಬಂಧಗಳ ಬಗ್ಗೆ ಸೋಂಕಿನ ಬಗ್ಗೆ ನಾಯಕರು ನಿರ್ಲಕ್ಷ್ಯ ಧೋರಣೆ ತಾಳಿದ್ದು ಕಂಡುಬಂತು.
ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಮತ್ತು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹಿಂಡಾಲ್ಕೋ ಕಾಲೊನಿಯಲ್ಲಿ ಜಂಟಿಯಾಗಿ ಪ್ರಚಾರ ನಡೆಸಿದರು. ಮತದಾರರ ಮನೆಗಳಿಗೆ ಭೇಟಿ ನೀಡಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ನೀಡುವಂತೆ ಕೈ ಮುಗಿದು ಯಾಚಿಸಿದರು.
ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಒಟ್ಟು 9 ಬಂಡಾಯ ಅಭ್ಯರ್ಥಿಗಳನ್ನು ಪಕ್ಷಗಳಿಂದ ಉಚ್ಚಾಟಿಸಿವೆ. ಬಿಜೆಪಿಯ 7 ಮತ್ತು ಕಾಂಗ್ರೆಸ್ನ ಇಬ್ಬರು ಬಂಡಾಯ ಅಭ್ಯರ್ಥಿಗಳನ್ನು ಉಚ್ಚಾಟಿಸಲಾಗಿದೆ. ಬಿಜೆಪಿಯು ಬಂಡಾಯ ಅಭ್ಯರ್ಥಿಗಳಾದ ದೀಪಕ್ ಜಮಖಂಡಿ, ಶಿವಾನಂದ ಮುಗಳಿಹಾಳ, ಶಿವಾನಂದ ಮುರಗೋಡ, ಗಣೇಶ್ ನಂದಗಡಕರ, ಸಂಜಯ್ ಸವ್ವಾಶೇರಿ, ಜ್ಯೋತಿ ಬಾವಿಕಟ್ಟಿ, ಆರತಿ ಪಾಟೋಳೆ ಅವರನ್ನು ಉಚ್ಚಾಟಿಸಿದೆ. ಕಾಂಗ್ರೆಸ್ ಪಕ್ಷವು ಬಂಡಾಯ ಅಭ್ಯರ್ಥಿಗಳಾದ ಜಯಶ್ರೀ ಮಾಳಗಿ, ಜಯರಾಜ್ ಹಲಗೇಕರ ಉಚ್ಚಾಟನೆ ಮಾಡಿದೆ.
ಸಿದ್ದರಾಮಯ್ಯ ವಿರುದ್ಧ ಟೀಕೆ ಬೆಳಗಾವಿಯಲ್ಲಿ ಕಾಂಗ್ರೆಸ್ ಪಕ್ಷವು ಗೆಲ್ಲುವುದಿಲ್ಲ ಎಂದು ಸಿದ್ದರಾಮಯ್ಯ ಅವರಿಗೆ ಮೊದಲೇ ಗೊತ್ತಾಗಿದೆ. ಹೀಗಾಗಿಯೇ ಅವರು ತಮ್ಮ ಮರ್ಯಾದೆ ಉಳಿಸಿಕೊಳ್ಳಲೆಂದು ಪ್ರಚಾರಕ್ಕೆ ಬಂದಿಲ್ಲ ಎಂದು ಶಾಸಕ ಅಭಯ್ ಪಾಟೀಲ್ ಹೇಳಿದರು. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವೆ ಮುಖ್ಯಮಂತ್ರಿ ಸ್ಥಾನಕ್ಕಾಗಿ ಸಂಘರ್ಷ ನಡೆಯುತ್ತಿದೆ. ಅವರ ಫೈಟ್ ಮುಗಿಯುವ ಹೊತ್ತಿಗೆ ಬಹುಶಃ ಚುನಾವಣೆಯೂ ಮುಗಿದಿರುತ್ತೆ ಎಂದು ಅರಣ್ಯ ಸಚಿವ ಉಮೇಶ್ ಕತ್ತಿ ಲೇವಡಿ ಮಾಡಿದರು. ಸೋಲಿನ ಭಯದಿಂದಲೇ ಸಿದ್ದರಾಮಯ್ಯ ಪ್ರಚಾರಕ್ಕೆ ಬರುತ್ತಿಲ್ಲ ಎಂದು ಭೈರತಿ ಬಸವರಾಜ್ ಹೇಳಿದರು.
(Belagavi Mahanagara Palike Election BJP Congress Canvass on behalf of their Candidates)
ಇದನ್ನೂ ಓದಿ: ಬೆಳಗಾವಿ ಪಾಲಿಕೆ ಚುನಾವಣೆ: ಎಂಇಎಸ್ ಬಂಡಾಯ ಅಭ್ಯರ್ಥಿ ಬಿಜೆಪಿಗೆ ಸೇರ್ಪಡೆ; ಪ್ರಣಾಳಿಕೆ ಬಿಡುಗಡೆ