ಬೆಳಗಾವಿ ಪಾಲಿಕೆ ಚುನಾವಣೆ: ಎಂಇಎಸ್ ಬಂಡಾಯ ಅಭ್ಯರ್ಥಿ ಬಿಜೆಪಿಗೆ ಸೇರ್ಪಡೆ; ಪ್ರಣಾಳಿಕೆ ಬಿಡುಗಡೆ
ಇಂದಿನಿಂದ ಚುನಾವಣೆ ಮುಗಿಯುವವರೆಗೂ ನಮ್ಮೆಲ್ಲಾ ನಾಯಕರು ಬೆಳಗಾವಿಯಲ್ಲೇ ಇದ್ದು ಪ್ರಚಾರ ನಡೆಸುತ್ತೇವೆ ಬೆಳಗಾವಿಯ ಪ್ರತಿಯೊಂದು ವಾರ್ಡ್‌ಗೆ ತೆರಳಿ ಪ್ರಚಾರ ಮಾಡುತ್ತೇವೆ ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಇದೇ ಸಂದರ್ಭದಲ್ಲಿ ತಿಳಿಸಿದರು
ಬೆಳಗಾವಿ: ಸೆಪ್ಟೆಂಬರ್ 3ರಂದು ನಡೆಯಲಿರುವ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಗೆ ಬಿಜಪೆಇ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಅಭಿವೃದ್ಧಿ ಮತ್ತು ಹಿಂದುತ್ವದ ಆಧಾರದ ಮೇಲೆ ಬಿಜೆಪಿ ಚುನಾವಣೆ ಎದುರಿಸಲಿದೆ ಎಂದು ಘೋಷಿಸಿದರು. ಕಾರ್ಯಕ್ರಮದಲ್ಲಿ ವಾರ್ಡ್ ನ. 28 ರ ಎಂಇಎಸ್ ಬಂಡಾಯ ಅಭ್ಯರ್ಥಿ ರವಿ ಶಿಂಧೆ ಬಿಜೆಪಿ ಸೇರ್ಪಡೆಗೊಂಡರು. ಅವರನ್ನು ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಶಾಸಕ ಅಭಯ್ ಪಾಟೀಲ್ ಬಿಜೆಪಿ ಧ್ವಜ ನೀಡಿ ಪಕ್ಷಕ್ಕೆ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ತಲೆತಲಾಂತರಗಳಿಂದ ಸ್ವಾಭಿಮಾನ ಇಟ್ಟುಕೊಂಡು ಬಂದಿದ್ದೇವೆ. ಈ ಚುನಾವಣೆಯಲ್ಲಿ ಬೆಳಗಾವಿ ಜನ ಸ್ವಾಭಿಮಾನ ಪರ ಚಿಂತನೆ ಹರಿಸುತ್ತಿದ್ದಾರೆ. ಬೆಳಗಾವಿ ಜಿಲ್ಲೆಯ ಎಲ್ಲಾ ಹಾಲಿ, ಮಾಜಿ ಶಾಸಕರು ಬೆಳಗಾವಿಯಲ್ಲೇ ಇರುತ್ತೇವೆ. ನಮ್ಮ ಕಾರ್ಯಕರ್ತರನ್ನು ಗೆಲ್ಲಿಸಲು ನಾವು ಶ್ರಮ ಪಡುತ್ತೇವೆ. ಇಂದಿನಿಂದ ಚುನಾವಣೆ ಮುಗಿಯುವವರೆಗೂ ನಮ್ಮೆಲ್ಲಾ ನಾಯಕರು ಬೆಳಗಾವಿಯಲ್ಲೇ ಇದ್ದು ಪ್ರಚಾರ ನಡೆಸುತ್ತೇವೆ ಬೆಳಗಾವಿಯ ಪ್ರತಿಯೊಂದು ವಾರ್ಡ್‌ಗೆ ತೆರಳಿ ಪ್ರಚಾರ ಮಾಡುತ್ತೇವೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಕಾಂಗ್ರೆಸ್ ನಾಯಕರು ಸಹ ಬೆಳಗಾವಿಯಲ್ಲೇ ಬೀಡುಬಿಟ್ಟು ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಒಟ್ಟಾರೆ ಬೆಳಗಾವಿ ನಗರ ಪಾಲಿಕೆ ಚುನಾವೆಯಲ್ಲಿ, ಕಾಂಗ್ರೆಸ್ ಮತ್ತು ಎಂಇಎಸ್ ಪಕ್ಷಗಳ ನಡುವಿನ ತೀವ್ರ ಹಣಾಹಣಿ ನಡೆಯುವ ಎಲ್ಲ ಸಾಧ್ಯತೆಗಳೂ ಗೋಚರಿಸುತ್ತಿವೆ. ಎಲ್ಲಾ ವಾರ್ಡ್ಗಳಲ್ಲೂ ಕಾಂಗ್ರೆಸ್ ಪಕ್ಷದ ಚಿಹ್ನೆ ಮೇಲೆ ಸ್ಪರ್ಧಿಸಲು ತೀರ್ಮಾನಿಸಿದ್ದೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಈಗಾಗಲೇ ತಿಳಿಸಿದ್ದಾರೆ.
ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ದಿನಾಂಕ ಸಪ್ಟೆಂಬರ್ 3 ಎಂದು ಘೋಷಣೆ ಆಗಿರುವ ಹಿನ್ನೆಲೆಯಲ್ಲಿ, ಕಾಂಗ್ರೆಸ್ ಕಾರ್ಯಕರ್ತರ ಜತೆ ಟಿಕೆಟ್ ಆಕಾಂಕ್ಷಿಗಳು ಆಗಸ್ಟ್ 14ರಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಭೇಟಿಯಾಗಿದ್ದರು. ಬೆಳಗಾವಿಯ ಜಾಧವ್ನಗರದಲ್ಲಿರುವ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಭೇಟಿಯಾಗಿದ್ದರು. ಸಪ್ಟೆಂಬರ್ 3ರಂದು ನಡೆಯಲಿರುವ ಬೆಳಗಾವಿ ಮಹಾನಗರ ಪಾಲಿಕೆಗೆ ಚುನಾವಣೆ ವಿಚಾರವಾಗಿ ಮಾತನಾಡಿದ್ದ ಸತೀಶ್ ಜಾರಕಿಹೊಳಿ, ಪಕ್ಷದ ಚಿಹ್ನೆ ಮೇಲೆ ಸ್ಪರ್ಧೆ ಕುರಿತು ಅಭಿಪ್ರಾಯ ಸಂಗ್ರಹಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದ್ದರು.
ಇದನ್ನೂ ಓದಿ:
ಏಕಾಂಗಿ ಪ್ರವಾಸ ಕೈಬಿಟ್ಟ ಮಾಜಿ ಸಿಎಂ ಯಡಿಯೂರಪ್ಪ; ಬಿಜೆಪಿ ನಿಯಮಗಳೇ ಒಬ್ಬರೇ ಪ್ರವಾಸ ಮಾಡಲು ಅಡ್ಡಿ!
ರಾಜಕೀಯ ಒತ್ತಡದ ನಡುವೆಯೂ ಕುಮಾರಸ್ವಾಮಿ ಎಷ್ಟೊಂದು ಓದ್ತಾರೆ!: HDK ಸಾಹಿತ್ಯ ಅಭಿರುಚಿ ತಿಳಿಸಿದ ಎಸ್.ನಾರಾಯಣ್
(Belgaum Municipal Election 2021 MES rebel candidate joins BJP Releases of the manifesto)
Published On - 3:16 pm, Sat, 28 August 21