ರಾಜಕೀಯ ಒತ್ತಡದ ನಡುವೆಯೂ ಕುಮಾರಸ್ವಾಮಿ ಎಷ್ಟೊಂದು ಓದ್ತಾರೆ!: HDK ಸಾಹಿತ್ಯ ಅಭಿರುಚಿ ತಿಳಿಸಿದ ಎಸ್.ನಾರಾಯಣ್
ರಾಜಕಾರಣಿ, ನಿರ್ಮಾಪಕ ಕುಮಾರಸ್ವಾಮಿಯವರ ಸಾಹಿತ್ಯದ ಅಭಿರುಚಿ ಎಲ್ಲರಿಗೂ ಗೊತ್ತಿರುವಂಥದ್ದು. ಈಗ ನಿರ್ದೇಶಕ ಎಸ್.ನಾರಾಯಣ್ ಈ ಕುರಿತು ಟಿವಿ9ನೊಂದಿಗೆ ಮಾತನಾಡಿದ್ದಾರೆ.
ಮಾಜಿ ಮುಖ್ಯಮಂತ್ರಿ, ನಿರ್ಮಾಪಕ ಎಚ್.ಡಿ. ಕುಮಾರಸ್ವಾಮಿ ಅವರ ಸಾಹಿತ್ಯದ ಅಭಿರುಚಿಯ ಬಗ್ಗೆ ನಿರ್ದೇಶಕ ಎಸ್.ನಾರಾಯಣ್ ಮಾತನಾಡಿದ್ದಾರೆ. ತಮ್ಮ ಮುಂದಿನ ಚಿತ್ರದ ಕುರಿತು ಮಾತನಾಡುವಾಗ ಅವರು ಕುಮಾರಸ್ವಾಮಿಯವರ ಓದಿನ ಅಭಿರುಚಿಯ ಕುರಿತು ಅಚ್ಚರಿಯ ಸಂಗತಿಗಳನ್ನು ಟಿವಿ9ನೊಂದಿಗೆ ತಿಳಿಸಿದರು. ಈ ಹಿಂದೆ ಮಾಡಬೇಕೆಂದು ತೀರ್ಮಾನವಾಗಿದ್ದ ವ್ಯಾಸರಾಯ ಬಲ್ಲಾಳರ ‘ಹೆಜ್ಜೆ’ ಕಾದಂಬರಿಯನ್ನು ತಂದುಕೊಟ್ಟು ಸಿನಿಮಾ ಮಾಡೋಣ ಎಂದು ಹೇಳಿದ್ದೇ ಕುಮಾರಸ್ವಾಮಿಯವರಂತೆ. ಕತೆಯ ಹಕ್ಕುಗಳನ್ನೂ ಪಡೆದುಕೊಂಡಿದ್ದ ಕುಮಾರಸ್ವಾಮಿಯವರು, ಪುಸ್ತಕವನ್ನು ಎಸ್.ನಾರಾಯಣ್ ಅವರಿಗೆ ನೀಡಿದ್ದರಂತೆ. ಈ ಕುರಿತು ಮಾತನಾಡಿದ ಎಸ್,ನಾರಾಯಣ್, ‘‘ರಾಜಕೀಯದ ಒತ್ತಡದ ನಡುವೆಯೂ ಕುಮಾರಸ್ವಾಮಿಯವರು ಸತತವಾಗಿ ಸಾಹಿತ್ಯವನ್ನು ಓದುತ್ತಾರೆ. ಹೊಸ ಹೊಸ ವಿಚಾರಗಳನ್ನು ನನಮಗೆ ಹೇಳುತ್ತಾರೆ. ಸಿನಿಮಾಕ್ಕೆ ಹೊಸ ಐಡಿಯಾ ನೀಡುತ್ತಾರೆ. ನಾವು ಅವರ ಚಿಂತನೆಗಳನ್ನು ಕಾರ್ಯರೂಪಕ್ಕಿಳಿಸಿದರೂ ಸಾಕು, ಅದು ಬಹಳ ಉತ್ತಮವಾಗಿರುತ್ತದೆ’’ ಎಂದಿದ್ದಾರೆ.
ಸಾಹಿತ್ಯದ ಅಭಿರುಚಿಯಂತೆಯೇ ಕುಮಾರಸ್ವಾಮಿಯವರಿಗೆ ಚಿತ್ರ ನಿರ್ಮಾಣದಲ್ಲೂ ಎಂತಹ ಅಭಿರುಚಿ ಇತ್ತೆಂದು ಎಸ್.ನಾರಾಯಣ್ ಹಂಚಿಕೊಂಡಿದ್ದಾರೆ. ಚಂದ್ರಚಕೋರಿ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಹೆಲಿಕಾಫ್ಟರ್ ಪ್ರಸ್ತಾಪ ಮಾಡಿದ್ದಕ್ಕೆ, ಕೆಲವೇ ತಾಸುಗಳಲ್ಲಿ ಹೆಲಿಕಾಫ್ಟರ್ನ್ನು ಕುಮಾರಸ್ವಾಮಿ ತಂದಿಳಿಸಿದ್ದರು. ಅವರು ನಿಂಬೆಹಣ್ಣನ್ನು ಕೇಳಿದರೆ, ಕುಂಬಳಕಾಯಿ ನೀಡುವಂತಹ ಮನಸ್ಸಿರುವವರು. ನಿರ್ಮಾಪಕರಾಗಿ ಅವರು ಎಷ್ಟು ಖರ್ಚು ಮಾಡಲು ಬೇಕಾದರೂ ನಿರ್ದೇಶಕನಿಗೆ ಸ್ವಾತಂತ್ರ್ಯ ನೀಡುತ್ತಾರೆ. ಪ್ರತಿಯಾಗಿ ಮೌಲ್ಯಗಳನ್ನು ಬಿಂಬಿಸುವ, ಪ್ರತೀ ಫ್ರೇಮ್ನಲ್ಲೂ ಅದ್ದೂರಿಯಾಗಿ ಕಾಣುವ ಗುಣಮಟ್ಟದ ಚಿತ್ರವನ್ನಷ್ಟೇ ಅವರು ಪ್ರತಿಯಾಗಿ ಬಯಸುವುದು ಎಂದಿದ್ದಾರೆ ಎಸ್.ನಾರಾಯಣ್.
ಸೂರ್ಯವಂಶ, ಚಂದ್ರಚಕೋರಿ ಮೊದಲಾದ ಹಿಟ್ ಚಿತ್ರಗಳನ್ನು ನಿರ್ಮಿಸಿದ್ದ ಈ ನಿರ್ದೇಶಕ- ನಿರ್ಮಾಪಕ ಜೋಡಿ ಹದಿನೇಳು ವರ್ಷಗಳ ಹಿಂದೆ ಮಾತನಾಡಿದ್ದ ಚಿತ್ರಕ್ಕೆ ಮತ್ತೆ ಒಂದಾಗಲಿದೆ. ಸ್ವಾತಂತ್ರ್ಯ ಪೂರ್ವದ ಕಾದಂಬರಿ ಆಧಾರಿತ ಈ ಕತೆಗೆ ಈ ಮೊದಲು ಕಮಲ್ ಹಾಸನ್ ನಾಯಕರಾಗಿ ನಟಿಸಲು ಮಾತುಕತೆ ನಡೆಸಲಾಗಿತ್ತಂತೆ. ಈಗ ಹೊಸದಾಗಿ ಕಲಾವಿದರ ಆಯ್ಕೆ ಪ್ರಕ್ರಿಯೆ ನಡೆಯಬೇಕಿದೆ ಎಂದಿದ್ದಾರೆ ಎಸ್.ನಾರಾಯಣ್.
ಇದನ್ನೂ ಓದಿ:
ಸ್ವಾತಂತ್ರ್ಯ ಪೂರ್ವದ ಕತೆಗೆ ಒಂದಾಗಲಿದ್ದಾರೆ ಕುಮಾರಸ್ವಾಮಿ, ಎಸ್.ನಾರಾಯಣ್; ಹೀರೋ ಆಗಲಿದ್ದಾರಾ ಕಮಲ್ ಹಾಸನ್?
Martin: ಸ್ವಾತಂತ್ರ್ಯ ದಿನಾಚರಣೆಗೆ ಧ್ರುವ ಸರ್ಜಾ ಕೊಟ್ರು ಭರ್ಜರಿ ಗಿಫ್ಟ್; ಹೊಸ ಚಿತ್ರದ ಟೈಟಲ್, ಫಸ್ಟ್ ಲುಕ್ ರಿಲೀಸ್
(S Narayan reveals how much HD Kumaraswamy passionate in Literature)