ಬೆಳಗಾವಿ: ಅನ್ಯಕೋಮಿನ ಯುವಕರಿಂದ ನೈತಿಕ ಪೊಲೀಸ್ಗಿರಿ: 7 ಆರೋಪಿಗಳ ಬಂಧನ, 17 ಜನರ ವಿರುದ್ಧ ಎಫ್ಐಆರ್
ಅನ್ಯಕೋಮಿನ ಯುವಕರಿಂದ ನೈತಿಕ ಪೊಲೀಸ್ಗಿರಿಗೆ ಸಂಬಂಧಿಸಿದಂತೆ ಬೆಳಗಾವಿ ಮಾರ್ಕೆಟ್ ಠಾಣೆ ಪೊಲೀಸರಿಂದ 17 ಜನರ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದ್ದು, 7 ಆರೋಪಿಗಳನ್ನು ಬಂಧಿಸಲಾಗಿದೆ. ಇಬ್ಬರು ಬಾಲಕರು ಕಾನೂನು ಸಂಘರ್ಷಕ್ಕೆ ಒಳಗಾಗಿದ್ದು, ಎಸ್ಸಿ, ಎಸ್ಟಿ ದೌರ್ಜನ್ಯ ಕಾಯ್ದೆ ಸೇರಿ 10ನೇ ಕಲಂ ಬಳಸಿ ಎಫ್ಐಆರ್ ದಾಖಲು ಮಾಡಲಾಗಿದೆ.
ಬೆಳಗಾವಿ, ಜನವರಿ 07: ಅನ್ಯಕೋಮಿನ ಯುವಕರಿಂದ ನೈತಿಕ ಪೊಲೀಸ್ಗಿರಿ (Moral policing) ಗೆ ಸಂಬಂಧಿಸಿದಂತೆ ಬೆಳಗಾವಿ ಮಾರ್ಕೆಟ್ ಠಾಣೆ ಪೊಲೀಸರಿಂದ 17 ಜನರ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದ್ದು, 7 ಆರೋಪಿಗಳನ್ನು ಬಂಧಿಸಲಾಗಿದೆ. ಮೊಹಮ್ಮದ್ ಇನಾಂದಾರ್, ಆತೀಫ್ ಅಹಮದ್ ಶೇಖ್, ಸೈಫ್ ಅಲಿ ಮಗ್ದುಮ್, ಉಮರ್ ಬಡೇಗರ್, ಅಜಾನ್ ಕಾಲಕುಂದ್ರಿ, ರಿಯಾನ್ ರೋಟವಾಲೆ ಬಂಧಿತರು. ಇಬ್ಬರು ಬಾಲಕರು ಕಾನೂನು ಸಂಘರ್ಷಕ್ಕೆ ಒಳಗಾಗಿದ್ದು, ಎಸ್ಸಿ, ಎಸ್ಟಿ ದೌರ್ಜನ್ಯ ಕಾಯ್ದೆ ಸೇರಿ 10ನೇ ಕಲಂ ಬಳಸಿ ಎಫ್ಐಆರ್ ದಾಖಲು ಮಾಡಲಾಗಿದೆ.
ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ಮಾಜಿ ಸಚಿವ ಕೆಎಸ್ ಈಶ್ವರಪ್ಪ ತೆರಳಿದ್ದು, ಸಂತ್ರಸ್ತ ಯುವಕ, ಯುವತಿಯನ್ನು ಭೇಟಿ ಮಾಡಿದ್ದಾರೆ. ಕುಟುಂಬಸ್ಥರ ಜೊತೆ ಮಾತನಾಡಿ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಕೆಎಸ್ ಈಶ್ವರಪ್ಪ ಒತ್ತಾಯಿಸಿದ್ದಾರೆ.
ಕೆಲವು ಮುಸಲ್ಮಾನ್ ಗೂಂಡಾಗಳು ದಾಳಿ ಮಾಡಿದ್ದಾರೆ: ಕೆ.ಎಸ್.ಈಶ್ವರಪ್ಪ
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಕೆ.ಎಸ್.ಈಶ್ವರಪ್ಪ, ಕೆಲವು ಮುಸಲ್ಮಾನ್ ಗೂಂಡಾಗಳು ಸಚಿನ್ ಮೇಲೆ ದಾಳಿ ಮಾಡಿದ್ದಾರೆ. ಮುಸ್ಲಿಂ ಯುವತಿ ಜತೆ ಏನು ಮಾಡುತ್ತಿದ್ದೀಯ ಅಂತಾ ಹಲ್ಲೆಗೈದಿದ್ದಾರೆ. ಸಚಿನ್ ಲಮಾಣಿ ಸಂಬಂಧಿಕರು ಮುಸ್ಲಿಂಗೆ ಮತಾಂತರ ಆಗಿದ್ದಾರೆ. ಹಲ್ಲೆಗೊಳಗಾದ ಮುಸ್ಕಾನ್ ಸಚಿನ್ಗೆ ತಂಗಿ ಆಗಬೇಕು. ಇಬ್ಬರು ಯುವನಿಧಿಗೆ ಅರ್ಜಿ ಹಾಕಲು ಬಂದಾಗ ಹಲ್ಲೆ ನಡೆಸಿದ್ದಾರೆ.
ಇದನ್ನೂ ಓದಿ: ಪ್ರೇಮಿಗಳೆಂದು ಭಾವಿಸಿ ಸಹೋದರ, ಸಹೋದರಿ ಮೇಲೆ ಅನ್ಯಕೋಮಿನ ಯುವಕರಿಂದ ಹಲ್ಲೆ
ಹಲ್ಲೆ ನಡೆಸಿರುವುದನ್ನು ಹಿಂದೂ ಸಂಘಟನೆಗಳು ವಿರೋಧ ಮಾಡಿದರೆ ಸಿಎಂ, ಸಚಿವರು ಕೋಮುಗಲಭೆ ಮಾಡಿಸುತ್ತಿದ್ದಾರೆಂದು ಆರೋಪಿಸುತ್ತಾರೆ. ಇದರ ಬಗ್ಗೆ ತಕ್ಷಣವೇ ಸಿಎಂ, ಗೃಹಸಚಿವರು ಗಮನ ಹರಿಸಬೇಕು. ರಾಜ್ಯದಲ್ಲಿ ಗಲಾಟೆ ಮಾಡಿ ಚುನಾವಣೆ ಮಾಡಲು ಕಾಂಗ್ರೆಸ್ ನಿರ್ಧಾರ ಮಾಡಿದೆ. ಹಿಂದೂ-ಮುಸ್ಲಿಂ ಗಲಾಟೆ ಮಾಡಿ ಚುನಾವಣೆ ಮಾಡಲು ತೀರ್ಮಾನಿಸಲಾಗಿದೆ ಎಂದು ಕಿಡಿಕಾರಿದ್ದಾರೆ.
ಈಗಾಗಲೇ 7 ಆರೋಪಿಗಳ ಬಂಧನ: ಡಿಸಿಪಿ ರೋಹನ್ ಜಗದೀಶ್
ಡಿಸಿಪಿ ರೋಹನ್ ಜಗದೀಶ್ ಪ್ರತಿಕ್ರಿಯೆ ನೀಡಿದ್ದು, ಘಟನೆ ಸಂಬಂಧ ಮಾರ್ಕೆಟ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಸಂಬಂಧಿ ಮುಸ್ಕಾನ್ ಜತೆ ಸಚಿನ್ ಲಮಾಣಿ ಓಡಾಡುತ್ತಿದ್ದರು. ಈ ವೇಳೆ ಯುವಕರ ಗುಂಪು ಇಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ. ಪ್ರಕರಣ ಸಂಬಂಧ ಈಗಾಗಲೇ 7 ಆರೋಪಿಗಳ ಬಂಧನ ಆಗಿದೆ ಎಂದು ಹೇಳಿದ್ದಾರೆ.
ಬಿಮ್ಸ್ ಆಸ್ಪತ್ರೆಗೆ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರ ಭೇಟಿ
ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ವಿಶ್ವ ಹಿಂದೂ ಪರಿಷತ್ ಪ್ರಾಂತ ಕೋಶಾಧ್ಯಕ್ಷ ಕೃಷ್ಣಭಟ್ ನೇತೃತ್ವದಲ್ಲಿ ಭೇಟಿ ಮಾಡಿದ್ದು, ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದ್ದಾರೆ. ಕುಟುಂಬದವರಿಗೂ ಧೈರ್ಯ ತುಂಬಿ ಆರ್ಥಿಕ ಸಹಾಯ ಮಾಡುವ ಭರವಸೆ ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:01 pm, Sun, 7 January 24