ಬೆಳಗಾವಿ: ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಅಧಿಕಾರಿಗಳ ಅವಾಂತರದಿಂದ ಪಾಲಿಕೆಗೆ 9 ಕೋಟಿ ರೂ. ನಷ್ಟ!
ಬೆಳಗಾವಿ ಮಹಾನಗರ ಪಾಲಿಕೆ ಒಂದು ಕಾಲದಲ್ಲಿ ಭಾಷಾ ವಿವಾದದಿಂದ, ಎಂಇಎಸ್ ದರ್ಬಾರ್ ಕಾರಣ ಸದ್ದು ಮಾಡುತ್ತಿತ್ತು. ಈಗ ಬೆಳಗಾವಿ ನಗರ ಪಾಲಿಕೆಯಲ್ಲಿ ಅಧಿಕಾರಿಗಳ ಯಡವಟ್ಟು, ಅಂದಾ ದರ್ಬಾರ್ನಿಂದಾಗಿ ಸುದ್ದಿಯಾಗುತ್ತಿದೆ. ಸದ್ಯ ಬೆಳಗಾವಿ ನಗರ ವಿಶಿಷ್ಟ ಪ್ರಕರಣಕ್ಕೆ ಸಾಕ್ಷಿಯಾಗಿದೆ. ಪಾಲಿಕೆಗೆ ನಷ್ಟದ ಜತೆಗೆ ಮುಖಭಂಗ ಆಗಿದೆ? ಇದಕ್ಕೆ ಕಾರಣವೇನು ಎಂಬ ವಿವರ ಇಲ್ಲಿದೆ.
ಬೆಳಗಾವಿ, ಸೆಪ್ಟೆಂಬರ್ 21: ಬೆಳಗಾವಿ ನಗರದ ಓಲ್ಡ್ ಪಿಬಿ ರಸ್ತೆಯಿಂದ ಖಾನಾಪುರ ಸಂಪರ್ಕಿಸುವ ರಸ್ತೆಗೆ ಸ್ಮಾರ್ಟ್ ಸಿಟಿ ಯೋಜನೆಯಡಿ ಡಾಂಬರ್ ಹಾಕಿ ಅಭಿವೃದ್ಧಿಪಡಿಸಲಾಗಿತ್ತು. ಸವಾರರು ಕೂಡ ನೆಮ್ಮದಿಯಾಗಿ ಓಡಾಡುತ್ತಿದ್ದರು. ಆದರೆ, ಹಾಗೆ ರಸ್ತೆ ನಿರ್ಮಾಣವಾದ ಮೂರು ವರ್ಷದ ಬಳಿಕ ಇದೀಗ ಬಂದ್ ಆಗಿದೆ! ಮಾಲೀಕನ ಅನುಮತಿ ಪಡೆಯದೇ 9 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ್ದರಿಂದ ರಸ್ತೆ ಮತ್ತೆ ಮಾಲೀಕನ ಪಾಲಾಗಿದೆ. ಅಧಿಕಾರಿಗಳ ಅವಾಂತರದಿಂದ ಪಾಲಿಕೆಗೆ 9 ಕೋಟಿ ರೂ. ನಷ್ಟವಾಗಿದೆ.
ಸದ್ಯ 9 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ರಸ್ತೆಯನ್ನು ಜಾಗ ಸಮೇತ ಮಾಲೀಕನ ಸುಪರ್ದಿಗೆ ವಾಪಸ್ ಕೊಡಲಾಗಿದೆ. ಮಾಲೀಕನ ಅನುಮತಿ ಇಲ್ಲದೇ ರಸ್ತೆ ನಿರ್ಮಾಣ ಮಾಡಿದ್ದು,, ಹೇಳದೇ ಕೇಳದೆ 21.65 ಗುಂಟಾ ಜಾಗದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ರಸ್ತೆ ಮಾಡಿದ್ದು ಮುಳುವಾಗಿದೆ.
ಸ್ಮಾರ್ಟ್ ಸಿಟಿ ರಸ್ತೆ ಅವಾಂತರದ ವಿವರ
ಭೂಸ್ವಾಧೀನ ಮಾಡಿಕೊಳ್ಳದೇ ಖಾಸಗಿಯವರ ಜಮೀನಿನಲ್ಲಿ ರಸ್ತೆ ಮಾಡಿದ್ದರಿಂದ ಮಾಲೀಕ ಕೋರ್ಟ್ ಮೆಟ್ಟಿಲೇರಿದ್ದರು. ಇದರಿಂದಾಗಿ ಪ್ರಕರಣ ಬೆಳಕಿಗೆ ಬಂದಿದೆ. 2021ರಲ್ಲಿ ಸ್ಮಾರ್ಟ್ ಸಿಟಿಯಿಂದ 9ಕೋಟಿ ರೂ. ಖರ್ಚು ಮಾಡಿ ಇದೇ ಜಾಗದಲ್ಲಿ ರಸ್ತೆ ನಿರ್ಮಾಣ ಮಾಡಲಾಗಿತ್ತು. ಆದರೆ, ಜಾಗ ಕಳೆದುಕೊಡ ಮಾಲೀಕ ಬಾಳಾಸಾಹೇಬ್ ಕೋರ್ಟ್ ಮೆಟ್ಟಿಲೇರಿದ್ದರು. ಇದೇ ವಿಚಾರಕ್ಕೆ ವಾದ, ಪ್ರತಿವಾದ ಆಲಿಸಿದ್ದ ಕರ್ನಾಟಕ ಹೈಕೋರ್ಟ್ನ ಧಾರವಾಡ ಪೀಠ, ಭೂಸ್ವಾಧೀನ ಮಾಡಿಕೊಳ್ಳದೇ ರಸ್ತೆ ಯಾಕೆ ಮಾಡಿದ್ದೀರಿ ಎಂದು ಪಾಲಿಕೆ ಆಯುಕ್ತರನ್ನು ತರಾಟೆಗೆ ತೆಗೆದುಕೊಂಡಿತ್ತು. ನಂತರ, ಇಪ್ಪತ್ತು ಕೋಟಿ ರೂ. ಪರಿಹಾರ ನೀಡುವಂತೆ ನಿರ್ದೇಶನ ನೀಡಿತ್ತು. ಈ ಕಾರಣಕ್ಕೆ ಪಾಲಿಕೆ ಸಾಮಾನ್ಯ ಸಭೆ ನಡೆಸಿ ಠರಾವು ಮಾಡಿ ಹಣ ಮೀಸಲಿಟ್ಟಿದ್ದರು.
ರಸ್ತೆ, ಜಾಗ ವಾಪಸ್ ಕೊಟ್ಟಿದ್ದೇಕೆ?
ಪರಿಹಾರ ನೀಡಲೆಂದು ಹಣ ನಿಗದಿ ಮಾಡಿದ್ದರೂ ನಂತರ ಪಾಲಿಕೆಯಲ್ಲಿ ಆ ಬಗ್ಗೆ ಬೇರೆಯೇ ಅಭಿಪ್ರಾಯ ವ್ಯಕ್ತವಾಯಿತು. ಪರಿಹಾರದ ಮೊತ್ತ ಜಾಸ್ತಿ ಆಯಿತೆಂದು ಇದೀಗ ಮಾಡಿದ ರಸ್ತೆಯನ್ನೇ ಬಿಟ್ಟು ಕೊಟ್ಟಿದೆ ಮಹಾನಗರ ಪಾಲಿಕೆ ಮತ್ತು ಸ್ಮಾರ್ಟ್ ಸಿಟಿ. ಡಬಲ್ ರಸ್ತೆ ನಿರ್ಮಿಸಿದ್ದಕ್ಕೆ ಎರಡು ಬದಿಯಲ್ಲಿ ಬ್ಯಾರಿಕೆಡ್ ಹಾಕಿ ಬಂದ್ ಮಾಡಿ ಜಾಗ ಬಿಟ್ಟು ಕೊಟ್ಟಿದ್ದಾರೆ ಅಧಿಕಾರಿಗಳು. ಹೀಗಾಗಿ ಬೆಳಗಾವಿ ನಗರದ ಓಲ್ಡ್ ಪಿಬಿ ರಸ್ತೆಯಿಂದ ಖಾನಾಪುರ ಸಂಪರ್ಕಿಸುವ ರಸ್ತೆ ಸಂಪೂರ್ಣ ಬಂದ್ ಮಾಡಲಾಗಿದೆ.
2020ರಲ್ಲಿ ಸ್ಮಾರ್ಟ್ ಸಿಟಿ ಮತ್ತು ಪಾಲಿಕೆ ಅಧಿಕಾರಿಗಳು ಮಾಡಿದ ಯಡವಟ್ಟು ಇದಾಗಿದೆ. ಇದರಿಂದ ಬೆಳಗಾವಿ ಪಾಲಿಕೆ ಸಂಪೂರ್ಣ ಆರ್ಥಿಕ ದಿವಾಳಿಗೆ ತಲುಪಿತ್ತು. ಸರ್ಕಾರ ಕೂಡಾ ಪರಿಹಾರದ ಹಣವನ್ನು ಪಾಲಿಕೆಯೇ ಭರಿಸುವಂತೆ ಸೂಚಿಸಿತ್ತು. ಇದರಲ್ಲಿ ಪಾಲಿಕೆ, ಎಸಿ ಕಚೇರಿ ಹಾಗೂ ಸಬ್ ರಿಜಿಸ್ಟ್ರಾರ್ ಕಚೇರಿ ಅಧಿಕಾರಿಗಳ ಲೋಪ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಗಮನಕ್ಕೆ ಬಂದಿದೆ. ಹೀಗಾಗಿ ಸಿಸಿ ರಸ್ತೆ ನಿರ್ಮಿಸಿದ ಜಾಗೆಯನ್ನೇ ವಾಪಸ್ ಕೊಟ್ಟಿದ್ದಾರೆ. ಹೈಕೋರ್ಟ್ ಚಾಟಿ ತಪ್ಪಿಸಿಕೊಳ್ಳಲು ಅಧಿಕಾರಿಗಳು ಜಾಗ ವಾಪಸ್ ಕೊಟ್ಟಿದ್ದಾರೆ. ಆದರೆ 9 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ರಸ್ತೆಯಲ್ಲಿ ಸಂಚಾರ ಬಂದಾಗಿದೆ. ಅಲ್ಲದೇ ಸಾರ್ವಜನಿಕರ ತೆರಿಗೆ ಹಣ ಅಧಿಕಾರಿಗಳ ಯಡವಟ್ಟಿನಿಂದ ಹಾಳಾದಂತಾಗಿದೆ. ಹೀಗಾಗಿ ತಪ್ಪಿತಸ್ಥ ಅಧಿಕಾರಿಗಳಿಂದ ರಸ್ತೆ ನಿರ್ಮಾಣದ ಹಣವನ್ನ ವಸೂಲಿ ಮಾಡುವಂತೆ ಪಾಲಿಕೆ ಸದಸ್ಯರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಒಟ್ಟಿನಲ್ಲಿ ಅಧಿಕಾರಿಗಳ ಒಂದು ಯಡವಟ್ಟು ಸಾರ್ವಜನಿಕರ ತೆರಿಗೆ ಹಣ ಪೋಲಾಗುವಂತೆ ಮಾಡಿದೆ. ಇತ್ತ ಕೋರ್ಟ್ ಸಮಯ ಕೂಡ ಹಾಳು ಮಾಡಿದ್ದು ಇದು ಕೂಡ ಅಧಿಕಾರಿಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಸೋಮವಾರ ಈ ಬಗ್ಗೆ ಪಾಲಿಕೆ ಅಧಿಕಾರಿಗಳು ಹೈಕೋರ್ಟ್ ನಲ್ಲಿ ದಾಖಲೆ ಸಲ್ಲಿಸಲಿದ್ದಾರೆ. ಹೀಗಾಗಿ ತಪ್ಪು ಎಸಗಿದ ಅಧಿಕಾರಿಗಳಿಗೆ ಸರ್ಕಾರವೇ ಬಿಸಿ ಮುಟ್ಟಿಸುವ ಕೆಲಸ ಮಾಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ