ಬೆಳಗಾವಿ, ಡಿಸೆಂಬರ್ 14: ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡದಿದ್ದರೆ ಯಾವ ಪುರುಷಾರ್ಥಕ್ಕೆ ಬೆಳಗಾವಿಯಲ್ಲಿ ಸುವರ್ಣಸೌಧ ನಿರ್ಮಿಸಿದ್ದು ಎಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಎಂಎಲ್ಸಿ ಹೆಚ್.ವಿಶ್ವನಾಥ್ (H Vishwanath) ಕಿಡಿಕಾರಿದ್ದಾರೆ. ಪರಿಷತ್ನಲ್ಲಿ ಮಾತನಾಡಿದ ಅವರು, ಈ ಭಾಗದ ಸಮಸ್ಯೆಗಳ ಬಗ್ಗೆ ಚರ್ಚಿಸಲು ಅವಕಾಶವನ್ನೇ ನೀಡುತ್ತಿಲ್ಲ. ಸುವರ್ಣಸೌಧದಲ್ಲಿ ಸರ್ಕಾರ ಅಧಿವೇಶನ ನಡೆಸುತ್ತಿರುವುದಾದರೂ ಏಕೆ ಎಂದು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ಕುರಿತು ಅಥಣಿ ಶಾಸಕ ಲಕ್ಷ್ಮಣ ಸವದಿ ಚರ್ಚೆ ಮುಂದುವರಿಸಿದ್ದು, ಮುಳುಗಡೆ ಪ್ರದೇಶದ ಸಂತ್ರಸ್ತರಿಗೆ ಪರಿಹಾರ ಕೊಡುವ ವಿಚಾರ ಪ್ರಸ್ತಾಪಿಸಿದ್ದಾರೆ. ಆಗ ನಾವಿದ್ದಾಗ ಐದು ಪಟ್ಟು ಹೆಚ್ಚು ಪರಿಹಾರ ಕೊಟ್ಟಿದ್ದೆವು ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ. ಆಗ ನಾನು ಇರುತ್ತಿದ್ದರೆ ಇನ್ನೂ ಹೆಚ್ಚು ಕೊಡಲು ವಾರ್ನ್ ಮಾಡುತ್ತಿದ್ದೆ, ಅಷ್ಟರಲ್ಲಿ ನನ್ನ ಕಿತ್ತು ಹಾಕಿಬಿಟ್ಟಿರಿ ಎಂದು ಸವದಿ ಹೇಳಿದ್ದಾರೆ.
ಇದನ್ನೂ ಓದಿ: ಬೆಳಗಾವಿ ಅಧಿವೇಶನ: ಸದನದಲ್ಲೇ ಬಿಜೆಪಿ ಶಾಸಕ ಬಿಪಿ ಹರೀಶ್ಗೆ ಪಕ್ಷಾಂತರದ ಆಫರ್ ಕೊಟ್ಟ ಡಿಕೆ ಶಿವಕುಮಾರ್
ಅಶೋಕಣ್ಣ ಮೊದಲು ಸದನಕ್ಕೆ ಹಾಗೆ ಬರುತ್ತಿದ್ದ, ಈಗ ವಿಪಕ್ಷ ನಾಯಕ ಆದ ಮೇಲೆ ಹೆಗಲ ಮೇಲೆ ಟವೆಲ್ ಹಾಕಿಕೊಂಡು ಬರುತ್ತಿದ್ದಾರೆ. ಸಿದ್ದರಾಮಯ್ಯ ಕೂಡ ವಿಪಕ್ಷ ನಾಯಕರಾಗಿದ್ದಾಗ ಟವೆಲ್ ಹಾಕಿಕೊಂಡು ಬರುತ್ತಿದ್ದರು. ಸಿಎಂ ಆಗಿದ್ದಾರೆ. ಅಶೋಕ್ ಏನಾದರೂ ಹಾಗೆ ಆಗಬಹುದೇನೋ. ನಾವು ಉತ್ತರ ಕರ್ನಾಟಕದವರು ಅಧಿವೇಶನಕ್ಕೆ ನೀವೆಲ್ಲಾ ಬಂದಾಗ ಪ್ರೀತಿಯಿಂದ ಎಲ್ಲರನ್ನೂ ಕರೆಸಿ ಊಟ ಮಾಡಿಸುತ್ತೇವೆ ಆದರೆ ನಾವು ಬೆಂಗಳೂರಿಗೆ ಹೋದಾಗ ಅಶೋಕಣ್ಣ ನಮ್ಮ ಕಡೆ ತಿರುಗಿಯೂ ನೋಡಲ್ಲ ಎಂದಿದ್ದಾರೆ.
ಉತ್ತರ ಕರ್ನಾಟಕ ಅಭಿವೃದ್ಧಿ ಚರ್ಚೆ ವೇಳೆ ಸರ್ಕಾರ ಮನೆ ಕಟ್ಟಿಸಿಕೊಟ್ಟ ವಿಚಾರವನ್ನು ಶಾಸಕ ಸಿದ್ದು ಸವದಿ ಪ್ರಸ್ತಾಪಿಸಿದ್ದು, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮನೆ ಮಂಜೂರು ಮಾಡಿ ದುಡ್ಡು ಕೊಟ್ಟಿಲ್ಲ ಎಂದು ಆರ್ ಅಶೋಕ್ ಹೇಳಿದ್ದಾರೆ. ಆ ವೇಳೆ ಯಾರು ಹೇಳಿದ್ದು ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಸರ್ಕಾರದ ಪ್ರತಿನಿಧಿಯೆದುರೇ ಅಧಿಕಾರದಲ್ಲಿರುವವರನ್ನು ತರಾಟೆಗೆ ತೆಗೆದುಕೊಂಡ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ
ನಮ್ಮ ಸರ್ಕಾರದ ಅವಧಿಯಲ್ಲಿ ಸಚಿವರಾಗಿ ಸೋಮಣ್ಣ ಹೇಳಿದ್ದು. ಸೋಮಣ್ಣ ಸುಳ್ಳು ಹೇಳುತ್ತಾನೆ, ನೀವು ಯಾಕೆ ಅದನ್ನೆ ಕಲಿಯುತ್ತೀರಿ ಎಂದಿದ್ದಾರೆ ಸಿದ್ದರಾಮಯ್ಯ. ಯಾವ ಅವಧಿಯಲ್ಲಿ ಎಷ್ಟು ಹಣ ಕೊಟ್ಟಿದ್ದೇವೆ ಎಂದು ದಾಖಲೆ ಸಮೇತ ಸಾಬೀತು ಮಾಡಲು ಸಿದ್ಧ ಎಂದು ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.
ಕಲಬುರಗಿ ಜಿಲ್ಲೆ ಆಳಂದ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ್ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರು ಬೆಂಗಳೂರು, ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿದ್ದಾರೆ. ರಾಜ್ಯ ಮತ್ತು ಜಿಲ್ಲೆಯ ಯಾವುದೇ ತಾಲೂಕುಗಳಿಗೆ ಸಚಿವರು ಹೋಗಲ್ಲ. ಮತ್ತೆ ಗೆಲ್ಲಬೇಕೆಂದು ಕ್ಷೇತ್ರಗಳಿಗೆ ಮಾತ್ರ ಭೇಟಿ ನೀಡುತ್ತಿದ್ದಾರೆ ಅಷ್ಟೇ ಎಂದು ಬಿ.ಆರ್.ಪಾಟೀಲ್ ಅಸಮಾಧಾನವ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.