
ಬೆಳಗಾವಿ, ಮೇ 27: ಬೆಳಗಾವಿ (Belagavi) ಜಿಲ್ಲೆಯ ಅಥಣಿ (Athani) ತಾಲೂಕಿನ ನಾಗನೂರ ಪಿಎ ಗ್ರಾಮದಲ್ಲಿನ ಹಳ್ಳದಲ್ಲಿ ಎತ್ತಿನ ಗಾಡಿ ಮಗುಚಿ ಬಿದ್ದು ಇಬ್ಬರು ಮಕ್ಕಳು ಮತ್ತು ಒಂದು ಎತ್ತು ಮೃತಪಟ್ಟಿದೆ. ಗಣೇಶ್ ಕಾಂಬಳೆ (9), ದೀಪಕ್ ಕಾಂಬಳೆ (11) ಮೃತರು. ಭಾರಿ ಮಳೆಯಿಂದಾಗಿ ತುಂಬಿ ಹರಿಯುತ್ತಿದೆ. ಹಳ್ಳಕ್ಕೆ ಸೇತುವೆ ಇಲ್ಲದಿರುವುದರಿಂದ, ಸಂಬರಗಿ ಗ್ರಾಮದಿಂದ ನಾಗನೂರ ಪಿಎ ಗ್ರಾಮಕ್ಕೆ ಹರಿಯುತ್ತಿರುವ ನೀರಿನಲ್ಲೇ ಎತ್ತಿನ ಗಾಡಿಯಲ್ಲಿ ತೆರಳಿದ್ದಾರೆ. ಸುತ್ತಲೂ ನೀರು ಇದ್ದಿದ್ದರಿಂದ ದಾರಿ ಕಂಡಿಲ್ಲ. ನೀರಿನ ರಭಸಕ್ಕೆ ಎತ್ತಿನ ಗಾಡಿ ಮಗುಚಿ ಬಿದ್ದಿದೆ. ಘಟನಾ ಸ್ಥಳಕ್ಕೆ ಅಥಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಹಾವೇರಿ: ನಿರಂತರ ಮಳೆಯಿಂದ ಮನೆ ಗೋಡೆ ಕುಸಿದು ಮಹಿಳೆ ಮೃತಪಟ್ಟಿರುವ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಕಿರವಾಡಿ ಗ್ರಾಮದಲ್ಲಿ ನಡೆದಿದೆ. ಕಿರವಾಡಿ ಗ್ರಾಮದ ನಿವಾಸಿ ಶಾಂತಮ್ಮ ತಳವಾರ (52) ಮೃತ ದುರ್ದೈವಿ. ಕಂದಾಯ ಅಧಿಕಾರಿಗಳು, ಪೊಲೀಸರು ಭೇಟಿ ಸ್ಥಳಕ್ಕೆ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾನಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇನ್ನು, ಹಾನಗಲ್ ತಾಲೂಕಿನ ಕೂಡಲ ಗ್ರಾಮದಲ್ಲಿ ವಿದ್ಯುತ್ ಸ್ಪರ್ಶಿಸಿ ಬಾಲಕ ಮೃತಪಟ್ಟಿದ್ದಾನೆ. ಶಶಾಂಕಗೌಡ ಮುದ್ದಿನಗೌಡ (14) ಮೃತ ಬಾಲಕ. ಮನೆಯ ಪಂಪಸೇಟ್ ಪ್ರಾರಂಭಿಸಲು ಹೋದಾಗ ವಿದ್ಯುತ್ ಶಾಕ್ ಹೊಡೆದು ಮೃತಪಟ್ಟಿದ್ದಾನೆ. ಸ್ಥಳಕ್ಕೆ ಆಡೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆಡೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಕಲಬುರಗಿ: ಆಳಂದ ತಾಲೂಕಿನ ತಡೋಳಾ ಗ್ರಾಮದಲ್ಲಿ ಸಿಡಿಲು ಬಡಿದು ಏಳು ಕುರಿಗಳು ಮೃತಪಟ್ಟಿವೆ. ಸಗಾತೆಯವರಿಗೆ ಸೆರಿರುವ 4 ಕುರಿಗಳು ಹಾಗೂ ಚಂದ್ರಕಾಂತ್ ಗಾವಡೆಗೆ ಸೇರಿದ ಮೂರು ಕುರಿಗಳು ಮೃತಪಟ್ಟಿವೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಪ್ರವಾಸಿಗರ ಗಮನಕ್ಕೆ: ಭಾರಿ ಮಳೆಯಿಂದ ಕರ್ನಾಟಕದ ಈ ಎರಡು ಕಡೆ ಅರಣ್ಯ ಸಫಾರಿ ರದ್ದು
ದಾವಣಗೆರೆ: ಜೀನಿಹಳ್ಳಿಯಲ್ಲಿ ಸಿಡಿಲು ಬಡಿದು 80ಕ್ಕೂ ಹೆಚ್ಚು ಕುರಿಗಳು ಮೃತಪಟ್ಟಿರುವ ಘಟನೆ ಹೊನ್ನಾಳಿ ತಾಲೂಕಿನ ಜೀನಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಜೀನಿಹಳ್ಳಿ ಗ್ರಾಮದ ಮಹೇಶಪ್ಪಗೆ ಸೇರಿದ ಕುರಿಗಳು ಮೃತಪಟ್ಟಿವೆ. ಸೂಕ್ತ ಪರಿಹಾರ ನೀಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
Published On - 9:32 pm, Tue, 27 May 25