ಬೆಳಗಾವಿ ಬಿಜೆಪಿ ಮುಖಂಡ ಪೃಥ್ವಿಸಿಂಗ್​ಗೆ ಚಾಕು ಇರಿತ: ಕೊನೆಗೂ ದೂರು ದಾಖಲು

| Updated By: ರಮೇಶ್ ಬಿ. ಜವಳಗೇರಾ

Updated on: Dec 05, 2023 | 2:39 PM

ಬೆಳಗಾವಿಯಲ್ಲಿ ರಮೇಶ್ ಜಾರಕಿಹೊಳಿ ಅವರ ಅತ್ಯಾಪ್ತ ಪೃಥ್ವಿ ಸಿಂಗ್ ಅವರ ಮೇಲೆ ಚಾಕುವಿನಿಂದ ಹಲ್ಲೆ ಮಾಡಲಾಗಿದ್ದು, ಈ ಕೃತ್ಯದ ಹಿಂದೆ ಕಾಂಗ್ರೆಸ್ ಎಂಎಲ್​ಸಿ ಚನ್ನರಾಜ ಹಟ್ಟಿಹೊಳಿ ಹೆಸರು ಕೇಳಿಬಂದಿದೆ. ಇದೀಗ ಘಟನೆ ನಡೆದು 18 ಗಂಟೆಗಳ ಬಳಿಕ ದೂರು ದಾಖಲಾಗಿದೆ. ಹಾಗಾದ್ರೆ ದೂರಿನಲ್ಲೇನಿದೆ? ಎನ್ನುವ ವಿವರ ಈ ಕೆಳಗಿನಂತಿದೆ.

ಬೆಳಗಾವಿ ಬಿಜೆಪಿ ಮುಖಂಡ ಪೃಥ್ವಿಸಿಂಗ್​ಗೆ ಚಾಕು ಇರಿತ: ಕೊನೆಗೂ ದೂರು ದಾಖಲು
ಚಿಕಿತ್ಸೆ ಪಡೆಯುತ್ತಿರುವ ಪೃಥ್ವಿ ಸಿಂಗ್
Follow us on

ಬೆಳಗಾವಿ, (ಡಿಸೆಂಬರ್ 05): ಬಿಜೆಪಿ ಕಾರ್ಯಕರ್ತ ಪೃಥ್ವಿ ಸಿಂಗ್​ಗೆ ( prithvi singh) ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ದೂರು ದಾಖಲಾಗಿದೆ. ತಂದೆ ಪೃಥ್ವಿ ಸಿಂಗ್ ಪರವಾಗಿ ಮಗ ಜಸ್ವಿರ್ಸಿಂಗ್, ಬೆಳಗಾವಿಯ (Belagavi) ಎಪಿಎಂಸಿ ಠಾಣೆಗೆ ದೂರು ನೀಡಿದ್ದಾರೆ. ಕಾಂಗ್ರೆಸ್ ವಿಧಾನಪರಿಷತ್ ಸದಸ್ಯ ಎಂಎಲ್ ಸಿ ಚನ್ನರಾಜ್ ಹಟ್ಟಿಹೊಳಿ, ಸುಜೀತ್ ಜಾಧವ್, ಇಬ್ಬರು ಗನ್ ಮ್ಯಾನ್, ಸದ್ದಾಂ ಎನ್ನುವವರ ವಿರುದ್ಧ ಕೊಲೆ ಯತ್ನ ಜಾತಿನಿಂದನೆ, ಹಾಗೂ ಜೀವಬೆದರಿಕೆ ಹಾಕಿದ್ದರೆಂದು ದೂರಿನಲ್ಲಿ ಉಲ್ಲೇಖವಾಗಿದೆ.

ದೂರಿನಲ್ಲೇನಿದೆ?

2018ರ ಚುನಾವಣೆಯಲ್ಲಿ ಜಯನಗರದ ನಮ್ಮ ಮನೆಯನ್ನ ಚುನಾವಣೆ ಕೆಲಸಕ್ಕೆ ತೆಗೆದುಕೊಂಡಿದ್ದರು. 10ಲಕ್ಷ ರೂಪಾಯಿಗೆ ಮನೆಯನ್ನು ಲೀಸ್ ಗೆ ಕರಾರು ಮಾಡಲಾಗಿತ್ತು. ಲೀಸ್ ಆಗಿದ್ದ ಕರಾರಿನ ಪ್ರಕಾರ ಅವರು ನಡೆದುಕೊಂಡಿಲ್ಲ. ನಾನು ಬಿಜೆಪಿ ಸೇರಿದ ಮೇಲೆ ರಾಜ್ಯ ಎಸ್ಸಿ ಮೋರ್ಚಾಗೆ ಅವಿರೋದ ಆಯ್ಕೆಯಾದೆ. ಆಗ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ನಮ್ಮ ನಡುವಿನ ಸಂಬಂಧ ಸರಿಯಾಗಿ ಉಳಿಯಲಿಲ್ಲ. ಬಿಜೆಪಿ ಸೇರಿದ ಮೇಲೆ ಕೆಲವು ಮೊಬೈಲ್ ಸಂಖ್ಯೆಯಿಂದ ನನಗೆ ಬೆದರಿಕೆ ಬರಲು ಶರುವಾದವು. 16/02/21 ರಂದು ಈ ಬಗ್ಗೆ ನಗರ ಪೊಲೀಸ್ ಆಯುಕ್ತರಿಗೆ ದೂರು ಕೂಡ ಕೊಟ್ಟಿದ್ದೆ. ಡಿಸೆಂಬರ್ 04 ರಂದು ಚನ್ನರಾಜ ಬಂದು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದರು. ಅಲ್ಲದೇ ನನ್ನ ಬಳಿಯಿರುವ ಮೊಬೈಲ್‌ ಕಸಿದುಕೊಂಡರು. ಆಷ್ಟೊತ್ತಿಗೆ ನೂಕಾಟ ತಳ್ಳಾಟ ಪ್ರಾರಂಭವಾಯ್ತು. ಅಗ ಸುಜೀತ್ ನನ್ನ ಹಿಡಿದುಕೊಂಡ ಮತ್ತೊಂದೆಡೆ ಸದ್ದಾಂ ಹಲ್ಲೆ ಮಾಡಿದ್ದಾನೆ. ಹರಿತವಾದ ಆಯುಧದದಿಂದ ನನ್ನ ಕೈಗೆ ಹಲ್ಲೆ ಮಾಡಿದ್ದು, ಇದಕ್ಕೆ ಚನ್ನರಾಜ ಹಟ್ಟಿಹೊಳಿ ಪ್ರೋತ್ಸಾಹ ನೀಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಬಿಜೆಪಿ ಮುಖಂಡ ಪೃಥ್ವಿಸಿಂಗ್​ಗೆ ಚಾಕು ಇರಿತ ಪ್ರಕರಣ: ಗಲಾಟೆ ವೇಳೆ ಚನ್ನರಾಜ ಹಟ್ಟಿಹೊಳಿ ಕಾರು ಪತ್ತೆ

ಘಟನೆ ಹಿನ್ನೆಲೆ

ರಾಜ್ಯ ಬಿಜೆಪಿ ಕಾರ್ಯಕಾರಣಿ ಸದಸ್ಯರೂ ಆಗಿರುವ ಶಾಸಕ ರಮೇಶ್ ಜಾರಕಿಹೊಳಿ (Ramesh Jarkiholi) ಅತ್ಯಾಪ್ತ ಪೃಥ್ವಿ ಸಿಂಗ್ (55) ಅವರ ಮೇಲೆ ಜಯನಗರದಲ್ಲಿ ಚಾಕುವಿನಿಂದ ಹಲ್ಲೆ ನಡೆದಿತ್ತು. ಕಾಂಗ್ರೆಸ್ ಎಂಎಲ್​ಸಿ ಚನ್ನರಾಜ ಹಟ್ಟಿಹೊಳಿ (Channaraj Hattiholi) ಆಪ್ತರು ಚಾಕುವಿನಿಂದ ಇರಿದು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಅಲ್ಲದೇ ಇದರ ಹಿಂದೆ ಚನ್ನರಾಜ ಹಟ್ಟಿಹೊಳಿ ಕೈವಾಡವಿರು ಮಾತುಗಳು ಕೇಳಿಬಂದಿದ್ದವು. ಸದ್ಯ ಪೃಥ್ವಿ ಸಿಂಗ್ ಕೆಎಲ್ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:33 pm, Tue, 5 December 23