
ಬೆಳಗಾವಿ, ಮಾರ್ಚ್ 15: ಮಹಾನಗರ ಪಾಲಿಕೆಯ (Municipality) ಮೂರನೇ ಅವಧಿಗೆ ಮೇಯರ್ ಮತ್ತು ಉಪ ಮೇಯರ್ಗೆ ಚುನಾವಣೆ (Election) ನಡೆದಿತ್ತು. ಗದ್ದುಗೆ ಏರಲು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ತಂತ್ರ ಪ್ರತಿತಂತ್ರ ರೂಪಿಸಿದ್ದವು. ಹೀಗಾಗಿ ತೀವ್ರ ಕುತೂಹಲ ಮೂಡಿಸಿತ್ತು. ಸದ್ಯ ಈ ಕುತೂಹಲಕ್ಕೆ ಬ್ರೇಕ್ ಬಿದ್ದಿದ್ದು, ಬೆಳಗಾವಿ ಪಾಲಿಕೆ ಬಿಜೆಪಿ ಮಡಿಲಿಗೆ ಸೇರಿದೆ. ಆ ಮೂಲಕ ನೂತನ ಮೇಯರ್ ಆಗಿ ಮಂಗೇಶ್ ಪವಾರ್ ಆಯ್ಕೆ ಆಗಿದ್ದು, ಉಪಮೇಯರ್ ಆಗಿ ವಾಣಿ ವಿಲಾಸ್ ಜೋಶಿ ಆಯ್ಕೆ ಆಗಿದ್ದಾರೆ.
3ನೇ ಅವಧಿಗೆ ಮೇಯರ್, ಉಪಮೇಯರ್ ಸ್ಥಾನಕ್ಕೆ ನಡೆದಿದ್ದ ಚುನಾವಣೆಯಲ್ಲಿ ಕೈ ಎತ್ತುವ ಮೂಲಕ ಆಯ್ಕೆಗೆ ಚುನಾವಣಾಧಿಕಾರಿ ಅವಕಾಶ ನೀಡಿದ್ದರು. ಮಂಗೇಶ್ ಪರವಾಗಿ 40 ಮತಗಳು ವಿರುದ್ಧವಾಗಿ 5 ಮತ ಚಲಾವಣೆ ಆಗಿದ್ದರೆ, ವೀಣಾ ಪರವಾಗಿ 40 ಹಾಗೂ ವಿರುದ್ಧವಾಗಿ 19 ಮತಗಳು ಚಲಾವಣೆ ಮಾಡಲಾಗಿದೆ.
ಇದನ್ನೂ ಓದಿ: ಹೋಳಿ ಹಬ್ಬದ ದಿನವೇ ಮಹಾರಾಷ್ಟ್ರದಲ್ಲಿ ಕಿಡಿಗೇಡಿಗಳ ಪುಂಡಾಟ: ಕರ್ನಾಟಕ ಬಸ್ ಮೇಲೆ ಬಾಟಲಿ ತೂರಾಟ
ಮೇಯರ್ ಸ್ಥಾನಕ್ಕೆ ಬಿಜೆಪಿಯ ಮಂಗೇಶ ಪವಾರ್, ಎಂಇಎಸ್ನ ಬಸವರಾಜ ಮಾರುತಿ ಮೋದಗೇಕರ, ಎಐಎಂಐಎಂನ ಶಾಹಿದಖಾನ್ ಪಠಾಣ ಮತ್ತು ರಾಜು ಭಾತಖಾಂಡೆ ತಲಾ 2 ನಾಮಪತ್ರ ಸಲ್ಲಿಸಿದ್ದರು. ಅದೇ ರೀತಿಯಾಗಿ ಉಪಮೇಯರ್ ಸ್ಥಾನಕ್ಕೆ ದೀಪಾಲಿ ಟೊಪ್ಪಗಿ, ವಾಣಿ ವಿಲಾಸ ಜೋಶಿ, ಲಕ್ಷ್ಮೀ ಲೋಕರಿ ಮತ್ತು ಶ್ರೀಮತಿ ಖುರ್ಷಿದ್ ಮುಲ್ಲಾ ತಲಾ 2 ನಾಮಪತ್ರ ಸಲ್ಲಿದರು. ಬಳಿಕ ಖುರ್ಷಿದ್ ಮುಲ್ಲಾ ಹಾಗೂ ದೀಪಾಲಿ ಉಮೇದುವಾರಿಕೆ ವಾಪಸ್ ಪಡೆದುಕೊಂಡರು.
ಇನ್ನು ಮಂಗೇಶ್ ಪವಾರ್ ಸದಸ್ಯತ್ವವನ್ನು ಪ್ರಾದೇಶಿಕ ಆಯುಕ್ತ ಎಸ್‌ಬಿ ಶೆಟ್ಟೆಣ್ಣವರ್ ಅನರ್ಹ ಮಾಡಿದ್ದರು. ಹಾಗಾಗಿ ಹೈಕೋರ್ಟ್ನಲ್ಲಿ ಪ್ರಾದೇಶಿಕ ಆಯುಕ್ತರ ಆದೇಶಕ್ಕೆ ಮಂಗೇಶ್ ಪವಾರ್ ತಡೆಯಾಜ್ಞೆ ತಂದಿದ್ದರು. ಇಂದು ಮಂಗೇಶ್ ಪವಾರ್ ಅವರನ್ನೇ ಮೇಯರ್ ಮಾಡುವಲ್ಲಿ ಶಾಸಕ ಅಭಯ್ ಪಾಟೀಲ್ ಯಶಸ್ವಿಯಾಗಿದ್ದಾರೆ.
ಮತದಾನ ಪ್ರಕ್ರಿಯೆಯಲ್ಲಿ ಸಂಸದ ಜಗದೀಶ್ ಶೆಟ್ಟರ್ ಭಾಗಿಯಾಗಿದ್ದರು. ಈ ವೇಳೆ ಬಹಿರಂಗವಾಗಿ ಅಧಿಕಾರಿಗಳ ವಿರುದ್ಧ ಶಾಸಕ ಅಭಯ್ ಪಾಟೀಲ್ ಅಸಮಾಧಾನ ಹೊರ ಹಾಕಿದರು. ರಾಜಕೀಯ ಪಕ್ಷದವರ ಮಾತು ಕೇಳಿ ಅಧಿಕಾರಿಗಳು ಕೆಲಸ ಮಾಡಬೇಡಿ. ಉದ್ದೇಶಪೂರ್ವಕವಾಗಿ ಸದಸ್ಯತ್ವ ರದ್ದು ಮಾಡುವ ಪ್ರಯತ್ನ ನಡೆದಿತ್ತು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬೆಳಗಾವಿಯಲ್ಲಿ ಮತ್ತೆ ಎಂಇಎಸ್ ಪುಂಡರ ಅಟ್ಟಹಾಸ: ಗ್ರಾಪಂ ಕಾರ್ಯದರ್ಶಿ ಮೇಲೆ ಹಲ್ಲೆ
ಹೈಕೋರ್ಟ್ನಲ್ಲಿ ನ್ಯಾಯಾಧೀಶರೇ ಪ್ರಾದೇಶಿಕ ಆಯುಕ್ತರ ಬಗ್ಗೆ ಅಸಮಾಧಾನ ಹೊರ ಹಾಕಿದ್ದರು. ಇನ್ನೂ ಮುಂದೆಯಾದರೂ ಯಾರ ಒತ್ತಡಕ್ಕೆ ಮಣಿಯದೇ ಕೆಲಸ ಮಾಡಿ ಅಂತಾ ಅಧಿಕಾರಿಗಳಿಗೆ ಶಾಸಕ ಅಭಯ್ ಪಾಟೀಲ್ ಸೂಚನೆ ನೀಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:10 pm, Sat, 15 March 25