ಚಿಕ್ಕೋಡಿ: ಕೃಷ್ಣಾ ನದಿ ನೀರು ತಡೆದ ಮಹಾರಾಷ್ಟ್ರ: ಬ್ಯಾರೇಜ್ ಸುತ್ತ ಪೊಲೀಸರ ನಿಯೋಜನೆ
ಇಷ್ಟು ದಿನಗಳ ಕಾಲ ಗಡಿ ವಿಚಾರವಾಗಿ ತಗಾದೆ ತಗೆಯುತ್ತಿದ್ದ ಮಹಾರಾಷ್ಟ್ರ ಸರ್ಕಾರ, ಇದೀಗ ನದಿ ನೀರು ಹರಿವು ವಿಚಾರವಾಗಿ ಕ್ಯಾತೆ ತಗೆದಿದೆ. ಕೊಲ್ಹಾಪುರ ಜಿಲ್ಲೆಯಲ್ಲಿರುವ ರಾಜಾಪುರ ಬ್ಯಾರೇಜ್ ಮೂಲಕ ಹರಿದು ಬರುತ್ತಿದ್ದ ಕೃಷ್ಣಾ ನದಿ ನೀರನ್ನು ಮಹಾರಾಷ್ಟ್ರ ಸರ್ಕಾರ ತಡೆದಿದೆ.
ಚಿಕ್ಕೋಡಿ, ಮೇ 26: ಕೊಲ್ಹಾಪುರ (Kollapur) ಜಿಲ್ಲೆಯಲ್ಲಿರುವ ರಾಜಾಪುರ ಬ್ಯಾರೇಜ್ (Rajapur Barrage) ಮೂಲಕ ಕರ್ನಾಟಕಕ್ಕೆ (Karnataka Government) ಹರಿದು ಬರುತ್ತಿದ್ದ ಕೃಷ್ಣಾ ನದಿ (Krishna River) ನೀರನ್ನು ಮಹಾರಾಷ್ಟ್ರ ಸರ್ಕಾರ (Maharashtra Government) ತಡೆಹಿಡಿದಿದೆ. ಅಲ್ಲದೆ ಮಹಾರಾಷ್ಟ್ರ ಸರ್ಕಾರ ಬ್ಯಾರೇಜ್ ಬಳಿ ಪೊಲೀಸ್ ಇಲಾಖೆ ಹಾಗೂ ನೀರಾವರಿ ಇಲಾಖೆಯ ಇಬ್ಬರು ಸಿಬ್ಬಂದಿಯನ್ನು ನಿಯೋಜನೆ ಮಾಡಿದೆ. ನಾಲ್ವರು ಸಿಬ್ಬಂದಿಯ ಎರಡು ತಂಡ ಬ್ಯಾರೇಜ್ ಬಳಿ ನಿರಂತರವಾಗಿ ಗಸ್ತು ಹಾಕುತ್ತಿರುತ್ತದೆ.
ಹೆಚ್ಚು ಪ್ರಮಾಣದಲ್ಲಿ ಮಳೆಯಾಗುತ್ತಿದ್ದರಿಂದ ಕೃಷ್ಣ ನದಿಗೆ ಒಡಲಿಗೆ ಹೆಚ್ಚು ನೀರು ಹರಿದು ಬರುತ್ತಿದೆ. ಹೀಗಾಗಿ ಈ ರಾಜಾಪುರ ಬ್ಯಾರೇಜ್ ಮೂಲಕ ಕರ್ನಾಟಕದ ಬೆಳಗಾವಿ, ವಿಜಯಪುರ, ಬಾಗಲಕೋಟೆ ಜಿಲ್ಲೆಗೆ ನೀರು ಹರಿದು ಬರುತ್ತಿತ್ತು. ಆದರೆ ಇದೀಗ ಮಹಾರಾಷ್ಟ್ರ ಸರ್ಕಾರ ನೀರು ತಡೆ ಹಿಡಿದಿದ್ದರಿಂದ ಜಿಲ್ಲೆಗಳಿಗೆ ನೀರು ಬರುವುದು ನಿಂತಿದೆ. ಇದರಿಂದ ಮೂರು ಜಿಲ್ಲೆಯ ರೈತರು ಮಹಾರಾಷ್ಟ್ರ ಸರ್ಕಾರದ ವಿರುದ್ಧ ಆಕ್ರೋಶಗೊಂಡಿದ್ದಾರೆ.
ನೀರು ತಡೆದಿದ್ದು, ಪೊಲೀಸರ ನಿಯೋಜನೆ ಏಕೆ
ಕೆಲ ದಿನಗಳ ಹಿಂದೆ ಕೆಲವರು ಬ್ಯಾರೇಜ್‌ನ ಗೇಟ್‌ಗಳನ್ನು ತೆಗೆದ ಪರಿಣಾಮ ಕರ್ನಾಟಕಕ್ಕೆ ನೀರು ಹರಿದು ಬಂದಿತ್ತು. ಕೂಡಲೇ ನೀರಾವರಿ ಇಲಾಖೆ ಗೇಟ್‌ಗಳನ್ನು ಮುಚ್ಚಿತು. ಘಟನೆಯ ನಂತರ 24×7 ಬ್ಯಾರೇಜ್ ಮೇಲೆ ನಿಗಾ ಇಡಲು ಪೊಲೀಸ್ ತಂಡವನ್ನು ನಿಯೋಜಿಸಲಾಗಿದೆ ಎಂದು ನೀರಾವರಿ ಇಲಾಖೆಗೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಸಾಂಗಲಿ ನೀರಾವರಿ ಇಲಾಖೆಯ ನೃಸಿಂಹವಾಡಿ ಕಚೇರಿಯ ಶಾಖಾ ಎಂಜಿನಿಯರ್ ರೋಹಿತ್ ದಾನೋಲೆ ಮಾತನಾಡಿ, ಮಹಾರಾಷ್ಟ್ರದ ಗಡಿಯಲ್ಲಿರುವ ಕೊಲ್ಹಾಪುರ ಜಿಲ್ಲೆಯ ರಾಜಾಪುರದಲ್ಲಿ ಈ ಬ್ಯಾರೇಜ್ ಇದೆ. ಒಂದು ಹನಿಯೂ ಸೋರಿಕೆಯಾಗದಂತೆ ಬ್ಯಾರೇಜ್‌ಗಳ ಎಲ್ಲ ಗೇಟ್‌ಗಳನ್ನು ಭದ್ರವಾಗಿ ಹಾಕಲಾಗಿದೆ. ಬ್ಯಾರೇಜ್ 40 ಅಡಿಯಷ್ಟು ನೀರನ್ನು ಸಂಗ್ರಹಿಸಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆ.
ಕರ್ನಾಟಕದಲ್ಲಿ ನೀರಿನ ಅಭಾವ ತಲೆದೋರಿದೆ. ಸುಮಾರು ಎಂಟು ದಿನಗಳ ಹಿಂದೆ ಕೆಲ ಅಪರಿಚಿತ ವ್ಯಕ್ತಿಗಳು ಮಧ್ಯರಾತ್ರಿ ಬ್ಯಾರೇಜ್‌ನ ಮೇಲ್ಬಾಗದ ಗೇಟ್‌ಗಳನ್ನು ತೆಗೆದು ಅಕ್ರಮವಾಗಿ ನೀರು ಬಿಟ್ಟಿದ್ದರು. ವಿಚಾರ ತಿಳಿದ ತಕ್ಷಣ ನೀರಾವರಿ ಇಲಾಖೆ ನೀರು ಬಿಡುವುದನ್ನು ಸ್ಥಗಿತಗೊಳಿಸಿದೆ. ಆದರೆ ಬ್ಯಾರೇಜ್‌ನ ಗೇಟ್‌ಗಳನ್ನು ತೆಗೆದು ಮತ್ತೆ ನೀರು ಬಿಡುವ ಸಾಧ್ಯತೆ ಇರುವುದರಿಂದ ಬ್ಯಾರೇಜ್‌ಗೆ 24 ಗಂಟೆ ಪೊಲೀಸ್ ಭದ್ರತೆ ನೀಡ ನೀಡಲಾಗಿದೆ.
2 ದಶಕದ ವಿವಾದ
ರಾಜಾಪುರ ಬ್ಯಾರೇಜ್ನಿಂದ ನೀರು ಬಿಡುವ ವಿಚಾರ 20 ವರ್ಷಗಳಿಂದ ವಿವಾದವಾಗಿ ಉಳಿದಿದೆ. 2004ರಲ್ಲಿ ಗಡಿಯಲ್ಲಿನ ಕರ್ನಾಟಕದ ಜನರು ಬ್ಯಾರೇಜ್ನಿಂದ ನೀರು ಬಿಡುವಂತೆ ಹೋರಾಟ ನಡೆಸಿದ್ದರು. ಈ ಗಲಾಟೆ ದೊಡ್ಡ ಪ್ರಮಾಣದಲ್ಲಿ ನಡೆದಿದ್ದು, ದ್ವಿಚಕ್ರ, ನಾಲ್ಕು ಚಕ್ರ ವಾಹನಗಳಿಗೆ ಬೆಂಕಿ ಹಚ್ಚಿ, ಹಲ್ಲೆ ಮಾಡಲಾಗಿತ್ತು. ಅಲ್ಲದೆ ಬ್ಯಾರೆಜ್ನ ಗೇಟ್ಗಳನ್ನೂ ತೆರದಿದ್ದರು.
2003 ರಲ್ಲಿ ಗಡಿಯಲ್ಲಿನ ಕರ್ನಾಟಕದ ಜನರು ಈ ಬ್ಯಾರೇಜ್ ಅನ್ನು ಕೆಡವಲು ಪ್ರಯತ್ನಿಸಿದ್ದರು. ಮಹಾರಾಷ್ಟ್ರ ಸರ್ಕಾರವು ಬ್ಯಾರೇಜ್‌ನ ನಿರ್ವಹಣೆ, ದುರಸ್ತಿ ಮತ್ತು ಬಲವರ್ಧನೆಗಾಗಿ ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ