
ಚಿಕ್ಕೋಡಿ, ನ.9: ತನ್ನ ಮಗಳಿಗೆ ಬೇರೆ ಜಾತಿಯ ಯುವಕನೊಂದಿಗೆ ಮಧ್ಯಸ್ಥಿಕೆ ವಹಿಸಿ ಪ್ರೇಮ ವಿವಾಹ ಮಾಡಿಸಿದ್ದಾನೆ ಎಂಬ ಆಕ್ರೋಶದಿಂದ ತಂದೆಯೊಬ್ಬ ಜ್ಯೋತಿಷಿಯನ್ನು ಅತ್ಯಂತ ಭೀಕರವಾಗಿ ಕೊಲೆ ಮಾಡಿರುವ ಭೀಕರ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಾನಕಾಪುರದಲ್ಲಿ ನಡೆದಿದೆ. ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಇಚಲಕರಂಜಿ ಪಟ್ಟಣದ ನಿವಾಸಿ ಮಂದಾರ್ ರಾಂಡೆ (35) ಕೊಲೆಯಾದ ದುರ್ದೈವಿ ಜ್ಯೋತಿಷಿ. ಕೊಲೆ ಕೃತ್ಯ ಎಸಗಿದ ಮಹಾರಾಷ್ಟ್ರದ ಶಿರಡವಾಡ ಗ್ರಾಮದ ನಿವಾಸಿ ದೀಪಕ್ ಮುಕ್ಕಮ್ ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಆರೋಪಿ ದೀಪಕ್ ಮುಕ್ಕಮ್ ಅವರ ಮಗಳು ಅನುಜಾ, ಓಂಕಾರ್ ಖೋತ್ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು. ಈ ವಧು-ವರರ ನಡುವೆ ಮಧ್ಯಸ್ಥಿಕೆ ವಹಿಸಿ, ಅವರ ಪ್ರೇಮ ವಿವಾಹ ನೆರವೇರಿಸಲು ಜ್ಯೋತಿಷಿ ಮಂದಾರ್ ರಾಂಡೆ ಸಹಾಯ ಮಾಡಿದ್ದರು. ತನ್ನ ಮಗಳು ಬೇರೆ ಜಾತಿಯ ಯುವಕನನ್ನು ಮದುವೆಯಾಗಲು ಜ್ಯೋತಿಷಿ ಮಂದಾರ್ ರಾಂಡೆಯೇ ಮುಖ್ಯ ಕಾರಣ ಎಂದು ಕೋಪಗೊಂಡಿದ್ದ ದೀಪಕ್, ಜ್ಯೋತಿಷಿಯನ್ನು ಮುಗಿಸಿಹಾಕಲು ಕಾಯುತ್ತಿದ್ದನು.
ಕಳೆದ ಅಕ್ಟೋಬರ್ 31 ರಂದು ಆರೋಪಿ ದೀಪಕ್, ಬೇರೊಂದು ಅಪರಿಚಿತ ಫೋನ್ ನಂಬರ್‌ನಿಂದ ಜ್ಯೋತಿಷಿ ಮಂದಾರ್ ರಾಂಡೆಗೆ ಕರೆ ಮಾಡಿದ್ದನು. ಇನ್ನೊಂದು ಮದುವೆ ಮಧ್ಯಸ್ಥಿಕೆ ವಹಿಸುವ ವಿಚಾರವಿದೆ ಎಂದು ನಂಬಿಸಿ ಕರ್ನಾಟಕ ಗಡಿ ಭಾಗದ ಮಾನಕಾಪುರಕ್ಕೆ ಕರೆಸಿಕೊಂಡಿದ್ದನು. ಮಾನಕಾಪುರ ತಲುಪುತ್ತಿದ್ದಂತೆ ಜ್ಯೋತಿಷಿ ಮಂದಾರ್ ರಾಂಡೆ ಅವರ ಕಣ್ಣಿಗೆ ಏಕಾಏಕಿ ಖಾರದ ಪುಡಿ ಎರಚಿ, ಕುಡಗೋಲಿನಿಂದ ಭೀಕರವಾಗಿ ಕೊಚ್ಚಿ ಕೊಲೆ ಮಾಡಿದ್ದಾನೆ. ಕೃತ್ಯ ಎಸಗಿದ ಬಳಿಕ ಶವವನ್ನು ಅಲ್ಲೇ ಬಿಟ್ಟು ಆರೋಪಿ ದೀಪಕ್ ತನ್ನ ಸ್ವಗ್ರಾಮಕ್ಕೆ ಪರಾರಿಯಾಗಿದ್ದನು.
ಮಾನಕಾಪುರದಲ್ಲಿ ಅಪರಿಚಿತ ಶವ ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಸದಲಗಾ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಧಾವಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದರು. ಮೃತರ ಮಾಹಿತಿ ಸಂಗ್ರಹಿಸಿ, ಅವರ ಮೊಬೈಲ್ ಫೋನ್ ಕಾಲ್ ಹಿಸ್ಟರಿ ಪರಿಶೀಲನೆ ನಡೆಸಿದಾಗ ಅಕ್ಟೋಬರ್ 31ರಂದು ದೀಪಕ್ ಕರೆ ಮಾಡಿರುವುದು ಮತ್ತು ಆತನ ಹಿನ್ನೆಲೆ ಬೆಳಕಿಗೆ ಬಂದಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಸದಲಗಾ ಠಾಣೆ ಪೊಲೀಸರು ಆರೋಪಿ ದೀಪಕ್ ಮುಕ್ಕಮ್‌ನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ