ಚಿಕ್ಕೋಡಿ ಡಿವೈಎಸ್ಪಿ ಬಸವರಾಜ್ ಇಂಗ್ಲೀಷಿಗೆ ಅನುವಾದಿಸಿರುವ ಶಿಶುನಾಳ ಶರೀಫರ ಹಾಡು ಬೆಂಗಳೂರು ವಿವಿಗೆ ಪಠ್ಯವಾಯ್ತು!
Chikodi DySp Basavaraj Yaligar: ಡಿವೈಎಸ್ ಪಿ ಬಸವರಾಜ್ ಅವರು ಅನುವಾದ ಮಾಡಿರುವ ಸೋರುತಿಹುದು ಮನೆಯ ಮಾಳಿಗೆ ಅನುವಾದಿತ ಸಾಹಿತ್ಯವನ್ನು ಬೆಂಗಳೂರು ವಿಶ್ವವಿದ್ಯಾಲಯದ ಬಿಎ ಆಪ್ಷನಲ್ ಇಂಗ್ಲೀಷ್ ವಿದ್ಯಾರ್ಥಿಗಳಿಗೆ ಪಠ್ಯವನ್ನಾಗಿ ಆಯ್ಕೆ ಮಾಡಿದೆ!
ಇವನಾರವ, ಇವನಾರವ, ಇವನಾರವ ಎಂದೆನಿಸದಿರಯ್ಯ, ಇವ ನಮ್ಮವ ಇವ ನಮ್ಮವ, ಎಂದೆನಿಸಯ್ಯ.. ಬಸವಣ್ಣನವರ ಈ ವಚನ ಕೇಳಲು ಅಳವಡಿಸಿಕೊಳ್ಳಲು ಎಷ್ಟು ಚಂದ ಅಲ್ವಾ.. ಇದನ್ನೆ ಯಥಾವತ್ತಾಗಿ ಇಂಗ್ಲೀಷಿನಲ್ಲಿ ಹೇಳಿದ್ರೆ ಹ್ಯಾಗಿರುತ್ತೆ.. ಅಷ್ಟಕ್ಕೂ ಬಸವಣ್ಣನವರ ವಚನಗಳನ್ನು ಈಗ ಇಂಗ್ಲೀಷ್ ಭಾಷೆಗೆ ಅನುವಾದ ಮಾಡೋ ಅನಿವಾರ್ಯತೆ ಏನಿದೆ..? ಅನುವಾದ ಮಾಡ್ತಿರೋರಾದ್ರೂ ಯಾರು ಅಂತೀರಾ? ಈ ಸ್ಟೋರಿ ನೋಡಿ. ಮೇಲೆ ಕನ್ನಡ, ಕೆಳಗೆ ಇಂಗ್ಲೀಷ್ ಅನುವಾದ.. ಬಸವಣ್ಣನವರ 950 ಷಟಸ್ಥಲ ವಚನಗಳಲ್ಲಿ 952 ವಚನಗಳನ್ನು ಕನ್ನಡದಿಂದ ಇಂಗ್ಲೀಷ್ ಗೆ ಅನುವಾದ (Translation) ಮಾಡಿರುವ ಈ ಪೊಲೀಸ್ ಅಧಿಕಾರಿಯ ಹೆಸರು ಬಸವರಾಜ್ ಎಲಿಗಾರ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಉಪವಿಭಾಗದ ಡಿವೈಎಸ್ ಪಿ. ಬಸವರಾಜ್ (Chikodi DySp Basavaraj Yaligar) ಅವರು ತಮ್ಮ ಕರ್ತವ್ಯದಿಂದ ಅಷ್ಟೆ ಅಲ್ಲದೆ ತಾವು ಮಾಡ್ತಿರೋ ಹೊಸ ಪ್ರಯತ್ನಗಳಿಂದಲೂ ಸಹ ಖ್ಯಾತಿಗಳಿಸುತ್ತಿದ್ದಾರೆ.
ಇತ್ತೀಚಿಗೆ ಸಂತ ಶಿಶುನಾಳ ಶರೀಫರ ಸೋರುತಿಹುದು ಮನೆಯ ಮಾಳಿಗಿ ಹಾಡನ್ನು ಅರ್ಥ ಸಹಿತ ಇಂಗ್ಲೀಷ್ ಗೆ ಅನುವಾದ ಮಾಡಿ ಡಿ ವೈ ಎಸ್ ಪಿ ಬಸವರಾಜ್ ಎಲಿಗಾರ್ ಸೈ ಎನಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ಹಿರಿಯ ಸಾಹಿತಿಗಳು, ನಿವೃತ್ತ ಪ್ರೊಫೆಸರುಗಳ ಸಾಹಿತ್ಯ ಹಾಗೂ ಅನುವಾದಗಳನ್ನು ಮಾತ್ರ ವಿದ್ಯಾರ್ಥಿಗಳಿಗೆ ಪಠ್ಯವಾಗಿ ಆಯ್ಕೆ ಮಾಡುವ ವಿಶ್ವವಿದ್ಯಾಲಯಗಳ ಪಠ್ಯ ಪುಸ್ತಕ ರಚನಾ ಸಮಿತಿ ಇದೀಗ ಡಿವೈಎಸ್ ಪಿ ಬಸವರಾಜ್ ಅವರು ಅನುವಾದ ಮಾಡಿರುವ ಸೋರುತಿಹುದು ಮನೆಯ ಮಾಳಿಗೆ ಅನುವಾದಿತ ಸಾಹಿತ್ಯವನ್ನು ಬೆಂಗಳೂರು ವಿಶ್ವವಿದ್ಯಾಲಯದ (Bangalore University) ಬಿಎ ಆಪ್ಷನಲ್ ಇಂಗ್ಲೀಷ್ ವಿದ್ಯಾರ್ಥಿಗಳಿಗೆ ಪಠ್ಯವನ್ನಾಗಿ ಆಯ್ಕೆ ಮಾಡಿದೆ!
Also Read: ಭಾನುವಾರ ಬೆಂಗಳೂರಿನ ಬಸವ ಸಮಿತಿ ಸಭಾಂಗಣದಲ್ಲಿ ಆದಿಲ್ ಶಾಹಿಗಳ 22 ಇತಿಹಾಸ ಸಂಪುಟ ಬಿಡುಗಡೆ, ಏನಿದರ ಮಹತ್ವ?
ಬಸವರಾಜ ಎಲಿಗಾರ್ ಅವರ ಮೊದಲ ಪ್ರಯತ್ನ ಯಶಸ್ವಿಯಾಗಿದ್ದು ಮೊದಲ ಬಾರಿಗೆ ಒರ್ವ ಡಿವೈ ಎಸ್ಪಿ ಅನುವಾದ ಮಾಡಿದ ಒಂದು ಪದ್ಯ ಬೆಂಗಳೂರು ಯೂನಿವರ್ಸಿಟಿಯಂತಹ ವಿಶ್ವವಿದ್ಯಾಲಯದಲ್ಲಿ ಪಠ್ಯವಾಗಿದೆ. ಕನ್ನಡದಲ್ಲಿ ಸಾಕಷ್ಟು ಸಂತರು, ಶರಣು, ವಚನಕಾರರು, ಆಗಿ ಹೋಗಿದ್ದು ಅವರ ಎಲ್ಲಾ ವಚನಗಳು ಹಾಗೂ ಸಾಹಿತ್ಯವನ್ನು ಇಂಗ್ಲೀಷ್ ಭಾಷೆಗೆ ಅನುವಾದ ಮಾಡುವ ಗುರಿಯನ್ನು ಬಸವರಾಜ್ ಎಲಿಗಾರ ಹೊಂದಿದ್ದು ಈಗಿನ ಮಕ್ಕಳು ಇಂಗ್ಲೀಷ್ ಮಾಧ್ಯಮದತ್ತ ವಾಲುತ್ತಿವುದುದಕ್ಕೆ ಕನ್ನಡದ ಎಲ್ಲಾ ಸಂತರು, ಶರಣರು, ಹಾಗೂ ವಚನಕಾರರ ಸಾಹಿತ್ಯ ಇಂಗ್ಲೀಷಿನಲ್ಲೂ ಸಿಗುವಂತಾಗಲಿ ಎಂಬ ಸದುದ್ಧೇಶದಿಂದ ಡಿ ವೈ ಎಸ್ ಪಿ ಬಸವರಾಜ್ ಎಲಿಗಾರ್ ಈ ಪ್ರಯತ್ನಕ್ಕೆ ಕೈ ಹಾಕಿದ್ದಾಗಿ ಹೇಳುತ್ತಾರೆ.
ಒಟ್ಟಿನಲ್ಲಿ ಅಧುನಿಕತೆ ಹಾಗೂ ಇಂಗ್ಲೀಷ್ ಮಾಧ್ಯಮದತ್ತ ವಾಲುತ್ತಿರುವ ವಿಧ್ಯಾರ್ಥಿಗಳು ಹಾಗು ಕಾಲೇಜು ಯುವಕ ಯುವತಿಯರಿಗೆ ಅದರಲ್ಲೂ ಹೊರ ದೇಶದಲ್ಲಿರುವ ಅನಿವಾಸಿ ಭಾರತೀಯರಿಗೆ ಈ ಸಂತರ ಶರಣರ ವಚನಕಾರರ ಸಾಹಿತ್ಯವನ್ನು ಇಂಗ್ಲೀಷಿಗೆ ಅನುವಾದ ಮಾಡ್ತಿರೋದ್ರಿಂದ ಸಾಕಷ್ಟು ಅನುಕೂಲವಾಗಲಿದೆ. ತಮ್ಮ ಕೆಲಸದ ಒತ್ತಡದ ನಡುವೆಯೂ ಇಂತೊಂದು ಪ್ರಯತ್ನಕ್ಕೆ ಕೈ ಹಾಕಿರುವ ಡಿ ವೈ ಎಸ್ ಪಿ ಎಲಿಗಾರ ಅವರ ಪ್ರಯತ್ನ ಫಲಿಸಲಿ ಎನ್ನುವುದು ನಮ್ಮ ಆಶಯ.
ವರದಿ: ವಿನಾಯಕ್ ಗುರವ್, ಟಿವಿ 9, ಚಿಕ್ಕೋಡಿ
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 2:41 pm, Sat, 17 December 22