ಭೈರತಿ ಬಸವರಾಜ್ ರಾಜೀನಾಮೆಗೆ ಆಗ್ರಹಿಸಿ ಸದನದಲ್ಲಿ ಧರಣಿ ಮುಂದುವರಿಸಲು ಕಾಂಗ್ರೆಸ್ ನಿರ್ಧಾರ: ಸಿದ್ದರಾಮಯ್ಯ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 19, 2021 | 11:50 PM

ಕ್ರಿಮಿನಲ್ ಪ್ರಕರಣ ಎದುರಿಸುತ್ತಿರುವ ಭೈರತಿ ಬಸವರಾಜ್ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು.

ಭೈರತಿ ಬಸವರಾಜ್ ರಾಜೀನಾಮೆಗೆ ಆಗ್ರಹಿಸಿ ಸದನದಲ್ಲಿ ಧರಣಿ ಮುಂದುವರಿಸಲು ಕಾಂಗ್ರೆಸ್ ನಿರ್ಧಾರ: ಸಿದ್ದರಾಮಯ್ಯ
ಸಿದ್ದರಾಮಯ್ಯ (ಸಂಗ್ರಹ ಚಿತ್ರ)
Follow us on

ಬೆಳಗಾವಿ: ಸಚಿವ ಭೈರತಿ ಬಸವರಾಜ್‌ ವಿರುದ್ಧ ಭೂಕಳಿಕೆ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಅವರ ರಾಜೀನಾಮೆಗೆ ಒತ್ತಾಯಿಸಿ ವಿಧಾನ ಪರಿಷತ್ ಹಾಗೂ ವಿಧಾನಸಭೆಯಲ್ಲಿ ಧರಣಿ ಮುಂದುವರಿಸುತ್ತೇವೆ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು. ಕ್ರಿಮಿನಲ್ ಪ್ರಕರಣ ಎದುರಿಸುತ್ತಿರುವ ಭೈರತಿ ಬಸವರಾಜ್ ರಾಜೀನಾಮೆ ನೀಡಬೇಕು ಎಂದು ಅವರು ತಿಳಿಸಿದರು. ಅಧಿಕಾರ ಶಾಶ್ವತವಲ್ಲ ಎಂಬ ಬಸವರಾಜ ಬೊಮ್ಮಾಯಿ ಹೇಳಿಕೆ ಕುರಿತು ಪ್ರತಿಕ್ರಿಯಿಸಲು ಅವರು ನಿರಾಕರಿಸಿದರು.

ಸದನಗಳಲ್ಲಿ ನಾವು ಧರಣಿ ನಡೆಸುತ್ತಲೇ ಇದ್ದೇವೆ. ನಮಗೆ ಚರ್ಚೆ ನಡೆಸಲು ಅವರು ಅವಕಾಶ ಕೊಡಲಿಲ್ಲ. ಭೈರತಿ ಬಸವರಾಜ ಅವರ ಮೇಲೆ ನ್ಯಾಯಾಲಯದ ಆದೇಶಗಳು ಇವೆ. ಅವರು ಮೋಸ ಮಾಡಿ, ಫೋರ್ಜರಿ ಮಾಡಿ, ನಕಲಿ ಪಾರ್ಟಿಷನ್ ಡೀಡ್, ನಕಲಿ ಕ್ರಯಪತ್ರ ಸೃಷ್ಟಿಸಿದ್ದಾರೆ. ಸೆಕ್ಷನ್ 120 (B), 420 ಚೀಟಿಂಗ್ ಪೋರ್ಜರಿ ಎಫ್ಐಆರ್ ರಜಿಸ್ಟರ್ ಆಗಿ ಸಮನ್ಸ್ ಕೂಡ ರಿಜಿಸ್ಟರ್ ಆಗಿದೆ. ನೈತಿಕವಾಗಿ ಅವರು ಸಚಿವರಾಗಿ ಮುಂದುವರಿಯುವಂತಿಲ್ಲ. ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿರುವವರು ರಾಜೀನಾಮೆ ಕೊಡಬೇಕಲ್ಲವೇ? ಅಪರಾಧಿ ಸ್ಥಾನದಲ್ಲಿ ಇರುವವರಿಗೆ ಪೊಲೀಸರು ಹೇಗೆ ಸೆಲ್ಯೂಟ್ ಹೊಡೆಯುತ್ತಾರೆ ಎಂದು ಪ್ರಶ್ನಿಸಿದರು.

ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಗೃಹ ಸಚಿವರಾಗಿದ್ದ ಕೆ.ಜೆ.ಜಾರ್ಜ್ ಅವರು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದು ಅವರೇ. ಅಂದು ಪ್ರತಿಪಕ್ಷ ಸ್ಥಾನದಲ್ಲಿದ್ದ ಬಿಜೆಪಿ ಜಾರ್ಜ್ ಅವರ ರಾಜೀನಾಮೆಗೆ ಆಗ್ರಹಿಸಿದಾಗ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿರಲಿಲ್ಲ. ಎಫ್‌ಐಆರ್ ದಾಖಲಿಸಲು ನ್ಯಾಯಾಲಯವು ಆದೇಶ ನೀಡಿದ ತಕ್ಷಣ ಜಾರ್ಜ್ ಅವರು ಯೋಚನೆಯನ್ನೇ ಮಾಡದೆ ರಾಜೀನಾಮೆ ಕೊಟ್ಟಿದ್ದರು. ಈಗ ಇವರೂ ಅದೇ ರೀತಿ ರಾಜೀನಾಮೆ ಕೊಡಬೇಕಲ್ಲವೇ? ಇವರು ರಾಜೀನಾಮೆ ಕೊಡದಿದ್ದರೆ ಮುಖ್ಯಮಂತ್ರಿಯೇ ಅವರನ್ನು ವಜಾ ಮಾಡಬೇಕು.ಈ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.