ನೀರಿನ ಬದಲು ಮಣ್ಣಿನಲ್ಲಿ ಹೂಳುವ ಮೂಲಕ ಗಣೇಶ ವಿಸರ್ಜನೆ; ವಿನೂತನ ವಿಧಾನ

| Updated By: ವಿವೇಕ ಬಿರಾದಾರ

Updated on: Sep 25, 2023 | 12:17 PM

ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಮತ್ತು ರಾಸಾಯನಿಕ ಬಣ್ಣಗಳನ್ನು ಬಳಸಿ ಗಣೇಶ ಮೂರ್ತಿಗಳನ್ನು ತಯಾರಿಸಲಾಗುತ್ತಿದೆ. ಇದರಿಂದ ನೀರು ಮಾಲಿನ್ಯಗೊಳ್ಳುತ್ತದೆ. ಹೀಗಾಗಿ ಜಲ ಸಂರಕ್ಷಣೆಯ ದೃಷ್ಟಿಯಿಂದ ಬವನಸೌದತ್ತಿ ಗ್ರಾಮದ ಯುವಕರು ಗಣೇಶ ಮೂರ್ತಿಗಳನ್ನು ಪರಿಸರ ಸ್ನೇಹಿಯಾಗಿ ವಿಸರ್ಜಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.

ನೀರಿನ ಬದಲು ಮಣ್ಣಿನಲ್ಲಿ ಹೂಳುವ ಮೂಲಕ ಗಣೇಶ ವಿಸರ್ಜನೆ; ವಿನೂತನ ವಿಧಾನ
ಗಣೇಶ
Follow us on

ಬೆಳಗಾವಿ ಸೆ.25: ರಾಯಬಾಗ (Raybag) ತಾಲೂಕಿನ ಬಾವನಸೌದತ್ತಿಯ ಬಾಲ ಗಜಾನನ ಮಂಡಳದ ಸದಸ್ಯರು ಗಣೇಶ (Ganesha) ಮೂರ್ತಿ ವಿಸರ್ಜನೆಗೆ ಹೊಸ ವಿಧಾನ ಅನುಸರಿಸಿದ್ದಾರೆ. ಸಾಮಾನ್ಯವಾಗಿ ಗಣೇಶ ಮೂರ್ತಿಗಳನ್ನು ನೀರಿನಲ್ಲಿ ವಿಸರ್ಜಿಸುತ್ತಾರೆ. ಆದರೆ ಈ ಮಂಡಳಿಯು ಮಣ್ಣಿನಲ್ಲಿ ಹೂಳುವ ಮೂಲಕ ಗಣೇಶ ಮೂರ್ತಿಯನ್ನು ವಿಸರ್ಜಿಸುತ್ತಿದೆ (Dissolving Ganesha Idols). ಮಂಡಳಿಯ ಸದಸ್ಯರ ಪ್ರಕಾರ, ವಿಗ್ರಹಗಳ ಪಾವಿತ್ರ್ಯತೆ ಮತ್ತು ಮಾಲಿನ್ಯ ಮುಕ್ತ ಪರಿಸರವನ್ನು ಕಾಪಾಡಿಕೊಳ್ಳಲು ಇದು ಉತ್ತಮ ಮಾರ್ಗವಾಗಿದೆ. ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಮತ್ತು ರಾಸಾಯನಿಕ ಬಣ್ಣಗಳನ್ನು ಬಳಸಿ ಗಣೇಶ ಮೂರ್ತಿಗಳನ್ನು ತಯಾರಿಸಲಾಗುತ್ತಿದೆ. ಇದರಿಂದ ನೀರು ಮಾಲಿನ್ಯಗೊಳ್ಳುತ್ತದೆ. ಹೀಗಾಗಿ ಜಲ ಸಂರಕ್ಷಣೆಯ ದೃಷ್ಟಿಯಿಂದ ಬವನಸೌದತ್ತಿ ಗ್ರಾಮದ ಯುವಕರು ಗಣೇಶ ಮೂರ್ತಿಗಳನ್ನು ಪರಿಸರ ಸ್ನೇಹಿಯಾಗಿ ವಿಸರ್ಜಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಪ್ರತಿ ವರ್ಷ ಕೃಷ್ಣಾ ನದಿಯಲ್ಲಿ ಗಣೇಶ ಮೂರ್ತಿಗಳನ್ನು ವಿಸರ್ಜಿಸಲಾಗುತ್ತದೆ. ಮಳೆ ಕೊರತೆಯ ಸಂದರ್ಭದಲ್ಲಿ ಇದು ದೊಡ್ಡ ಸಮಸ್ಯೆಯಾಗಿದೆ. ಹಾಗಾಗಿ ಗಣೇಶ ಹಬ್ಬದ ಜತೆಗೆ ಪರಿಸರ ಕಾಳಜಿಯೂ ಪ್ರತಿ ವರ್ಷವೂ ಮೂಡುತ್ತದೆ. ಪಿಒಪಿ ಮತ್ತು ರಾಸಾಯನಿಕ ಬಣ್ಣಗಳನ್ನು ಬಳಸಿ ಗಣೇಶ ಮೂರ್ತಿಗಳನ್ನು ತಯಾರಿಸುತ್ತಿರುವುದರಿಂದ ವಿಸರ್ಜನೆ ಮಾಡಿದಾಗ ಜಲ ಮಾಲಿನ್ಯ ಉಂಟಾಗುತ್ತದೆ ಎಂಬುವುದು ಯುವಕರ ಅಭಿಪ್ರಾಯ.

ಗಣೇಶ ಹಬ್ಬದ ಐದನೇ ದಿನವಾದ ಶನಿವಾರ ಮನೆ ಮತ್ತು ಸಾರ್ವಜನಿಕ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಯಿತು. ಐದು ದಿನಗಳ ಕಾಲ ಗಣಪತಿಗೆ ಪೂಜೆ ಸಲ್ಲಿಸಿದ ಜನರು ಮೂರ್ತಿಗಳನ್ನು ವಿಸರ್ಜಿಸಿ, ಗಣೇಶೋತ್ಸವದ ವಿಧಿವಿಧಾನಗಳನ್ನು ನೆರವೇರಿಸಿದರು.

ಇದನ್ನೂ ಓದಿ: ಗಣೇಶ ದರ್ಶನಕ್ಕೆ ಬಂದ ಅತ್ಯಂತ ದುಬಾರಿ ಶ್ವಾನ: ಸೆಲ್ಫಿಗೆ ಮುಗಿಬಿದ್ದ ಜನ

ಕೃಷ್ಣಾ ನದಿಯ ಶುದ್ಧತೆಗೆ ಧಕ್ಕೆಯಾಗದಂತೆ ಬವನಸೌದತ್ತಿಯ ಬಾಲ ಗಜಾನನ ಮಂಡಳದ ಸದಸ್ಯರು ಹೊಸ ಹೆಜ್ಜೆ ಇಟ್ಟಿದ್ದಾರೆ. ಕಳೆದ 5-6 ವರ್ಷಗಳಿಂದ ಬಾಲ ಗಜಾನನ ಮಂಡಳಿಯು ಪರಿಸರ ಸ್ನೇಹಿ ಗಣೇಶ ವಿಸರ್ಜನೆಗೆ ಪ್ರಯತ್ನಿಸುತ್ತಿದೆ. ಈ ಬಾರಿ ಬಾವನಸೌದತ್ತಿ ಗ್ರಾಮ ಪಂಚಾಯತ್​, ರೇಣುಕಾ ಗಜಾನನ ಮಂಡಳಿ ಸೇರಿದಂತೆ ಹಲವು ಸಂಘಟನೆಗಳು ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸಿವೆ. ಈ ಬಗ್ಗೆ ಯಾವುದೇ ಆಕ್ಷೇಪಣೆ ವ್ಯಕ್ತವಾಗದೆ, ಹೊಸ ಪರಿಕಲ್ಪನೆಯನ್ನು ಜಾರಿಗೆ ತರಲಾಗುತ್ತಿದೆ.

ಪರಿಸರ ಸ್ನೇಹಿ ಗಣಪತಿಯನ್ನು ಪ್ರತಿಷ್ಠಾಪಿಸುವಂತೆ ಕಳೆದ ಎರಡ್ಮೂರು ವರ್ಷಗಳಿಂದ ಗ್ರಾಮ ಪಂಚಾಯಿತಿಯವರು ಗ್ರಾಮಸ್ಥರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ. ಈ ವರ್ಷ, ಗ್ರಾಮಸ್ಥರ ಪರಿಸರ ಕಾಳಜಿಯಿಂದ ಮಣ್ಣಿನ ಗಣಪತಿಯನ್ನೇ ಪ್ರತಿಷ್ಠಾಪಿಸಲಾಗಿದೆ.

ಮನೆಯಲ್ಲಿ ಪೂಜಿಸಿದ ಗಣೇಶ ಮೂರ್ತಿಗಳನ್ನು ಗ್ರಾಮಸ್ಥರು ನದಿ ದಡಕ್ಕೆ ತಂದು ಒಂದೇ ಕಡೆ ಇರಿಸಿ ಗ್ರಾಮ ಪಂಚಾಯಿತಿಗೆ ಒಪ್ಪಿಸಿದರು. ಇದರ ನಂತರ, ಎಲ್ಲಾ ವಿಗ್ರಹಗಳನ್ನು ಜನರು ಓಡಾದ ಸ್ಥಳದಲ್ಲಿ ಹೂಳಲಾಯಿತು.
ಈ ಕಾರ್ಯದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಚಂದ್ರ ಕಾಟೆ, ಉಪಾಧ್ಯಕ್ಷ ಆಜಾದ್ ತಾಸೆವಾಲೆ, ಸದಸ್ಯರಾದ ಅನಿಲ ಹಂಜೆ, ಪ್ರಕಾಶ ಜನಾಜ್, ಕೇದಾರಿ ಡೊಂಗರೆ, ಅರುಣ ಶಿಂಧೆ, ಬಾಲ ಗಜಾನನ ಮಂಡಲ ಅಧ್ಯಕ್ಷ ಸುಮಿತ್ ಗಿರಿ, ವಿವಿಧ ಮಂಡಳಿಗಳು, ಸಂಘ ಸಂಸ್ಥೆಗಳ ಸದಸ್ಯರು, ಗ್ರಾಮಸ್ಥರು ಭಾಗವಹಿಸಿದ್ದರು. ಹೀಗಾಗಿ ಗಣೇಶ ಮೂರ್ತಿ ವಿಸರ್ಜನೆಗೆ ವಿನೂತನ ವಿಧಾನ ಅಳವಡಿಸಲಾಗಿದೆ.

ಜಿ.ಪಂ.ಅಧ್ಯಕ್ಷ ರಾಮಚಂದ್ರ ಕಾಟೆ ಮಾತನಾಡಿ, ಕಳೆದ ಐದಾರು ವರ್ಷಗಳಿಂದ ಬಾಲ ಗಜಾನನ ಮಂಡಳಿಯು ಕೃಷ್ಣಾ ನದಿಯಲ್ಲಿ ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡದೇ ಪರಿಸರ ಕಾಳಜಿ ತೋರುತ್ತಿರುವುದು ಶ್ಲಾಘನೀಯ ಎಂದರು. ಎಲ್ಲರ ಸಹಕಾರದಿಂದ ಇದು ಸಾಧ್ಯವಾಗಿದೆ ಎಂದು ಬಾಲ ಗಜಾನನ ಮಂಡಳದ ಅಧ್ಯಕ್ಷ ಸುಮಿತ್ ಗಿರಿ ಹೇಳಿದರು.

ಗ್ರಾಮದ ಸಾಮಾಜಿಕ ಕಾರ್ಯಕರ್ತ ಸಂತೋಷ ಗಿರಿ ಮಾತನಾಡಿ, ನಮ್ಮ ಪೂರ್ವಜರು ಪ್ರತಿ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸುತ್ತಿದ್ದರು. ಇದಕ್ಕೂ ಮುನ್ನ ಮನೆಯಲ್ಲಿ ಅರಿಶಿನ ಗಣಪತಿ, ಹಿಟ್ಟಿನ ಗಣಪತಿ ಹಾಗೂ ಮಣ್ಣಿನ ಗಣಪತಿ ಮೂರ್ತಿಗಳನ್ನು ತಯಾರಿಸಿ ಪೂಜಿಸಲಾಯಿತು. ನಮ್ಮ ಹಿರಿಯರು ಪೂಜೆಗೆ ಹೂವು, ಕಾಯಿ, ಎಲೆ, ಹಣ್ಣು ಇತ್ಯಾದಿ ನೈಸರ್ಗಿಕ ವಸ್ತುಗಳನ್ನು ಬಳಸುತ್ತಿದ್ದರು. ಕಾಲ ಕಳೆದಂತೆ ಪೂಜೆ ವಿಜೃಂಭಣೆಗೆ ತಿರುಗಿ ಈಗ ಎಲ್ಲವೂ ಪ್ಲಾಸ್ಟಿಕ್​ಮಯವಾಗಿದೆ. ಪರಿಸರ ಸಂರಕ್ಷಣೆ ನಮ್ಮ ಜವಾಬ್ದಾರಿ ಮತ್ತು ಕರ್ತವ್ಯ. ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಕೊಡುಗೆಯಾಗಿ ನೀಡಲು ನಾವು ಶ್ರಮಿಸಬೇಕು. ಪ್ರತಿಯೊಬ್ಬ ವ್ಯಕ್ತಿ ಮತ್ತು ಪ್ರತಿ ಮನೆಯಲ್ಲೂ ಪರಿಸರ ಸ್ನೇಹಿ ಚಟುವಟಿಕೆಗಳನ್ನು ಪ್ರಾರಂಭಿಸಬೇಕು ಎಂದು ಕರೆ ಕೊಟ್ಟರು.

ರಾಜ್ಯದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ