AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Drought Effects: ಬತ್ತಿದ ಮಲಪ್ರಭೆ, ಈ ನಾಲ್ಕು ಜಿಲ್ಲೆಗೆ ಜಲಕಂಟಕ

ಅದು ನಾಲ್ಕು ಜಿಲ್ಲೆಯ ಜೀವನಾಡಿ ನದಿ, ಕಣಕುಂಬಿಯಲ್ಲಿ ಹುಟ್ಟಿ ನಾಲ್ಕು ಜಿಲ್ಲೆಗಳಲ್ಲಿ ಹರಿದು ಕೃಷ್ಣಾ ನದಿ ಸೇರುವ ಮಲಪ್ರಭಾ ನದಿ ಬತ್ತಿ ಹೋಗಿದೆ. ಬರಕ್ಕೆ ನದಿ ಒಡಲಾಳ ಮರಭೂಮಿಯಂತೆ ಬರಡಾಗಿದ್ದು, ನಾಲ್ಕು ಜಿಲ್ಲೆಗೆ ಕೆಲವೇ ದಿನಗಳಲ್ಲಿ ಜಲ ಕಂಟಕ ಎದುರಾಗಲಿದೆ. ಇತ್ತ ನದಿಯಲ್ಲಿ ಮುಳುಗಿದ್ದ ಗಣಪತಿ ವಿಗ್ರಹಗಳು ಹೊರ ಬಂದಿದ್ದು, ಗಂಗಾಂಬಿಕಾ ಐಕ್ಯ ಮಂಟಪ ಸಂಪೂರ್ಣವಾಗಿ ಗೋಚರವಾಗುತ್ತಿದೆ. ಅಷ್ಟಕ್ಕೂ ಹೇಗಿದೆ ಬೆಳಗಾವಿಯಲ್ಲಿ ಭೀಕರ ಬರದ ಸ್ಥಿತಿ? ಮಲಪ್ರಭಾ ನದಿ ಬತ್ತಿದ್ದು, ಅದ್ಯಾವ ಜಿಲ್ಲೆಗಳಿಗೆ ಜಲ ಕಂಟಕ ಎದುರಾಗಿದೆ ಅಂತೀರಾ? ಈ ಸ್ಟೋರಿ ಓದಿ.

Drought Effects: ಬತ್ತಿದ ಮಲಪ್ರಭೆ, ಈ ನಾಲ್ಕು ಜಿಲ್ಲೆಗೆ ಜಲಕಂಟಕ
ಬತ್ತಿದ ಮಲಪ್ರಭಾ ನದಿ
Sahadev Mane
| Edited By: |

Updated on: May 15, 2024 | 4:22 PM

Share

ಬೆಳಗಾವಿ, ಮೇ.15: ಬೆಳಗಾವಿ(Belagavi) ಜಿಲ್ಲೆಯ ಕಣಕುಂಬಿ ಗ್ರಾಮದಲ್ಲಿ ಹುಟ್ಟುವ ಮಲಪ್ರಭಾ ನದಿ(Malaprabha River). ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಗದಗ, ಬಾಗಲಕೋಟೆ ಜಿಲ್ಲೆಯ ಜೀವನದಿಯಾಗಿದೆ. ಈ ಭಾಗದ ರೈತರಿಗೆ ಮತ್ತು ಜನರ ಬದುಕು ಹಸನಾಗಿಸಿದ ನದಿ ಇದು. ಆದ್ರೆ ಈ ಮಲಪ್ರಭಾ ನದಿ ಇದೀಗ ಸಂಪೂರ್ಣವಾಗಿ ಬತ್ತಿ ಹೋಗಿದ್ದು, ನದಿ ಅಕ್ಕಪಕ್ಕದ ಗ್ರಾಮಗಳಿಗೆ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಅದರಲ್ಲೂ ಎಂ.ಕೆ ಹುಬ್ಬಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಬೋರ್​ವೆಲ್​ಗಳು ಬತ್ತಿ, ಕುಡಿಯಲು ನೀರು ಸಿಗುತ್ತಿಲ್ಲ. ಬೆಳೆಯೂ ಕೂಡ ಒಣಗಿ ಹಾಳಾಗುತ್ತಿವೆ.

ಜಲಚರಗಳಿಗೂ ಕಂಟಕ

ಇನ್ನು ನದಿಯ ಮಧ್ಯದಲ್ಲಿ ನಿರ್ಮಿಸಿರುವ ಅಕ್ಕ ಗಂಗಾಂಬಿಕಾ ಐಕ್ಯ ಮಂಟಪ ಕೂಡ ನದಿ ಬತ್ತಿದ್ದರಿಂದ ಸಂಪೂರ್ಣವಾಗಿ ಗೋಚರವಾಗುತ್ತಿದೆ. ದೇವಸ್ಥಾನದ ಕೆಳ ಹಂತದ ಕಾಲಮ್​ಗಳು ಕೂಡ ಕಾಣಿಸುವಷ್ಟು ನೀರು ಆವಿಯಾಗಿ ಹೋಗಿದೆ. ಕೆಲವು ಕಡೆ ತಗ್ಗು ಪ್ರದೇಶದಲ್ಲಿ ಅಲ್ಪ ಪ್ರಮಾಣದಲ್ಲಿ ನೀರು ಉಳಿದಿದ್ದು, ಅದರಲ್ಲಿ ಮೀನುಗಳು ಜೀವ ಉಳಿಸಿಕೊಂಡಿವೆ. ಆದರೆ ಹೀಗೆ ಮುಂದುವರೆದರೆ ಕೆಲವೇ ದಿನಗಳಲ್ಲಿ ಆ ನೀರು ಕೂಡ ಬತ್ತಿ, ಜಲಚರಗಳು ಸಾಯುವ ಸ್ಥಿತಿ ಇದೆ. ಇನ್ನೊಂದು ಕಡೆ ವಿಸರ್ಜನೆ ಮಾಡಿದ್ದ ಗಣಪತಿ ಮೂರ್ತಿಗಳು ಕೂಡ ನದಿಯಲ್ಲಿ ಕಾಣಿಸುತ್ತಿದೆ.

ಇದನ್ನೂ ಓದಿ:ಉಡುಪಿಯಲ್ಲಿ ಮತ್ತೆ ಕುಡಿಯುವ ನೀರಿನ ಸಮಸ್ಯೆ; ನಗರಸಭೆಯಿಂದ ಮಹತ್ವದ ನಿರ್ಧಾರ

ಈ ನಾಲ್ಕು ಜಿಲ್ಲೆಗಳಲ್ಲಿ ನೀರಿಗಾಗಿ ಹಾಹಾಕಾರ

ಇನ್ನು ಮಲಪ್ರಭಾ ನದಿಗೆ ಅಡ್ಡಲಾಗಿ ಕಟ್ಟಿರುವ ನವಿಲು ತೀರ್ಥ ಜಲಾಶಯ, 37 ಟಿಎಂಸಿ ಸಾಮರ್ಥ್ಯದಾಗಿದೆ. ಆದರೆ ಇದೀಗ ಕೇವಲ ನಾಲ್ಕೂವರೆ ಟಿಎಂಸಿ ನೀರು ಮಾತ್ರ ಉಳಿದಿದ್ದು, ಇದರಿಂದ ಬೆಳಗಾವಿ ಜಿಲ್ಲೆಯ ಕೆಲ ಭಾಗ, ಹುಬ್ಬಳ್ಳಿ-ಧಾರವಾಡ, ಬಾಗಲಕೋಟೆ, ಗದಗ ಜಿಲ್ಲೆಗೆ ಕುಡಿಯುವ ನೀರಿಗೆ ಕಂಟಕ ಕೂಡ ಎದುರಾಗುವ ಭೀತಿ ಶುರುವಾಗಿದೆ. ಇದೇ ಕಾರಣಕ್ಕೆ ಆದಷ್ಟು ಬೇಗ ಮಳೆ ಬರಲಿ ಎಂದು ಎಲ್ಲರೂ ದೇವರ ಬಳಿ ಪ್ರಾರ್ಥಿಸಿಕೊಳ್ಳುವ ಸ್ಥಿತಿ ಇದೆ.

ದಿನೇ ದಿನೇ ಬಿಸಿಲಿನ ಪ್ರಕರತೆ ಹೆಚ್ಚಾಗುತ್ತಿದ್ದು, ಇದರಿಂದ ಇರುವ ನೀರಿನ ಮೂಲಗಳು ಕೂಡ ಬತ್ತಿ ಹೋಗಿವೆ. ಕೆರೆ, ನದಿಗಳು ಬತ್ತಿ ಹೋಗಿದ್ದು, ಇದರಿಂದ ಬೋರ್​ವೆಲ್​ನಲ್ಲೂ ಅಂತರ್ಜಲ ಕುಸಿದು ನೀರು ಬರುತ್ತಿಲ್ಲ. ಇದೇ ರೀತಿ ಸ್ಥಿತಿ ಮುಂದುವರೆದರೆ, ಆದಷ್ಟು ಬೇಗ ಬೆಳಗಾವಿ ಸೇರಿದಂತೆ ಸಾಕಷ್ಟು ಜಿಲ್ಲೆಗಳಲ್ಲಿ ಜಲ ಗಂಡಾಂತರ ಎದುರಾಗಲಿದ್ದು, ಆದಷ್ಟು ಬೇಗ ವರುಣ ಕೃಪೆ ತೋರಲಿ ಎಂಬುದೇ ಎಲ್ಲರ ಕೋರಿಕೆಯಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ