
ಬೆಳಗಾವಿಮ, ಆಗಸ್ಟ್ 07: ಸಾವಿರಾರು ಕೋಟಿ ರೂ ವಂಚನೆ ಆರೋಪ ಎದುರಿಸುತ್ತಿರುವ ಶಿವಂ ಅಸೋಸಿಯೇಟ್ಸ್ ಕಂಪನಿಯ ಮಾಲೀಕ ಶಿವಾನಂದ ನೀಲಣ್ಣನವರ್ಗೆ (Shivanand Neelannavar) ಜಾರಿ ನಿರ್ದೇಶನಾಲಯ (ED) ಬಿಗ್ ಶಾಕ್ ನೀಡಿದೆ. 40,000ಕ್ಕೂ ಹೆಚ್ಚು ಹೂಡಿಕೆದಾರರಿಗೆ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಬೆಳಗಾವಿ ಜಿಲ್ಲೆಯ ಮೂರು ಪ್ರಮುಖ ಸ್ಥಳಗಳ ಮೇಲೆ ದಿಢೀರ್ ದಾಳಿ ಮಾಡಿದೆ.
ಮಂಗಳೂರು ಹಾಗೂ ಗೋವಾದಿಂದ ಆಗಮಿಸಿರುವ ಇಡಿ ಅಧಿಕಾರಿಗಳ ತಂಡ ಜಂಟಿಯಾಗಿ ಕಾರ್ಯಚರಣೆ ನಡೆಸಿದೆ. ಶಿವಾನಂದ ನೀಲಣ್ಣನವರ್ಗೆ ಸೇರಿದ ಬೆಳಗಾವಿಯ ಶಿವಬಸವನಗರದಲ್ಲಿರುವ ಎಂ.ಎಸ್. ಟವರ್ ಅಪಾರ್ಟ್‌ಮೆಂಟ್, ಬಡಕುಂದ್ರಿ ಗ್ರಾಮದಲ್ಲಿರುವ ನಿವಾಸ ಹಾಗೂ ಚಿಕ್ಕೋಡಿ ಪಟ್ಟಣದಲ್ಲಿರುವ ಅವರ ಬಿಸಿನೆಸ್ ಪಾರ್ಟ್‌ನರ್ ಸುಭಾಷ್ ನಂದರಗಿ ಅವರ ಮನೆ ಮೇಲೆ ದಾಳಿ ಮಾಡಲಾಗಿದೆ. ಅಷ್ಟೇ ಅಲ್ಲದೆ ಇಡಿ ಅಧಿಕಾರಿಗಳು ಶಿವಾನಂದ ನೀಲಣ್ಣನವರ್ ಹಾಗೂ ಪತ್ನಿ ಸಂಗೀತಾರನ್ನು ವಿಚಾರಣೆ ಮಾಡಿದ್ದಾರೆ.
ಬೆಳಗಾವಿಯಲ್ಲಿ ಶಿವಂ ಅಸೋಸಿಯೇಟ್ ಹೆಸರಿನಲ್ಲಿ ಸಾವಿರಾರು ಕೋಟಿ ರೂ ವಂಚನೆ ಆರೋಪ ಕೇಳಿಬಂದಿತ್ತು. ಬಳಿಕ ಮೇ 15ರಂದು ಶಿವಂ ಅಸೋಸಿಯೇಟ್ ಕಂಪನಿಯ ಮೇಲೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ದಾಳಿ ನಡೆಸಿತ್ತು. ಅಕ್ರಮವಾಗಿ ಠೇವಣಿ ಸಂಗ್ರಹ ಹಾಗೂ ಆಮಿಷವೊಡ್ಡಿ ಹಣ ಸಂಗ್ರಹಿಸುತ್ತಿರುವ ಆರೋಪದಡಿ ಪ್ರಕರಣ ದಾಖಲಿಸಿ ಮಾಲೀಕ ನೀಲಣ್ಣನವರ್ ನನ್ನು ಬಂಧಿಸಲಾಗಿತ್ತು. ತನಿಖೆ ವೇಳೆ ಸುಮಾರು 2,400 ಕೋಟಿ ರೂ ಹಣವನ್ನು 40,700ಕ್ಕೂ ಹೆಚ್ಚು ಜನರಿಂದ ಸಂಗ್ರಹಿಸಿರುವುದು ಬೆಳಕಿಗೆ ಬಂದಿತ್ತು. ಅದರಲ್ಲಿ 540 ಕೋಟಿ ರೂ ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲಾಗಿದ್ದು, ಸುಮಾರು 170 ಕೋಟಿ ರೂ ನಷ್ಟವಾಗಿದೆ ಎಂದು ಸಿಐಡಿ ಮಾಹಿತಿ ನೀಡಿತ್ತು.
ಇದನ್ನೂ ಓದಿ: ಬೆಳಗಾವಿಯ ಶಿವಾನಂದ ನೀಲಣ್ಣವರನ ಸಾವಿರಾರು ಕೋಟಿ ರೂ. ರಹಸ್ಯ ಬಯಲು: ಎಳೆ ಎಳೆಯಾಗಿ ಬಿಚ್ಚಿಟ್ಟ ಸಿಐಡಿ
ಬಳಿಕ ಪ್ರಕರಣದ ತನಿಖೆಯನ್ನು ಸಿಐಡಿಗೆ ಹಸ್ತಾಂತರಿಸಲಾಗಿತ್ತು. ಪ್ರಕರಣದಲ್ಲಿ ಬಂಧಿತರಾಗಿದ್ದ ಶಿವಾನಂದ ನೀಲಣ್ಣನವರ್ ಪ್ರಸ್ತುತ ಜಾಮೀನಿನ ಮೇಲೆ ಹೊರಬಂದಿದ್ದು, ಹಣಕಾಸು ಅಕ್ರಮ ವ್ಯವಹಾರದ ಜಾಡು ಹಿಡಿದು ಇದೀಗ ಇಡಿ ಅಧಿಕಾರಿಗಳು ಕಣಕ್ಕಿಳಿದಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.