Ganesh Chaturthi 2022: ರಾಜ್ಯದ ಮೊದಲ ಸಾರ್ವಜನಿಕ ಗಣೇಶೋತ್ಸವ ನಡೆದಿದ್ದು ಎಲ್ಲಿ ಮತ್ತು ಯಾವಾಗ ಗೊತ್ತಾ ?
ಕರ್ನಾಟಕದಲ್ಲಿ ಸಾರ್ವಜನಿಕ ಗಣೇಶೋತ್ಸವ ಮೊಟ್ಟಮೊದಲಿಗೆ ಪ್ರಾರಂಭವಾಗಿದ್ದು ಬೆಳಗಾವಿಯಲ್ಲಿ.
ರಾಜ್ಯದಂತ ಗಣೇಶೋತ್ಸವವನ್ನು ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ. ಕರ್ನಾಟಕದಲ್ಲಿ ಸಾರ್ವಜನಿಕ ಗಣೇಶೋತ್ಸವ ಮೊಟ್ಟಮೊದಲಿಗೆ ಪ್ರಾರಂಭವಾಗಿದ್ದು ಬೆಳಗಾವಿಯಲ್ಲಿ. ಸ್ವಾಂತಂತ್ರ್ಯ ಹೋರಾಟದ ಸಮಯಲ್ಲಿ ಜನರನ್ನು ಒಗ್ಗೂಡಿಸಿ ಸ್ವಾತಂತ್ರ್ಯ ಹೋರಾಟದತ್ತ ಪ್ರೇರೇಪಿಸಲು ಬಾಲಗಂಗಾಧರ ತಿಲಕ್ರು ಬೆಳಗಾವಿಯಲ್ಲಿ ಸರ್ವಜನಿಕ ಗಣೇಶೋತ್ಸವವನ್ನು ಪ್ರಾರಂಭಿಸಿದರು.
ತಿಲಕರು ಪುಣೆಯಲ್ಲಿ ಸಾರ್ವಜನಿಕ ಗಣೇಶೋತ್ಸವವನ್ನು ಪ್ರಾರಂಭಿಸಿ ನಂತರ ಬೆಳಗಾವಿಯಲ್ಲಿ ಪ್ರಾರಂಭಿಸಲು 1906 ರಲ್ಲಿ ಬೆಳಗಾವಿಯ ಝೆಂಡಾ ಚೌಕ್ ಗಣೇಶ ಉತ್ಸವ ಮಂಡಳಿಯನ್ನು ರಚಿಸಿದರು. ಬೆಳಗಾವಿ ಭಾಗದಲ್ಲಿ ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸಿದ್ದ ಸ್ವಾತಂತ್ರ್ಯ ಹೋರಾಟಗಾರರಾದ ಗೋವಿಂದರಾವ್ ಯಾಳಗಿ ಮತ್ತು ಗಂಗಾಧರ ರಾವ್ ದೇಶಪಾಂಡೆ ಅವರ ನೇತೃತ್ವದಲ್ಲಿ ಮಂಡಳಿಯನ್ನು ಕಟ್ಟಿದರು.
ನಂತರ ಈ ಮಂಡಳಿಯು ರಾಲಿವೇ ನಿಲ್ದಾಣದಿಂದ ಝೆಂಡಾ ಚೌಕ್‌ವರೆಗೆ ಗಣೇಶ ಮೆರವಣಿಗೆ ನಡೆಯಿತು. ಗೋವಿಂದರಾವ್ ಯಾಳಗಿ ಮತ್ತು ಗಂಗಾಧರ ರಾವ್ ದೇಶಪಾಂಡೆ ಸಹಾಯದಿಂದ ಬೆಳಗಾವಿಯಲ್ಲಿ ಸಾರ್ವಜನಿಕ ಗಣೇಶೋತ್ಸವ ಪ್ರಾರಂಭವಾಯಿತು. ಮೊದಲ ಸಾರ್ವಜನಿಕ ಗಣೇಶ ಮೂರ್ತಿಯನ್ನು ಗೋವಿಂದರಾವ್ ಯಾಳಗಿ ಅವರ ನಿವಾಸದಲ್ಲಿ ಪ್ರತಿಷ್ಠಾಪಿಸಲಾಯಿತು.
ನಂತರ ಜನಸಮೂಹಕ್ಕೆ ಅನುಕೂಲವಾಗುವಂತೆ ಗಣೇಶ ಮೂರ್ತಿಯನ್ನು ಝೆಂಡಾ ಚೌಕ್‌ನಲ್ಲಿ ಪ್ರತಿಷ್ಠಾಪಿಸಲಾಯಿತು. ಮತ್ತು ಅಂದಿನಿಂದ ಝೆಂಡಾ ಚೌಕ್ ಗಣೇಶ ಉತ್ಸವ ಮಂಡಳಿಯು ಈ ಪರಂಪರೆಯನ್ನು ಮುಂದುವರೆಸಿದೆ. ತಿಲಕರು 1905 ರಲ್ಲಿ ಬೆಳಗಾವಿಯಲ್ಲಿದ್ದಾಗ ಸ್ವತಃ ಅವರೇ ಬಿದಿರಿನ ಪಂಡಲ್ನ್ನು ಹಾಕಿದರು. ಅಂದಿನಿಂದ ಝೆಂಡಾ ಚೌಕ್ ಗಣೇಶ ಉತ್ಸವ ಮಂಡಳಿಯು ಪರಂಪರೆಯನ್ನು ಮುನ್ನಡೆಸುತ್ತಿದೆ.
ನಂತರ, ಇನ್ನೂ ಐದು ಮಂಡಲಗಳನ್ನು ರಚಿಸಲಾಯಿತು. ಸ್ವಾತಂತ್ರ್ಯದ ನಂತರವೂ ಗಣೇಶ ಚತುರ್ಥಿಯ ಸಾಮೂಹಿಕ ಆಚರಣೆಯು ಬಹಳ ಪ್ರೀತಿಯ ಸಂಪ್ರದಾಯವಾಗಿ ಉಳಿಯಿತು. ಬೆಳಗಾವಿಯಲ್ಲಿ ಒಂದು ಶತಮಾನದಷ್ಟು ಹಳೆಯದಾದ 6 ಮಂಡಲಗಳಿವೆ ಮತ್ತು ಝೆಂಡಾ ಚೌಕ್ ಗಣೇಶ ಉತ್ಸವ ಮಂಡಳಿಯು ಅತ್ಯಂತ ಹಳೆಯದು.
ಕಳೆದ 116 ವರ್ಷಗಳಲ್ಲಿ ನಗರವೊಂದರಲ್ಲೇ 300ಕ್ಕೂ ಹೆಚ್ಚು ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದ್ದು, ಈಗ ಇಡೀ ಜಿಲ್ಲೆಯಲ್ಲಿ 3,200 ಕ್ಕೂ ಹೆಚ್ಚು ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತಿದೆ. 10 ದಿನಗಳ ಗಣೇಶ ಹಬ್ಬವನ್ನು ಒಂದೇ ವೇದಿಕೆಯಲ್ಲಿ ವಿವಿಧ ಜಾತಿ, ಮತ, ಭಾಷೆ, ಧರ್ಮದ ಜನರು ಸೇರಿ ಸಂಭ್ರಮದಿಂದ ಆಚರಿಸುತ್ತಿದ್ದಾರೆ.
ಝೆಂಡಾ ಚೌಕ್ ಗಣೇಶ್ ಉತ್ಸವ ಮಂಡಳಿಯು ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತದೆ ಮತ್ತು ಈ ವರ್ಷವೂ ದೇಹದಾರ್ಢ್ಯ ಕಾರ್ಯಕ್ರಮವನ್ನು ಆಯೋಜಿಸಿದೆ. ವಿಗ್ರಹವನ್ನು ಪ್ರತಿಷ್ಠಾಪಿಸಲು ಮತ್ತು ಅದನ್ನು ಅಲಂಕರಿಸಲು ಮತ್ತು ಆಚರಣೆಗಳಲ್ಲಿ ಭಾಗವಹಿಸಲು ಎಲ್ಲಾ ಧರ್ಮದ ಜನರು ಒಟ್ಟಾಗಿ ಸೇರುತ್ತಾರೆ.