ಬೆಳಗಾವಿ : ಕಾಂಗ್ರೆಸ್ (Congress) ಯುವ ನಾಯಕಿ ನವ್ಯಶ್ರೀಗೆ (Navyasree) ಮೆಡಿಕಲ್ ಟೆಸ್ಟ್ ಮಾಡಿಸಲು ಬೆಳಗಾವಿಯ (Belagavi) ಬಿಮ್ಸ್ (Bims) ಆಸ್ಪತ್ರೆಗೆ ಎಪಿಎಂಸಿ ಠಾಣೆ ಪೊಲೀಸರು ಕರೆದುಕೊಂಡು ಬಂದಿದ್ದಾರೆ. ನವ್ಯಶ್ರೀ ತೋಟಗಾರಿಕೆ ಇಲಾಖೆ ಅಧಿಕಾರಿ ರಾಜಕುಮಾರ ಟಾಕಳೆ ವಿರುದ್ಧ ಅತ್ಯಾಚಾರ, ಕಿಡ್ನಾಪ್ ಪ್ರಕರಣ ದಾಖಲಿಸಿದ್ದರು. ಅತ್ಯಾಚಾರ ಪ್ರಕರಣದ ತನಿಖೆಯನ್ನು ಪೊಲೀಸರು ಆರಂಭಿಸಿದ್ದು, ಈ ಹಿನ್ನೆಲೆ ಪೊಲೀಸರು ಮೆಡಿಕಲ್ ಟೆಸ್ಟ್‌ಗೆ ಕರೆದುಕೊಂಡು ಬಂದಿದ್ದಾರೆ. ಪೊಲೀಸರು ಒಂದೂವರೆ ಗಂಟೆಗಳ ಕಾಲ ವಿಚಾರಣೆ ನಡೆಸಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ.
ನವ್ಯಶ್ರೀ ಮಾಧ್ಯಮಗಳೊಂದಿಗೆ ಮಾತನಾಡಿ ರಾಜಕುಮಾರ ಟಾಕಳೆ ಸಂಬಂಧ ಪಟ್ಟ ಹಾಗೆ ದೂರು ದಾಖಲು ಮಾಡಿದ್ದೇನೆ. ಅದಕ್ಕೆ ಮೆಡಿಕಲ್ ಟೆಸ್ಟ್ ಆಗಿರಬಹುದು, ಸ್ಥಳ ಮಹಜರು ಎಲ್ಲವನ್ನೂ ಮಾಡಬೇಕಾಗಿದೆ. ಅದಕ್ಕಿಂತ ಪೂರ್ವದಲ್ಲಿ ಪೊಲೀಸ್ ತನಿಖೆಗೆ ಸಹಕಾರ ನೀಡಬೇಕಿದೆ ಎಂದರು.
ಪ್ರಕರಣದಲ್ಲಿ ಚನ್ನಪಟ್ಟಣದ ಕಾಂಗ್ರೆಸ್ ಮಹಾ ನಾಯಕರಿದ್ದಾರೆ ಎಂದು ಹೇಳಿರುವ ವಿಚಾರದ ಕುರಿತು ಮುಂದಿನ ದಿನಗಳಲ್ಲಿ ಖುದ್ದಾಗಿ ಬಂದು ಮಾತನಾಡುತ್ತೇನೆ. ನಾವೆಲ್ಲರೂ ಒಟ್ಟಾಗಿ ಸೇರಿ ಸತ್ಯವನ್ನ ಬಯಲಿಗೆಳೆದು ಶಿಕ್ಷೆ ಕೊಡಿಸಬೇಕಾಗಿದೆ. ಯಾರು ಶಾಮೀಲಾಗಿದ್ದಾರೆ, ಅವರ ಮುಖವಾಡ ತನಿಖೆಯಿಂದ ಬಯಲಾಗಲಿದೆ. ಆ ನಂತರ ಮಾಧ್ಯಮಗಳ ಮುಂದೆ ಬಂದು ಎಲ್ಲ ವಿಚಾರ ಹೇಳುತ್ತೇನೆ ಎಂದು ಹೇಳಿದ್ದಾರೆ.
ಖಾಸಗಿ ವಿಡಿಯೋ ತೋರಿಸಿ ಕಿರುಕುಳ ಪ್ರಕರಣ ಸಂಬಂಧ ಕಾಂಗ್ರೆಸ್ ನವ್ಯಶ್ರೀ ವಿರುದ್ಧ ಜಿಲ್ಲೆಯ ಎಪಿಎಂಸಿ ಠಾಣೆಯಲ್ಲಿ ದೂರು ನೀಡಲಾಗಿತ್ತು. ಸದ್ಯ ಪೊಲೀಸ್ ವಿಚಾರಣೆಗೆ ಕಾಂಗ್ರೆಸ್ ಯುವ ನಾಯಕಿ ನವ್ಯಶ್ರೀ ರಾವ್ ಹಾಜರಾಗಿದ್ದರು. ಅಧಿಕಾರಿ ರಾಜಕುಮಾರ ಟಾಕಳೆ ನೀಡಿದ ದೂರಿನನ್ವಯ ಮೊದಲು ವಿಚಾರಣೆ ನಡೆದಿದೆ. ಪಿಎಸ್‌ಐ ಮಂಜುನಾಥ ಭಜಂತ್ರಿಯಿಂದ ನವ್ಯಶ್ರೀ ವಿಚಾರಣೆ ಮಾಡಿದ್ದಾರೆ.
ತೋಟಗಾರಿಕೆ ಇಲಾಖೆ ಅಧಿಕಾರಿ ರಾಜಕುಮಾರ ಹನಿ ಟ್ರ್ಯಾಪ್, ಜೀವಬೆದರಿಕೆ ಕೇಸ್ ದಾಖಲಿಸಿದ್ದರು. ನವ್ಯಶ್ರೀ ನೀಡಿದ ಅತ್ಯಾಚಾರ ಪ್ರಕರಣದ ವಿಚಾರಣೆ ಕೂಡ ಇಂದು ನಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಮೆಡಿಕಲ್ ನಂತರ ನವ್ಯಶ್ರೀ ನೀಡಿದ ಅತ್ಯಾಚಾರ ಪ್ರಕರಣದ ತನಿಖೆಯನ್ನು ಎಪಿಎಂಸಿ ಪೊಲೀಸರು ಕೈಗೆತ್ತಿಕೊಳ್ಳಲಿದ್ದಾರೆ.
ಪ್ರಕರಣ ಏನು?
ಕಾಂಗ್ರೆಸ್ ಯುವ ನಾಯಕಿ ಚನ್ನಪಟ್ಟಣ ಮೂಲದ ನವ್ಯಶ್ರೀ ರಾಮಚಂದ್ರರಾವ್ ವಿರುದ್ದ ಬೆಳಗಾವಿಯ ಎಪಿಎಂಸಿ ಠಾಣೆಯಲ್ಲಿ ಹನಿ ಟ್ರ್ಯಾಪ್, ಜೀವಬೆದರಿಕೆ ಆರೋಪದಡಿ ಎಫ್ಐಆರ್ ದಾಖಲಾಗಿದೆ. ತೋಟಗಾರಿಕೆ ಇಲಾಖೆ ಅಧಿಕಾರಿ ರಾಜಕುಮಾರ ಟಾಕಳೆಯಿಂದ ದೂರು ನೀಡಿದ್ದಾರೆ. ನವ್ಯಶ್ರೀ ಮತ್ತು ಆಕೆಯ ಆಪ್ತ ತಿಲಕ್ ಇಬ್ಬರ ಮೇಲೆ ಸೆಕ್ಷನ್ 384, 448, 504, 506, 34ಅಡಿಯಲ್ಲಿ ಕೇಸ್ ದಾಖಲು ಮಾಡಲಾಗಿದೆ. 384 – ಸುಲಿಗೆ, 448 – ಮನೆಗೆ ಅತಿಕ್ರಮ ಪ್ರವೇಶ, 504 – ಶಾಂತಿಭಂಗಗೊಳಿಸುವ ಉದ್ದೇಶದ ನಿಂದನೆ, 506 – ಬೆದರಿಕೆ, 34 – ಕ್ರಿಮಿನಲ್ ಉದ್ದೇಶ, ಸಕ್ಷೆನ್ ಅಡಿಯಲ್ಲಿ ಕೇಸ್ ದಾಖಲಾಗಿದೆ. ತನ್ನಗೆ ತನ್ನ ಕುಟುಂಬಕ್ಕೆ ನವ್ಯಶ್ರೀಯಿಂದ ರಕ್ಷಣೆ ನೀಡುವಂತೆ ಪೊಲೀಸರಲ್ಲಿ ಮನವಿ ಮಾಡಿದ್ದು, ಬೆಳಗಾವಿಯ ಎಪಿಎಂಸಿ ಠಾಣೆಯಲ್ಲಿ ದೂರು ದಾಖಲಾಗಿದೆ.
ರಾಜಕುಮಾರ್ ಟಾಕಳೆ ನನ್ನ ಗಂಡ: ನವ್ಯಶ್ರೀ
ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಖಾಸಗಿ ವಿಡಿಯೋ ಹಾಕಿದ್ದಾರೆ. ಈ ಬಗ್ಗೆ ಬೆಳಗಾವಿ ಪೊಲೀಸ್ ಆಯುಕ್ತರಿಗೆ ದೂರು ಕೊಡುತ್ತೇನೆ ಎಂದು ಬೆಳಗಾವಿಯಲ್ಲಿ ಯುವ ಕಾಂಗ್ರೆಸ್ ನಾಯಕಿ ನವ್ಯಶ್ರೀ ಹೇಳಿಕೆ ನೀಡಿದ್ದರು. ಕಳೆದ 15 ದಿನಗಳಿಂದ ನಾನು ಭಾರತದಲ್ಲಿ ಇರಲಿಲ್ಲ. ರಾಜಕುಮಾರ್ ಟಾಕಳೆ ನನ್ನ ಗಂಡ. ರಾಜಕುಮಾರ್ ಟಾಕಳೆರನ್ನ ನಾನು ಮದುವೆಯಾಗಿದ್ದೇನೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಎಲ್ಲಾ ದಾಖಲೆಗಳನ್ನ ಕೊಡುತ್ತೇನೆ. ಇಡೀ ರಾಜ್ಯದಲ್ಲಿ ನನ್ನ ಬಗ್ಗೆ ಯಾವುದೇ ದೂರು ಇಲ್ಲ. ರಾಜಕಾರಣದಲ್ಲಿ ಮುಂದೆ ಬರ್ತಿನಿ ಎಂದು ಈ ರೀತಿ ಮಾಡಿದ್ದಾರೆ ಎಂದು ನಗರದಲ್ಲಿ ಯುವ ಕಾಂಗ್ರೆಸ್ ನಾಯಕಿ ನವ್ಯಶ್ರೀ ಹೇಳಿದರು.
Published On - 2:42 pm, Mon, 25 July 22