AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಾ ಮಳೆಗೆ ಬೆಳಗಾವಿಯಲ್ಲಿ ಸಾಲು ಅವಾಂತರ: ಪಂಚಗಂಗಾ, ದೂಧಗಂಗಾ, ಕೃಷ್ಣಾ ನದಿ ಪ್ರವಾಹದಿಂದ ಕಂಗೆಟ್ಟ ಜನ

ಮಹಾರಾಷ್ಟ್ರದ ಪಶ್ಚಿಮ ಘಟ್ಟ ಭಾಗದಲ್ಲಿ ಮಳೆ ಅಬ್ಬರ ಮುಂದುವರೆದಿದ್ದು ಇದರ ಪರಿಣಾಮ ಗಡಿ ಜಿಲ್ಲೆ ಬೆಳಗಾವಿ ಮೇಲೆ ಆಗುತ್ತಿದೆ. ಕೃಷ್ಣಾ ಮತ್ತು ದೂಧಗಂಗಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ನದಿ ಪಾತ್ರದಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಇನ್ನೊಂದು ಕಡೆ, ನಿರಂತರ ಗಾಳಿ ಮಳೆಗೆ ಶಾಲೆ ಮೇಲೆ ಮರವೊಂದು ಬಿದ್ದಿದ್ದು ದೊಡ್ಡ ಅನಾಹುತ ತಪ್ಪಿದೆ.

ಮಹಾ ಮಳೆಗೆ ಬೆಳಗಾವಿಯಲ್ಲಿ ಸಾಲು ಅವಾಂತರ: ಪಂಚಗಂಗಾ, ದೂಧಗಂಗಾ, ಕೃಷ್ಣಾ ನದಿ ಪ್ರವಾಹದಿಂದ ಕಂಗೆಟ್ಟ ಜನ
ಬಾಗಲಕೋಟೆ ಮಹಾಲಿಂಗಪುರ, ಉಗಾರ, ಕುಡಚಿ ಮಹಾರಾಷ್ಟ್ರದ ಮಿರಜ್ ಸಂಪರ್ಕಿಸುವ ರಾಜ್ಯ ಹೆದ್ದಾರಿ ಸೇತುವೆ ಮುಳುಗಡೆ
Sahadev Mane
| Updated By: Ganapathi Sharma|

Updated on: Jul 30, 2025 | 9:08 AM

Share

ಬೆಳಗಾವಿ, ಜುಲೈ 30: ಉಕ್ಕಿ ಹರಿದ ಪಂಚಗಂಗಾ ನದಿ, ಎದೆ ಮಟ್ಟದ ನೀರಿನಲ್ಲೇ ನಡೆದುಕೊಂಡು ದೇವರಿಗೆ ಪ್ರದಕ್ಷಿಣೆ ಹಾಕುತ್ತಿರುವ ಭಕ್ತರು, ಮುಳುಗುವ ಹಂತಕ್ಕೆ ಬಂದ ದತ್ತ ಮಂದಿರ. ಊರ ಬಾಗಲಿಗೆ ಬಂದ ಕೃಷ್ಣೆ, ಏಕಾಏಕಿ ನೀರಿನ ಏರಿಕೆಯಿಂದ ಮುಳುಗಿದ ರಾಜ್ಯ ಹೆದ್ದಾರಿ ಸೇತುವೆ. ಪ್ರಯಾಣಿಕರ ಪರದಾಟ, ಶಾಲೆ ಮೇಲೆ ಮುರಿದು ಬಿದ್ದ ಮರ, ತಪ್ಪಿದ ಅನಾಹುತ. ಇಂಥ ಸಾಲು ಸಾಲು ಸಮಸ್ಯೆಗಳಿಗೆ ಬೆಳಗಾವಿ (Belagavi) ಜಿಲ್ಲೆ ಸಾಕ್ಷಿಯಾಗಿದೆ. ಕಳೆದ ಒಂದು ವಾರದಿಂದ ನಿರಂತರ ಸುರಿಯುತ್ತಿರುವ ಮಳೆಗೆ ಬೆಳಗಾವಿ ಜಿಲ್ಲೆಯ ನದಿ ಪಾತ್ರದ ಜನರು ಪ್ರವಾಹ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಅದರಲ್ಲೂ ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯಲ್ಲಿ ಹೆಚ್ಚಿನ ಆತಂಕ ಶುರು ಆಗಿದ್ದು, ಇದರಿಂದ ಜನ ಆತಂಕದಲ್ಲೇ ಜೀವನ ನಡೆಸುತ್ತಿದ್ದಾರೆ.

ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಳೆ ಅಬ್ಬರ ಜೋರಾಗಿದ್ದು ಇದರಿಂದ ಅಪಾರ ಪ್ರಮಾಣದಲ್ಲಿ ಮಹಾರಾಷ್ಟ್ರದಲ್ಲಿ ಹರಿಯುವ ಪಂಚಗಂಗಾ ಹಾಗೂ ರಾಜ್ಯದಲ್ಲಿ ಹರಿಯುವ ದೂಧಗಂಗಾ ಹಾಗೂ ಕೃಷ್ಣಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಹೀಗಾಗಿ ಪಂಚಗಂಗಾ ಮತ್ತು ಕೃಷ್ಣಾ ನದಿ ಸಂಗಮವಾಗುವ ಕೊಲ್ಲಾಪುರ ಜಿಲ್ಲೆಯ ನರಸಿಂಹವಾಡಿ ದತ್ತ ಮಂದಿರಕ್ಕೆ ಜಲದಿಗ್ಬಂಧನ ಎದುರಾಗಿದೆ. ಈಗಾಗಲೇ ಭಗಶಃ ದೇವಸ್ಥಾನ ಮುಳುಗಿದ್ದು ಎದೆ ವರೆಗಿನ ನೀರಲ್ಲೇ ದೇವಸ್ಥಾನ ಪ್ರದಕ್ಷಿಣೆ ಹಾಕಿ ಭಕ್ತರು ದರ್ಶನ ಮಾಡುತ್ತಿದ್ದಾರೆ.

Belagavi Datta Mandir

ಇದನ್ನೂ ಓದಿ
Image
ಇಂದಿನಿಂದ ಕರ್ನಾಟಕದಾದ್ಯಂತ ಮುಂಗಾರು ದುರ್ಬಲ, ಅಲ್ಲಲ್ಲಿ ಸಾಧಾರಣ ಮಳೆ
Image
ಮುಂದಿನ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಆಗಲ್ಲ ಎಂದ ತಜ್ಞರು
Image
ಕರ್ನಾಟಕದಾದ್ಯಂತ ಮಳೆ ಅಬ್ಬರಕ್ಕೆ ಒಂದೇ ದಿನ ಐವರು ಸಾವು, ಹಲವೆಡೆ ಭೂಕುಸಿತ
Image
ಪ್ರವಾಹಪೀಡಿತ 6 ರಾಜ್ಯಗಳಿಗೆ ಮೋದಿ ಸರ್ಕಾರದಿಂದ 1,066 ಕೋಟಿ ರೂ. ಬಿಡುಗಡೆ

ದತ್ತ ಮಂದಿರ ಮುಳುಗಿಸಿದ ಕೃಷ್ಣೆ

ಕೃಷ್ಣಾ ನದಿ ದಂಡೆ ಮೇಲಿರುವ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮದ ದತ್ತ ಮಂದಿರ ಕೂಡ ಬಹುತೇಕ ಮುಳುಗಡೆಯಾಗಿದೆ. ಸೋಮವಾರವಷ್ಟೇ ಗರ್ಭಗುಡಿ ಪ್ರವೇಶ ಮಾಡಿದ್ದ ಕೃಷ್ಣೆಯ ನೀರು ಮಂಗಳವಾರ ದೇವಸ್ಥಾನವನ್ನೇ ಮುಳುಗಿಸಿದೆ. ಇತ್ತ ಕಲ್ಲೋಳ ಗ್ರಾಮದ ಹೊರ ವಲಯಕ್ಕೆ ನೀರು ಬಂದಿದ್ದು ಪ್ರವಾಹದ ಭೀತಿಯಲ್ಲಿ ಜನರಿದ್ದಾರೆ.

ಸರ್ಕಾರಿ ಶಾಲೆ ಮೇಲೆ ಬಿದ್ದ ಮರ: ತಪ್ಪಿದ ಅನಾಹುತ

ಖಾನಾಪುರ ಭಾಗದಲ್ಲಿ ನಿರಂತರವಾಗಿ ಗಾಳಿ ಮಳೆಯಾಗುತ್ತಿದ್ದು, ಇದರಿಂದ ನಂದಗಡ ಗ್ರಾಮದಲ್ಲಿರುವ ಸರ್ಕಾರಿ ಉರ್ದು ಶಾಲೆ ಮೇಲೆ ಬೃಹತ್ ಮರವೊಂದು ಬಿದ್ದಿದೆ. ಶಾಲಾ ಕೊಠಡಿ ಮೇಲೆಯೇ ಮರ ಬಿದ್ದಿದೆ. ಅದೃಷ್ಟವಶಾತ್, ಮಕ್ಕಳು ಶಾಲೆಗೆ ಬರುವ ಪೂರ್ವದಲ್ಲಿ ಮರ ಬಿದ್ದಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ.

ಮಹಾರಾಷ್ಟ್ರ ಸಂಪರ್ಕಿಸುವ ಸೇತುವೆ ಮುಳುಗಡೆ: ಸಂಚಾರ ಸ್ಥಗಿತ

ಇನ್ನೊಂದು ಕಡೆ ಕೃಷ್ಣಾ ನದಿಯಲ್ಲಿ ಏಕಾಏಕಿ ನೀರು ಏರಿಕೆಯಾಗಿದೆ. 1,40,000 ಕ್ಯೂಸೆಕ್ ನಷ್ಟು ಒಳ ಹರಿವಿದ್ದು, ಇದರಿಂದ ಬಾಗಲಕೋಟೆ ಮಹಾಲಿಂಗಪುರ, ಉಗಾರ, ಕುಡಚಿ ಮಹಾರಾಷ್ಟ್ರದ ಮಿರಜ್ ಸಂಪರ್ಕಿಸುವ ರಾಜ್ಯ ಹೆದ್ದಾರಿ ಸೇತುವೆ ಮುಳುಗಡೆಯಾಗಿದೆ. ಇದರಿಂದ ನೂರಾರು ವಾಹನಗಳ ಸಂಚಾರ ಬಂದ್ ಆಗಿದೆ. ಮಹಾರಾಷ್ಟ್ರ ಸಂಪರ್ಕಿಸುವ ರಸ್ತೆ ಬಂದ್ ಆಗಿ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯಲ್ಲಿ ಮೂರು ದಿನದಲ್ಲಿ ಹತ್ತು ಸಂಪರ್ಕ ಸೇತುವೆ ಮುಳುಗಡೆಯಾಗಿದ್ದು ಪರ್ಯಾಯ ಮಾರ್ಗದಲ್ಲಿ ಜನ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ.

ಇದನ್ನೂ ಓದಿ: ಇಂದಿನಿಂದ ಕರ್ನಾಟಕದಾದ್ಯಂತ ಮುಂಗಾರು ದುರ್ಬಲ, ಅಲ್ಲಲ್ಲಿ ಸಾಧಾರಣ ಮಳೆ

ಮಹಾರಾಷ್ಟ್ರದ ಪಶ್ಚಿಮಘಟ್ಟ ಭಾಗದಲ್ಲಿ ಇನ್ನು ಕೂಡ ಮಳೆ ಅಬ್ಬರ ಮುಂದುವರೆದಿದ್ದು ಮತ್ತೆ ನದಿ ನೀರು ಏರಿಕೆಯಾಗುವ ಸಾಧ್ಯತೆ ಇದೆ. ಕೃಷ್ಣಾ ಹಾಗೂ ದೂಧಗಂಗಾ ನದಿ ತಟದಲ್ಲಿ ಪ್ರವಾಹದ ಆತಂಕ ಇದ್ದು, ನದಿ ಪಾತ್ರದ ಜನರಿಗೆ ಈಗಾಗಲೇ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ