AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೊಲೀಸರ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಕಠಿಣ ಕ್ರಮ: ಗೃಹ ಸಚಿವ ಆರಗ ಜ್ಞಾನೇಂದ್ರ ಎಚ್ಚರಿಕೆ

ಗೃಹ ಸಚಿವರ ಮಾತಿಗೆ ಪ್ರತಿಪಕ್ಷ ನಾಯಕರು ಆಕ್ಷೇಪಿಸಿದರು. ಯಾವುದೇ ಸಂಬಂಧವೇ ಇಲ್ಲದೆ ಗೃಹ ಸಚಿವರು ಮಾತಾಡುತ್ತಿದ್ದಾರೆ ಎಂದು ಗದ್ದಲ ಆರಂಭಿಸಿದರು.

ಪೊಲೀಸರ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಕಠಿಣ ಕ್ರಮ: ಗೃಹ ಸಚಿವ ಆರಗ ಜ್ಞಾನೇಂದ್ರ ಎಚ್ಚರಿಕೆ
ಗೃಹ ಸಚಿವ ಆರಗ ಜ್ಞಾನೇಂದ್ರ
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on: Dec 15, 2021 | 3:32 PM

Share

ಬೆಳಗಾವಿ: ಸಮಾಜದಲ್ಲಿ ಶಾಂತಿ ಕದಡುವವರ ವಿರುದ್ಧ ಕ್ರಮಕೈಗೊಳ್ಳುತ್ತೇವೆ. ಪೊಲೀಸರ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಶಿಸ್ತುಕ್ರಮ ಅಗತ್ಯ. ರಾವತ್ ನಿಧನದ ಸುದ್ದಿಯನ್ನು ಕೆಲವರು ಸಂಭ್ರಮಿಸುತ್ತಿದ್ದಾರೆ. ಕೆಲವರು ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮಿಸಿದ್ದಾರೆ. ಇಂಥವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಗೃಹ ಸಚಿವರ ಮಾತಿಗೆ ಪ್ರತಿಪಕ್ಷ ನಾಯಕರು ಆಕ್ಷೇಪಿಸಿದರು. ಯಾವುದೇ ಸಂಬಂಧವೇ ಇಲ್ಲದೆ ಗೃಹ ಸಚಿವರು ಮಾತಾಡುತ್ತಿದ್ದಾರೆ ಎಂದು ಗದ್ದಲ ಆರಂಭಿಸಿದರು. ಕರಾವಳಿ ಭಾಗದಲ್ಲಿ ನಡೆದ ಕೋಮುಗಲಭೆ ಅಂಕಿಅಂಶ ಮಂಡಿಸಿದ ಆರಗ ಜ್ಞಾನೇಂದ್ರ, 2017ರಲ್ಲಿ 119 ಕೋಮುಗಲಭೆ ಪ್ರಕರಣಗಳು ನಡೆದಿತ್ತು. 2018ರಲ್ಲಿ 26 ಪ್ರಕರಣ, 2019ರಲ್ಲಿ 7 ಪ್ರಕರಣಗಳು ನಡೆದಿವೆ. 2020ರಲ್ಲಿ 4 ಪ್ರಕರಣ, 2021ರಲ್ಲಿ 5 ಪ್ರಕರಣ ನಡೆದಿವೆ. ತಪ್ಪಿತಸ್ಥರ ವಿರುದ್ಧ ನಾವು ಕ್ರಮ ತೆಗೆದುಕೊಳ್ಳುತ್ತೇವೆ. ಯಾವುದೇ ಆತಂಕಪಡಬೇಕಾದ ಅಗತ್ಯವಿಲ್ಲ ಎಂದು ಭರವಸೆ ನೀಡಿದರು.

ಬೆಳಗಾವಿಯ ಸುವರ್ಣ ಸೌಧದ ಬಳಿ ಪೊಲೀಸರು ಉಳಿದುಕೊಳ್ಳಲು ಶಾಶ್ವತವಾದ ವ್ಯವಸ್ಥೆ ಮಾಡಬೇಕು. ಅಧಿವೇಶನದ ಸಂದರ್ಭದಲ್ಲಿ ಭದ್ರತೆ ನೀಡಲು ಬರುವ ಪೊಲೀಸರು ಅಧಿವೇಶನ ಮುಗಿಯುವವರೆಗೂ ಇಲ್ಲಿಯೇ ಇರುತ್ತಾರೆ. ಅವರಿಗಾಗಿ ಒಂದು ಶಾಶ್ವತ ವ್ಯವಸ್ಥೆ ಮಾಡಬೇಕಿದೆ. ರಾಜ್ಯ ಸರ್ಕಾರ ಈ ಬಗ್ಗೆ ಚಿಂತನೆ ಮಾಡುತ್ತದೆ ಎಂದು ಭರವಸೆ ನೀಡಿದರು.

ಹತ್ತು ದಿನಗಳ ಅಧಿವೇಶನ ಸುಸೂತ್ರವಾಗಿ ನಡೆಯಲು ಸಾಕಷ್ಟು ಪರಿಶ್ರಮ ಬೇಕು. ಕಳೆದ ಬಾರಿ ಶೆಡ್​ಗಳಲ್ಲಿ ಪೊಲೀಸರು ಉಳಿಯಬೇಕಾಗಿತ್ತು. ಈ ಬಾರಿ ಕೃತಕ ನಗರ ಸೃಷ್ಟಿ ಮಾಡಿದ್ದೇವೆ. ಇಲ್ಲಿ 4891 ಜನರಿಗೆ ಅವಕಾಶ ಇದೆ. ಈ ಭಾಗದ ಕಷ್ಟಗಳನ್ನು ಸರಕಾರದ ಗಮನಕ್ಕೆ ತರಲು ಅನೇಕ ಪ್ರತಿಭಟನೆ ನಡೆಯುತ್ತಿವೆ. ಅವರನ್ನು ನಿರ್ವಹಿಸಲು ಪೊಲೀಸರು ಬೇಕು. ಅದಕ್ಕೆ ಈ ವ್ಯವಸ್ಥೆ ಮಾಡಿದ್ದೇವೆ. ಪೊಲೀಸರು ಮನೆ ಬಿಟ್ಟು 15 ದಿನ ಇರಬೇಕು. ಕುಟುಂಬವನ್ನು ಬಿಟ್ಟು ಬಂದಿರುತ್ತಾರೆ. ಅವರಿಗೆ ಸರಿಯಾದ ಸೌಲಭ್ಯ ನೀಡಬೇಕು. ನೆಮ್ಮದಿಯಿಂದ ಇರಲು ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ಮೂರೂವರೆ ಕೋಟಿ ರೂಪಾಯಿ ವೆಚ್ಚವಾಗಿದೆ ಎಂದರು.

ಪಕ್ಷಾಂತರ ನಿಷೇಧ ಕಾಯ್ದೆಯನ್ನು ಸಚಿವ ಸಂಪುಟದಲ್ಲಿ ಮಂಡಿಸುವ ಮೊದಲು ಪಕ್ಷದ ಶಾಸಕರನ್ನು ಒಪ್ಪಿಸಬೇಕಿದೆ ಎಂದು ಹೇಳಿದ ಜ್ಞಾನೇಂದ್ರ, ಲಖನ್​ರನ್ನು ಬಿಜೆಪಿಗೆ ಕರೆತರುವ ಬಗ್ಗೆ ಅವಸರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಪದೇಪದೆ ಎಂಇಎಸ್ ಪರವಾಗಿ ಹಲವರು ಕೀಟಲೆ ಮಾಡುತ್ತಲೇ ಇರುತ್ತಾರೆ. ಶಾಂತಿ ಕದಡುವ ಎಂಇಎಸ್ ತಂತ್ರದ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಮುಖಕ್ಕೆ ಮಸಿ ಬಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ನಡಪರ ಸಂಘಟನೆ ಕಾರ್ಯಕರ್ತರ ಮೇಲೆ ಐಪಿಸಿ 307 ಅನ್ವಯ ಪ್ರಕರಣದ ದಾಖಲಿಸಿರುವ ವಿಷಯ ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ವಿಚಾರ‌ ಮಾಡುತ್ತೇನೆ ಎಂದು ನುಡಿದರು.

ಇದನ್ನೂ ಓದಿ: ಪೊಲೀಸ್ ಕಾನ್​ಸ್ಟೆಬಲ್ ಹುದ್ದೆಗೆ ದಕ್ಷಿಣ ಕನ್ನಡ ಜಿಲ್ಲೆಯಿಂದ ನೀರಸ ಪ್ರತಿಕ್ರಿಯೆ; ಗೃಹ ಸಚಿವ ಆರಗ ಜ್ಞಾನೇಂದ್ರ ಇದನ್ನೂ ಓದಿ: ಸಿಡಿಎಸ್ ರಾವತ್ ನಿಧನದ ಬಗ್ಗೆ ವಿಕೃತ ಪೋಸ್ಟ್! ದೇಶ ವಿರೋಧಿಗಳ ಪತ್ತೆ ಹಚ್ಚಿ ಕ್ರಮಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಸೂಚನೆ