ಬೆಳಗಾವಿ: ಹಾಲು ಅಂದರೆ ಅದು ಕೆಎಂಎಫ್ನ (KMF) ನಂದಿನಿ ಹಾಲು (Nandini Milk). ರಾಜ್ಯದಲ್ಲಿ ಅಷ್ಟೇ ಅಲ್ಲದೇ ಹೊರ ರಾಜ್ಯದಲ್ಲೂ ಈ ಹಾಲಿಗೆ ಡಿಮ್ಯಾಂಡ್ ಇದೆ. ನಿತ್ಯವೂ ಲಕ್ಷಾಂತರ ಲೀಟರ್ನಷ್ಟು ಮಾರಾಟವಾಗುವ ಈ ಹಾಲಿಗೆ ಎಲ್ಲಿಲ್ಲದ ಬೇಡಿಕೆ. ಕರ್ನಾಟಕದಲ್ಲೇ ಅತೀ ಹೆಚ್ಚು ಮಾರಾಟವಾಗುವ ಏಕೈಕ ಹಾಲು ಅಂದರೆ ಅದು ಕೆಎಂಎಫ್ನ ನಂದಿನಿ ಹಾಲು. ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತದಿಂದ ಹಾಲು ಉತ್ಪಾದನೆಯಾಗಿ ರಾಜ್ಯಾದ್ಯಂತ ಸಪ್ಲೈ ಮಾಡಲಾಗುತ್ತದೆ. ಆದರೆ ಇದೇ ನಂದಿನಿ ಹಾಲು ಇದೀಗ ಸುದ್ದಿಯಲ್ಲಿದ್ದು, ಕನ್ನಡಿಗರು ಇದರ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ.
ಕಳೆದ ನಾಲ್ಕು ದಿನಗಳಿಂದ ಹಾಲಿನ ಪ್ಯಾಕೆಟ್ ಮೇಲೆ ಕನ್ನಡ ಮಾಯ:
ಬೆಂಗಳೂರಿನಲ್ಲಿ ಉತ್ಪಾದನೆಯಾಗುವ ಈ ಕೆಎಂಎಫ್ನ ನಂದಿನಿ ಹಾಲು ಇಡೀ ರಾಜ್ಯಾದ್ಯಂತ ಸಪ್ಲೈ ಆಗುತ್ತೆ. ಅರ್ಧ ಲೀಟರ್, ಒಂದು ಲೀಟರ್ ಪ್ಯಾಕೆಟ್ಗಳಾಗಿ ಹಾಲು ಹಳ್ಳಿ ಹಳ್ಳಿಗೂ ತಲುಪುತ್ತೆ. ಈವರೆಗೂ ಅಚ್ಚ ಕನ್ನಡದಲ್ಲಿ ಪ್ಯಾಕೆಟ್ ಮೇಲೆ ನಂದಿನಿ ಹಾಲು ಅಂತಾ ಬರೆದಿದ್ದು ಸಿಗುತಿತ್ತು. ಆದರೆ ಈಗ ಕನ್ನಡವೇ ಮಾಯವಾಗಿ ಹಿಂದಿ ಮತ್ತು ಇಂಗ್ಲೀಷ್ನಲ್ಲಿ ಬರೆದ ಪ್ಯಾಕೆಟ್ಗಳು ಸಿಗುತ್ತಿವೆ. ನಮ್ಮದೇ ರಾಜ್ಯದಲ್ಲಿ ಉತ್ಪಾದನೆಯಾಗುವ ನಂದಿನ ಹಾಲಿನ ಪ್ಯಾಕೆಟ್ ಮೇಲೆ ಕನ್ನಡ ಬಿಟ್ಟಿರುವುದು ಸದ್ಯ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಕೆಎಂಎಫ್‌ಗೆ ಕನ್ನಡಿಗರ ಪ್ರಶ್ನೆ:
ನಂದಿನ ಹಾಲಿನ ಪ್ಯಾಕೆಟ್ ಮೇಲೆ ಹಿಂದಿ ಮತ್ತು ಇಂಗ್ಲಿಷ್ ಮುದ್ರಣಗೊಳ್ಳುತ್ತಿರುವುದನ್ನ ಗಮನಿಸಿದ ಕನ್ನಡಿಗರು ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಅಭಿಯಾನ ಆರಂಭಿಸಿದ್ದಾರೆ. ಕೆಎಂಎಫ್ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ಹೊರ ಹಾಕುವುದರ ಜತೆಗೆ ಸಾಕಷ್ಟು ಪ್ರಶ್ನೆಗಳನ್ನ ಕನ್ನಡಿಗರು ಮಾಡುತ್ತಿದ್ದಾರೆ. ನಂದಿನಿ ಪ್ರಾಡಕ್ಟ್ ಕರ್ನಾಟಕದ್ದೋ ಅಲ್ವೋ? ಕನ್ನಡದ ಒಂದು ಅಕ್ಷರವೂ ಅದರಲ್ಲಿ ಕಾಣಸಿಗದು. ಸಂಬಂಧಿಸಿದವರು ಕೂಡಲೇ ಅವರಿಗೆ ಎಚ್ಚರಿಕೆ ಕೊಡಬೇಕು ಅಂತಾ ಅಭಿಯಾನ ಆರಂಭಿಸಿದ್ದಾರೆ. ನಂದಿನಿ ಹಾಲು ಅಂತಾ ಈ ಹಿಂದೆ ಕನ್ನಡದಲ್ಲಿ ಪ್ಯಾಕೆಟ್ ಮೇಲೆ ಬರೆದಿದ್ದ ಪೋಟೋ ಹಾಗೂ ಈಗ ಹಿಂದಿ, ಇಂಗ್ಲಿಷ್ ನಲ್ಲಿ ಬರೆದ ಪೋಟೋ ಎರಡನ್ನೂ ಟ್ಯಾಗ್ ಮಾಡಿ ಈ ಅಭಿಯಾನವನ್ನ ಕನ್ನಡಿಗರು ಸಾಮಾಜಿಕ ಜಾಲತಾಣಗಳಲ್ಲಿ ಮಾಡುತ್ತಿದ್ದಾರೆ.
ಬೆಳಗಾವಿ ಹಾಲು ಉತ್ಪಾದನಾ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರ ಸಮರ್ಥನೆ:
ಇನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡಿಗರು ಕೆಎಂಎಫ್ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಂತೆ ಎಚ್ಚೆತ್ತುಕೊಂಡ ಅಧಿಕಾರಿಗಳು ಇದಕ್ಕೆ ಸಮರ್ಥನೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಉತ್ಪಾದನೆ ಆಗುತ್ತಿದ್ದ ಪ್ಯಾಕೆಟ್ನ ಯಂತ್ರ ಸುಟ್ಟು ಹೋಗಿದ್ದು ಈ ಕಾರಣಕ್ಕೆ ಗುಜರಾತ್ನಲ್ಲಿ ಪ್ಯಾಕೆಟ್ ಮೇಲೆ ಪ್ರಿಂಟ್ ಹಾಕಿಸಲಾಗುತ್ತಿದೆ. ಅಲ್ಲಿ ಕನ್ನಡ ಇರದ ಕಾರಣ ಈ ಸಮಸ್ಯೆ ಆಗಿದೆ. ಬೆಂಗಳೂರಿನಲ್ಲಿ ಹೊಸ ಪ್ಲಾಂಟ್ ನಿರ್ಮಾಣ ಮಾಡಲಾಗುತ್ತಿದೆ. ಆದಷ್ಟು ಬೇಗ ಎಲ್ಲವೂ ಸರಿ ಆಗುತ್ತೆ ಅಂತಾ ಟಿವಿ9ಗೆ ಬೆಳಗಾವಿ ಹಾಲು ಉತ್ಪಾದನಾ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರ ಡಿಎನ್ ಹೆಗಡೆ ತಿಳಿಸಿದ್ದಾರೆ.
ವರದಿ: ಸಹದೇವ ಮಾನೆ
ಇದನ್ನೂ ಓದಿ
Health Tips: ಆಯುರ್ವೇದದ ಪ್ರಕಾರ ಬೇಸಿಗೆಯ ಧಗೆ ತಣಿಸುವ 10 ನೈಸರ್ಗಿಕ ಜ್ಯೂಸ್ಗಳಿವು
Viral Video: ಲೋಕಲ್ ರೈಲಿನಲ್ಲಿ ಜನರೊಂದಿಗೆ ಕುದುರೆ ಪ್ರಯಾಣಿಸುತ್ತಿರುವ ವಿಡಿಯೋ ವೈರಲ್
Published On - 3:20 pm, Sat, 9 April 22