ಬೆಳಗಾವಿ, ಜನವರಿ 22: ಒಂದೆಡೆ ಅದ್ಧೂರಿಯಾಗಿ ಕಾಂಗ್ರೆಸ್ ಸಮಾವೇಶ ನಡೆಯುತ್ತಿದ್ದರೆ ಮತ್ತೊಂದೆಡೆ, ಮುಂದಿನ ಸಿಎಂ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಹೈಕಮಾಂಡ್ ನಾಯಕರಿದ್ದ ಕಾರ್ಯಕ್ರಮದಲ್ಲಿಯೇ ಕಾಂಗ್ರೆಸ್ ಕಾರ್ಯಕರ್ತರು ಮುಂದಿನ ಸಿಎಂ ಡಿಕೆ ಶಿವಕುಮಾರ್ ಎಂದು ಘೋಷಣೆ ಕೂಗಿದ್ದಾರೆ. ಡಿಕೆ ಶಿವಕುಮಾರ್ ಫೋಟೋ ಹಿಡಿದ ಬೆಂಬಲಿಗರು ಕಾರ್ಯಕರ್ಮದಲ್ಲಿ ಘೋಷಣೆ ಮೊಳಗಿಸಿದ್ದಾರೆ.
ಸಮಾವೇಶದಲ್ಲಿ ನೆರೆದಿದ್ದ ಕಾರ್ಯಕರ್ತರು ಡಿಸಿಎಂ ಡಿಕೆ ಶಿವಕುಮಾರ್ ಮುಂದಿನ ಸಿಎಂ ಎಂದು ಘೋಷಣೆ ಕೂಗಿದ್ದಾರೆ. ಆದರೆ, ತಮ್ಮ ಭಾಷಣದಲ್ಲಿ ತ್ಯಾಗದ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನಯವಾಗಿಯೇ ಎಲ್ಲರಿಗೂ ಸಂದೇಶ ರವಾನಿಸಿದ್ದಾರೆ. ನಾವು ತ್ಯಾಗ ಮಾಡಲು ಸಾಧ್ಯವಾ ಎಂದು ಪ್ರಶ್ನಿಸಿದ್ದಾರೆ. 2004ರಲ್ಲಿ ಸೋನಿಯಾ ಗಾಂಧಿ ಪ್ರಧಾನ ಮಂತ್ರಿಯಾಗಬೇಕಿತ್ತು, ಆದರೆ ಅವರು ಹುದ್ದೆಯನ್ನು ತ್ಯಾಗ ಮಾಡಿದ್ದರು ಎಂದಿದ್ದಾರೆ.
ಏತನ್ಮಧ್ಯೆ ಕುರ್ಚಿ ಕಾಳಗ ಮತ್ತು ಕಾಂಗ್ರೆಸ್ ಮಾಡುತ್ತಿರುವ ಸಮಾವೇಶವನ್ನು ಟೀಕಿಸಿದ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಸಮಾವೇಶದ ಬಗ್ಗೆ ಲೇವಡಿ ಮಾಡಿದ್ದಾರೆ. ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಮಾತನಾಡಿ, ಗೂಟ ಹೊಡ್ಕೊಂಡು ಕುಳಿತುಕೊಳ್ಳಿ, ನಿಮಗೆ ಯಾರು ಬೇಡ ಅಂದರು ಎಂದಿದ್ದಾರೆ.
1924ರ ಕಾಂಗ್ರೆಸ್ಗೂ ಇಂದಿನ ಕಾಂಗ್ರೆಸ್ಗೂ ಎಲ್ಲಿಯ ಸಂಬಂಧ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪ್ರಶ್ನಿಸಿದ್ದಾರೆ.
ಹುಬ್ಬಳ್ಳಿಯ ವರೂರಿನ ಗುಣಧರನಂದಿ ಸ್ವಾಮೀಜಿ ಭವಿಷ್ಯ ನುಡಿದಿದ್ದು, ಡಿಕೆ ಶಿವಕುಮಾರ್ ಸಿಎಂ ಆಗಿಯೇ ಆಗುತ್ತಾರೆ ಎಂದಿದ್ದಾರೆ. ಅದೇ ವೇದಿಕೆಯಲ್ಲಿದ್ದ ಡಿಕೆ ಶಿವಕುಮಾರ್ ಈ ಕುರಿತು ಪ್ರತಿಕ್ರಿಯಿಸಿ, ನೀವು ಆಶೀರ್ವಾದ ಮಾಡಿದಾಗಲೆಲ್ಲ ನಮಗೆ ಏಟು ಕೊಟ್ಟಿದೆ ಎಂದಿದ್ದಾರೆ.
ಇದನ್ನೂ ಓದಿ: ಬೆಳಗಾವಿ ಕಾಂಗ್ರೆಸ್ ಅಧಿವೇಶನ: ಇಲ್ಲೂ ಮೊಳಗಿತು ಡಿಕೆ ಶಿವಕುಮಾರ್ ಮುಂದಿನ ಸಿಎಂ ಕೂಗು!
ಹೈಕಮಾಂಡ್ ವಾರ್ನಿಂಗ್, ಖರ್ಗೆ ಸೂಚನೆ ಬಳಿಕವೂ ಬೆಳಗಾವಿ ಸಮಾವೇಶದಲ್ಲೂ ಮುಂದಿನ ಸಿಎಂ ಕೂಗು ಮೊಳಗಿದೆ. ಇದಕ್ಕೆ ಹೈಕಮಾಂಡ್ ಯಾವ ರೀತಿ ಪ್ರತಿಕ್ರಿಯಿಸುತ್ತದೆಯೋ ಕಾದು ನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ