ಅಮಿತ್ ಶಾ ಅಂಬೇಡ್ಕರ್‌ರನ್ನು ಅಪಮಾನಿಸಿಲ್ಲ, ಸ್ವಾತಂತ್ರ್ಯ ಹೋರಾಟಗಾರರನ್ನು ಅಪಮಾನಿಸಿದ್ದಾರೆ: ಪ್ರಿಯಾಂಕಾ ಗಾಂಧಿ
ಬೆಳಗಾವಿಯ ಗಾಂಧಿ ಭಾರತ ಸಮಾವೇಶದಲ್ಲಿ ಪ್ರಿಯಾಂಕಾ ಗಾಂಧಿ ಅವರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ಮಾಡಿದ್ದಾರೆ. ಆರ್‌ಟಿಐ ಕಾಯ್ದೆ ರದ್ದು, ರೈತರ ನಿರ್ಲಕ್ಷ್ಯ, ಸಂವಿಧಾನದ ದುರ್ಬಳಕೆ ಹಾಗೂ ಉದ್ಯಮಿಗಳಿಗೆ ಅನುಕೂಲ ಮಾಡುವ ನೀತಿಗಳನ್ನು ಟೀಕಿಸಿದರು. ಜನಸಾಮಾನ್ಯರ ಮೇಲೆ GST ಹೆಚ್ಚಳವಾಗುತ್ತಿರುವುದನ್ನು ಖಂಡಿಸಿದ್ದಾರೆ.
ಬೆಳಗಾವಿ, ಜನವರಿ 21: ಸಂಸತ್‌ನಲ್ಲೇ ಸಂವಿಧಾನ, ಅಂಬೇಡ್ಕರ್‌ರನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಟೀಕಿಸಿದ್ದಾರೆ. ಕೇವಲ ಡಾ.ಬಿ.ಆರ್.ಅಂಬೇಡ್ಕರ್‌ರನ್ನು ಅವರು ಅಪಮಾನಿಸಿಲ್ಲ. ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರನ್ನು ಅಪಮಾನಿಸಿದ್ದಾರೆ ಎಂದು ಅಮಿತ್ ಶಾ ವಿರುದ್ಧ ಸಂಸದೆ ಪ್ರಿಯಾಂಕಾ ಗಾಂಧಿ (Priyanka Gandhi) ವಾಗ್ದಾಳಿ ಮಾಡಿದ್ದಾರೆ.
ನಗರದ ಸಿಪಿಎಡ್ ಮೈದಾನದಲ್ಲಿ ನಡೆದ ಗಾಂಧಿ ಭಾರತ ಸಮಾವೇಶದಲ್ಲಿ ಭಾಷಣ ಮಾಡಿದ ಪ್ರಿಯಾಂಕಾ ಗಾಂಧಿ, ಸ್ವಾತಂತ್ರ್ಯ ಸಿಕ್ಕ ಬಳಿಕ ಹಲವು ಸರ್ಕಾರಗಳು ಅಧಿಕಾರಕ್ಕೆ ಬಂದಿವೆ. ಆದರೆ ಸಂಸತ್‌ನಲ್ಲೇ ಡಾ.ಬಿ.ಆರ್.ಅಂಬೇಡ್ಕರ್‌ರನ್ನು ಟೀಕಿಸಿರಲಿಲ್ಲ. ದೇಶದ ಸ್ವಾತಂತ್ರ್ಯ ಹೋರಾಟದ ವೇಳೆಯೂ ಇದೇ ಮನಸ್ಥಿತಿ ಹೊಂದಿದ್ದರು ಎಂದು ಕಿಡಿಕಾರಿದ್ದಾರೆ.
ಮೋದಿ, ಅಮಿತ್ ಶಾ ಸಂವಿಧಾನದ ವಿರೋಧಿಗಳು
2024ರ ಲೋಕಸಭಾ ಚುನಾವಣಾ ಪ್ರಚಾರದ ವೇಳೆಯೂ ಸಂವಿಧಾನ ಬದಲಿಸುವುದಾಗಿ ಬಿಜೆಪಿ ನಾಯಕರು ಹೇಳಿದ್ದರು. ಹೀಗೆ ಹೇಳಿದ್ದಕ್ಕೆ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿದ್ದಾರೆ. ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಸಂವಿಧಾನದ ವಿರೋಧಿಗಳು. ಮೋದಿ ಸರ್ಕಾರದಲ್ಲಿ ಸಾಂವಿಧಾನಿಕ ಸಂಸ್ಥೆಗಳ ಮೇಲೆ ದಾಳಿ ನಡೆದಿದೆ. ಅಧಿಕಾರಕ್ಕೆ ಬಂದ ಕೂಡಲೇ ಸಂವಿಧಾನ ವಿಮರ್ಶ ಸಮಿತಿ ರಚಿಸಿದ್ದರು ಎಂದಿದ್ದಾರೆ.
ಇದನ್ನೂ ಓದಿ: ಆರ್ಎಸ್ಎಸ್ ಸಿದ್ಧಾಂತವನ್ನು ಬಿಜೆಪಿ ಭಾರತೀಯರ ಮೇಲೆ ಹೇರುತ್ತಿದೆ; ಸಿಎಂ ಸಿದ್ದರಾಮಯ್ಯ ಆರೋಪ
ಭಾರತದ ಹೆಮ್ಮೆಯ ಭೂಮಿ ಬೆಳಗಾವಿ, ಪುಣ್ಯಭೂಮಿ ಬೆಳಗಾವಿ. ತಿಲಕ್ ಅವರು ತಮ್ಮ ಚಳವಳಿಯನ್ನು ಬೆಳಗಾವಿಯಿಂದ ಆರಂಭಿಸಿದ್ದರು. ಗಾಂಧೀಜಿ ಅವರು ಬೆಳಗಾವಿ ಕಾಂಗ್ರೆಸ್ ಸಮಾವೇಶದ ಅಧ್ಯಕ್ಷರಾಗಿದ್ದರು. ಸಂವಿಧಾನ ನಮ್ಮೆಲ್ಲರನ್ನೂ ರಕ್ಷಿಸುವ ಕವಚವಾಗಿದೆ. ಮತದಾನದ ಮೂಲಕ ನಿಮ್ಮ ಸರ್ಕಾರವನ್ನು ಆಯ್ಕೆ ಮಾಡುವ ಅಧಿಕಾರ, ನಮ್ಮ ಸಂವಿಧಾನ ಪ್ರಶ್ನಿಸುವ ಅಧಿಕಾರ, ಸಮಾನತೆಯ ಅವಕಾಶ ನೀಡಿದೆ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರ ಆರ್‌ಟಿಐ ಕಾನೂನು ತೆಗೆಯಲು ಪ್ರಯತ್ನಿಸುತ್ತಿದೆ. ಲೋಕಪಾಲ್, ಚುನಾವಣಾ ಆಯೋಗದ ಶಕ್ತಿ ಕುಗ್ಗಿಸಿದ್ದಾರೆ. ಮಹಿಳೆಯರ ಮೇಲೆ ಹಲ್ಲೆ ಮಾಡುವವರಿಗೆ ರಕ್ಷಣೆ ನೀಡುತ್ತಿದ್ದಾರೆ. ಪ್ರಧಾನಿ ಮೋದಿ ಸರ್ಕಾರದಲ್ಲಿ ಕಾರ್ಮಿಕರ ರಕ್ಷಣೆಗೆ ಧಕ್ಕೆ ಆಗಿದೆ. ಕರ್ನಾಟಕ ಸರ್ಕಾರ 200 ಯುನಿಟ್‌ವರೆಗೂ ಉಚಿತ ವಿದ್ಯುತ್ ನೀಡುತ್ತಿದೆ. ಉತ್ತರ ಪ್ರದೇಶ ಸರ್ಕಾರ ರೈತರಿಗೂ ಉಚಿತ ವಿದ್ಯುತ್ ನೀಡುತ್ತಿಲ್ಲ. ಸಿಎಂ ಯೋಗಿ ಸರ್ಕಾರ ವಿದ್ಯುತ್ ಬಿಲ್ ಹೆಸರಿನಲ್ಲಿ ಸಾವಿರಾರು ರೂ. ವಸೂಲಿ ಮಾಡಿದೆ ಎಂದರು.
ಇದನ್ನೂ ಓದಿ: ದಲಿತ ವಿರೋಧಿ ಬಿಜೆಪಿಯಿಂದ ಸಂವಿಧಾನಕ್ಕೆ ಆಪತ್ತು; ಬೆಳಗಾವಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ
ಕೇಂದ್ರ ಸರ್ಕಾರ ಉದ್ಯಮಿ ಅದಾನಿಗೆ ದೇಶದ ಇಡೀ ಸಂಪತ್ತನ್ನು ನೀಡಿದೆ. ಸಾಲಕ್ಕೆ ಹೆದರಿ ಅನ್ನದಾತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೂ ಕೇಂದ್ರ ಸರ್ಕಾರ ರೈತರ ಸಹಾಯಕ್ಕೆ ಬಂದಿಲ್ಲ. ರೈತರ ಬೆಳೆಗೂ ಕೇಂದ್ರ ಜಿಎಸ್‌ಟಿ ಹಾಕುತ್ತಿದೆ, ಇದು ಸಂವಿಧಾನ ವಿರೋಧಿ. ಕಾಫಿ, ಟೀ, ಟೂತ್‌ಪೇಸ್ಟ್, ಮಕ್ಕಳ ಪುಸ್ತಕ ಮೇಲೆಯೂ GST ಹಾಕುತ್ತಿದ್ದಾರೆ. ದಿನೇದಿನೆ ಸಾಮಾನ್ಯ ಜನರ ಮೇಲೆ ಜಿಎಸ್‌ಟಿ ಹೆಚ್ಚಿಸಲಾಗುತ್ತಿದೆ. ಆದರೆ ಅಂಬಾನಿ, ಅದಾನಿಯವರ ತೆರಿಗೆ ಮಾತ್ರ ಹೆಚ್ಚಿಸುತ್ತಿಲ್ಲ. ಇದರಿಂದ ಬಂಡವಾಳಶಾಹಿಗಳಿಗೆ ಸಾವಿರಾರು ಕೋಟಿ ಲಾಭವಾಗುತ್ತಿದೆ ಎಂದು ಪ್ರಧಾನಿ ಮೋದಿ, ಕೇಂದ್ರ ಸರ್ಕಾರದ ವಿರುದ್ಧ ಪ್ರಿಯಾಂಕಾ ವಾಗ್ದಾಳಿ ಮಾಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.