ದಲಿತ ವಿರೋಧಿ ಬಿಜೆಪಿಯಿಂದ ಸಂವಿಧಾನಕ್ಕೆ ಆಪತ್ತು; ಬೆಳಗಾವಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ
ಬೆಳಗಾವಿಯ ಸಿಪಿಎಡ್ ಮೈದಾನದಲ್ಲಿ ನಡೆದ ಗಾಂಧಿ ಭಾರತ ಸಮಾವೇಶದಲ್ಲಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಡಿಸೆಂಬರ್ 27ರಂದು ಗಾಂಧಿ ಭಾರತ ಸಮಾವೇಶ ನಡೆಯಬೇಕಿತ್ತು. ಆದರೆ ಮನಮೋಹನ್ ಸಿಂಗ್ ನಿಧನದಿಂದ ಮುಂದೂಡಿಕೆ ಆಯ್ತು. ಬಿಜೆಪಿಯವರು ಯಾವಾಗಲೂ ದಲಿತ ಸಮುದಾಯದ ವಿರೋಧಿಗಳು. ಬಿಜೆಪಿ, ಆರ್ಎಸ್ಎಸ್, ಹಿಂದೂ ಮಹಾಸಭಾ ದಲಿತರ ಪರ ಇಲ್ಲ. ಬಿಜೆಪಿಯವರು ದಲಿತರ ಉದ್ಧಾರ ಮಾಡಿದ್ದೇವೆಂದು ಓಡಾಡುತ್ತಿದ್ದಾರೆ. ದೇಶದಲ್ಲಿ ಕಾಂಗ್ರೆಸ್ ಬಲಿಷ್ಠವಾಗಿರೋದು ಕರ್ನಾಟಕ ರಾಜ್ಯದಲ್ಲಿ. ಕರ್ನಾಟಕದಲ್ಲಿ ನಮ್ಮ ಸರ್ಕಾರ ಒಳ್ಳೆಯ ಯೋಜನೆಗಳನ್ನು ಕೊಟ್ಟಿದೆ ಎಂದು ಹೇಳಿದ್ದಾರೆ.
ಬೆಳಗಾವಿ: ಭಾರತದ ಸಂವಿಧಾನಕ್ಕೆ ಆಪತ್ತು ಎದುರಾಗಿದೆ. ಆ ಸಂವಿಧಾನದ ರಕ್ಷಣೆಯ ಹೊಣೆ ಕಾಂಗ್ರೆಸ್ ಮೇಲಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ 7.8 ಜಿಡಿಪಿ ಬೆಳವಣಿಗೆ ಇತ್ತು. ಆಗ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅತ್ಯುತ್ತಮ ಆರ್ಥಿಕ ತಜ್ಞ. ಆರ್ಟಿಐ ಸೇರಿದಂತೆ ಜನಪರ ಕಾರ್ಯಕ್ರಮಗಳನ್ನು ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಜಾರಿ ಮಾಡಿತ್ತು. ಬಡವರಿಗಾಗಿ ಅನೇಕ ಯೋಜನೆಯನ್ನು ಕಾಂಗ್ರೆಸ್ ಜಾರಿಗೆ ತಂದಿತು. ಈ ರೀತಿಯ ಕಾರ್ಯಕ್ರಮಗಳನ್ನು ಎನ್‌ಡಿಎ ಜಾರಿಗೊಳಿಸಿದ್ದಾರಾ? ಬಿಜೆಪಿಯವರು ನಾವು ದಲಿತರನ್ನು ರಾಷ್ಟ್ರಪತಿಯನ್ನಾಗಿ ಮಾಡಿದೆವು ಎಂದು ಹೇಳಬಹುದು. ಆದರೆ, ಬಿಜೆಪಿಯವರು, RSSನವರು, ಹಿಂದೂ ಮಹಾಸಭಾದವರು ಯಾವತ್ತಿದ್ದರೂ ದಲಿತ ವಿರೋಧಿಗಳು. ಅವರು ಎಂದಿಗೂ ದಲಿತರ ಪರ ಇರಲಿಲ್ಲ. ಎಂಎಸ್‌ಬಿ ಜಾರಿ ಮಾಡಿಲ್ಲ, ಇದರ ಬಗ್ಗೆ ಮೋದಿ ಮಾತನಾಡುತ್ತಿಲ್ಲ ಎಂದು ಖರ್ಗೆ ಟೀಕಿಸಿದ್ದಾರೆ.
ಆರ್ಎಸ್ಎಸ್, ಬಿಜೆಪಿಯವರು ಯಾವಾಗಲೂ ದಲಿತ ವಿರೋಧಿಗಳು. ಬಡವರು, ರೈತರು, ಕೂಲಿಕಾರ್ಮಿಕರ ಬಗ್ಗೆ ಬಿಜೆಪಿಯವರಿಗೆ ಚಿಂತೆ ಇಲ್ಲ ಎಂದು ಬೆಳಗಾವಿಯ ಸಿಪಿಎಡ್ ಮೈದಾನದಲ್ಲಿ ನಡೆದ ಗಾಂಧಿ ಭಾರತ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ನೀಡಿದ್ದಾರೆ. 1924ರಲ್ಲಿ ಮಹಾತ್ಮ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧೀವೇಶನದ ಶತಮಾನೋತ್ಸವದ ನೆನಪಿಗಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಸೋನಿಯಾ ಗಾಂಧಿ ತಮಗೆ ಬಂದಿದ್ದ ಪ್ರಧಾನಮಂತ್ರಿ ಸ್ಥಾನವನ್ನು ತ್ಯಾಗ ಮಾಡಿದರು. ತಮ್ಮ ಬದಲು ಮನಮೋಹನ್ ಸಿಂಗ್ ಅವರನ್ನು ಪ್ರಧಾನಿಯನ್ನಾಗಿ ಮಾಡಿದರು. ದೇಶಕ್ಕಾಗಿ ರಾಜೀವ್ ಗಾಂಧಿ, ಸೋನಿಯಾ ಗಾಂಧಿ ತ್ಯಾಗ ಮಾಡಿದರು. ನಾವು ಈ ರೀತಿಯ ತ್ಯಾಗ ಮಾಡಲು ಸಾಧ್ಯವಾ? ಎಂದ ಮಲ್ಲಿಕಾರ್ಜುನ ಖರ್ಗೆ ಪ್ರಶ್ನೆ ಮಾಡಿದ್ದಾರೆ. ನಾವು ಕೊಟ್ಟ ಯೋಜನೆಯನ್ನು ಟೀಕೆ ಮಾಡಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಕಾಂಗ್ರೆಸ್ ಬಡವರ ಪರ ಪಕ್ಷ. ಇಂದಿರಾ ಗಾಂಧಿ ಟೆನ್ ಪಾಯಿಂಟ್ ಯೋಜನೆ ಜಾರಿ ಮಾಡಿದರು ಎಂದು ಖರ್ಗೆ ಹೇಳಿದ್ದಾರೆ.
ಇದನ್ನೂ ಓದಿ: ಬೆಳಗಾವಿ ಕಾಂಗ್ರೆಸ್ ಅಧಿವೇಶನ: ಇಲ್ಲೂ ಮೊಳಗಿತು ಡಿಕೆ ಶಿವಕುಮಾರ್ ಮುಂದಿನ ಸಿಎಂ ಕೂಗು!
ಗಾಂಧಿ ಕುಟುಂಬಕ್ಕೆ ಮೋದಿ, ಅಮಿತ್ ಶಾ ಹಾಗೂ ಅವರ ಚಮಚಗಳು ಬೈಯುತ್ತಾರೆ. ಅಭಿವೃದ್ಧಿ ಕೆಲಸ ಮಾಡಲು ಆಗದೆ ಗಾಂಧಿ ಕುಟುಂಬದ ಬಗ್ಗೆ ಬೈಯ್ಯುತ್ತಾರೆ. ನಾಥೂರಾಮ್ ಗೋಡ್ಸೆ ಸಾವರ್ಕರ್ ಶಿಷ್ಯ. ಗಾಂಧೀಜಿಯನ್ನು ಕೊಂದ ಗೋಡ್ಸೆಯನ್ನು ಮೋದಿ ಪೂಜೆ ಮಾಡುತ್ತಾರೆ ಎಂದು ಬೆಳಗಾವಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಪ್ರಿಯಾಂಕಾ ಗಾಂಧಿ ಗುಣಗಾನ:
ಬೆಳಗಾವಿ ಕಿತ್ತೂರು ರಾಣಿ ಚೆನ್ನಮ್ಮನ ಜನ್ಮ ಭೂಮಿ. ಅವರು ದೇಶದ ಸ್ವಾಭಿಮಾನಕ್ಕಾಗಿ ಹೋರಾಟ ಮಾಡಿದರು. ಬಿಜೆಪಿ, ಆರ್ಎಸ್ಎಸ್ ಬಗ್ಗೆ ಹೋರಾಟ ಮಾಡುವ ಯಾರಾದರೂ ಶಕ್ತಿಶಾಲಿ ಇದ್ದರೆ ಅದು ಪ್ರಿಯಾಂಕಾ ಗಾಂಧಿಗೆ ಮಾತ್ರ. ಪ್ರಿಯಾಂಕಾ ಗಾಂಧಿ ಯಾರಿಗೂ ಹೆದರುವುದಿಲ್ಲ, ಅವರಿಗೆ ಎಲ್ಲ ರೀತಿಯ ಶಕ್ತಿ ಇದೆ. ನಮ್ಮ ಪಕ್ಷದ ಕಿತ್ತೂರು ರಾಣಿ ಯಾರಪ್ಪ ಅಂದರೆ ಅದು ಪ್ರಿಯಾಂಕಾ ಗಾಂಧಿ. ಅವರು ಅಪ್ಪನನ್ನು ಕಳೆದುಕೊಂಡು ಬೆಳೆದವರು. ಈ ಗಾಂಧಿ ಕುಟುಂಬಕ್ಕೆ ಅಮಿತ್ ಶಾನೂ ಬೈತಾರೆ ಮೋದಿನೂ ಬೈತಾರೆ, ಅವರ ಚಮಚಾಗಳು ಬೈತಾರೆ. ಅದು ಬಿಟ್ಟು ಅವರಿಗೆ ಬೇರಾವ ಕೆಲಸವೂ ಇಲ್ಲ ಎಂದು ಖರ್ಗೆ ಲೇವಡಿ ಮಾಡಿದ್ದಾರೆ.
ಇದನ್ನೂ ಓದಿ: ಬೆಳಗಾವಿ ಕಾಂಗ್ರೆಸ್ ಅಧಿವೇಶನ: ಗಾಂಧಿ ಪುತ್ಥಳಿಯನ್ನು ನೂತನ ಶೈಲಿಯಲ್ಲಿ ಅನಾವರಣಗೊಳಿಸಿದ ಮಲ್ಲಿಕಾರ್ಜುನ ಖರ್ಗೆ
1924ರಲ್ಲಿ ಅಂಬೇಡ್ಕರ್ ಬಹಿಷ್ಕೃತ ಹಿತ ರಕ್ಷಣಾ ಸಮಿತಿ ಸಭೆ ಮಾಡಿದರು. ಆ ಸಭೆಗೂ ಒಂದು ವರ್ಷವಾಯ್ತು. ನಮ್ಮಲ್ಲಿ ವ್ಯತ್ಯಾಸ ತಂದಿಡುವ ಕೆಲಸವನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ಅಂಬೇಡ್ಕರ್‌ಗೆ ಕಾಂಗ್ರೆಸ್ ಅವಮಾನ ಮಾಡಿತ್ತು ಎಂದು ಹೇಳುತ್ತಾರೆ. ಇದು ಸಾಧ್ಯವೇ ಇಲ್ಲ. ಅಂಬೇಡ್ಕರ್ ಪುತ್ಥಳಿ ಇಟ್ಟಿದ್ದು ಇಂದಿರಾ ಗಾಂಧಿ ಕಾಲದಲ್ಲಿ. ಇಂದಿರಾ ಗಾಂಧಿ ಸಂಸತ್ ಭವನದ ಮುಂಭಾಗ ಪುತ್ಥಳಿಯನ್ನು ಇಟ್ಟಿದ್ದರು. ಆದರೆ ಈ ಮೋದಿ ಅಂಬೇಡ್ಕರ್ ಪುತ್ಥಳಿಯನ್ನು ಮೂಲೆಯಲ್ಲಿ ಹಾಕಿದ್ದಾರೆ ಎಂದು ಖರ್ಗೆ ಕಿಡಿಕಾರಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ