AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

4 ಲಕ್ಷ ರೂ.ಗೆ ಏಳು ವರ್ಷದ ಬಾಲಕನ ಮಾರಾಟ: ಬೆಳಗಾವಿಯಲ್ಲಿ ನಾಲ್ವರ ಬಂಧನ

ಬೆಳಗಾವಿ ಜಿಲ್ಲೆಯಲ್ಲಿ ಮಕ್ಕಳ ಕಳ್ಳಸಾಗಣೆ, ಮಾರಾಟ ಪ್ರಕರಣಗಳು ವರದಿಯಾಗಿವೆ. ಮೂರು ತಿಂಗಳಲ್ಲಿ ಇಂಥ ಮೂರು ಘಟನೆಗಳು ಬೆಳಕಿಗೆ ಬಂದಿದ್ದು, ಈ ಪೈಕಿ ಏಳು ವರ್ಷದ ಬಾಲಕನೊಬ್ಬನನ್ನು ಪತ್ತೆ ಮಾಡಿ ನಾಲ್ಕು ಮಂದಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಾಲಕನನ್ನು 4 ಲಕ್ಷ ರೂ.ಗೆ ಮಾರಾಟ ಮಾಡಲಾಗಿತ್ತು.

4 ಲಕ್ಷ ರೂ.ಗೆ ಏಳು ವರ್ಷದ ಬಾಲಕನ ಮಾರಾಟ: ಬೆಳಗಾವಿಯಲ್ಲಿ ನಾಲ್ವರ ಬಂಧನ
ಸಾಂದರ್ಭಿಕ ಚಿತ್ರ
Ganapathi Sharma
|

Updated on: Jan 22, 2025 | 10:52 AM

Share

ಬೆಳಗಾವಿ, ಜನವರಿ 22: ಮಕ್ಕಳ ಮಾರಾಟ, ಮಕ್ಕಳ ಕಳ್ಳಸಾಗಣೆ ಪ್ರಕರಣಗಳು ಮತ್ತೆ ಬೆಳಗಾವಿಯಲ್ಲಿ ಸದ್ದು ಮಾಡುತ್ತಿವೆ. ಕಳೆದ ಮೂರು ತಿಂಗಳುಗಳಲ್ಲಿ ಮಕ್ಕಳ ಕಳ್ಳಸಾಗಣೆ ಸಂಬಂಧಿತ ಮೂರು ಪ್ರಕರಣಗಳು ಬೆಳಕಿಗೆ ಬಂದಿವೆ. ಜಿಲ್ಲೆಯ ಹುಕ್ಕೇರಿ ತಾಲೂಕಿನ ಸುಲ್ತಾನಪುರದ ಏಳು ವರ್ಷದ ಬಾಲಕನನ್ನು 4 ಲಕ್ಷ ರೂ.ಗೆ ಮಾರಾಟ ಮಾಡಿದ ಆರೋಪದ ಮೇಲೆ ನಾಲ್ವರನ್ನು ಬಂಧಿಸಲಾಗಿದೆ.

ಸುಲ್ತಾನಪುರ ಮೂಲದ ಸದಾಶಿವ ಶಿವಬಸಪ್ಪ ಮಗದುಮ್ (ಮಗುವಿನ ಮಲತಂದೆ), ಭಡಗಾಂವ್​ ಮೂಲದ, ಸದ್ಯ ಸುಲ್ತಾನಪುರದಲ್ಲಿ ವಾಸವಿರುವ ಲಕ್ಷ್ಮಿ ಬಾಬು ಗೋಲಭಾವಿ, ಕೊಲ್ಲಾಪುರದ ನಾಗಲಾ ಪಾರ್ಕ್‌ನ ಸಂಗೀತಾ ವಿಷ್ಣು ಸಾವಂತ್, ಅಂಬೇಡ್ಕರ್ ನಗರದ ನಿವಾಸಿ ಮತ್ತು ಕಾರವಾರದ ಹಳಿಯಾಳ ತಾಲೂಕಿನ ಕೆಸ್ರೋಳಿಯ ಅನಸೂಯಾ ಗಿರಿಮಲ್ಲಪ್ಪ ದೊಡ್ಮನಿ ಬಂಧಿತ ಆರೋಪಿಗಳಾಗಿದ್ದಾರೆ.

ಶಿವಬಸಪ್ಪ ಮಗದುಮ್, ಕೊಲ್ಲಾಪುರ ಮತ್ತು ಕಾರವಾರದ ಕೆಲವು ಮಧ್ಯವರ್ತಿಗಳು ಸೇರಿ ಬಾಲಕನನ್ನು ಬೆಳಗಾವಿ ನಗರದ ದಿಲಶಾದ್ ಸಿಕಂದರ್ ತಹಸೀಲ್ದಾರ್ ಎಂಬ ಮಹಿಳೆಗೆ 4 ಲಕ್ಷ ರೂ.ಗೆ ಮಾರಾಟ ಮಾಡಿದ್ದರು. ಇಬ್ಬರು ಹೆಣ್ಣು ಮಕ್ಕಳನ್ನು ಹೊಂದಿರುವ ದಿಲ್ಶಾದ್ ಅವರಿಗೆ ಗಂಡು ಮಗು ಬೇಕಾಗಿತ್ತು ಎಂದು ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ್ ತಿಳಿಸಿರುವುದಾಗಿ ‘ದಿ ನ್ಯೂ ಇಂಡಿಯನ್ ಎಕ್ಸ್​​​ಪ್ರೆಸ್’ ವರದಿ ಮಾಡಿದೆ. ನಾಲ್ಕು ತಿಂಗಳ ಹಿಂದೆ ಬಾಲಕನ ತಾಯಿ ಸಂಗೀತಾ ಗುಡಪ್ಪ ಕಮ್ಮಾರ್ ಅವರನ್ನು ಮಗದುಮ್ ವಿವಾಹವಾಗಿದ್ದರು. ಮಗದುಮ್ ಅವರಿಗೆ ಈ ಹಿಂದೆ ಒಂದು ಮದುವೆಯಾಗಿದ್ದು, ಮಕ್ಕಳನ್ನು ಹೊಂದಿದ್ದರು. ಅವರ ಮಕ್ಕಳು ಆಗಾಗ್ಗೆ ಜಗಳವಾಡುತ್ತಿದ್ದರು ಮತ್ತು ಇದರಿಂದ ಬೇಸತ್ತು ಮಗದುಮ್ ಹುಡುಗನನ್ನು ಮಾರಾಟ ಮಾಡಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ಜಾತ್ರೆ ಗಲಾಟೆ ಕೊಲೆಯಲ್ಲಿ ಅಂತ್ಯ: ಸಿನಿಮಾ ರೀತಿಯಲ್ಲಿ ಸ್ಕೆಚ್ ಹಾಕಿ ಕುಸ್ತಿ ಪೈಲ್ವಾನ್​ ಹತ್ಯೆ

ನಾಲ್ಕು ತಿಂಗಳ ಹಿಂದೆ ಸಂಗೀತಾ ಅವರನ್ನು ಮದುವೆಯಾಗಲು ಮಗದುಮ್​ಗೆ ಲಕ್ಷ್ಮಿ ಸಹಾಯ ಮಾಡಿದ್ದಳು. ಬಳಿಕ ಸಂಚು ರೂಪಿಸಿ ಬಾಲಕನನ್ನು ಕಾರವಾರದ ಕೆಸ್ರೋಳಿಯಲ್ಲಿರುವ ಅನಸೂಯಾ ದೊಡ್ಮನಿ ಎಂಬುವರಿಗೆ ಒಪ್ಪಿಸುವಂತೆ ಕೇಳಿಕೊಂಡಿದ್ದಳು. ಬಳಿಕ ಅನಸೂಯಾ ಬಾಲಕನನ್ನು ಅನಾಥ ಎಂದು ಹೇಳಿ ದಿಲ್ಶಾದ್‌ಗೆ ಮಾರಾಟ ಮಾಡಿದ್ದಾಳೆ ಎಂದು ವರದಿ ಉಲ್ಲೇಖಿಸಿದೆ.

ಏತನ್ಮಧ್ಯೆ, ಬಾಲಕನ ತಾಯಿ ಸಂಗೀತಾ ಕಮ್ಮಾರ್ ಮಗ ಕಾಣೆಯಾಗಿದ್ದಾನೆ ಎಂದು ದೂರು ದಾಖಲಿಸಿದ್ದರು. ತನಿಖೆ ನಡೆಸಿದ ಪೊಲೀಸರು ಬೈಲಹೊಂಗಲ ಸಮೀಪದ ಗ್ರಾಮವೊಂದರಲ್ಲಿ ಬಾಲಕನನ್ನು ಪತ್ತೆ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ