AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುದ್ದೆ ತೋರಿಸದೆ ಅಧಿಕಾರಿಗಳನ್ನು ವರ್ಗಾಯಿಸುವಂತಿಲ್ಲ: ಹೈಕೋರ್ಟ್​​ ಮಹತ್ವದ ಆದೇಶ

ಹುದ್ದೆ ತೋರಿಸದೆ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಸರ್ಕಾರದ ಕ್ರಮಕ್ಕೆ ಕರ್ನಾಟಕ ಹೈಕೋರ್ಟ್​​ ಬ್ರೇಕ್​​ ಹಾಕಿದೆ. ಈ ಬಗ್ಗೆ ಮಹತ್ವದ ಆದೇಶ ಮಾಡಿರುವ ನ್ಯಾಯಾಯಲಯ, ಹುದ್ದೆ ತೋರಿಸದೆ ಅಧಿಕಾರಿಗಳನ್ನು ವರ್ಗಾವಣೆ ಮಾಡುವಂತಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ. ಈ ರೀತಿಯ ಆದೇಶಗಳಿಂದ ಸರ್ಕಾರದ ಹಣ ಪೋಲಾಗುವ ಕಾರಣ, ಇಂತಹ ಪ್ರಕರಣಗಳಲ್ಲಿ ಇಲಾಖಾ ಮುಖ್ಯಸ್ಥರೇ ಹೊಣೆಗಾರರು ಎಂದು ಹೇಳಿದೆ.

ಹುದ್ದೆ ತೋರಿಸದೆ ಅಧಿಕಾರಿಗಳನ್ನು ವರ್ಗಾಯಿಸುವಂತಿಲ್ಲ: ಹೈಕೋರ್ಟ್​​ ಮಹತ್ವದ ಆದೇಶ
ಕರ್ನಾಟಕ ಹೈಕೋರ್ಟ್Image Credit source: Google
Ramesha M
| Edited By: |

Updated on:Feb 22, 2026 | 7:11 AM

Share

ಬೆಂಗಳೂರು. ಫೆಬ್ರವರಿ 22: ಹುದ್ದೆ ತೋರಿಸದೆ ಅಧಿಕಾರಿಗಳನ್ನು ವರ್ಗಾಯಿಸುವಂತಿಲ್ಲ. ಈ ರೀತಿಯ ಕ್ರಮಗಳಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗಲಿದೆ ಎಂದು ಕರ್ನಾಟಕ ಹೈಕೋರ್ಟ್​​ನ​​ ವಿಭಾಗೀಯ ಪೀಠ ಮಹತ್ವದ ಆದೇಶ ಮಾಡಿದೆ. ಈ ರೀತಿಯ ವರ್ಗಾವಣೆಗಳಿಂದ ತೆರಿಗೆದಾರರ, ಸಾರ್ವಜನಿಕರ ಹಣ ದುರ್ವಿನಿಯೋಗವಾದಂತಾಗಲಿದೆ. ಕೆಲಸ ಪಡೆಯದೇ ಮನೆಯಲ್ಲಿ ಕುಳಿತವರಿಗೆ ಸಂಬಳ ನೀಡಿದಂತಾಗುತ್ತದೆ. ಹೀಗಾಗಿ ಹುದ್ದೆ ತೋರಿಸುವವರೆಗೆ ಹಿಂದಿನ ಹುದ್ದೆಯಿಂದ ಬಿಡುಗಡೆ ಮಾಡದಂತೆ ಆದೇಶಿಸಿದೆ.

ಅಲ್ಲದೆ, ಹುದ್ದೆ ತೋರಿಸದೇ ವರ್ಗಾವಣೆ ಮಾಡಿದರೆ ಇಲಾಖೆಯ ಮುಖ್ಯಸ್ಥರೇ ಹೊಣೆಗಾರರಾಗುತ್ತಾರೆ. ಕಾಯುವಿಕೆಯ ಅವಧಿಯ ವೇತನವನ್ನು ಕಾರಣಕರ್ತ ಅಧಿಕಾರಿಯಿಂದಲೇ ವಸೂಲು ಮಾಡಿ ಎಂದು ನ್ಯಾ. ಎಸ್.ಜಿ. ಪಂಡಿತ್ ಮತ್ತು ನ್ಯಾ. ಕೆ.ವಿ. ಅರವಿಂದ್ ಅವರಿದ್ದ ಪೀಠ ಆದೇಶಿಸಿದೆ. ಅಬಕಾರಿ ಉಪ ಆಯುಕ್ತ ಕೆ. ಅರುಣ್ ಕುಮಾರ್ ಅವರನ್ನು ಹುದ್ದೆ ತೋರಿಸದೇ 2025ರ ಜ.29ರಂದು ವರ್ಗಾವಣೆ ಮಾಡಲಾಗಿತ್ತು. ಅಂದಿನಿಂದಲೂ ಹುದ್ದೆಯಿಲ್ಲದ ಕಾರಣ ಅವರು ಪೋಸ್ಟಿಂಗ್‌ಗಾಗಿ ಹೈಕೋರ್ಟ್ ಮೆಟ್ಟಿಲೇರಿ ರಿಟ್ ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ: ಐಎಎಸ್ ಅಧಿಕಾರಿಗೆ ಹೈಕೋರ್ಟ್ ಶಾಕ್; ಮಾನನಷ್ಟ ಪ್ರಕರಣದಲ್ಲಿ ರೋಹಿಣಿ ಸಿಂಧೂರಿಗೆ ಹಿನ್ನಡೆ

ಜೈಲು ಅಧಿಕಾರಿಗಳ ವರ್ತನೆಗೆ ಹೈಕೋರ್ಟ್ ಅಸಮಾಧಾನ

4 ವರ್ಷಗಳಿಂದ ಆರೋಪಿಯನ್ನು ಕೋರ್ಟ್‌ಗೆ ಹಾಜರುಪಡಿಸದ ಜೈಲು ಅಧಿಕಾರಿಗಳ ವರ್ತನೆಗೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಆರೋಪಿಯನ್ನು ಕೋರ್ಟ್‌ಗೆ ಹಾಜರುಪಡಿಸದಿದ್ದರೆ ಟ್ರಯಲ್ ನಡೆಯುವುದು ಹೇಗೆ? ನಿಮ್ಮ ಜೈಲನ್ನು ವ್ಯವಸ್ಥಿತವಾಗಿಡಿ ಎಂದು ಕೋರ್ಟ್​​ಗೆ ಹಾಜಾರಾಗಿದ್ದ ಕಾರಾಗೃಹ ಇಲಾಖೆ ಡಿಐಜಿಗೆ ಪೀಠ ಸೂಚಿಸಿದೆ. 6 ತಿಂಗಳಿನಿಂದ ಕೋರ್ಟ್‌ಗೆ ಹಾಜರುಪಡಿಸದ ಕೈದಿಗಳ ವಿವರ ಮತ್ತು ಕಾಲಕಾಲಕ್ಕೆ ಕೋರ್ಟ್‌ಗೆ ಹಾಜರುಪಡಿಸಲು ಕೈಗೊಂಡ ಕ್ರಮದ ಬಗ್ಗೆ ವರದಿ ನೀಡುವಂತೆ ಸರ್ಕಾರಕ್ಕೆ ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಪೀಠ ಹೇಳಿದೆ. ಕಳ್ಳತನ ಪ್ರಕರಣದ ಆರೋಪಿ ಇಮ್ರಾನ್ ಎಂಬಾತ ಶ್ಯೂರಿಟಿ ಸಿಗದೇ ಜೈಲಿನಲ್ಲಿದ್ದ. ಕೋರ್ಟ್ ವಾರಂಟ್‌ ಹೊರಡಿಸಿದರೂ ಜಾರಿಗೊಳಿಸದ ಪೊಲೀಸರು, ಆರೋಪಿ ಜೈಲಿನಲ್ಲೇ ಇದ್ದರೂ ಸಿಕ್ಕಿಲ್ಲ ಎಂದು ಉತ್ತರಿಸಿದ್ದರು. ಹೀಗಾಗಿ ಮುಖ್ಯ ಪೇದೆ ವಿರುದ್ಧ ಇಲಾಖಾ ವಿಚಾರಣೆಗೆ ಸೂಚನೆ ನೀಡಿರುವ ಹೈಕೋರ್ಟ್​​, ವಿಚಾರಣೆ ಮಾರ್ಚ್ 6ಕ್ಕೆ ಮುಂದೂಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 7:10 am, Sun, 22 February 26