KPTCL Recruitment Scam: ಎಲೆಕ್ಟ್ರಾನಿಕ್ ಡಿವೈಸ್ ಪೂರೈಸುತ್ತಿದ್ದ ಆರೋಪಿ ಅರೆಸ್ಟ್: ಬಂಧಿತರ ಸಂಖ್ಯೆ 17ಕ್ಕೆ ಏರಿಕೆ
ಬೆಂಗಳೂರಿನ ದೇವಸಂದ್ರದ ಮೊಹಮ್ಮದ್ ಅಜೀಮುದ್ದಿನ್ ಬಂಧಿತ ಆರೋಪಿ. ಕೆಪಿಟಿಸಿಎಲ್ ಕಿರಿಯ ಸಹಾಯಕರ ನೇಮಕಾತಿ ಅಕ್ರಮದಲ್ಲಿ ಬಂಧಿತರ ಸಂಖ್ಯೆ 17ಕ್ಕೆ ಏರಿಕೆಯಾಗಿದೆ.
ಬೆಳಗಾವಿ: ಕೆಪಿಟಿಸಿಎಲ್ ಕಿರಿಯ ಸಹಾಯಕ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣ ಸಂಬಂಧ ವಿವಿಧ ಬಗೆಯ ಎಲೆಕ್ಟ್ರಾನಿಕ್ ಡಿವೈಸ್ ಪೂರೈಸುತ್ತಿದ್ದ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬೆಂಗಳೂರಿನ ದೇವಸಂದ್ರದ ಮೊಹಮ್ಮದ್ ಅಜೀಮುದ್ದಿನ್ ಬಂಧಿತ ಆರೋಪಿ. ಕೆಪಿಟಿಸಿಎಲ್ ಕಿರಿಯ ಸಹಾಯಕರ ನೇಮಕಾತಿ ಅಕ್ರಮದಲ್ಲಿ ಬಂಧಿತರ ಸಂಖ್ಯೆ 17ಕ್ಕೆ ಏರಿಕೆಯಾಗಿದೆ. ಕಿಂಗ್‌ಪಿನ್ ಸಂಜು ಭಂಡಾರಿ ಹಾಗೂ ಬೆಳಗಾವಿಯ ಇತರರಿಗೆ ಆರೋಪಿ ಎಲೆಕ್ಟ್ರಾನಿಕ್ ಡಿವೈಸ್ ಪೂರೈಸುತ್ತಿದ್ದ. ಎಲೆಕ್ಟ್ರಾನಿಕ್ ಡಿವೈಸ್ ಅಳವಡಿಸಿದ ಏಳು N-95 ಮಾಸ್ಕ್, 41 ಎಲೆಕ್ಟ್ರಾನಿಕ್ ಡಿವೈಸ್ ಅಳವಡಿಸಿದ ಬನಿಯನ್, 445 ಎಲೆಕ್ಟ್ರಾನಿಕ್ ಇಯರ್ ಪೀಸ್, 554 ವಿವಿಧ ಬಗೆಯ ಚಾರ್ಜಿಂಗ್ ಕೇಬಲ್, 6 ವಾಕಿಟಾಕಿ ಜಪ್ತಿ ಮಾಡಲಾಗಿದೆ. ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆಯಿಂದ ಪ್ರಮುಖ ಆರೋಪಿಯ ಬಂಧನವಾಗಿದೆ.
ಕೇಂದ್ರ-ರಾಜ್ಯ ಸರ್ಕಾರಗಳಿಂದ ಈವರೆಗೆ ನಡೆದ ವಿವಿಧ ನೇಮಕಾತಿ ಪರೀಕ್ಷೆಗಳಿಗೆ ಎಲೆಕ್ಟ್ರಾನಿಕ್ ಡಿವೈಸ್ ಪೂರೈಕೆ ಶಂಕೆ ವ್ಯಕ್ತವಾಗಿದೆ. ಪರೀಕ್ಷೆಗಳಲ್ಲಿ ಅಕ್ರಮ ಎಸಗಲು ಎಲೆಕ್ಟ್ರಾನಿಕ್ ಉಪಕರಣಗಳ ಪೂರೈಕೆ ಆರೋಪ ಮಾಡಿದ್ದು, ಬೆಂಗಳೂರಿನ ಎಸ್ಪಿ ರಸ್ತೆಯಲ್ಲಿ ಸ್ಪೈ ಜೋನ್ ಎಲೆಕ್ಟ್ರಾನಿಕ್ ಮಳಿಗೆಯನ್ನು ಆರೋಪಿ ಹೊಂದಿದ್ದಾನೆ. ಮಳಿಗೆ ಸೀಜ್ ಮಾಡಿ ಆರೋಪಿಯನ್ನು ಪೊಲೀಸರು ಬೆಳಗಾವಿಗೆ ಕರೆತಂದಿದ್ದಾರೆ. ಕೆಪಿಟಿಸಿಎಲ್ ಕಿರಿಯ ಸಹಾಯಕರ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮವೆಸಗಿದ್ದು, ಆರೋಪಿಗಳನ್ನು ಜಾಲಾಡಲು ಹೋದ ಪೊಲೀಸರ ಖೆಡ್ಡಾಕ್ಕೆ ಮುಖ್ಯ ಆರೋಪಿ ಬಿದಿದ್ದಾನೆ.
ಅಕ್ರಮವಾಗಿ ಎಲೆಕ್ಟ್ರಾನಿಕ್ ಸೂಕ್ಷ್ಮ ಉಪಕರಣ ಖರೀದಿಸುತ್ತಿದ್ದ. ದೆಹಲಿ, ಹೈದರಾಬಾದ್‌ನ ಡೀಲರ್‌ಗಳಿಂದ ಅಕ್ರಮವಾಗಿ ಉಪಕರಣಗಳ ಖರೀದಿ ಮಾಡಲಾಗುತ್ತಿತ್ತು. ಮಹಮ್ಮದ್ ಅಜೀಮುದ್ದೀನ್ ಬಳಿ ಸಂಜು ಭಂಡಾರಿ ಇಲೆಕ್ಟ್ರಾನಿಕ್ ಉಪಕರಣ ಖರೀದಿಸುತ್ತಿದ್ದ. ಅಭ್ಯರ್ಥಿಗಳಿಂದ ಹಣ ಪಡೆದು ಬ್ಲೂಟೂತ್, ಸ್ಮಾರ್ಟ್ ವಾಚ್ ಪೂರೈಸುತ್ತಿದ್ದ.
ಏನಿದು ಪ್ರಕರಣ?
ಕೆಪಿಟಿಸಿಎಲ್ ಕಿರಿಯ ಸಹಾಯಕರ ನೇಮಕಾತಿಯ ಪರೀಕ್ಷೆ ಆ.7ರಂದು ಗೋಕಾಕ್ನಲ್ಲಿ ನಡೆದಿತ್ತು. ಈ ಪರೀಕ್ಷೆಯಲ್ಲಿ ಸಿದ್ದಪ್ಪ ಎಂಬ ವ್ಯಕ್ತಿ ಸ್ಮಾರ್ಟ್ ವಾಚ್ ಬಳಸಿ ಪ್ರಶ್ನೆ ಪತ್ರಿಕೆಯ ಫೋಟೋ ತೆಗೆದು ಹೊರಗೆ ಕಳುಹಿಸಿದ್ದನು. ಈ ವಿಚಾರ ತಿಳಿದ ಅಭ್ಯರ್ಥಿಯೊಬ್ಬರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಅನ್ವಯ ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ನಡೆಸಿದಾಗ ಅಕ್ರಮ ಎಸಗಿರುವುದು ಖಚಿತವಾಗಿತ್ತು. ಅದರಂತೆ ಅ.22ರಂದು 9 ಮಂದಿಯನ್ನು ಬಂಧಿಸಿದ್ದ ಪೊಲೀಸರು, ಅ.24ರಂದು ಮೂವರನ್ನು ಬಂಧಿಸಿದ್ದರು. ಇದೀಗ ಶುಕ್ರವಾರ (ಸೆ.2) ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:23 am, Fri, 9 September 22