ಮೊದ್ಲೇ ಭವಿಷ್ಯ ಹೇಳಿದ್ರು: ಕಾರು ಅಪಘಾತದ ಸತ್ಯ ಬಿಚ್ಚಿಟ್ಟ ಸಹೋದರ ಚನ್ನರಾಜ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಸಹೋದರ, ವಿಧಾನಪರಿಷತ್ ಸದಸ್ಯ ಚೆನ್ನರಾಜು ಹಟ್ಟಿಹೊಳಿ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ನಿನ್ನೆ(ಜನವರಿ 14) ಕಾಂಗ್ರೆಸ್ ಶಾಸಕಾಂಗ ಸಭೆ ಮುಗಿಸಿ ಬೆಂಗಳೂರಿನಿಂದ ಬೆಳಗಾವಿಗೆ ವಾಪಸ್ ಬರುವಾಗ ಇಂದು (ಜನವರಿ 14) ಕಿತ್ತೂರು ತಾಲೂಕಿನ ಅಂಬಡಗಟ್ಟಿ ಗ್ರಾಮದಲ್ಲಿ ಕಾರು ಅಪಘಾತಕ್ಕೀಡಾಗಿದೆ. ಇನ್ನು ಈ ದುರ್ಘಟನೆ ಕಾರಣವೇನು ಎನ್ನುವುದನ್ನು ಸ್ವತಃ ಚೆನ್ನರಾಜು ಹಟ್ಟಿಹೊಳಿ ಬಿಚ್ಚಿಟ್ಟಿದ್ದಾರೆ.
ಬೆಳಗಾವಿ, (ಜನವರಿ 14): ಕಾರು ಅಪಘಾತದಲ್ಲಿ ಗಾಯಗೊಂಡಿರುವ ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರು ಚಿಕಿತ್ಸೆ ಪಡೆದುಕೊಂಡಿದ್ದು, ಮನೆಗೆ ತೆರಳಿದ್ದು. ವಿಶ್ರಾಂತಿ ಪಡೆದುಕೊಂಡ ನಂತರ ಇದೀಗ ಆಸ್ಪತ್ರೆಗೆ ದೌಡಾಯಿಸಿ ಅಕ್ಕ ಲಕ್ಷ್ಮೀ ಹೆಬ್ಬಾಳ್ಕರ್ ಆರೋಗ್ಯ ವಿಚಾರಿಸಿದರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಎಂಎಲ್ಸಿ ಚನ್ನರಾಜ ಹಟ್ಟಿಹೊಳಿ, ಸಂಕ್ರಮಣ ಹಬ್ಬದ ನಿಮಿತ್ತ ಕುಟುಂಬ ಸಮೇತ ಮನೆ ದೇವರಿಗೆ ಹೋಗಲು ರಾತ್ರಿಯೇ ತರಾತುರಿಯಲ್ಲಿ ಬೆಂಗಳೂರು ನಿವಾಸವನ್ನ ಬಿಟ್ಟಿದ್ವಿ. ದುರಾದೃಷ್ಟವಶಾತ್ ಇಂದು ಬೆಳಗ್ಗೆ 5 ಗಂಟೆಗೆ ಎರಡು ನಾಯಿಗಳು ಒಂದರ ಹಿಂದೆ ಒಂದು ಅಡ್ಡ ಬಂದಿದ್ದರಿಂದ ಅಪಘಾತ ಸಂಭವಿಸಿದೆ. ಇನ್ನೇನು 15 ನಿಮಿಷದಲ್ಲಿ ಮನೆಗೆ ಸೇರಲಿದ್ದೇವು. ಅಷ್ಟರಲ್ಲೇ ಈ ದುರಂತ ಸಂಭವಿಸಿದೆ ಎಂದು ಅಪಘಾತದ ಸತ್ಯ ಬಿಚ್ಚಿಟ್ಟರು. ಅಲ್ಲದೇ ಈ ಹಿಂದೆ ಈ ದುರ್ಘಟನೆ ಬಗ್ಗೆ ಭವಿಷ್ಯ ಹೇಳಿದ್ದನ್ನು ಬಹಿರಂಗಪಡಿಸಿದರು.
ಎರಡು ನಾಯಿಗಳ ಅಡ್ಡ ಬಂದಿದ್ದರಿಂದ ಈ ದುರ್ಘಟನೆ
ನಿನ್ನೆ ಪಕ್ಷದ ಸಿಎಲ್‌ಪಿ ಸಭೆ ಮುಗಿಸಿಕೊಂಡ ರಾತ್ರಿ 11 ಗಂಟೆಗೆ ಬೆಂಗಳೂರಿನ ನಿವಾಸದಿಂದ ಬೆಳಗಾವಿಗೆ ಹೊರಟ್ವಿ. ಇವತ್ತು ಸಂಕ್ರಮಣ ಹಬ್ಬದ ನಿಮಿತ್ತ ಕುಟುಂಬ ಸಮೇತ ಮನೆ ದೇವರಾದ ವೀರಭದ್ರ ದೇವಸ್ಥಾನಕ್ಕೆ ಹೋಗಲು ನಿರ್ಧಾರ ಮಾಡಿದ್ವಿ. ರಾತ್ರಿಯೇ ತರಾತುರಿಯಲ್ಲಿ ಬೆಂಗಳೂರು ನಿವಾಸವನ್ನ ಬಿಟ್ಟಿವಿ. ದುರಾದೃಷ್ಟವಶಾತ್ ಬೆಳಗ್ಗೆ 5 ಗಂಟೆಗೆ ಅಪಘಾತ ಸಂಭವಿಸಿದೆ. ಇನ್ನೇನು 15 ನಿಮಿಷದಲ್ಲಿ ಮನೆಗೆ ಸೇರಲಿದ್ದೇವು. ಆದರೆ ಮಾರ್ಗ ಮಧ್ಯ ಎರಡು ನಾಯಿಗಳು ಒಂದರ ಹಿಂದೆ ಒಂದು ಅಡ್ಡ ಬಂದಿದ್ದು, ಡ್ರೈವರ್ ಏನೂ ಮಾಡಲು ಸಾಧ್ಯವಾಗಲಿಲ್ಲ. ಪ್ರಾಣಿಗಳ ಜೀವ ರಕ್ಷಣೆ ಮಾಡಲು ತರಾತುರಿ ಲೆಫ್ಟ್ ಕಡೆಗೆ ಕಾರನ್ನ ತೆಗೆದುಕೊಂಡಿದ್ದಾನೆ. ಆಗ ರಸ್ತೆ ಬದಿ ಇರೋ ಮರಕ್ಕೆ ಕಾರು ಡಿಕ್ಕಿ ಹೊಡೆದಿದೆ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಚಿತ್ರಗಳು: ಕಾರಿನ ಸ್ಥಿತಿ ನೋಡಿದ್ರೆ ಲಕ್ಷ್ಮೀ ಹೆಬ್ಬಾಳ್ಕರ್ ಬದುಕುಳಿದಿದ್ದೇ ಪವಾಡ..!
ನನಗೆ, ಸಹೋದರಿ ಸಚಿವರಿಗೆ ಬೆನ್ನು ಮೂಳೆಗೆ ಏರ್ ಲೈನ್ಸ್ ಪ್ರ್ಯಾಕ್ಚರ್ ಆಗಿದೆ. ಮನೆಯಲ್ಲಿ ಗಾಬರಿ ಆಗಿದ್ದರಿಂದ ನಾನು ಚಿಕಿತ್ಸೆ ಪಡೆದು ಹೋಗಿದ್ದೆ. ಈಗ ಮತ್ತೆ ಸಹೋದರಿಯನ್ನ ಭೇಟಿ ಮಾಡಿರುವೆ. ಪೆಟ್ಟಾಗಿದ್ದರಿಂದ ನೋವು ಜಾಸ್ತಿಯಿದೆ. ಹೀಗಾಗಿ ಮಾತನಾಡಲು ಸಾಧ್ಯ ಆಗುತ್ತಿಲ್ಲ. ಸಹೋದರಿ ಅಪಾಯದಿಂದ ಪಾರಾಗಿದ್ದಾರೆ. ದೇವರು, ಜನರ ಆಶೀರ್ವಾದಿಂದ ಆರಾಮಾಗಿದ್ದಾರೆ. ಶೀಘ್ರದಲ್ಲೇ ಮತ್ತೆ ಜನರ ಸೇವೆ ಆರಂಭಿಸುತ್ತಾರೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು.
ಡ್ರೈವರ್ ನಿರ್ಲಕ್ಷ್ಯ ದಿಂದ ಅಪಘಾತ ಆಯ್ತಾ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು. ಶಿವು ಅಂತಾ ಒಳ್ಳೆಯ ಡ್ರೈವರ್. ಅಪಘಾತಗೂ ಮುನ್ನ 10 ನಿಮಿಷ ನಾನೇ ಮಾತಾಡಿದೆ. ಪೆಟ್ರೋಲ್ ಹಾಕಿಸಿಕೊಳ್ಳಣವಾ ಎಂದು ಕೇಳಿದೆ. ಇದಕ್ಕೆ ಇಲ್ಲ ಅಣ್ಣಾ 15 ನಿಮಿಷದಲ್ಲಿ ಬೆಳಗಾವಿ ಮುಟ್ಟುತ್ತೇವೆ ಎಂದ. ನಾನು ನಮ್ಮ ಗನ್ ಮ್ಯಾನ್ ಗೂ ಕೇಳಿದೆ. ನಾಯಿಗಳು ಅಡ್ಡ ಬಂದಿದ್ದರಿಂದ ಈ ದುರ್ಘಟನೆ ಆಗಿದೆ ಅಂತಾ ಹೇಳಿದ್ದಾನೆ, ನಾಯಿಗಳು ಬರುವುದಕ್ಕೆ ಮುಂದುಗಡೆ ಕಂಟೇನರ್ ಇದಿದ್ದರಿಂದ ಅಪಘಾತ ಆಗಿದೆ. ಎಂದರು.
ಮನೆಯಲ್ಲಿ ದುರ್ಘಟನೆ ನಡೆಯುತ್ತೆ ಎಂದು ಭವಿಷ್ಯ ಹೇಳಿದ್ರು
ಸಿಎಲ್‌ಪಿ ಸಭೆ ಮುಗಿದ ಬಳಿಕ ನಮಗೆ ಯಾವುದೇ ಬೆಂಗಾವಲು ವಾಹನ ಇರಲಿಲ್ಲ. ನಾವು ಯಾರಿಗೂ ಇಂಟಿಮೇಶನ್ ಕೊಟ್ಟಿರಲಿಲ್ಲ. ಸಂಕ್ರಮಣದ ಆಜುಬಾಜು ಇಂತಹ ಘಟನೆಗಳು ಆಗುತ್ತವೆ ಎಂದು ಹಿರಿಯರು ಹೇಳಿದ್ದರು. ನಮಗೆ ಬೇಕಾದವರು ಸಂಕ್ರಮಣದ ಸಂದರ್ಭದಲ್ಲಿ ಮನೆಯಲ್ಲಿ ದುರ್ಘಟನೆ ನಡೆಯುತ್ತದೆ ಎಂದು ಭವಿಷ್ಯ ಹೇಳಿದ್ರು. ಆದರೂ ಕೂಡಾ ನಮ್ಮಿಂದಲೇ ಅಚಾತುರ್ಯ ನಮ್ಮಿಂದಲೇ ಜರುಗಿದೆ ಎಂದು ಹೇಳಿದರು.
ಡ್ರೈವರ್ ನ ಕರೆಸಿದ್ದರೆ ಈ ದುರ್ಘಟನೆ ನಡೆಯುತ್ತಿರಲಿಲ್ಲ
ಹಬ್ಬ ಇರುವುದಿರಂದ ಬೆಳಗಾವಿ ಡ್ರೈವರ್ ನನಗೆ ಕರೆ ಮಾಡಿ ದಾವಣಗೆರೆ ವರೆಗೂ ಬರುತ್ತೇನೆ ಅಂತಾ ಹೇಳಿದ್ದನು. ನಾನೇ ಬೇಡಬಿಡು ಬೆಳಗ್ಗೆ ಹೊಳೆಗೆ ಸ್ನಾನಕ್ಕೆ ಹೋಗೋಣ ಅಂತಾ ಹೇಳಿದ್ದೆ. ಡ್ರೈವರ್ ನ ದಾವಣಗೆರೆಗೆ ಕರೆಸಿದ್ದರೆ ಈ ದುರ್ಘಟನೆ ನಡೆಯುತ್ತಿರಲಿಲ್ಲ ಎಂದು ಇವಾಗ ಅನಿಸುತ್ತದೆ. ಕಾರಿನಲ್ಲಿ ಮುಂದೆ ಡ್ರೈವರ್, ಆತನ ಪಕ್ಕದಲ್ಲಿ ಗನ್ ಮ್ಯಾನ್ ಇದ್ದರು. ನಾನು ಡ್ರೈವರ್ ಹಿಂದೆ, ಗನ್ ಮ್ಯಾನ್ ಹಿಂದೆ ಸಹೋದರಿ (ಲಕ್ಷ್ಮೀ ಹೆಬ್ಬಾಳ್ಕರ್ ಕುಳಿತ್ತಿದ್ದರು. ಡ್ರೈವರ್ ಗೆ ಮೈಮೇಲೆ ಗಾಯಗಳಾಗಿವೆ, ಗನ್ ಮ್ಯಾನ್ ಗೆ ಒಳಪೆಟ್ಟಾಗಿದೆ ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯ, ಸ್ಪೀಕರ್, ಗೃಹ ಸಚಿವರು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೇರಿ ಪಕ್ಷಾತೀತವಾಗಿ ಎಲ್ಲರೂ ಆರೋಗ್ಯ ವಿಚಾರಿಸಿದ್ದಾರೆ. ನಮ್ಮ ಆರೋಗ್ಯ ವಿಚಾರಿಸಿದವರಿಗೆ ಧನ್ಯವಾದಗಳು. ಸಚಿವೆ ಹೆಬ್ಬಾಳ್ಕರ್ ಅವರನ್ನ ಬೆಂಗಳೂರಿಗೆ ಶಿಫ್ಟ್ ಮಾಡುವ ಅವಶ್ಯಕತೆ ಇಲ್ಲ. ಮೂರು ವಾರಗಳ ಕಾಲ ರೆಸ್ಟ್ ಮಾಡಲು ಹೇಳಿದ್ದಾರೆ. ಬೆಂಗಳೂರಿಗೆ ಶಿಷ್ಟ್ ಮಾಡುವ ಅವಶ್ಯಕತೆ ಬರುವುದಿಲ್ಲ ಎಂದು ತಿಳಿಸಿದರು.