ಸೌಭಾಗ್ಯ ಲಕ್ಷ್ಮೀ ಸಕ್ಕರೆ ಕಾರ್ಖಾನೆ ಹೆಸರಿನಲ್ಲಿ ಸಾಲ; ರಮೇಶ್ ಜಾರಕಿಹೊಳಿ ವಿರುದ್ಧ ಕೈ ನಾಯಕರ ಆರೋಪ

ಸೌಭಾಗ್ಯ ಲಕ್ಷ್ಮೀ ಸಕ್ಕರೆ ಕಾರ್ಖಾನೆ ಹೆಸರಿನಲ್ಲಿ ಸಾಲ; ರಮೇಶ್ ಜಾರಕಿಹೊಳಿ ವಿರುದ್ಧ ಕೈ ನಾಯಕರ ಆರೋಪ
ರಮೇಶ್ ಜಾರಕಿಹೊಳಿ

ಸೌಭಾಗ್ಯ ಲಕ್ಷ್ಮೀ ಸಕ್ಕರೆ ಕಾರ್ಖಾನೆ ಹೆಸರಿನಲ್ಲಿ ಸಾಲ ಪಡೆದು ಮರುಪಾವತಿ ಮಾಡಿಲ್ಲ ಎಂದು ರಮೇಶ್ ಜಾರಕಿಹೊಳಿ ವಿರುದ್ಧ ಕೈ ನಾಯಕರು ಆರೋಪ ಮಾಡಿದ, ಬೆನ್ನಲ್ಲೇ ಬೆಳಗಾವಿಗೆ ​ಸಹಕಾರಿ ಸಚಿವ ಎಸ್‌.ಟಿ.ಸೋಮಶೇಖರ್ ಆಗಮಿಸಿದ್ದು, ಡಿಸಿಸಿ ಬ್ಯಾಂಕ್​ನಲ್ಲಿ ಇಂದು ಮಹತ್ವದ ಸಭೆ ಮಾಡಿದ್ದಾರೆ.

TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

May 10, 2022 | 12:42 PM

ಬೆಳಗಾವಿ: ಸೌಭಾಗ್ಯ ಲಕ್ಷ್ಮೀ ಸಕ್ಕರೆ ಕಾರ್ಖಾನೆ ಹೆಸರಿನಲ್ಲಿ ಸಾಲ ಪಡೆದು ಮರುಪಾವತಿ ಮಾಡಿಲ್ಲ ಎಂದು ರಮೇಶ್ ಜಾರಕಿಹೊಳಿ ವಿರುದ್ಧ ಕೈ ನಾಯಕರು ಆರೋಪ ಮಾಡಿದ, ಬೆನ್ನಲ್ಲೇ ಬೆಳಗಾವಿಗೆ ​ಸಹಕಾರಿ ಸಚಿವ ಎಸ್‌.ಟಿ.ಸೋಮಶೇಖರ್ ಆಗಮಿಸಿದ್ದು, ಡಿಸಿಸಿ ಬ್ಯಾಂಕ್​ನಲ್ಲಿ ಇಂದು ಮಹತ್ವದ ಸಭೆ ಮಾಡಿದ್ದಾರೆ. ಸಭೆಯಲ್ಲಿ ಮಾಹಿತಿ ಪಡೆದಿದ್ದಾರೆ. ಬಳಿಕ ಮಾಧ್ಯಮದವರೊಂದಿಗೆ ಸಚಿವ S.T.ಸೋಮಶೇಖರ್ ಮಾತನಾಡಿದ್ದು, ಶಾಸಕ ರಮೇಶ್ ಜಾರಕಿಹೊಳಿ ಒಬ್ಬರೇ ಸಾಲ ಪಡೆದಿಲ್ಲ. ಒಟ್ಟು 23 ಸಕ್ಕರೆ ಕಾರ್ಖಾನೆಗಳಿಗೆ ಸಾಲ ಕೊಟ್ಟಿದ್ದಾರೆ. ಅಪೆಕ್ಸ್ ಬ್ಯಾಂಕ್​​ಗೆ ನಾನು ಸೀರಿಯಸ್ ಆಗಿ ಹೇಳಿದ್ದೇವೆ. ನೋಟಿಸ್‌ ನೀಡಿ ಸಾಲ ವಸೂಲಾತಿ ಮಾಡುತ್ತಿದ್ದಾರೆ. ಬೆಳಗಾವಿ ಡಿಸಿಸಿ ಬ್ಯಾಂಕ್ 1,024 ಕೋಟಿ ಸಾಲ ನೀಡಿದೆ. ಸಾಲ ಮರುಪಾವತಿಸದವರಿಗೆ ನೋಟಿಸ್​ ನೀಡಲಾಗುತ್ತಿದೆ. ಕಾಂಗ್ರೆಸ್​, JDS, ಬಿಜೆಪಿಯವರು ಸಾಲ ಪಡೆದಿದ್ದಾರೆ ಎಂದು ಸಹಕಾರಿ ಖಾತೆ ಸಚಿವ S.T.ಸೋಮಶೇಖರ್ ಹೇಳಿಕೆ ನೀಡಿದ್ದಾರೆ.

ಸಾಹುಕಾರ್‌ಗಳೆಲ್ಲಾ ಭಿಕ್ಷುಕರಾಗ್ತಿದ್ದಾರೆ ಎಂಬ ಡಿ.ಕೆ ಶಿವಕುಮಾರ ಹೇಳಿಕೆಗೆ ಸಚಿವ ಎಸ್.ಟಿ.ಸೋಮಶೇಖರ್ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ. ರಮೇಶ್ ಅಷ್ಟೇ ಅಲ್ಲ, ಬೆಳಗಾವಿ ಗ್ರಾಮಾಂತರ ಕ್ಷೇತ್ರದ ಶಾಸಕಿ ಲಕ್ಷ್ಮೀ ಕೂಡ ಬಾಕಿ ಉಳಿಸಿಕೊಂಡಿದ್ದಾರೆ. ಲಕ್ಷ್ಮೀ ಒಡೆತನದ ಸಕ್ಕರೆ ಕಾರ್ಖಾನೆ ಸಾಲವೂ ಬಾಕಿ ಇದೆ. ರಾಜ್ಯದಲ್ಲಿ 6 ಸಾವಿರ ಕೋಟಿಗೂ ಹೆಚ್ಚು ಸಾಲ ಬಾಕಿ ಇದೆ. ವಿವಿಧ ಸಕ್ಕರೆ ಕಾರ್ಖಾನೆಗಳು ಸಾಲ ಬಾಕಿ ಉಳಿಸಿಕೊಂಡಿವೆ. ಇದರಲ್ಲಿ ರಾಜಕೀಯವೇನಿಲ್ಲ, ಮುಚ್ಚು ಮರೆಯೂ ಇಲ್ಲ ಎಂದು ಹೇಳಿದ್ದಾರೆ.

ಅದೇ ರೀತಿಯಾಗಿ ಬಿಜೆಪಿ ಸರ್ಕಾರ ಹಗರಣಗಳ ಸರ್ಕಾರ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಬೆಳಗಾವಿಯಲ್ಲಿ ಸಚಿವ ಸೋಮಶೇಖರ್ ತಿರುಗೇಟು ನೀಡಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಅವಧಿಯಲ್ಲಿ ಹಗರಣಗಳು ಆಗಿಲ್ವಾ? ಅವರ ಕಾಲದಲ್ಲಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ಹಾಸಿಗೆ, ದಿಂಬು ಹಗರಣ ಏನಾಯ್ತು ಎಂದು ಸೋಮಶೇಖರ್ ಪ್ರಶ್ನೆ ಮಾಡಿದ್ದಾರೆ. ಯಾವುದೇ ಹಗರಣ ಆಗಿದ್ರೂ ಮಾಹಿತಿ ಕೊಟ್ಟು ಹೇಳಬೇಕು. ಸಿದ್ದರಾಮಯ್ಯ ಸರ್ಕಾರ ಅವಧಿ ಹಗರಣ ಮುಚ್ಚಿ ಹಾಕಲಿಲ್ವಾ? ನಮ್ಮ ಸಿಎಂ ಯಾವುದೇ ಹಗರಣ ಮುಚ್ಚಿ ಹಾಕುವುದಿಲ್ಲ. ತನಿಖೆ ಮಾಡಿ ಶಿಕ್ಷೆ ಕೊಡಿಸುವುದಕ್ಕೆ ನಿರ್ಧಾರ ಮಾಡಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

ಸಕ್ಕರೆ ಕಾರ್ಖಾನೆಗಳು ಸುಮಾರು 2500 ಕೋಟಿಗೂ ಹೆಚ್ಚು ಬಾಕಿ ಹಣ ಉಳಿಸಿಕೊಂಡ ವಿಚಾರವಾಗಿ ಕಾರ್ಖಾನೆ ಮಾಲೀಕರ ವಿರುದ್ಧ ಸರ್ಕಾರ ಮತ್ತೆ ಸಮರ ಸಾರಿದೆ. ಬಾಕಿ ಪಾವತಿಗೆ ಕೊನೇ ಗಡುವು ಕೊಡಲು ಸರ್ಕಾರ ಮುಂದಾಗಿದ್ದು, ಕೋ ಆಪರೇಟಿವ್ ಬ್ಯಾಂಕ್​​ನ ಎಂಡಿಗಳು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆ ಸಕ್ಕರೆ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ವಿಕಾಸಸೌಧದಲ್ಲಿ ನಾಳೆ ಬೆಳಗ್ಗೆ 11ಗಂಟೆಗೆ‌ ಸಭೆ ನಡೆಯಲಿದೆ. ಸಭೆಯಲ್ಲಿ ಬಾಕಿ ಹಣ ವಸೂಲಿ ಸಂಬಂಧ ಮಹತ್ವದ ಚರ್ಚೆ ನಡೆಯಲಿದೆ. ಹಣ ಪಾವತಿಗೆ‌ ಗಡುವು ಕೊಡುವ ಸಂಬಂಧವೂ‌ ನಿರ್ಣಯ ಮಾಡಲಿದ್ದು, ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಮೊದಲು ನೋಟಿಸ್ ಜಾರಿ ಮಾಡಲಿದೆ. ಆ ನೋಟಿಸ್​ಗೆ ಬಗ್ಗದೆ ಇದ್ದಲ್ಲಿ ಸಕ್ಕರೆ ಗೋಡನ್​ಗಳನ್ನು ಸೀಜ್ ಮಾಡಲು ತಯಾರಿ ಮಾಡಲಾಗುವುದು. ಹೀಗಾಗಿ ಸಕ್ಕರೆ ಕಾರ್ಖಾನೆ ಮಾಲೀಕರಿಂದ ಬಾಕಿ ಹಣ ವಸೂಲಿ ಮಾಡಲು ಸರ್ಕಾರ ಸನ್ನದವಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow us on

Related Stories

Most Read Stories

Click on your DTH Provider to Add TV9 Kannada