ಕರ್ನಾಟಕಕ್ಕೂ ಕಾಲಿಟ್ಟ ಮಹಾರಾಷ್ಟ್ರ ಮರಾಠಾ ಮೀಸಲಾತಿ ಹೋರಾಟ ಕಿಚ್ಚು; ನಿಪ್ಪಾಣಿಯಲ್ಲಿ ಪ್ರತಿಭಟನೆ
ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಮಾಜಿ ಶಾಸಕ ಸುಭಾಷ್ ಜೋಶಿ, ಮಾಜಿ ಎಂಎಲ್‌ಸಿ ವೀರಕುಮಾರ್ ಪಾಟೀಲ್, ನಿಪ್ಪಾಣಿ ನಗರಸಭೆ ಮರಾಠಿ ಭಾಷಿಕ ಸದಸ್ಯರು ಸೇರಿ ಅನೇಕರು ಪ್ರತಿಭಟನೆಯಲ್ಲಿ ಭಾಗಿಯಾದರು. ಪ್ರತಿಭಟನಾ ನಿರತರು ಮಹಾರಾಷ್ಟ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಚಿಕ್ಕೋಡಿ, ಸೆಪ್ಟೆಂಬರ್ 8: ನೆರೆಯ ಮಹಾರಾಷ್ಟ್ರದಲ್ಲಿ (Maharashtra) ನಡೆಯುತ್ತಿರುವ ಮರಾಠಾ ಮೀಸಲಾತಿ (Maratha reservation) ಹೋರಾಟದ ಕಿಚ್ಚು ಕರ್ನಾಟಕಕ್ಕೂ ಕಾಲಿಟ್ಟಿದೆ. ಮಹಾರಾಷ್ಟ್ರದ ಜಾಲ್ನಾದಲ್ಲಿ ಪ್ರತಿಭಟನಾನಿರತರ ಮೇಲೆ ಲಾಠಿಚಾರ್ಜ್ ಮಾಡಿರುವುದನ್ನು ಖಂಡಿಸಿ ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಲ್ಲಿ ಮರಾಠಾ ಸಮುದಾಯದವರು ಪ್ರತಿಭಟನೆ ನಡೆಸಿದ್ದಾರೆ. ಇದರೊಂದಿಗೆ, ಮಹಾರಾಷ್ಟ್ರ ಪೋಲಿಸರ ನಡೆ ಖಂಡಿಸಿ ಕರ್ನಾಟಕದಲ್ಲಿ ಪ್ರತಿಭಟನೆ ನಡೆದಂತಾಗಿದೆ. ನಿಪ್ಪಾಣಿ ಮಾಜಿ ಶಾಸಕ ಕಾಕಾಸಾಹೇಬ್ ಪಾಟೀಲ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದೆ.
ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಮಾಜಿ ಶಾಸಕ ಸುಭಾಷ್ ಜೋಶಿ, ಮಾಜಿ ಎಂಎಲ್‌ಸಿ ವೀರಕುಮಾರ್ ಪಾಟೀಲ್, ನಿಪ್ಪಾಣಿ ನಗರಸಭೆ ಮರಾಠಿ ಭಾಷಿಕ ಸದಸ್ಯರು ಸೇರಿ ಅನೇಕರು ಪ್ರತಿಭಟನೆಯಲ್ಲಿ ಭಾಗಿಯಾದರು. ಪ್ರತಿಭಟನಾ ನಿರತರು ಮಹಾರಾಷ್ಟ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಲಾಠಿಚಾರ್ಜ್ ಖಂಡಿಸಿ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ಗುರುವಾರ ಬಂದ್ ನಡೆಸಲಾಗಿತ್ತು. ಬಂದ್ ವೇಳೆ ಸಾಂಗ್ಲಿ ನಗರದಲ್ಲಿ ಟಯರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಗಿತ್ತು. ಪ್ರತಿಭಟನೆ ಹಿಂಸಾತ್ಮಕ ರೂಪ ತಾಳುವ ಮುನ್ಸೂಚನೆ ಹಿನ್ನೆಲೆಯಲ್ಲಿ ಸಾಂಗ್ಲಿ ಜಿಲ್ಲೆಗೆ ತೆರಳುವ ಕೆಎಸ್ಆರ್ಟಿಸಿ ಬಸ್ಗಳ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.
ಶಿಕ್ಷಣ ಮತ್ತು ಉದ್ಯೋಗದಲ್ಲಿ ಮರಾಠಾ ಸಮುದಾಯಕ್ಕೆ ಮೀಸಲಾತಿ ನೀಡುವಂತೆ ಆಗ್ರಹಿಸಿ ಕಳೆದ ಕೆಲವು ದಿನಗಳಿಂದ ಪ್ರತಿಭಟನೆಗಳು ನಡೆಯುತ್ತಿವೆ. ಇತ್ತೀಚೆಗೆ ಮರಾಠಾ ಮೀಸಲಾತಿ ಉದ್ರಿಕ್ತ ಹೋರಾಟಗಾರು ಕರ್ನಾಟಕ ಸಾರಿಗೆ ಬಸ್‌ಗೆ ಬೆಂಕಿ ಇಟ್ಟಿದ್ದರು. ಮಹಾರಾಷ್ಟ್ರದ ವಡಿಗೋದ್ರಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಔರಂಗಾಬಾದ್-ಹುಬ್ಬಳ್ಳಿ ಮಾರ್ಗದ ಬಸ್‌ಗೆ ಬೆಂಕಿ ಹಚ್ಚಿದ್ದರು. ಅದೃಷ್ಟವಶಾತ್ ಚಾಲಕ, ನಿರ್ವಾಹಕ ಹಾಗೂ ಪ್ರಯಾಣಿಕರಿಗೆ ಯಾವುದೇ ಜೀವ ಹಾನಿ ಸಂಭವಿಸಿರಲಿಲ್ಲ.
ಇದನ್ನೂ ಓದಿ: ಮಹಾರಾಷ್ಟ್ರ: ಜಾಲನಾದಲ್ಲಿ ಹಿಂಸಾರೂಪ ಪಡೆದ ಮರಾಠಾ ಮೀಸಲಾತಿ ಹೋರಾಟ, 300ಕ್ಕೂ ಹೆಚ್ಚು ಮಂದಿ ವಿರುದ್ಧ ಕೇಸು
ಈ ಮಧ್ಯೆ, ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿಗಾಗಿ ಒತ್ತಾಯಿಸಲು ಸಮುದಾಯವು ಕಲ್ಲು ತೂರಾಟ ಮಾಡುವ ಮೂಲಕ ಅಲ್ಲ, ಕಾನೂನು ಮಾರ್ಗಗಳನ್ನು ಬಳಸಿಕೊಂಡು ಆಂದೋಲನವನ್ನು ಮುಂದುವರಿಸಬೇಕು ಎಂದು ಮರಾಠ ಕೋಟಾ ಕಾರ್ಯಕರ್ತ ಮನೋಜ್ ಜರಂಜ್ ಹೇಳಿದ್ದಾರೆ. ಉಪವಾಸ ಸತ್ಯಾಗ್ರಹ ಶುಕ್ರವಾರ 11 ನೇ ದಿನಕ್ಕೆ ಕಾಲಿಟ್ಟಿದ್ದು, ಒಬಿಸಿ ವರ್ಗದ ಅಡಿಯಲ್ಲಿ ಮೀಸಲಾತಿ ಪ್ರಯೋಜನಗಳನ್ನು ಪಡೆಯಲು ಮರಾಠವಾಡ ಪ್ರದೇಶದ ಮರಾಠರಿಗೆ ಜಾತಿ ಪ್ರಮಾಣಪತ್ರ ನೀಡುವ ಸಂದರ್ಭದಲ್ಲಿ ವಂಶಾವಳಿಯ ಷರತ್ತನ್ನು ಕೈಬಿಡುವಂತೆ ಮಹಾರಾಷ್ಟ್ರ ಸರ್ಕಾರವನ್ನು ಒತ್ತಾಯಿಸಲಾಗಿದೆ.
ಬೆಳಗಾವಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ