ಬೆಳಗಾವಿ: ಬಾಣಂತಿ ಸಾವಿಗೆ ಕಾರಣವಾಯ್ತಾ ಬಿಮ್ಸ್ ಸಿಬ್ಬಂದಿ ನೀಡಿದ ಔಷಧ? ಕುಟುಂಬದವರಿಂದ ದೂರು ದಾಖಲು

ಬೆಳಗಾವಿ ಬಿಮ್ಸ್​ನಲ್ಲಿ ಬಾಣಂತಿ ಸಾವು ಪ್ರಕರಣಕ್ಕೆ ಸಂಬಂಧಿಸಿದ ಸಿಬ್ಬಂದಿ ವಿರುದ್ದ ದೂರು ದಾಖಲಾಗಿದೆ. ಇನ್ನೊಂದು ಕಡೆ ಮೃತರ ಕುಟುಂಬಸ್ಥರು ಸಾವಿಗೆ ಕಾರಣ ವೈದ್ಯರ ನಿರ್ಲಕ್ಷ್ಯ ಹಾಗೂ ಬಾಣಂತಿಗೆ ನೀಡಿದ ಔಷಧ ಎಂಬ ಗಂಭೀರ ಆರೋಪ ಮಾಡಿದ್ದಾರೆ. ಬಾಣಂತಿ ಸಾವಿನ ಬಗ್ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದೇನು? ಸಿಬ್ಬಂದಿ ನೀಡಿದ ಮಾತ್ರೆಯೇ ಬಾಣಂತಿ ಸಾವಿಗೆ ಕಾರಣವಾಯ್ತಾ? ಇತ್ತೀಚಿನ ಬೆಳವಣಿಗೆಗಳ ಮಾಹಿತಿ ಇಲ್ಲಿದೆ.

ಬೆಳಗಾವಿ: ಬಾಣಂತಿ ಸಾವಿಗೆ ಕಾರಣವಾಯ್ತಾ ಬಿಮ್ಸ್ ಸಿಬ್ಬಂದಿ ನೀಡಿದ ಔಷಧ? ಕುಟುಂಬದವರಿಂದ ದೂರು ದಾಖಲು
ಬಿಮ್ಸ್ ಆಸ್ಪತ್ರೆ
Edited By:

Updated on: Dec 24, 2024 | 7:27 AM

ಬೆಳಗಾವಿ, ಡಿಸೆಂಬರ್ 24: ಬೆಳಗಾವಿ ಬಿಮ್ಸ್​​ನಲ್ಲಿ ಬಾಣಂತಿಯರ ಸಾವು ನಿಲ್ಲುವ ಲಕ್ಷಣಗಳು ಕಾಣಿಸುತ್ತಿಲ್ಲ. ಸೋಮವಾರ ಮತ್ತೊಬ್ಬರು ಬಾಣಂತಿ ಸಾವನ್ನಪ್ಪಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಗೌಡವಾಡ ಗ್ರಾಮದ ವೈಶಾಲಿ ಬಾಳಪ್ಪ ಜಿರಲಿ, ಎರಡು ದಿನ ಹಿಂದಷ್ಟೇ ಹೆಣ್ಣು ಮಗುವಿಗೆ ಜನ್ಮ ನೀಡಿ ಆರೋಗ್ಯವಾಗಿದ್ದರು. ಸೋಮವಾರ ಎದೆನೋವು ಎಂದು ಒದ್ದಾಡತೊಡಗಿದ್ದರು. ಈ ವೇಳೆ, ‘‘ಸರಿಯಾದ ಸಮಯಕ್ಕೆ ವೈದ್ಯರು ಬಂದಿಲ್ಲ. ಚೆನ್ನಾಗಿದ್ದ ವೈಶಾಲಿಗೆ ಯಾವ ಔಷಧ ಕೊಟ್ಟು ಈ ರೀತಿ ಆಗಿದೆ ಗೊತ್ತಿಲ್ಲ. ಆದರೆ ಕೆಲವೇ ಗಂಟೆಗಳಲ್ಲಿ ವೈಶಾಲಿ ಸಾವನ್ನಪ್ಪಿದ್ದಾರೆ’’ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ರಾತ್ರಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಶವ ಹಸ್ತಾಂತರ ಮಾಡಲಾಗಿದ್ದು, ಗೌಡವಾಡ ಗ್ರಾಮದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.

ಬಾಣಂತಿ ಸಾವಿಗೆ ವೈದ್ಯರ ನಿರ್ಲಕ್ಷ್ಯ ಹಾಗೂ ಬಿಮ್ಸ್ ಸಿಬ್ಬಂದಿ ನೀಡಿದ ಔಷಧಿ ಕಾರಣ ಎಂದು ಬೆಳಗಾವಿ ನಗರದ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಮೃತಳ ಪತಿ ಬಾಳಪ್ಪ ದೂರು ದಾಖಲು ಮಾಡಿದ್ದಾರೆ. ಇದರನ್ವಯ ಸೆಕ್ಷನ್ 170 ಅಡಿಯಲ್ಲಿ ಕೇಸ್ ದಾಖಲಿಸಿಕೊಂಡು ಎಪಿಎಂಸಿ ಠಾಣೆ ಪೊಲೀಸರು ತನಿಖೆ ಶುರು ಮಾಡಿದ್ದಾರೆ.

ಬಳ್ಳಾರಿಯಲ್ಲಿ ಬಾಣಂತಿಯರ ಸರಣಿ ಸಾವಿನ ಬಳಿಕ ಬೆಳಗಾವಿಯಲ್ಲೂ ಅದೇ ರೀತಿ ಬಾಣಂತಿಯರ ಸಾವಾಗಿದ್ದು ಸಾಕಷ್ಟು ಭಯ ಹುಟ್ಟುವಂತೆ ಮಾಡಿದೆ. ಒಂದೆಡೆ ಕುಟುಂಬಸ್ಥರು, ಯಾವ ಔಷಧಿ ನೀಡಿದ್ದರು ಎಂಬ ಬಗ್ಗೆಯೂ ತನಿಖೆ ಆಗಬೇಕು ಎಂದು ಒತ್ತಾಯಿಸಿದ್ದಾರೆ. ಮತ್ತೊಂದೆಡೆ, ಚೊಚ್ಚಲ ಹೆರಿಗೆ ಖುಷಿಯಲ್ಲಿದ್ದ ಕುಟುಂಬಸ್ಥರು ಗೋಳಾಡುತ್ತಿದ್ದರೆ ಇನ್ನೊಂದೆಡೆ ಎರಡು ದಿನದ ಹೆಣ್ಣು ಮಗು ಇದೀಗ ಅನಾಥವಾಗಿದೆ.

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದೇನು?

ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಮಾಧ್ಯಮಗಳಿಂದ ಮಾಹಿತಿ ಗೊತ್ತಾಗಿದೆ. ಬಿಮ್ಸ್ ಆಸ್ಪತ್ರೆ ವ್ಯವಸ್ಥೆ ಸುಧಾರಣೆಗೆ ನಾನು ಕೂಡ ಎರಡು ಬಾರಿ ಭೇಟಿ ನೀಡಿದ್ದೇನೆ. ಮೊನ್ನೆಯಷ್ಟೇ ಸಭೆ ಕೂಡ ಮಾಡಿದ್ದೇನೆ. ಈಗ ಯಾವ ಕಾರಣಕ್ಕೆ ಸಾವಾಗಿದೆ ಎಂಬುದರ ಕುರಿತು ಮಾಹಿತಿ ಪಡೆಯುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ: ಬೆಳಗಾವಿ ಬಿಮ್ಸ್​ನಲ್ಲಿ ಮತ್ತೊಬ್ಬ ಬಾಣಂತಿ ಸಾವು: ವೈದ್ಯರ ವಿರುದ್ಧ ಆಕ್ರೋಶ

ಒಟ್ಟಿನಲ್ಲಿ ಆರು ತಿಂಗಳಲ್ಲಿ ಇದೇ ಬಿಮ್ಸ್ ಆಸ್ಪತ್ರೆಯಲ್ಲಿ ಎಂಟು ಜನ ಬಾಣಂತಿಯರ ಸಾವಾಗಿತ್ತು. ಇದೀಗ ಮತ್ತೋರ್ವ ಬಾಣಂತಿ ಮಗುವಿಗೆ ಜನ್ಮ ನೀಡಿದ ಒಂದು ದಿನದ ಬಳಿಕ ಸಾವನ್ನಪ್ಪಿದ್ದಾರೆ. ಇದು ಸಾಕಷ್ಟು ಅನುಮಾನ ಮೂಡುವಂತೆ ಮಾಡಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸಹದೇವ್​ ಮಾನೆ

ಸಹದೇವ ಯಲ್ಲಪ್ಪ ಮಾನೆ. ಹುಟ್ಟಿದ್ದು ಧಾರವಾಡ ತಾಲೂಕಿನ ಗುಳೇದಕೊಪ್ಪ ಗ್ರಾಮ. ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಳೆದ 12 ವರ್ಷದಿಂದ ಟಿವಿ ಮಾಧ್ಯಮದಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. 2014ರಲ್ಲಿ ಬೀದರ್ ಜಿಲ್ಲೆಯಿಂದ ವೃತ್ತಿ ಜೀವನ ಪ್ರಾರಂಭ ಮಾಡಿ ಕಲಬುರಗಿ, ಹುಬ್ಬಳ್ಳಿಯಲ್ಲಿ ಕೆಲಸ ಮಾಡಿ ಸದ್ಯ ‘ಟಿವಿ9’ ಕನ್ನಡ ಸುದ್ದಿ ವಾಹಿನಿಯಲ್ಲಿ 9ವರ್ಷಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಬೀದರ್ ಜಿಲ್ಲೆಯಲ್ಲಿ ಅತ್ಯುತ್ತಮ ಜಿಲ್ಲಾ ವರದಿಗಾರ ಪ್ರಶಸ್ತಿ ಪಡೆದಿದ್ದು, ಗಡಿ ಜಿಲ್ಲೆ ಬೆಳಗಾವಿಯಲ್ಲಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಕೂಡ ದೊರೆತಿದೆ. ರೈತರ ಸಮಸ್ಯೆಗಳತ್ತ ಬೆಳಕು ಚೆಲ್ಲುವ ವರದಿ ಸೇರಿ ಗಡಿ ಸಮಸ್ಯೆ, ಕ್ರೈಮ್, ಪ್ರವಾಹ ಪರಿಸ್ಥಿತಿ, ನೆರೆಯ ಮಹಾರಾಷ್ಟ್ರ, ಗೋವಾದಲ್ಲಿನ ಬೆಳವಣಿಗೆ ಕುರಿತು ವರದಿ ಮಾಡುತ್ತಿರುವುದು ವಿಶೇಷ.

Read More
Loading...
Unable to load recommendations.
Follow Us