ಮಸೀದಿಯಲ್ಲಿ ಬಾಲಕಿ ಮೇಲೆ ಮೌಲ್ವಿಯಿಂದ ಅತ್ಯಾಚಾರಕ್ಕೆ ಯತ್ನ: ಸ್ಫೋಟಕ ಅಂಶ ಬಿಚ್ಚಿಟ್ಟ ಎಸ್ಪಿ
ಬೆಳಗಾವಿ ಜಿಲ್ಲೆಯ ಮುರಗೋಡದಲ್ಲಿ 2023ರ ಅಕ್ಟೋಬರ್‌ನಲ್ಲಿ 5 ವರ್ಷದ ಬಾಲಕಿಯ ಮೇಲೆ ಮೌಲ್ವಿ ತುಫೇಲ್ ಅಹ್ಮದ್ ದಾದಾಫೀರ್ ಅತ್ಯಾಚಾರಕ್ಕೆ ಯತ್ನಿಸಿದ ಪ್ರಕರಣ ಎರಡು ವರ್ಷಗಳ ಬಳಿಕ ಬೆಳಕಿಗೆ ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋ ಆಧರಿಸಿ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ. ಬಾಲಕಿಯ ಪೋಷಕರು ಪ್ರಕರಣ ದಾಖಲಿಸಲು ಮೊದಲು ನಿರಾಕರಿಸಿದ್ದರಿಂದ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕೇಸ್ ದಾಖಲಿಸಿದೆ.

ಬೆಳಗಾವಿ, ಆಗಸ್ಟ್ 06: ಬೆಳಗಾವಿ (Belagavi) ಜಿಲ್ಲೆಯ ಮುರಗೋಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಮಸೀದಿಯೊಂದರಲ್ಲಿ ಮೌಲ್ವಿಯಿಂದ 5 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ (Child Sexual Assault)ಪ್ರಕರಣ ಎರಡು ವರ್ಷದ ಬಳಿಕ ಬೆಳಕಿಗೆ ಬಂದಿದೆ. 2023ರ ಅಕ್ಟೋಬರ್ 5 ರಂದು ಅಪ್ರಾಪ್ತ ಬಾಲಕಿ ಮೇಲೆ ಮೌಲ್ವಿ ತುಫೇಲ್ ಅಹ್ಮದ್ ದಾದಾಫೀರ್ ಅತ್ಯಾಚಾರಕ್ಕೆ ಯತ್ನಿಸಿದ್ದು, ಆರೋಪಿಯನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣ ಸಂಬಂಧ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ್ ಗುಳೇದ್ ಮಾತನಾಡಿ, ಮಂಗಳವಾರ (ಆ.05) ಸಂಜೆ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಹಿಂದೂ ಮುಖಂಡ ಪುನೀತ್ ಕೆರೆಹಳ್ಳಿ ಒಂದು ಪೋಸ್ಟ್ ಮಾಡಿದ್ದರು. ಅದರಲ್ಲಿ ಓರ್ವ ವ್ಯಕ್ತಿ ಮಾತನಾಡಿದ ಆಡಿಯೋ ಮತ್ತು ವಿಡಿಯೋ ತುಣುಕು ಇತ್ತು. ಇದರಲ್ಲಿ ಬಾಲಕಿ ಮೇಲೆ ಓರ್ವ ವ್ಯಕ್ತಿ ಮಲಗುವ ರೀತಿಯಲ್ಲಿತ್ತು ಎಂದು ಹೇಳಿದರು.
ಕೂಡಲೇ ನಮ್ಮ ಸಿಇಎನ್ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ವಿಡಿಯೋದಲ್ಲಿನ ವಿಳಾಸ ಆಧರಿಸಿ ತನಿಖೆ ಶುರು ಮಾಡಿದ್ದರು. ಕೂಡಲೇ ನಮ್ಮ ಮುರಗೋಡ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿತ್ತು. ಈ ಘಟನೆ 2023ರ ಅಕ್ಟೋಬರ್ 5ರಂದು ನಡೆದಿದೆ. ಮಸೀದಿ ಪಕ್ಕದ ಮನೆಯ ವ್ಯಕ್ತಿ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂದು ತಿಳಿದುಬಂದಿದೆ ಎಂದರು.
ಇದನ್ನೂ ಓದಿ: ಬೆಳಗಾವಿಯಲ್ಲಿ ಹೆರಾಯಿನ್ ಮಾರಾಟ ಮಾಡುತ್ತಿದ್ದ ನಾಲ್ವರ ಬಂಧನ
ಆರೋಪಿ ತುಫೇಲ್ ಅಹ್ಮದ್ ದಾದಾಫೀರ್ ಘಟನೆ ನಡೆದ ಹಿಂದಿನ ದಿನ ಮಹಾಲಿಂಗಪುರದಿಂದ ಬಂದಿದ್ದನು. ಚಿಕ್ಕಮ್ಮನ ಮನೆಗೆ ಬಂದಾಗ ಹೀನಾಯ ಕೃತ್ಯ ಎಸಗಿದ್ದನು. ಈ ವಿಚಾರ ಗೊತ್ತಾದಾಗ ಅಲ್ಲಿರುವ ಸ್ಥಳೀಯರು ಬಾಲಕಿ ತಂದೆ ಕರೆದು ಮಾತಾಡಿದ್ದರು. ಆ ದಿನ ಕೇಸ್ ಕೊಡುವುದು ಬೇಡಾ ಅಂತ ತೀರ್ಮಾನಿಸಿ ದೂರು ನೀಡದೆ ಬಿಟ್ಟಿದ್ದರು ಎಂದು ಹೇಳಿದರು.
ಇದಾದ ಬಳಿಕ ವಿಡಿಯೋ ವೈರಲ್ ಆಗುತ್ತಿದ್ದಂತೆ ಬಾಲಕಿ ಪೋಷಕರ ಜೊತೆಗೆ ಮಾತನಾಡಲಾಗಿದೆ. ಬಾಲಕಿ ತಂದೆ-ತಾಯಿ ಕೇಸ್ ದಾಖಲಿಸಲು ಒಪ್ಪದ ಕಾರಣ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಕೇಸ್ ಪಡೆದಿದ್ದೇವೆ. ದೂರಿನ ಅನ್ವಯ ಮಂಗಳವಾರ ರಾತ್ರಿ ಆರೋಪಿ ತುಫೇಲ್ ಅಹ್ಮದ್ ದಾದಾಫೀರ್ ಬಂಧಿಸಿದ್ದೇವೆ. ಆರೋಪಿ ಮೌಲ್ವಿ ತುಫೇಲ್ ಅಹ್ಮದ್ ದಾದಾಫೀರ್ ವೇಲ್ಡಿಂಗ್ ಕೆಲಸ ಮಾಡುತ್ತಿದ್ದನು. ಕೆಲಸ ಇಲ್ಲದಾಗ ಮಸೀದಿಗಳಿಗೆ ಹೋಗಿ ಭಾಷಣ ಮಾಡುತ್ತಿದ್ದನು ಎಂದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:57 pm, Wed, 6 August 25



