ಬೆಳಗಾವಿ: ಜಿಲ್ಲೆಯಲ್ಲಿ ನಡೆಯುತ್ತಿರುವ ಎಂಇಎಸ್ (MES) ಪುಂಡಾಟ ನಿನ್ನೆ ಮೊನ್ನೆಯದಲ್ಲ. ನಿರಂತರವಾಗಿ ಪುಂಡರು ಗೂಂಡಾ ವರ್ತನೆ ಮೆರೆಯುತ್ತಿದ್ದಾರೆ. ಇದೀಗ ಸರ್ಕಾರಿ ಕಚೇರಿಗಳಲ್ಲಿ ಮರಾಠಿಗರಿಗೆ ಮರಾಠಿ (Marati) ಭಾಷೆಯಲ್ಲಿ ದಾಖಲೆ ನೀಡಲು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಬಳಿ ಪುಂಡಾಟಿಕೆ ಮೆರೆದಿದ್ದಾರೆ. ಈ ವೇಳೆ ಅಧಿಕಾರಿಗಳ ಎದುರೇ ನಾಡದ್ರೋಹಿ ಘೋಷಣೆ ಕೂಗಿದ್ದಾರೆ. 20 ದಿನಗಳಲ್ಲಿ ಕ್ರಮ ಕೈಗೊಳ್ಳದಿದ್ದರೆ ಬೆಳಗಾವಿ ಜಿಲ್ಲಾಡಳಿತ ಸ್ಥಗಿತಗೊಳಿಸುವ ತಾಕತ್ ಎಂಇಎಸ್ಗೆ ಇದೆ ಎಂದು ಎಂಇಎಸ್ ಮುಖಂಡ ದೀಪಕ್ ದಳವಿ ಹೇಳಿಕೆ ನೀಡಿದ್ದಾರೆ.
ನ್ಯಾಯಾಲಯ ಆದೇಶ ಇದ್ದರೂ ಮರಾಠಿಯಲ್ಲಿ ದಾಖಲೆ ಪತ್ರ ನೀಡುತ್ತಿಲ್ಲ ಎಂದು ಆರೋಪಿಸಿ, ಎಂಇಎಸ್ ಪುಂಡರು ಪ್ರತಿಭಟನೆ ನಡೆಸಿದ್ದಾರೆ. ಜೊತೆಗೆ ಎಡಿಸಿ ಅಶೋಕ್ ದುಡಗುಂಟಿ ಮನವಿ ಸ್ವೀಕರಿಸಲು ಆಗಮಿಸಿದ ವೇಳೆ ನಾಡದ್ರೋಹಿ ಘೋಷಣೆ ಕೂಗಿದ್ದಾರೆ. ಅಪರ ಜಿಲ್ಲಾಧಿಕಾರಿ ಎದುರೇ ಬೆಳಗಾವಿ, ಬೀದರ್, ಭಾಲ್ಕಿ ಕಾರವಾರ, ನಿಪ್ಪಾಣಿ ಸಂಯುಕ್ತ ಮಹಾರಾಷ್ಟ್ರ ಸೇರಬೇಕು ಎಂದು ಘೋಷಣೆ ಕೂಗಿದ್ದಾರೆ. ಇದಕ್ಕೂ ಮುನ್ನಾ ಮಹಾರಾಷ್ಟ್ರದ ಶಿವಸೇನೆ ನಾಯಕರನ್ನು ಕರೆಯಿಸಿ ಹುತಾತ್ಮ ದಿನಾಚರಣೆ ಮಾಡಿದ್ದಾರೆ. ಈ ವೇಳೆಯೂ ನಾಡದ್ರೋಹಿ ಘೋಷಣೆ ಕೂಗಿದ್ದಾರೆ.
ಇದನ್ನೂ ಓದಿ: ಹಳ್ಳಿ ಹುಡುಗಿಯರ ಥ್ರೋಬಾಲ್ ಸಾಧನೆ; ದೇಶಕ್ಕೆ ಚಿನ್ನದ ಪದಕ ತಂದು ಕೊಟ್ಟ ದಾವಣಗೆರೆ ರೈತರ ಮಕ್ಕಳು
ಇನ್ನು ಮೇ 31ರಂದು ನಡೆದ ಸೇವಾ ನಿವೃತ್ತಿ ಬೀಳ್ಕೊಡುಗೆ ವೇಳೆ ಬೆಳಗಾವಿ ಮಹಾನಗರ ಪಾಲಿಕೆ ನೌಕರ ಶಿವಾಜಿ ಕಳಸೇಕರ್ ಜೈ ಮಹಾರಾಷ್ಟ್ರ ಎಂದಿದ್ದಾರೆ. ಎಸ್ಡಿಎ ಶಿವಾಜಿ ಕಳಸೇಕರ ಮೇ 31ರಂದು ಸೇವಾ ನಿವೃತ್ತಿಯಾಗಿದ್ದ. 33 ವರ್ಷಗಳ ಕಾಲ ಕರ್ನಾಟಕದಲ್ಲಿದ್ದು ಮಹಾರಾಷ್ಟ್ರಕ್ಕೆ ಜೈ ಅಂದಿದ್ದಾರೆ. ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಕನ್ನಡಪರ ಹೋರಾಟಗಾರರು ಒತ್ತಾಯಿಸಿದ್ದಾರೆ. ಕನ್ನಡಪರ ಹೋರಾಟಗಾರರ ಒತ್ತಾಯಕ್ಕೆ ಮಣಿದು ಪಾಲಿಕೆ ಆಯುಕ್ತರಿಗೆ ಶಿವಾಜಿ ಕ್ಷಮಾಪಣೆ ಪತ್ರ ಬರೆದಿದ್ದಾರೆ. ಬಾಯಿ ತಪ್ಪಿನಿಂದ ಆದ ಪ್ರಮಾದವಾಗಿದೆ ಎಂದು ಪತ್ರ ಬರೆದು ಸಮಜಾಯಿಷಿ ನೀಡಿದ್ದಾರೆ.
ಕನ್ನಡ ಹಾಡು ಹಾಕಿದ್ದಕ್ಕೆ ಬೈಕ್ಗೆ ಬೆಂಕಿ ಹಚ್ಚಿ ಹಲ್ಲೆ ನಡೆಸಿದ ಎಂಇಎಸ್:
ಮದುವೆ ಸಮಾರಂಭದಲ್ಲಿ ಕನ್ನಡ ಹಾಡು ಹಾಕಿದ್ದಕ್ಕೆ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ. ವಧು ವರ, ಕನ್ನಡಿಗ ಯುವಕರ ಮೇಲೆ MES ಪುಂಡರು ಹಲ್ಲೆ ನಡೆಸಿದ್ದಾರೆ. ಬೆಳಗಾವಿ ತಾಲೂಕಿನ ಧಾಮನೆ ಗ್ರಾಮದಲ್ಲಿ ತಡರಾತ್ರಿ ಮದುವೆ ಸಮಾರಂಭದಲ್ಲಿ ಕನ್ನಡ ಹಾಡು ಹಾಕಿದ್ದಕ್ಕೆ MES ಪುಂಡರು ವರ ಸಿದ್ದು ಸಹೋದರ ಭರಮ ಎಂಬುವರ ಬೈಕ್ಗೆ ಬೆಂಕಿ ಹಚ್ಚಿ ಕಿರಿಕ್ ಮಾಡಿದ್ದಾರೆ. ರಾಣಿ ಚನ್ನಮ್ಮ ನಗರ ಅಂತಾ ಕನ್ನಡದಲ್ಲಿ ಬರೆದಿದ್ದ ಬೋರ್ಡ್ ಎದುರು ಧರ್ಮವೀರ ಸಂಭಾಜಿ ನಗರ ಎಂಬ ಮರಾಠಿ ಬೋರ್ಡ್ ಹಾಕಿದ ಉದ್ಧಟತನ ಮೆರೆದಿದ್ದಾರೆ. ಪೊಲೀಸರಿಗೆ ದೂರು ನೀಡಿದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ.
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ತಾಜಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:06 am, Thu, 2 June 22