ನಮ್ಮ ಕುಟುಂಬದಿಂದ 3ನೇ ವ್ಯಕ್ತಿ ಎಲೆಕ್ಷನ್ಗೆ ಬಂದರೆ ರಾಜೀನಾಮೆ ಕೊಡ್ತೀನಿ; ಸಚಿವ ಮುರುಗೇಶ್ ನಿರಾಣಿ
ಮೊದಲಿನಿಂದಲೂ ನಮ್ಮಿಬ್ಬರಿಗೆ ಎಲೆಕ್ಷನ್ಗೆ ಟಿಕೆಟ್ ಕೊಟ್ಟಿದ್ದಾರೆ ಎಂದು ತಿಳಿಸಿದ ಮುರುಗೇಶ್ ನಿರಾಣಿ, ನಾನಾಗಲಿ, ನನ್ನ ತಮ್ಮನಾಗಲಿ ರಾಮದುರ್ಗದಲ್ಲಿ ಕಾಲಿಟ್ಟಿಲ್ಲ ಎಂದು ಸ್ಪಷ್ಟತೆ ನೀಡಿದ್ದಾರೆ.
ಬೆಳಗಾವಿ: ನಮ್ಮ ಕುಟುಂಬದಿಂದ 3ನೇ ಸಹೋದರ ಎಲೆಕ್ಷನ್ಗೆ (Election) ಬಂದರೆ ರಾಜೀನಾಮೆ ನೀಡುತ್ತೇನೆ. ಆದರೆ, ನಿರಾಣಿ ಕುಟುಂಬದ 3ನೇಯವರು ರಾಜಕೀಯಕ್ಕೆ ಬರಲ್ಲ. ನಾನು, ಸಹೋದರ ಹನುಮಂತ ನಿರಾಣಿಯಿಂದ ಮಾತ್ರ ಸ್ಪರ್ಧೆ ಮಾಡುತ್ತೇವೆ ಎಂದು ಬೆಳಗಾವಿಯಲ್ಲಿ ಸಚಿವ ಮುರುಗೇಶ್ ನಿರಾಣಿ (Murugesh Nirani) ಹೇಳಿಕೆ ನೀಡಿದ್ದಾರೆ. ಪ್ರಧಾನಮಂತ್ರಿ ಹೇಳಿದ್ದನ್ನ ನಾನು ಪಾಲಿಸುತ್ತೇನೆ. ಮೊದಲಿನಿಂದಲೂ ನಮ್ಮಿಬ್ಬರಿಗೆ ಎಲೆಕ್ಷನ್ಗೆ ಟಿಕೆಟ್ ಕೊಟ್ಟಿದ್ದಾರೆ ಎಂದು ತಿಳಿಸಿದ ಮುರುಗೇಶ್ ನಿರಾಣಿ, ನಾನಾಗಲಿ, ನನ್ನ ತಮ್ಮನಾಗಲಿ ರಾಮದುರ್ಗದಲ್ಲಿ ಕಾಲಿಟ್ಟಿಲ್ಲ ಎಂದು ಸ್ಪಷ್ಟತೆ ನೀಡಿದ್ದಾರೆ.
ಬಿವೈ ವಿಜಯೇಂದ್ರಗೆ ಭವಿಷ್ಯ ಇದೆ- ಮುರುಗೇಶ್ ನಿರಾಣಿ: ಇದೇ ವೇಳೆ ಬಿವೈ ವಿಜಯೇಂದ್ರಗೆ ಪರಿಷತ್ ಟಿಕೆಟ್ ಕೈತಪ್ಪಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು, ರಾಜ್ಯದಿಂದ 20 ಜನರ ಪಟ್ಟಿ ಹೈಕಮಾಂಡ್‌ಗೆ ಕಳುಹಿಸಿದ್ದೆವು. ಅದರಲ್ಲಿ ನಾಲ್ಕು ಜನರನ್ನ ಹೈಕಮಾಂಡ್ ಆಯ್ಕೆ ಮಾಡಿದೆ. ನಾವು ಕಳುಹಿಸಿದ ಪಟ್ಟಿಯಲ್ಲಿನ ಹೆಸರು ಆಯ್ಕೆ ಮಾಡಿದ್ದಾರೆ. ಎಲ್ಲಾ ರೀತಿಯ ಲೆಕ್ಕಾಚಾರ ಮಾಡಿ ಆಯ್ಕೆ ಮಾಡಲಾಗಿದೆ. ಯಡಿಯೂರಪ್ಪ ಪುತ್ರ ಬಿವೈ ವಿಜಯೇಂದ್ರಗೆ ಭವಿಷ್ಯ ಇದೆ ಎಂದರು.
ವಿಜಯೇಂದ್ರಗೆ ಆರ್‌ಎಸ್ಎಸ್, ಪಕ್ಷದ ಹಿರಿಯರ ಆಶೀರ್ವಾದ ಇದೆ. ಮುಂಬರುವ ದಿನಗಳಲ್ಲಿ ಒಳ್ಳೆಯ ನಾಯಕರಾಗಿ ಬರುತ್ತಾರೆ. ರಾಜ್ಯದ ತುಂಬಾ ಪಕ್ಷ ಸಂಘಟನೆಯ ಕೆಲಸ ಮಾಡುತ್ತಿದ್ದಾರೆ. ಪರಿಷತ್ ಚುನಾವಣೆಯಲ್ಲಿ ಹಿರಿಯರಿಗೆ ಅವಕಾಶ ಕೊಟ್ಟಿದ್ದಾರೆ. ಹೈಕಮಾಂಡ್ ತೀರ್ಮಾನಕ್ಕೆ ನಾವು ತಲೆಬಾಗಲೇಬೇಕು ಎಂದು ನಿರಾಣಿ ತಿಳಿಸಿದರು.
ಇದನ್ನೂ ಓದಿ: ಕೊಪ್ಪಳದ ಕಿಷ್ಕಿಂಧೆಯಲ್ಲೇ ಹನುಮ ಹುಟ್ಟಿದ್ದ ಎನ್ನುವುದಕ್ಕೆ ಏನೆಲ್ಲಾ ಕುರುಹುಗಳಿವೆ?
ಆರ್‌ಎಸ್ಎಸ್ ಕುರಿತು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದ ಬಗ್ಗೆ ಮಾತನಾಡಿದ ನಿರಾಣಿ, ಈ ಬಗ್ಗೆ ಈಗಾಗಲೇ ದೊಡ್ಡವರು ಉತ್ತರ ಕೊಟ್ಟಿದ್ದಾರೆ. ಆರ್ಎಸ್ಎಸ್ನವರು ಸ್ವಂತದ ಸಲುವಾಗಿ ಏನೂ ಮಾಡದೇ ದೇಶಕ್ಕೆ ತ್ಯಾಗ ಮಾಡಿದ್ದಾರೆ. ತಮ್ಮನ್ನೇ ತಾವು ಸಮರ್ಪಣೆ ಮಾಡಿಕೊಂಡಿದ್ದಾರೆ. ಅವರೇನು ಫೈವ್ ಸ್ಟಾರ್ ಹೋಟೆಲ್‌ನಲ್ಲಿ ಇರಲ್ಲ, ವಿಮಾನದಲ್ಲಿ ಅಡ್ಡಾಡಲ್ಲ. ಅತ್ಯಂತ ಕಟ್ಟ ಕಡೆಯ ಮನುಷ್ಯ ಯಾವ ರೀತಿ ಜೀವನ ಮಾಡುತ್ತಾನೆ ಆ ರೀತಿ ತಮ್ಮ ಜೀವನ ತ್ಯಾಗ ಮಾಡಿದ್ದಾರೆ. ದೇಶದ ಸಲುವಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡವರಿಗೆ ಬೇರೆಯವರಿಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಅಭಿಪ್ರಾಯಪಟ್ಟರು.
ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:13 pm, Wed, 1 June 22