ಇಂದು ಅಯೋಧ್ಯೆಯಲ್ಲಿ ರಾಮಮಂದಿರ ಗರ್ಭಗೃಹ ನಿರ್ಮಾಣಕ್ಕೆ ಸಿಎಂ ಯೋಗಿ ಆದಿತ್ಯನಾಥ್ ಶಂಕುಸ್ಥಾಪನೆ
ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ, ರಾಮ ಮಂದಿರದ ಕಾರ್ಯಾಚರಣೆಯ ಉಸ್ತುವಾರಿ ಮತ್ತು ನಿರ್ಮಾಣದ ಮೇಲ್ವಿಚಾರಣೆಯ ಪ್ರಾಧಿಕಾರವು ರಾಮ ಮಂದಿರದ ನಿರ್ಮಾಣವು ಭರದಿಂದ ಸಾಗುತ್ತಿದೆ ಎಂದು ಸೋಮವಾರ ತಿಳಿಸಿದೆ.
ಲಕ್ನೋ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಇಂದು (ಜೂನ್ 1) ಅಯೋಧ್ಯೆಯಲ್ಲಿ ರಾಮಮಂದಿರದ ಗರ್ಭಗೃಹಕ್ಕೆ ಶಂಕುಸ್ಥಾಪನೆ ಮಾಡಲಿದ್ದಾರೆ. ಈಗಾಲೇ ಧಾರ್ಮಿಕ ಕಾರ್ಯಕ್ರಮಕ್ಕೆ ಸಿದ್ಧತೆಗಳು ನಡೆಯುತ್ತಿದ್ದು, ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಕೂಡ ಭಾಗವಹಿಸಲಿದ್ದಾರೆ. ಅಯೋಧ್ಯೆಯ 90 ಸಂತರನ್ನು ಸಹ ಶಂಕುಸ್ಥಾಪನಾ ಸಮಾರಂಭದಲ್ಲಿ ಭಾಗವಹಿಸಲು ಆಹ್ವಾನಿಸಲಾಗಿದೆ. ರಾಮಮಂದಿರದ ನಿರ್ಮಾಣ ಕಾರ್ಯವು ಆಗಸ್ಟ್ 5, 2020 ರಂದು ಪ್ರಾರಂಭವಾಗಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಶಂಕುಸ್ಥಾಪನೆ ಮಾಡಿದ್ದರು. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ (SRJBTK), ರಾಮ ಮಂದಿರದ ಕಾರ್ಯಾಚರಣೆಯ ಉಸ್ತುವಾರಿ ಮತ್ತು ನಿರ್ಮಾಣದ ಮೇಲ್ವಿಚಾರಣೆಯ ಪ್ರಾಧಿಕಾರವು ರಾಮ ಮಂದಿರದ ನಿರ್ಮಾಣವು ಭರದಿಂದ ಸಾಗುತ್ತಿದೆ ಎಂದು ಸೋಮವಾರ ಮುಂಜಾನೆ ಮಾಹಿತಿ ನೀಡಿದೆ.
ರಾಮ ಮಂದಿರದ ನಿರ್ಮಾಣ ವರದಿಯನ್ನು ಹಂಚಿಕೊಂಡ ಎಸ್‌ಆರ್‌ಜೆಬಿಟಿಕೆ, ಅಡಿಪಾಯ ಹಾಕಲಾಗಿದ್ದು, ಇದೆ ವರ್ಷ ಜನವರಿ 24 ರಂದು ಮಂದಿರ ಪ್ರಾರಂಭವಾಲಿದೆ. ಸ್ತಂಭ ಎತ್ತುವ ಕೆಲಸ ಇನ್ನೂ ನಡೆಯುತ್ತಿದೆ ಎಂದು ಹೇಳಿದರು. ಡಿಸೆಂಬರ್ 2023 ರ ವೇಳೆಗೆ, ರಾಮಲಲ್ಲಾ ವಿಗ್ರಹವನ್ನು ಹೊಂದಿರುವ ದೇವಾಲಯದ ಗರ್ಭಗುಡಿಯು ಪೂಜೆಗೆ ಸಿದ್ಧವಾಗಲಿದೆ. ಕರ್ನಾಟಕ ಮತ್ತು ತೆಲಂಗಾಣದ ಗ್ರಾನೈಟ್ ಕಲ್ಲುಗಳನ್ನು ಬಳಸಿ ಸ್ತಂಭವನ್ನು ನಿರ್ಮಿಸಲಾಗಿದೆ. ಗರ್ಭಗುಡಿಯ ಸುತ್ತಲೂ ಕೆತ್ತಿದ ಮರಳುಗಲ್ಲುಗಳ ಅಳವಡಿಕೆ ಕೂಡ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ರಾಜಸ್ಥಾನದ ಭರತ್‌ಪುರ ಜಿಲ್ಲೆಯ ಬಂಸಿ-ಪಹಾರ್‌ಪುರ್ ಪ್ರದೇಶದ ಬೆಟ್ಟಗಳಿಂದ ಗುಲಾಬಿ ಮರಳುಗಲ್ಲಿನಿಂದ ಮಂದಿರವನ್ನು ನಿರ್ಮಿಸಲಾಗುವುದು. ಸುಮಾರು 17,000 ಗ್ರಾನೈಟ್ ಬ್ಲಾಕ್‌ಗಳನ್ನು ಸ್ತಂಭದ ಕೆಲಸದಲ್ಲಿ ಬಳಸಲಾಗುವುದು ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
ಇದನ್ನೂ ಓದಿ: Taxation On Paper Gold: ಕಾಗದ ಸ್ವರೂಪದ ಚಿನ್ನದ ಮೇಲೆ ತೆರಿಗೆ ಲೆಕ್ಕಾಚಾರ ಹೇಗೆ? ಇಲ್ಲಿದೆ ವಿವರಣೆ
ಡಿಸೆಂಬರ್ 2023 ರ ವೇಳೆಗೆ, ಗರ್ಭಗುಡಿ ಮತ್ತು ರಾಮಲಲ್ಲಾ ವಿಗ್ರಹವನ್ನು ಹೊಂದಿರುವ ದೇವಾಲಯದ ಕೆಳ ಮಹಡಿಯು ಪೂಜೆಗೆ ಸಿದ್ಧವಾಗಲಿದ್ದು, ರಾಜಸ್ಥಾನದ ಮಕ್ರಾನಾ ಬೆಟ್ಟಗಳಿಂದ ಬಿಳಿ ಅಮೃತಶಿಲೆಯನ್ನು ಮಂದಿರದಲ್ಲಿ ಬಳಸಲಾಗುವುದು ಎಂದರು. ಮಕ್ರಾನಾ ವೈಟ್ ಮಾರ್ಬಲ್‌ನ ಕೆಲಸ ಪ್ರಗತಿಯಲ್ಲಿದ್ದು, ಕೆತ್ತನೆ ಮಾಡಿದ ಕೆಲವು ಮಾರ್ಬಲ್‌ಗಳು ಅಯೋಧ್ಯೆಗೆ ತೆಗೆದುಕೊಂಡು ಬರುವ ಕಾರ್ಯ ನಡೆಯುತ್ತಿದೆ ಎಂದು ದೇವಾಲಯದ ಪ್ರಾಧಿಕಾರ ತಿಳಿಸಿದೆ.
ರಾಮ ಮಂದಿರದ ಪ್ರಮುಖ ಸಂಗತಿಗಳು ಹೀಗಿವೆ:
ರಾಮ ದೇವಾಲಯದ ಆಯಾಮವು ಪೂರ್ವ-ಪಶ್ಚಿಮ ದಿಕ್ಕಿನ ನೆಲ ಅಂತಸ್ತಿನ ಉದ್ದ-380 ಅಡಿಯಿದ್ದು, ಉತ್ತರ-ದಕ್ಷಿಣ ದಿಕ್ಕಿನಲ್ಲಿ ನೆಲ ಮಹಡಿಯಲ್ಲಿ ಅಗಲ-250 ಅಡಿಯಿದೆ. ಗರ್ಭಗೃಹದಲ್ಲಿ (ಅಭಯಾರಣ್ಯ) ನೆಲದಿಂದ ಶಿಖರದ ಎತ್ತರ (ಪೀನಾಕಲ್)- 181 ಅಡಿ ಇದೆ. ಸಿ.ಬಿ.ಸಂಪೂರ ಅವರು ದೇವಸ್ಥಾನದ ನಾಡ್ ಪರ್ಕೋಟದ ವಾಸ್ತುಶಿಲ್ಪಿಯಾಗಿದ್ದು, ಉಳಿದ ಪ್ರದೇಶದ ವಾಸ್ತುಶಿಲ್ಪವನ್ನು ಜಯ್ ಕಾಕ್ತಿಕರ್ ಎನ್ನುವವರು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಮಂದಿರದ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ. ಲಾರ್ಸೆನ್ & ಟೂಬ್ರೊ ದೇವಾಲಯ ಮತ್ತು ಗೋಡೆಗಳ ನಿರ್ಮಾಣದ ಮುಖ್ಯ ಗುತ್ತಿಗೆದಾರರಾಗಿದ್ದು, ಟಾಟಾ ಕನ್ಸಲ್ಟಿಂಗ್ ಇಂಜಿನಿಯರ್ಸ್ ನ್ನು ಯೋಜನಾ ನಿರ್ವಹಣೆ ಸಲಹೆಗಾರರಾಗಿ ನೇಮಿಸಲಾಗಿದೆ.
ಮಾಜಿ ಐಎಎಸ್ ನೃಪೇಂದ್ರ ಮಿಶ್ರಾ ಅವರ ಅಧ್ಯಕ್ಷತೆಯಲ್ಲಿ ನಿರ್ಮಾಣ ಸಮಿತಿಯು ಎಂಜಿನಿಯರ್‌ಗಳು ಮತ್ತು ವಾಸ್ತುಶಿಲ್ಪಿಗಳೊಂದಿಗೆ ಎರಡು ಮೂರು ದಿನಗಳ ಕಾಲ ಸಭೆ ಸೇರುತ್ತಿದ್ದು, ಪ್ರತಿ ತಿಂಗಳು ಪ್ರತಿಯೊಂದು ವಿವರಗಳನ್ನು ಬಹಳ ಸೂಕ್ಷ್ಮವಾಗಿ ಚರ್ಚಿಸಲಾಗುತ್ತಿದೆ. ಈ ವರ್ಷದ ಜನವರಿಯಲ್ಲಿ, ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅಯೋಧ್ಯೆಯಲ್ಲಿ ನಡೆಯುತ್ತಿರುವ ರಾಮಮಂದಿರದ ನಿರ್ಮಾಣ ಕಾರ್ಯದ ಪ್ರಕ್ರಿಯೆಯನ್ನು ತೋರುವ 3D ಅನಿಮೇಷನ್ ಚಲನಚಿತ್ರವನ್ನು ಬಿಡುಗಡೆ ಮಾಡಿತ್ತು. ಡಿಸೆಂಬರ್ 2023 ರಿಂದ ಭಕ್ತರು ದೇವಾಲಯಕ್ಕೆ ಬಂದು ಪ್ರಾರ್ಥನೆ ಸಲ್ಲಿಸಬಹುದಾಗಿದ್ದು, ಆದರೆ ನಿರ್ಮಾಣ ಕಾರ್ಯವು ಮುಂದುವರಿಯುತ್ತದೆ. 2025 ರ ವೇಳೆಗೆ ಪೂರ್ಣಗೊಳ್ಳುತ್ತದೆ ಎಂದು ಟ್ರಸ್ಟ್ ಹೇಳಿದೆ.
ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.