ದೃಷ್ಟಿದೋಷವಿರುವ ದೆಹಲಿ ಶಾಲಾ ಶಿಕ್ಷಕಿಯ ಮೇರು ಸಾಧನೆ: 5ನೇ ಪ್ರಯತ್ನದಲ್ಲಿ ಯುಪಿಎಸ್​ಸಿ​ ಪಾಸ್, 48ನೇ ರ‍್ಯಾಂಕ್

ಹುಟ್ಟಿದಾರಭ್ಯ ಸಂಪೂರ್ಣ ಅಂಧರಾಗಿರುವ ಆಯುಷಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಲೇ 5ನೇ ಪ್ರಯತ್ನದಲ್ಲಿ ಯುಪಿಎಸ್​ಸಿ ತೇರ್ಗಡೆಯಾಗಿದ್ದಾರೆ.

ದೃಷ್ಟಿದೋಷವಿರುವ ದೆಹಲಿ ಶಾಲಾ ಶಿಕ್ಷಕಿಯ ಮೇರು ಸಾಧನೆ: 5ನೇ ಪ್ರಯತ್ನದಲ್ಲಿ ಯುಪಿಎಸ್​ಸಿ​ ಪಾಸ್, 48ನೇ ರ‍್ಯಾಂಕ್
ಯುಪಿಎಸ್​ಸಿ ತೇರ್ಗಡೆಯಾಗಿರುವ ದೆಹಲಿ ಶಿಕ್ಷಕಿ ಆಯುಷಿ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Jun 01, 2022 | 11:43 AM

ದೆಹಲಿ: ಭಾರತದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದು ಎನಿಸಿರುವ ಕೇಂದ್ರ ಲೋಕಸೇವಾ ಆಯೋಗದ (Union Public Service Commission – UPSC) ನಾಗರಿಕ ಸೇವಾ ಪರೀಕ್ಷೆಯಲ್ಲಿ ದೆಹಲಿಯ ದೃಷ್ಟಿದೋಷವಿರುವ ಶಾಲಾ ಶಿಕ್ಷಕಿ ತೇರ್ಗಡೆಯಾಗಿದ್ದಾರೆ. 48ನೇ ರ‍್ಯಾಂಕ್ ಪಡೆದಿರುವ ಅವರ ಸಾಧನೆಗೆ ದೇಶವ್ಯಾಪಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹುಟ್ಟಿದಾರಭ್ಯ ಸಂಪೂರ್ಣ ಅಂಧರಾಗಿರುವ ಆಯುಷಿ ಅವರಿಗೆ ಇದೀಗ 29ರ ಹರೆಯ. ದೆಹಲಿಯ ರಾಣಿ ಖೇರಾ ಪ್ರದೇಶದ ನಿವಾಸಿಯಾಗಿರುವ ಅವರು, ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಲೇ 5ನೇ ಪ್ರಯತ್ನದಲ್ಲಿ ಯುಪಿಎಸ್​ಸಿ ತೇರ್ಗಡೆಯಾಗಿದ್ದಾರೆ.

‘50ನೇ ರ‍್ಯಾಂಕ್ ಒಳಗೆ ಬಂದಿದ್ದು ಖುಷಿಯಾಗಿದೆ. ಫಲಿತಾಂಶ ಪ್ರಕಟವಾದ ನಂತರ ನನ್ನ ಫೋನ್​ಗೆ ಬಿಡುವೇ ಇಲ್ಲ. ನನ್ನ ಕನಸು ಸಾಕಾರವಾಗಿದೆ. ಮೊದಲ 50 ರ‍್ಯಾಂಕ್​ಗಳ ಹೆಸರಿನೊಂದಿಗೆ ನನ್ನ ಹೆಸರೂ ಸೇರಿದೆ ಎನ್ನುವುದು ಸಂತಸದ ಸಂಗತಿ ಎಂದು ಹೇಳಿದರು. ನನ್ನೆಲ್ಲಾ ಆತ್ಮೀಯರಿಗೂ ಇದು ಖುಷಿಕೊಟ್ಟಿದೆ. ಇದನ್ನು ಹಿರಿಯರ ಆಶೀರ್ವಾದ ಎಂದುಕೊಳ್ಳುತ್ತೇನೆ’ ಎಂದರು.

ರಾಣಿ ಖೇರಾ ಪ್ರದೇಶದ ಖಾಸಗಿ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದ ನಂತರ ದೆಹಲಿ ವಿಶ್ವವಿದ್ಯಾಲಯದ ಶ್ಯಾಮ ಪ್ರಸಾದ್ ಮುಖರ್ಜಿ ಕಾಲೇಜಿನಲ್ಲಿ ಪದವಿ ಪಡೆದರು. ಇಂದಿರಾಗಾಂಧಿ ಮುಕ್ತ ವಿಶ್ವವಿದ್ಯಾಲಯದಿಂದ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ‘ಸಾಮಾನ್ಯ ಕುಟುಂಬದಿಂದ ಬಂದ ನನಗೆ ಕೆಲಸವೊಂದು ಪಡೆಯಬೇಕು ಎಂಬುದು ಬಿಟ್ಟರೆ ಬೇರೆ ಮಹತ್ವಾಕಾಂಕ್ಷೆಗಳೇನೂ ಇರಲಿಲ್ಲ. 2016ರಿಂದ ತಾಯಿಯ ಸಹಾಯದೊಂದಿಗೆ ಪರೀಕ್ಷೆಗೆ ಸಿದ್ಧತೆ ಆರಂಭಿಸಿದೆ’ ಎಂದು ಆಯುಷಿ ಪ್ರತಿಕ್ರಿಯಿಸಿದರು.

ಆಯುಷಿ ಅವರ ತಂದೆ ಪಂಜಾಬ್​ನಲ್ಲಿ ಖಾಸಗಿ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಾರೆ. ಅವರ ತಾಯಿ ಗೃಹಿಣಿ. ಪತಿ ಆಸ್ಟ್ರೇಲಿಯಾದಲ್ಲಿ ಎಂಬಿಎ ಓದುತ್ತಿದ್ದಾರೆ. ತಮ್ಮ ಯಶಸ್ಸಿಗೆ ತಾಯಿ ಕಾರಣ ಎಂದು ಆಯುಷಿ ಹೇಳುತ್ತಾರೆ. ‘ನಾನು ಏನಾದರೂ ಸಾಧಿಸಬೇಕು ಎನ್ನುವ ಕಾರಣಕ್ಕೆ ನನಗೆ ಬೆಂಬಲವಾಗಿ ನಿಲ್ಲಲು ಸೀನಿಯರ್ ನರ್ಸಿಂಗ್ ಆಫೀಸರ್ ಆಗಿದ್ದ ನನ್ನ ತಾಯಿ 2020ರಲ್ಲಿ ಸ್ವಯಂ ನಿವೃತ್ತಿ ಪಡೆದುಕೊಂಡರು. ಕಷ್ಟಗಳು ಯಾವಾಗಲೂ ಇತ್ತು. ಆದರೆ ನನ್ನ ತಾಯಿ ಮತ್ತು ಕುಟುಂಬದ ನೆರವಿನಿಂದ ನಾನು ಅವನ್ನು ಬದಿಗೊತ್ತಿ, ಸಾಧನೆ ಮಾಡಿದೆ. ನನಗಾಗಿ ಅವರು ಪುಸ್ತಕಗಳನ್ನು ಓದಿ ರೆಕಾರ್ಡ್ ಮಾಡಿಡುತ್ತಿದ್ದರು. ಅವನ್ನು ಕೇಳಿಸಿಕೊಂಡು ನಾನು ನೋಟ್ಸ್​ ಸಿದ್ಧಪಡಿಸಿಕೊಳ್ಳುತ್ತಿದ್ದೆ’ ಎಂದು ಆಯುಷಿ ಹೇಳಿದರು.

ಹರಿಯಾಣ ಕೇಡರ್ ಐಎಎಸ್ ಆರಿಸಿಕೊಳ್ಳಲು ನಿರ್ಧರಿಸಿರುವ ಆಯುಷಿ, ಬಾಲಕಿಯರ ಶಿಕ್ಷಣಕ್ಕಾಗಿ ಮಹತ್ವದ ಕೊಡುಗೆ ನೀಡುವ ಕನಸು ಹೊತ್ತಿದ್ದಾರೆ. ‘ವಿಕಲಚೇತನರ ಬಗ್ಗೆ ಸಮಾಜದಲ್ಲಿ ಇರುವ ಭಾವನೆ ಬದಲಿಸಲು ಸತತ ಪ್ರಯತ್ನ ಮಾಡುತ್ತೇನೆ. ಅಂಗವೈಕಲ್ಯದ ಬಗ್ಗೆ ಯಾವುದೇ ಕಳಂಕದ ಭಾವನೆಗಳು ಇರಬಾರದು. ಅಂಗವಿಕಲರು ಸಹ ಇತರರಂತೆ ಎಲ್ಲ ರೀತಿಯ ಸಾಧನೆಗಳನ್ನೂ ಮಾಡಬಲ್ಲರು’ ಎಂದು ಹೇಳುತ್ತಾರೆ.

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:37 am, Wed, 1 June 22