ವರ್ಕ್ ಆರ್ಡರ್ ಇಲ್ಲದೆ ಕೆಲಸ ನಡೆದ ಅಧಿಕಾರಿಗಳೇ ಜವಾಬ್ದಾರಿ: ಸಚಿವ ಗೋವಿಂದ ಕಾರಜೋಳ
ವರ್ಕ್ ಆರ್ಡರ್ ಮಂಜೂರಾಗದೆ ಯಾರಿಗೂ ಕೆಲಸ ಮಾಡಿಸಲು ಅವಕಾಶ ಕೊಡಬಾರದು. ಈ ರೀತಿ ಕಾಮಗಾರಿ ಮಾಡುವುದು ಗಮನಕ್ಕೆ ಬಂದರೆ ಪಿಡಿಒ, ಇಒ, ಎಂಜಿನಿಯರ್ಗಳನ್ನು ಹೊಣೆಯಾಗಿಸಲಾಗುವುದು ಎಂದು ಎಚ್ಚರಿಸಿದರು.
ಬೆಳಗಾವಿ: ‘ವರ್ಕ್ ಆರ್ಡರ್ ಇಲ್ಲದೆ ಕಾಮಗಾರಿಗಳನ್ನು ನಿರ್ವಹಿಸುವಂತಿಲ್ಲ. ಒಂದು ವೇಳೆ ಕಾಮಗಾರಿಗಳು ನಡೆಯುತ್ತಿದ್ದರೆ ಅಂಥವನ್ನು ತಕ್ಷಣ ನಿಲ್ಲಿಸಬೇಕು’ ಎಂದು ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹೇಳಿದರು. ವರ್ಕ್ ಆರ್ಡರ್ ಮಂಜೂರಾಗದೆ ಯಾರಿಗೂ ಕೆಲಸ ಮಾಡಿಸಲು ಅವಕಾಶ ಕೊಡಬಾರದು. ಈ ರೀತಿ ಕಾಮಗಾರಿ ಮಾಡುವುದು ಗಮನಕ್ಕೆ ಬಂದರೆ ಪಿಡಿಒ, ಇಒ, ಎಂಜಿನಿಯರ್ಗಳನ್ನು ಹೊಣೆಯಾಗಿಸಲಾಗುವುದು. ನೀವು ಕೆಲಸ ಹೇಳದೇ ನಿಮ್ಮ ಮನೆಗೆ ಯಾರಾದರೂ ಬಂದು ಕೆಲಸ ಮಾಡಲು ಶುರು ಮಾಡಿದರೆ ನೀವು ಸುಮ್ಮನೆ ಇರ್ತೀರಾ ಎಂದು ಕಾರಜೋಳ ಪ್ರಶ್ನಿಸಿದರು.
ಆಡಳಿತ ನಿರ್ವಹಣೆಯ ವಿಚಾರದಲ್ಲಿ ಬಹಳ ಬಿಗಿಯಾಗಿ ನೋಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಅನಧಿಕೃತ ವ್ಯಕ್ತಿಗಳು ನಮ್ಮ ಪ್ರಿಮೈಸಿಸ್‌ನಲ್ಲಿ ಬರಬಾರದು. ಗ್ರಾಮ ಪಂಚಾಯಿತಿಯಲ್ಲಿ ಯಾರಾದರೂ ಬಂದು ಕೆಲಸ ಮಾಡುತ್ತೇವೆ ಎಂದರೆ ಬಿಡಬಾರದು. ಇಂಥ ಪ್ರಕರಣಗಳಿಂದಾಗಿ ಸುಮ್ಮನೆ ಅಧಿಕಾರಿಗಳಿಗೂ ಕೆಟ್ಟ ಹೆಸರು, ಸರ್ಕಾರಕ್ಕೂ ಕೆಟ್ಟ ಹೆಸರು, ವಿನಾ ಕಾರಣ ಅಪಪ್ರಚಾರವೂ ಆಗುತ್ತೆ. ಯಾರಾದರೂ ಪುಂಡಾಟಿಕೆ ಮಾಡಿದರೆ ತಕ್ಷಣ ಪೊಲೀಸರಿಗೆ ದೂರು ಕೊಡಬೇಕು ಎಂದು ಸೂಚಿಸಿದರು.
ಶೇ 40ರಷ್ಟು ಕಮಿಷನ್ ನೀಡಲಿಲ್ಲ ಎನ್ನುವ ಕಾರಣಕ್ಕೆ ನಾನು ನಿರ್ವಹಿಸಿರುವ ಕಾಮಗಾರಿಗಳ ಬಿಲ್ಗಳನ್ನು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ತಡೆ ಹಿಡಿದಿದ್ದಾರೆ ಎಂದು ಆರೋಪಿಸಿ ಬೆಳಗಾವಿ ತಾಲ್ಲೂಕಿನ ಬಡಸ ಗ್ರಾಮದ ಗುತ್ತಿಗೆದಾರ ಸಂತೋಷ್ ಉಡುಪಿಯ ಶಾಂಭವಿ ಲಾಡ್ಜ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಯ ನಂತರದ ಬೆಳವಣಿಗೆಯಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ರಾಜೀನಾಮೆ ನೀಡಬೇಕಾಯಿತು. ವರ್ಕ್ ಆರ್ಡರ್ ಪಡೆಯದೇ ಕಾಮಗಾರಿ ನಿರ್ವಹಿಸಿದ್ದರಿಂದ ಹಣ ಪಾವತಿಸಬೇಕಿಲ್ಲ ಎನ್ನುವುದು ಈಶ್ವರಪ್ಪ ಅವರ ವಾದವಾಗಿತ್ತು. ಆದರೆ ಮೌಖಿಕ ಸೂಚನೆ ಮೇಲೆ ಕಾಮಗಾರಿ ನಿರ್ವಹಿಸಿರುವುದರಿಂದ ಹಣ ಪಾವತಿಸಬೇಕು ಎಂದು ಮೃತ ಸಂತೋಷ್ ವಾದಿಸಿದ್ದರು.
ಸಂತೋಷ್ ಸಾವಿನ ನಂತರವೂ ಈ ಪ್ರಕರಣದ ಬಗ್ಗೆ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಹಗ್ಗಜಗ್ಗಾಟ ನಡೆಯುತ್ತಲೇ ಇತ್ತು. ಇದೀಗ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ವರ್ಕ್ ಆರ್ಡರ್ ಇಲ್ಲದೆ ಯಾವುದೇ ಕಾಮಗಾರಿ ನಿರ್ವಹಿಸಿದರೆ ಹಣ ಪಾವತಿಸುವುದಿಲ್ಲ ಎಂದು ಖಡಗ್ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ: ಬಿಲ್ಗಳು ಬಿಡುಗಡೆಯಾಗದಿದ್ದರೆ ಸಂತೋಷ್ ಪಾಟೀಲ್ ಹಾಗೆ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ: ಕೊಪ್ಪಳ ಗುತ್ತಿಗೆದಾರರು
ಇದನ್ನೂ ಓದಿ: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಕೇಸ್; 108 ಕಾಮಗಾರಿಗಳ ಪಟ್ಟಿ ಸಮೇತ ಆಶಾ ಐಹೊಳೆ ಬರೆದಿದ್ದ ಪತ್ರ ಲಭ್ಯ
Published On - 1:10 pm, Fri, 29 April 22