Karnataka Rains: ಉತ್ತರ ಕರ್ನಾಟಕದಲ್ಲಿ ಮಳೆಯ ಅಬ್ಬರ; ಹಾನಿಗೊಳಗಾದ ಸ್ಥಳಕ್ಕೆ ಬಿಜೆಪಿ, ಕಾಂಗ್ರೆಸ್ ನಾಯಕರ ಭೇಟಿ, ಪರಿಶೀಲನೆ

| Updated By: ganapathi bhat

Updated on: Jul 24, 2021 | 8:53 PM

North Karnataka: ಬೆಳಗಾವಿಯ ಪ್ರವಾಹಪೀಡಿತ ಪ್ರದೇಶಗಳಿಗೆ ಸತೀಶ್ ಜಾರಕಿಹೊಳಿ‌ ನೇತೃತ್ವದ ಕಾಂಗ್ರೆಸ್ ನಿಯೋಗ ಭೇಟಿ ನೀಡಿದೆ. ವೇದಗಂಗಾ ನದಿಯಿಂದ ಬಂದ್ ಆದ ರಾಷ್ಟ್ರೀಯ ಹೆದ್ದಾರಿ ನಾಲ್ಕು ಬೆಂಗಳೂರು ಪುಣೆ ರಸ್ತೆಯನ್ನು ಕಾಂಗ್ರೆಸ್ ನಿಯೋಗ ವೀಕ್ಷಣೆ‌ ಮಾಡಿದೆ.

Karnataka Rains: ಉತ್ತರ ಕರ್ನಾಟಕದಲ್ಲಿ ಮಳೆಯ ಅಬ್ಬರ; ಹಾನಿಗೊಳಗಾದ ಸ್ಥಳಕ್ಕೆ ಬಿಜೆಪಿ, ಕಾಂಗ್ರೆಸ್ ನಾಯಕರ ಭೇಟಿ, ಪರಿಶೀಲನೆ
ಬಾಗಲಕೋಟೆಯಲ್ಲಿ ಮಳೆಯಿಂದ ಉಂಟಾದ ನೆರೆ
Follow us on

ಬೆಳಗಾವಿ: ಮಹಾರಾಷ್ಟ್ರ, ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಳೆಯ ಆರ್ಭಟದಿಂದಾಗಿ ದೂದ್​ಗಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇದರಿಂದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಾಂಗೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ, ಪಶು ವೈದ್ಯಕೀಯ ಆರೋಗ್ಯ ಕೇಂದ್ರಕ್ಕೆ ನದಿ‌ ನೀರು ನುಗ್ಗಿದೆ. ಆಸ್ಪತ್ರೆಗಳಲ್ಲಿದ್ದ ವೈದ್ಯಕೀಯ ಸಾಮಗ್ರಿಗಳನ್ನು ಸಿಬ್ಬಂದಿ ಸ್ಥಳಾಂತರಿಸಿದ್ದಾರೆ. ಆದರೆ, ಏಕಾಏಕಿ ನೀರು ಬಂದಿದ್ದಕ್ಕೆ ರೋಗಿಗಳು, ಸಿಬ್ಬಂದಿ ಪರದಾಟ ನಡೆಸುವಂತಾಗಿದೆ.

ಬೆಳಗಾವಿಯ ಪ್ರವಾಹಪೀಡಿತ ಪ್ರದೇಶಗಳಿಗೆ ಸತೀಶ್ ಜಾರಕಿಹೊಳಿ‌ ನೇತೃತ್ವದ ಕಾಂಗ್ರೆಸ್ ನಿಯೋಗ ಭೇಟಿ ನೀಡಿದೆ. ವೇದಗಂಗಾ ನದಿಯಿಂದ ಬಂದ್ ಆದ ರಾಷ್ಟ್ರೀಯ ಹೆದ್ದಾರಿ ನಾಲ್ಕು ಬೆಂಗಳೂರು ಪುಣೆ ರಸ್ತೆಯನ್ನು ಕಾಂಗ್ರೆಸ್ ನಿಯೋಗ ವೀಕ್ಷಣೆ‌ ಮಾಡಿದೆ. ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಯಮಗರಣಿ ಗ್ರಾಮದಲ್ಲಿ ರಸ್ತೆ ಮುಳುಗಿದ್ದು, ಪ್ರವಾಹದ ಪರಿಸ್ಥಿತಿ ಕುರಿತು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ‌ ಸ್ಥಳೀಯರಿಂದ ಮಾಹಿತಿ ಪಡೆದಿದ್ದಾರೆ.

ಹಾವೇರಿ: ಕುಮುದ್ವತಿ ಆರ್ಭಟಕ್ಕೆ ಜನರು ತತ್ತರ
ಮಲೆನಾಡು ಭಾಗದಲ್ಲಿ ಮಳೆ ಆಗ್ತಿರೋ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲೆಯ ರಟ್ಟೀಹಳ್ಳಿ ತಾಲೂಕಿನಲ್ಲಿ ಕುಮುದ್ವತಿ ಆರ್ಭಟಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ಬಡಸಂಗಾಪುರ, ಕುಡುಪಲಿ, ರಟ್ಟೀಹಳ್ಳಿ, ತೋಟಗಂಟಿ, ಹಿರೇಮಾದಾಪುರ, ಮಳಗಿ ಸೇರಿದಂತೆ ಹಲವು ಗ್ರಾಮಗಳ ರೈತರ ಜಮೀನುಗಳು ಜಲಾವೃತಗೊಂಡಿದೆ.

ರೈತರ ಜಮೀನುಗಳು ನೀರಿನಿಂದ ಜಲಾವೃತ ಆಗಿದ್ದರೂ ಸ್ಥಳಕ್ಕೆ ಭೇಟಿ ನೀಡದ ಅಧಿಕಾರಿಗಳು, ಕ್ಷೇತ್ರದ ಶಾಸಕ ಹಾಗೂ ಕೃಷಿ ಸಚಿವ‌ ಬಿ.ಸಿ. ಪಾಟೀಲ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿರೇಕೆರೂರು ಮತ್ತು ರಟ್ಟೀಹಳ್ಳಿ ತಾಲೂಕಿನಲ್ಲಿ ಕುಮುದ್ವತಿ ನದಿ ನೀರಿನಿಂದ ಸಾವಿರಾರು ಹೆಕ್ಟೇರ್ ಬೆಳೆಗಳು ಹಾಳಾಗಿದ್ರೂ ರೈತರ ಜಮೀನಿಗೆ ಭೇಟಿ ನೀಡದ ಸಚಿವ ಪಾಟೀಲ್ ವಿರುದ್ಧ ಜನರು ಆಕ್ರೋಶ ಹೊರಹಾಕಿದ್ದಾರೆ.

ಕಾಳಜಿ ಕೇಂದ್ರದಲ್ಲಿ 15ಕ್ಕೂ ಹೆಚ್ಚು ಕುಟುಂಬಗಳು ಆಶ್ರಯ ಪಡೆದುಕೊಂಡಿವೆ. ಗ್ರಾಮದ ಸರ್ಕಾರಿ ಶಾಲೆಯಲ್ಲಿ ಕಾಳಜಿ ಕೇಂದ್ರ ಆರಂಭಿಸಲಾಗಿದೆ. ಗ್ರಾಮಕ್ಕೆ ಉಗ್ರಾಣ ನಿಗಮ ಅಧ್ಯಕ್ಷ ಯು.ಬಿ. ಬಣಕಾರ್‌ ಭೇಟಿ ನೀಡಿದ್ದಾರೆ.

ಗದಗ: ಕಾಳಜಿ ಕೇಂದ್ರಕ್ಕೆ ಭೇಟಿ ಕೊಟ್ಟ ಸಿ.ಸಿ. ಪಾಟೀಲ್; ಮಾಸ್ಕ್ ಧರಿಸುವಂತೆ ಸೂಚನೆ
ಕಾಳಜಿ ಕೇಂದ್ರದಲ್ಲಿ ಮಾಸ್ಕ್ ಇಲ್ಲದೆ ಮಾತನಾಡಲು ಬಂದ ವ್ಯಕ್ತಿ ವಿರುದ್ಧ ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ್​ ಗರಂ ಆಗಿದ್ದಾರೆ. ‘ಮೊದಲು ಮಾಸ್ಕ್ ಹಾಕ್ಕೋ.. ಆಮೇಲೆ ಸಮಸ್ಯೆ ಹೇಳುವಂತೆ’ ಎಂದು ಸೂಚನೆ ನೀಡಿದ್ದಾರೆ. ಗದಗ ಜಿಲ್ಲೆಯ ನರಗುಂದ ತಾಲೂಕಿನ ಬೆಳ್ಳೇರಿ ಗ್ರಾಮದ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿದ್ದ ಸಿ.ಸಿ.ಪಾಟೀಲ್ ಹೀಗೆ ಸೂಚಿಸಿದ್ದಾರೆ.

ನೆರೆ ಭೀತಿ ಹಿನ್ನೆಲೆ ಲಖಮಾಪುರದ 156 ಜನರ ಸ್ಥಳಾಂತರ ಮಾಡಲಾಗಿತ್ತು. ಕಾಳಜಿ ಕೇಂದ್ರದಲ್ಲಿನ ವ್ಯವಸ್ಥೆ ಪರಿಶೀಲನೆ ನಡೆಸಲು ಸಚಿವರು ಬಂದಿದ್ದರು. ನೆರೆ ತಗ್ಗಿದ ನಂತರ ದಿನಸಿ ನೀಡುವಂತೆ ಗ್ರಾಮಸ್ಥರೊಬ್ಬರು ಮನವಿ ಮಾಡಿದ್ದರು. ಈ ವೇಳೆ ಮಾಸ್ಕ್​ ಹಾಕಿಸಿ ವ್ಯಕ್ತಿಯ ಸಮಸ್ಯೆಯನ್ನು ಸಚಿವರು ಆಲಿಸಿದ್ದಾರೆ. ನೆರೆ ಇಳಿದ ನಂತರ ಅಗತ್ಯವಿದ್ದರೆ ದಿನಸಿ ಕೊಡುವ ಭರವಸೆ ನೀಡಿದ್ದಾರೆ.

ಮಲಪ್ರಭಾ ನದಿಯ ಪ್ರವಾಹ
ಮಲಪ್ರಭಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇದರಿಂದ ಗದಗ ತಾಲೂಕಿನ ಲಖಮಾಪುರ ನಡುಗಡ್ಡೆಯಾಗುವ ಭೀತಿಯಲ್ಲಿದೆ. ಹೀಗಾಗಿ ಗ್ರಾಮ ಖಾಲಿ ಮಾಡುವಂತೆ ಜಿಲ್ಲಾಡಳಿತ ‌ಮನವಿ ಮಾಡಿಕೊಂಡಿದೆ. ನಾವು ಊರು ತೊರೆಯಲ್ಲ ಇಲ್ಲೇ ಇರುತ್ತೇವೆ ಎಂದು ಹಿರಿಯರು ಹಠ ಹಿಡಿದು ಕೂತಿದ್ದಾರೆ. ನಾವು ನದಿಯಲ್ಲೇ ಹೋಗುತ್ತೇವೆ ಎಂದು ಅಜ್ಜಿಯರ ಹಠ ಕೇಳಿಬಂದಿದೆ. ಸಚಿವ ಸಿ.ಸಿ. ಪಾಟೀಲ್​ ವಿರುದ್ಧ ಅಜ್ಜಿಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಲ್ಲಿದ್ದಾರೆ ನಮ್ಮ ಶಾಸಕರು, ಸಚಿವರು ಎಂದು ಆಕ್ರೋಶ ಹೊರಹಾಕಿದ್ದಾರೆ. ಸೇತುವೆ ನಿರ್ಮಿಸಿ ಅಂದರೂ ನಿರ್ಮಿಸುತ್ತಿಲ್ಲ, ಸರ್ಕಾರ ಏನು ಮಾಡುತ್ತಿದೆ ಎಂದು ಅಸಮಾಧಾನ ಪ್ರಕಟಿಸಿದ್ದಾರೆ.

ಮಲಪ್ರಭಾ ನದಿಯ ಪ್ರವಾಹದಿಂದ ಸೇತುವೆ ಜಲಾವೃತವಾಗಿದೆ. ಗದಗ ಜಿಲ್ಲೆ ರೋಣ ತಾಲೂಕಿನ ಹೊಳೆ ಆಲೂರು ಗ್ರಾಮದ, ಹೊಳೆ ಆಲೂರು-ಬಾದಾಮಿ ಸಂಪರ್ಕದ ಬ್ರಿಡ್ಜ್​​ ಜಲಾವೃತಗೊಂಡಿದೆ. ನದಿತೀರದ ನೂರಾರು ಎಕರೆ ಹೊಲ, ಗದ್ದೆ ನೀರುಪಾಲಾಗಿದೆ.

ಮತ್ತೊಂದೆಡೆ, ಬೆಣ್ಣೆಹಳ್ಳ ಪ್ರವಾಹಕ್ಕೆ ಯಾಗವಲ್ ಬಳಿ ಸೇತುವೆ ಮುಳುಗಡೆ ಆಗಿದೆ. ಗದಗ ಜಿಲ್ಲೆಯ ರೋಣ ತಾಲೂಕಿನ ಯಾವಗಲ್ ಗ್ರಾಮದ ನರಗುಂದ-ರೋಣ ನಡುವಿನ ಸೇತುವೆ ಮುಳುಗಡೆ ಆಗಿದೆ.

ಹುಬ್ಬಳ್ಳಿ: ಮಾನವೀಯತೆ ಮೆರೆದ ಸಂತೋಶ್ ಲಾಡ್
ಕಳೆದ ಮೂರು ದಿನಗಳಿಂದ ಧಾರವಾಡ ಜಿಲ್ಲೆಯಲ್ಲಿ ನಿರಂತರ ಮಳೆ ಹಿನ್ನೆಲೆ, ಕಲಘಟಗಿ ಮಾರ್ಗವಾಗಿ ಯಲ್ಲಾಪುರ ಕಡೆಗೆ ತೆರಳುವ ವಾಹನಗಳ ನಿಲುಗಡೆ ಆಗುತ್ತಿದೆ. ಕಾರವಾರದ ಯಲ್ಲಾಪುರ ಬಳಿ ಗುಡ್ಡ ಕುಸಿತ ಹಿನ್ನೆಲೆಯಲ್ಲಿ ಕಲಘಟಗಿಯ ರಸ್ತೆಯಲ್ಲಿ ವಾಹನಗಳನ್ನ ಪೊಲೀಸರು ನಾಕಾಬಂದಿ ಮಾಡಿದ್ದಾರೆ.

ಕಲಘಟಗಿಯ ಧಾರವಾಡ ಕ್ರಾಸ್ ಬಳಿ ಕಳೆದ ಮೂರು ದಿನಗಳಿಂದ 200ಕ್ಕೂ ಹೆಚ್ಚು ಲಾರಿಗಳು ನಿಂತಿವೆ. ಊಟ ತಿಂಡಿ ಸಿಗದೆ ಪರದಾಡುತ್ತಿದ್ದ ವಾಹನ ಸವಾರರಿಗೆ ಮಾಜಿ ಸಚಿವ ಸಂತೋಷ್ ಲಾಡ್ ಆಹಾರ ಪೊಟ್ಟಣ ಪೂರೈಕೆ ಮಾಡಿದ್ದಾರೆ. ಎಲ್ಲಾ ಸವಾರಿಗೂ ಆಹಾರ ಪಾಕೇಟ್ ನೀಡಿ ಸಂತೋಷ ಲಾಡ್ ಮಾನವೀಯತೆ ಮೆರೆದಿದ್ದಾರೆ.

ದಾವಣಗೆರೆ: ರೇಣುಕಾಚಾರ್ಯ ಜೊತೆ ರೈತ ವಾಗ್ವಾದ
ಕೆರೆ ನೀರಿನಿಂದ ಜಮೀನಿಗೆ ನೀರು ನುಗ್ಗಿದೆ. ಹೀಗಾಗಿ ತನ್ನ ಜಮೀನಿಗೆ ಭೇಟಿ ನೀಡುವಂತೆ ಶಾಸಕ ರೇಣುಕಾಚಾರ್ಯ ಜೊತೆ ರೈತನೊಬ್ಬ ವಾಗ್ವಾದಕ್ಕೆ ಇಳಿದ ಘಟನೆ ನಡೆದಿದೆ. ಹೊನ್ನಾಳಿ ತಾಲೂಕಿನ ಕೆರೆ ಅಭಿವೃದ್ಧಿಗೆ 460 ಕೋಟಿ ಹಣ ತಂದಿರುವೆ ಎಂದ ರೇಣುಕಾಚಾರ್ಯರ ಜೊತೆ ಪಟ್ಟು ಬಿಡದ ರೈತ, ಕೆಲ ಹೊತ್ತು ಮಾತಿನ ಚಕಮಕಿ ನಡೆಸಿದ್ದಾನೆ. ಜಮೀನಿಗೆ ಹೋಗಲು ದಾರಿಯಿಲ್ಲದೇ ಕೊನೆಗೆ ವಾಪಸಾಗುವಂತಾಗಿದೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಬೆಳಗುತ್ತಿಯಲ್ಲಿ ಘಟನೆ ನಡೆದಿದೆ.

ಬಾಗಲಕೋಟೆ: ಸಮಸ್ಯೆ ಆಲಿಸಿಲ್ಲ ಎಂದು ಮಹಿಳೆ ಆಕ್ರೋಶ
ಪ್ರವಾಹ ಪೀಡಿತ ಪ್ರದೇಶಕ್ಕೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಭೇಟಿ ನೀಡಿದ್ದಾರೆ. ಈ ವೇಳೆ ಸಂತ್ರಸ್ತರ ಸಮಸ್ಯೆ ಆಲಿಸಿಲ್ಲವೆಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಡಿಸಿಎಂ ಕಾರಜೋಳ ವಿರುದ್ಧ ಮಹಿಳೆಯರು ಆಕ್ರೋಶ ಹೊರಹಾಕಿದ ಘಟನೆ ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಒಂಟಗೋಡಿ ಗ್ರಾಮದಲ್ಲಿ ಪರಿಶೀಲನೆ ವೇಳೆ ನಡೆದಿದೆ.

ಪುನರ್ವಸತಿ ಕೇಂದ್ರದ ಬಗ್ಗೆ ತಿಳಿಸಲು ಮಹಿಳೆಯರು ಮುಂದಾಗಿದ್ದರು. ಈ ವೇಳೆ ಮಹಿಳೆಯರ ಸಮಸ್ಯೆ ಆಲಿಸಿಲ್ಲವೆಂದು ಅವರು ಕಿಡಿಕಾರಿದ್ದಾರೆ. ಗ್ರಾಮ ಸ್ಥಳಾಂತರಕ್ಕೆ ಸೂಕ್ತ ಸೌಲಭ್ಯ ಕಲ್ಪಿಸಿಲ್ಲವೆಂದು ಅಸಮಾಧಾನ ಹೊರಹಾಕಿದ್ದಾರೆ. ಕಳಪೆ ಮನೆಗಳನ್ನು ಕಟ್ಟಿಸಿದ್ದಾರೆ, ಮೂಲ ಸೌಕರ್ಯವಿಲ್ಲ. ಸಮಸ್ಯೆ ಹೇಳಲು ಹೋದರು ಕೇಳುತ್ತಿಲ್ಲ ಎಂದು ದೂರಿದ್ದಾರೆ.

ಧೈರ್ಯ ತುಂಬಿದ ಉಮೇಶ್ ಕತ್ತಿ
ಬಾಗಲಕೋಟೆ ಜಿಲ್ಲೆ ರಬಕವಿ ಬನಹಟ್ಟಿ ತಾಲೂಕಿನ ಡವಳೇಶ್ವರ ಗ್ರಾಮದಲ್ಲಿ ನೆರೆ ಪರಿಸ್ಥಿತಿಯನ್ನು ಜಿಲ್ಲೆಯ ಉಸ್ತುವಾರಿ ಸಚಿವ ಉಮೇಶ್ ಕತ್ತಿ ವೀಕ್ಷಣೆ ನಡೆಸಿದ್ದಾರೆ. ಪ್ರವಾಹ ಪರಿಸ್ಥಿತಿ ವೀಕ್ಷಿಸಿ ಜನರ ಸಮಸ್ಯೆ ಆಲಿಸಿದ್ದಾರೆ. ಡವಳೇಶ್ವರ ಗ್ರಾಮದ ಜನರಿಗೆ ಧೈರ್ಯ ತುಂಬಿದ್ದಾರೆ. ಯಾರೂ ಭಯಪಡಬೇಡಿ ಎಂದು, ಕಾಳಜಿ ಕೇಂದ್ರದ ವ್ಯವಸ್ಥೆ ಮಾಡುವುದಾಗಿ ಕತ್ತಿ ಭರವಸೆ ನೀಡಿದ್ದಾರೆ.

ಬಿಜೆಪಿ ತನ್ನ ಜವಾಬ್ದಾರಿ ಮರೆತಿದೆ: ಲಕ್ಷ್ಮೀ ಹೆಬ್ಬಾಳ್ಕರ್
ರಾಜ್ಯದಲ್ಲಿ ಪ್ರವಾಹದಿಂದ ಜನರು ಪರದಾಡುತ್ತಿದ್ದಾರೆ. ಆದ್ರೆ ರಾಜ್ಯ ಬಿಜೆಪಿ ಸರ್ಕಾರ ತನ್ನ ಜವಾಬ್ದಾರಿ ಮರೆತಿದೆ ಎಂದು ಯಮಗರಣಿಯಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಆಕ್ರೋಶ ಹೊರಹಾಕಿದ್ದಾರೆ. ಕೊರೊನಾ ಸಂಕಷ್ಟದಲ್ಲಿ ನಾಯಕತ್ವದ ಹಗ್ಗಜಗ್ಗಾಟ ಆಗುತ್ತಿದೆ. ಈಗ ತಮ್ಮ ಸ್ಥಾನ ಉಳಿಸಿಕೊಳ್ಳುವುದಕ್ಕೆ ಯತ್ನಿಸ್ತಿದ್ದಾರೆ. ಮಂತ್ರಿಗಳಾಗದವರು ಮಂತ್ರಿಯಾಗಲು ಯತ್ನಿಸುತ್ತಿದ್ದಾರೆ. ಬಡವರ ಗೋಳು ಯಾರೂ ಕೇಳುವುದಕ್ಕೆ ತಯಾರಿಲ್ಲ. 2019ರ ಪ್ರವಾಹದ ಪರಿಹಾರವನ್ನೇ ಇನ್ನೂ ಕೊಟ್ಟಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಲಕ್ಷ್ಮೀ ಹೆಬ್ಬಾಳ್ಕರ್ ಆಕ್ರೋಶ ಹೊರಹಾಕಿದ್ದಾರೆ.

ಧಾರವಾಡ ಜಿಲ್ಲೆಯ ಅಳ್ನಾವರ ತಾಲೂಕಿನ ಹುಲಿಕೆರೆ ಗ್ರಾಮದ ಬಳಿಯ ಇಂದಿರಾ ಕೆರೆಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಸಚಿವ ಜಗದೀಶ್ ಶೆಟ್ಟರ್​ ಭೇಟಿ ನೀಡಿದ್ದಾರೆ. ಇಂದಿರಾ ಕೆರೆ ಏರಿ ಕುಸಿದು ನೀರು ಸಂಪೂರ್ಣ ಪೋಲಾಗಿತ್ತು. ಈ ಬಗ್ಗೆ ಧಾರವಾಡ ಡಿಸಿ, ಇತರೆ ಅಧಿಕಾರಿಗಳಿಂದ ಸಚಿವರಿಗೆ ಮಾಹಿತಿ ನೀಡಲಾಗಿತ್ತು. ಧಾರವಾಡ ಜಿಲ್ಲೆಯ ಅಳ್ನಾವರದಲ್ಲಿ ಮಳೆಯ ಅಬ್ಬರಕ್ಕೆ, ಹಳ್ಳದ ನೀರಿಗೆ ಬೆಣಚಿ-ಅಳ್ನಾವರ ಸೇತುವೆ ಕೊಚ್ಚಿಹೋಗಿದೆ. ಸೇತುವೆ ಕೊಚ್ಚಿಹೋದ ಹಿನ್ನೆಲೆ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.

ಇದನ್ನೂ ಓದಿ: Uttara Kannada: ಮನೆ, ಗುಡ್ಡ ಕುಸಿತ, ರಸ್ತೆ, ಸೇತುವೆ ನೀರುಪಾಲು, ಸಂಪರ್ಕ ಕಡಿತ; ಉತ್ತರ ಕನ್ನಡವಲ್ಲ ಇದು ತತ್ತರ ಕನ್ನಡ ಎಂದ ಜನ

ಕರ್ನಾಟಕದಲ್ಲಿ ಅತಿವೃಷ್ಟಿ ಹಿನ್ನೆಲೆ; ತಕ್ಷಣಕ್ಕೆ ಬೇಕಾದ ಪರಿಹಾರವನ್ನು ಕೇಂದ್ರ ಸರ್ಕಾರ ಕೊಡಲಿದೆ: ಪ್ರಲ್ಹಾದ್ ಜೋಶಿ

(North Karnataka faces Heavy Rainfall Floods BJP Congress Leaders visits many places)