Chikodi: ಚಿಕ್ಕೋಡಿಯಲ್ಲಿ ಬಡ ರೈತರ ಮಕ್ಕಳಿಗೆ ಹಾಸ್ಟೆಲ್ ವ್ಯವಸ್ಥೆ ನಿರ್ಮಿಸಿಕೊಡಲು ಒತ್ತಾಯ
ಈಗಾಗಲೇ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಾಗಿದ್ದು ಜಿಲ್ಲಾ ಕೇಂದ್ರವಾಗುವ ಎಲ್ಲಾ ಅರ್ಹತೆ ಹೊಂದಿದೆ. ಚಿಕ್ಕೋಡಿ ಪಟ್ಟಣದಲ್ಲಿ 15ಕ್ಕೂ ಹೆಚ್ಚು ಸರ್ಕಾರಿ-ಖಾಸಗಿ ಶಾಲಾ ಕಾಲೇಜುಗಳಿವೆ. ವಿಪರ್ಯಾಸ ಅಂದ್ರೆ ಚಿಕ್ಕೋಡಿಯಲ್ಲಿ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯಗಳಿಲ್ಲ.
ಬೆಳಗಾವಿ ಜಿಲ್ಲೆ ವಿಭಜಿಸಿ ಚಿಕ್ಕೋಡಿ ಜಿಲ್ಲೆ ಮಾಡಬೇಕೆಂದು ಮೂರು ದಶಕಗಳಿಂದ ಹೋರಾಟ ನಡೆಯುತ್ತಿದೆ. ಜಿಲ್ಲಾ ಕೇಂದ್ರ ಆಗಲು ಎಲ್ಲಾ ಅರ್ಹತೆ ಹೊಂದಿರುವ ಚಿಕ್ಕೋಡಿ ಈಗಾಗಲೇ ಶೈಕ್ಷಣಿಕ ಜಿಲ್ಲೆಯಾಗಿದೆ ಆದ್ರೆ ಚಿಕ್ಕೋಡಿಗೆ ಶಾಲಾ ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳು ಆ ಒಂದು ಮನವಿ ಮಾಡುತ್ತಿದ್ದಾರೆ. ಅಷ್ಟಕ್ಕೂ ಏನದು ಮನವಿ ಅಂತೀರಾ… ಈ ಸ್ಟೋರಿ ನೋಡಿ.
ಹೌದು ಬೆಳಗಾವಿ ಜಿಲ್ಲೆ ರಾಜ್ಯದ ಅತಿದೊಡ್ಡ ಜಿಲ್ಲೆಗಳಲ್ಲೊಂದು. ಬೆಳಗಾವಿ ಯನ್ನು ವಿಭಜಿಸಿ ಚಿಕ್ಕೋಡಿ ಜಿಲ್ಲೆ ಮಾಡಬೇಕೆಂದು ಮೂರು ದಶಕಗಳಿಂದ ಹೋರಾಟ ನಡೆಸಲಾಗುತ್ತಿದೆ. ಈಗಾಗಲೇ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಾಗಿದ್ದು ಜಿಲ್ಲಾ ಕೇಂದ್ರವಾಗುವ ಎಲ್ಲಾ ಅರ್ಹತೆ ಹೊಂದಿದೆ. ಚಿಕ್ಕೋಡಿ ಪಟ್ಟಣದಲ್ಲಿ 15ಕ್ಕೂ ಹೆಚ್ಚು ಸರ್ಕಾರಿ ಹಾಗೂ ಖಾಸಗಿ ಶಾಲಾ ಕಾಲೇಜುಗಳಿವೆ. ವಿಪರ್ಯಾಸ ಅಂದ್ರೆ ಚಿಕ್ಕೋಡಿಯಲ್ಲಿ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯಗಳಿಲ್ಲ.
ಗ್ರಾಮೀಣ ಭಾಗದ ವಿದ್ಯಾರ್ಥಿಗಳೇ ಹೆಚ್ಚು ಇರುವ ಶಾಲಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ಬಡ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ ಇಲ್ಲ. ಕೆಲ ಖಾಸಗಿ ಕಾಲೇಜುಗಳು ತಮ್ಮ ವಿದ್ಯಾರ್ಥಿಗಳಿಗಾಗಿ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಿವೆ. ಆದ್ರೆ ಅಷ್ಟು ಮೊತ್ತ ಪಾವತಿಸಲು ಬಡ ರೈತರ ಮಕ್ಕಳಿಗೆ ಆಗಲ್ಲ. ಪಿಯುಸಿ, ಡಿಪ್ಲೊಮಾ, ಐಟಿಐ, ಪ್ಯಾರಾಮೆಡಿಕಲ್, ನರ್ಸಿಂಗ್, ಪದವಿ ಹಾಗೂ ವೃತ್ತಿಪರ ಕೋರ್ಸ್‌ಗಳ ಅಧ್ಯಯನಕ್ಕೆ ಗ್ರಾಮೀಣ ಭಾಗದಿಂದ ಆಗಮಿಸುವ ವಿದ್ಯಾರ್ಥಿಗಳಿಗೆ ಬಸ್‌ಗಳೇ ಆಸರೆ. ತಮ್ಮ ಮಕ್ಕಳಿಗೆ ಚಿಕ್ಕೋಡಿ ಪಟ್ಟಣದಲ್ಲಿ ಬಾಡಿಗೆಗೆ ರೂಮ್ ಪಡೆದು ವಾಸಿಸುವಷ್ಟು ಆರ್ಥಿಕ ಸಾಮರ್ಥ್ಯ ಬಡ ರೈತ ಕುಟುಂಬಗಳಿಗೆ ಇಲ್ಲ. ಹೀಗಾಗಿ ಸೂಕ್ತ ವ್ಯವಸ್ಥೆ ಇರುವ ವಸತಿ ನಿಲಯಗಳನ್ನು ನಿರ್ಮಿಸಿಕೊಡುವಂತೆ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.
ಇನ್ನು ಚಿಕ್ಕೋಡಿ ಪಟ್ಟಣದಲ್ಲಿರುವ 15ಕ್ಕೂ ಹೆಚ್ಚು ಶಾಲಾ ಕಾಲೇಜುಗಳಲ್ಲಿ 12 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ನಿತ್ಯ ಗ್ರಾಮೀಣ ಭಾಗದಿಂದ ವ್ಯಾಸಂಗಕ್ಕೆ ಬರುತ್ತಾರೆ. ಚಿಕ್ಕೋಡಿ ಉಪವಿಭಾಗದಲ್ಲಿ ಮೆಟ್ರಿಕ್ ಪೂರ್ವದ ವಸತಿ ನಿಲಯಗಳು ಇವೆ. ಆದ್ರೆ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯಗಳು ಇಲ್ಲ. ಇನ್ನು ಮೆಟ್ರಿಕ್ ಪೂರ್ವ ವಸತಿ ನಿಲಯಗಳಲ್ಲಿಯೂ ಸೂಕ್ತ ಮೂಲಸೌಕರ್ಯ ವ್ಯವಸ್ಥೆ ಇಲ್ಲ ಎಂಬ ವಾಸ್ತವವೂ ಇದೆ.
ಈ ಹಾಸ್ಟೆಲ್‌ಗಳ ಸುಧಾರಣೆ ಜೊತೆಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ವಿದ್ಯಾರ್ಥಿಗಳ ಅನುಕೂಲಕ್ಕೆ ನೂತನ ವಸತಿ ನಿಲಯಗಳನ್ನು ನಿರ್ಮಿಸುವಂತೆ ಒತ್ತಾಯ ಕೇಳಿ ಬಂದಿದೆ. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ವ್ಯಾಪ್ತಿಯ ರಾಯಬಾಗ ತಾಲೂಕಿನ ಹಾರೂಗೇರಿ, ಮುಗಳಖೋಡ, ಹುಕ್ಕೇರಿ ತಾಲೂಕಿನ ನಿಡಸೋಸಿ, ಚಿಕ್ಕೋಡಿ ತಾಲೂಕಿನ ಮಜಲಟ್ಟಿಯಲ್ಲಿ ಮೆಟ್ರಿಕ್ ನಂತರದ ವಸತಿ ನಿಲಯಗಳನ್ನು ನಿರ್ಮಿಸಿ ಬಡ ರೈತರ ಮಕ್ಕಳಿಗೆ ಅನುಕೂಲ ಮಾಡಿಕೊಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಸಂಚಾಲಕ ಸಂಜು ಬಡಿಗೇರ ಆಗ್ರಹಿಸಿದ್ದಾರೆ.
ಕಳೆದ ಬಾರಿ ಬಿಜೆಪಿ ಸರ್ಕಾರದಲ್ಲಿ ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುತ್ತಿದ್ದ ರೈತ ವಿದ್ಯಾನಿಧಿ ಯೋಜನೆಯೂ ಸಹ ಸ್ಥಗಿತಗೊಂಡ ಆರೋಪ ಕೇಳಿ ಬಂದಿದೆ. ಅದೇನೇ ಇರಲಿ ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕೆ ಹಾಸ್ಟೆಲ್ ನಿರ್ಮಿಸುವಂತೆ ಸಾರ್ವಜನಿಕರು ಆಗ್ರಹಿಸುತ್ತಿದ್ದು ಸರ್ಕಾರ ಈ ನಿಟ್ಟಿನಲ್ಲಿ ಏನು ಕ್ರಮ ಕೈಗೊಳ್ಳುತ್ತೆ ಕಾದು ನೋಡಬೇಕು.
ವರದಿ: ಮಹಾಂತೇಶ ಕುರಬೇಟ್, ಟಿವಿ9, ಚಿಕ್ಕೋಡಿ
Published On - 1:27 pm, Tue, 31 October 23